ಮಾ. 23ರಂದು ಪಾದಯಾತ್ರೆ ಮೂಲಕ ಗಂಗಾವತಿಗೆ ಆಗಮನ| ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಿಸುತ್ತಿದ್ದಂತೆ ಸ್ವಾಮೀಜಿಗಳು ಅನಿವಾರ್ಯವಾಗಿ ನಗರದಲ್ಲಿ ಉಳಿದಿದ್ದಾರೆ| ಯೋಗಿಗಳ ಯೋಗ ಕ್ಷೇಮ ವಿಚಾರಿಸಿದ ಸಂಸದ ಕರಡಿ ಸಂಗಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ, ಶಾಸಕ ಪರಣ್ಣ ಮುನವಳ್ಳಿ|
ರಾಮಮೂರ್ತಿ ನವಲಿ
ಗಂಗಾವತಿ(ಏ.26): ಪ್ರವಾಸದಲ್ಲಿದ್ದ ಉತ್ತರ ಭಾರತದ ಜೈನ್ ಗುರುಗಳಾದ ಅಕ್ಷಯ್ ಪ್ರಕಾಶ ಮುನಿ, ಆಕಾಶ್ ಮುನಿ ಮತ್ತು ಹೇಮರಾಜ್ ಮುನಿಗಳು ಕಳೆದ ಒಂದು ತಿಂಗಳಿನಿಂದ ಗಂಗಾವತಿಯಲ್ಲಿ ಲಾಕ್‌ಡೌನ್ ಆಗಿದ್ದಾರೆ.
ಪಾದಯಾತ್ರೆ ಮೂಲಕ ದೇಶ ಸಂಚಾರ ಮಾಡುತ್ತಿರುವ ಜೈನ್ ಗುರೂಜಿ ಈಗ ಗಂಗಾವತಿ ನಗರದ ಪನ್ನಲಾಲ್ ಸುರಾನ್ ಮತ್ತು ಅಜೀತ್ ರಾಜ್ ಸುರಾನ್ ನಿವಾಸದಲ್ಲಿ ವಾಸ್ತವ್ಯ ಮಾಡಿದ್ದಾರೆ.
ಹುಬ್ಬಳ್ಳಿಯಿಂದ ಮಾ. 23ರಂದು ಪಾದಯಾತ್ರೆ ಮೂಲಕ ಗಂಗಾವತಿ ನಗರಕ್ಕೆ ಆಗಮಿಸುತ್ತಿದ್ದಂತೆಯೇ ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಿಸಿತು. ಇದರಿಂದಾಗಿ ಸ್ವಾಮೀಜಿಗಳು ಅನಿವಾರ್ಯವಾಗಿ ನಗರದಲ್ಲಿ ಉಳಿಯುವ ಪ್ರಸಂಗ ಒದಗಿತು.
ಟ್ರಕ್ ಟರ್ಮಿನಲ್: ತಪಾಸಣೆ ಬಳಿಕವೇ ಲಾರಿಗಳಿಗೆ ನಗರ ಪ್ರವೇಶಕ್ಕೆ ಅವಕಾಶ
ಧ್ಯಾನದ ಕಡೆಗೆ ಪ್ರಾಮುಖ್ಯತೆ:
ದಿನನಿತ್ಯ ನಿಗದಿ ಪಡಿಸಿದ ಸಮಯದಲ್ಲಿ ಆಹಾರ ಸೇವನೆ ಮಾಡುವ ಗುರೂಜಿ ಬೆಳಗ್ಗೆ 9.30 ಮತ್ತು ರಾತ್ರಿ 8.30ಕ್ಕೆ ಮಾತ್ರ ಆಹಾರ ಸೇವನೆ ಮಾಡುತ್ತಾರೆ. ನೀರು ಕುಡಿಯುವುದಕ್ಕೂ ಸಮಯ ನಿಗದಿ ಪಡಿಸಿಕೊಂಡಿರುವ ಸ್ವಾಮೀಜಿಗಳು ಕೇವಲ ಧ್ಯಾನದ ಕಡೆಗೆ ಗಮನ ಹರಿಸುತ್ತಿದ್ದಾರೆ. ಒಂದು ಪೈಸೆಯೂ ನಿರೀಕ್ಷೆ ಮಾಡದ ಸ್ವಾಮೀಜಿಗಳು ಆಡಂಬರ, ಅಬ್ಬರ ಪ್ರಚಾರಕ್ಕೆ ಕೈ ಹಾಕದೆ ಕೇವಲ ಧರ್ಮ ಮತ್ತು ದೇಶದಲ್ಲಿ ಶಾಂತಿ ಕಾಪಾಡುವ ಗುರಿ ಹೊಂದಿದ್ದಾರೆ. ಕಾರು ಬೇಡ, ಕಾಣಿಕೆ ಬೇಡ, ಐಶ್ವರ್ಯ ಬೇಡವೆ ಬೇಡ ಎನ್ನುವ ಸ್ವಾಮೀಜಿಗಳು ಕೇವಲ ದೇಶದಲ್ಲಿ ಪಾದಯಾತ್ರೆ ಕೈಗೊಂಡು ಧರ್ಮ ಪ್ರಚಾರ, ಶಿಕ್ಷಣ ಜೊತೆಗೆ ದೇಶದಲ್ಲಿ ಶಾಂತಿ ಇರಬೇಕೇನ್ನುವ ಗುರಿಯೇ ತಮ್ಮದಾಗಿದೆ ಎಂಬ ಅಭಿಪ್ರಾಯ ಹೊಂದಿದ್ದಾರೆ.
ಲಾಕ್‌ಡೌನ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಸ್ವಾಮೀಜಿಯವರ ಹೆಸರು ಕೇಳುತ್ತಿದ್ದಂತೆಯೇ ಸಂಸದ ಕರಡಿ ಸಂಗಣ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ, ಶಾಸಕ ಪರಣ್ಣ ಮುನವಳ್ಳಿ ಅವರು ಎರಡು ದಿನದ ಹಿಂದೆ ಭೇಟಿ ನೀಡಿ ಯೋಗಿಗಳ ಯೋಗ ಕ್ಷೇಮ ವಿಚಾರಿಸಿದ್ದಾರೆ. ಲಾಕ್‌ಡೌನ್ ಮೇ 3ರಂದು ಪೂರ್ಣಗೊಳ್ಳಲಿದ್ದು, ನಂತರ ಗಂಗಾವತಿಯಿಂದ ಹೈದರಾಬಾದ್‌ಗೆ ತೆರಳುವುದಾಗಿ ತಿಳಿಸಿದ್ದಾರೆ.