ಮಾವು, ಹಲಸು ಸುಗ್ಗಿ ಆರಂಭ: ಕೊಡಗು ಮಾವು ಮೇಳಕ್ಕೆ ಭರ್ಜರಿ ರೆಸ್ಪಾನ್ಸ್

By Sathish Kumar KH  |  First Published May 28, 2023, 9:29 PM IST

ರಾಜ್ಯದಲ್ಲಿ ಮಾವು ಹಾಗೂ ಹಲಸು ಹಣ್ಣಿನ ಋತುಮಾನ ಆರಂಭವಾಗಿದ್ದು, ಈಗ ಹಣ್ಣಿನ ಸುಗ್ಗಿ ನಡೆಯುತ್ತಿದೆ. ಕೊಡಗು ಜಿಲ್ಲೆಯಲ್ಲಿ ಮಾವು ಮತ್ತು ಹಲಸು ಮೇಳ ಆರಂಭವಾಗಿದೆ.


ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಮೇ 28): ರಾಜ್ಯದಲ್ಲಿ ಮಾವು ಹಾಗೂ ಹಲಸು ಹಣ್ಣಿನ ಋತುಮಾನ ಆರಂಭವಾಗಿದ್ದು, ಈಗ ಹಣ್ಣಿನ ಸುಗ್ಗಿ ನಡೆಯುತ್ತಿದೆ. ವರ್ಷಕ್ಕೊಮ್ಮೆ ಬೆಳೆಯುವ ಹಣ್ಣುಗಳ ರಾಜ ಮಾವಿನ ಹಣ್ಣನ್ನು ಕಡಿಮೆ ಬೆಲೆಗೆ ಖರೀದಿಸಿ ತಿನ್ನಲು ಮಾವು ಮೇಳವನ್ನೇ ಆಯೋಜನೆ ಮಾಡಲಾಗಿದೆ. ಅದರಲ್ಲೂ ರಾಸಾಯನಿಕ ರಹಿತವಾಗಿ ಮಾಗಿಸಿದ ಹಣ್ಣುಗಳು ಗ್ರಾಹಕರಿಗೆ ಹೆಚ್ಚಿನ ಸ್ವಾದವನ್ನು ನೀಡಲಿವೆ.

Latest Videos

undefined

ಹಣ್ಣುಗಳು ಎಂದರೆ ಯಾರಿಗೆತಾನೆ ಇಷ್ಟವಾಗುವುದಿಲ್ಲ ಹೇಳಿ. ಅದರಲ್ಲೂ ಬಾಯಿಯಲ್ಲಿ ನೀರೂರಿಸುವ ಮಾವಿನ ಹಣ್ಣು ಎಂದರೆ ಕೇಳಬೇಕಾ..?. ಹಣ್ಣುಗಳ ರಾಜ ಗಮಗಮಿಸೋ ಮಾವು ಎಂತಹವರ ಬಾಯಿಯಲ್ಲಾದರೂ ನೀರೂರಿಸಿ ಬಿಡುತ್ತದೆ. ಅದರಲ್ಲೂ ತರಾವರಿಯ ಮಾವಿನ ಹಣ್ಣುಗಳು ಒಂದೆಡೆಯಲ್ಲೇ ಸಿಗುತ್ತವೆ ಎಂದರೆ ಕೊಂಡುಕೊಳ್ಳದೆ ಬಿಡುತ್ತೇವೆಯೇ. ಮಂಜಿನ ನಗರಿ ಮಡಿಕೇರಿಯಲ್ಲಿ ಕೊಡಗು ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ, ಹಾಪ್ಕಾಮ್ಸ್ ನೇತೃತ್ವದಲ್ಲಿ ಮಾವು ಮೇಳ ನಡೆಯುತ್ತಿದೆ. ಕೆಂಪಾಗಿ ಕಾಣುತ್ತಿರುವ ತೋತಾಪುರಿ, ಹರಿಶಿಣ ಬಳಿದಂತೆ ಹಣ್ಣಾಗಿರುವ ಬಾದಾಮಿ, ಬಣ್ಣಬಣ್ಣದಿಂದ ಕಂಗೊಳಿಸಿ ಕಣ್ಮನ ಕೋರೈಸುವ ಕಸಿಮಾವು, ಕಣ್ಣು ಕುಕ್ಕುವಷ್ಟು ಬಣ್ಣಪಡೆದಿರುವ ನೀಲಂ. ಅಯ್ಯೋ ಒಂದೇ ಎರಡೇ. ಇನ್ನು ಹತ್ತಾರು ಬಗೆಯ ಮಾವುಗಳು ನಿಮಗಾಗಿ ಕಾದು ಕುಳಿತಿವೆ.

ಕೃಷಿ ತಜ್ಞರಿಗೇ ಸವಾಲೊಡ್ಡಿದ ಅಪರೂಪದ ಮಾವಿನ ಹಣ್ಣು: ತೋಟದ ಎಲ್ಲ ಮಾವು ಹೀಗಿದೆಯಂತೆ!

ಒಂದೊಂದು ಹಣ್ಣಿನ ಸುವಾಸನೆಯೂ ನಿಮ್ಮನ್ನು ಹಾಗೆಯೇ ಹಿಡಿದು ನಿಲ್ಲಿಸಿಬಿಡುತ್ತದೆ. ಅವುಗಳ ರುಚಿ ನೋಡದೆ, ಕೊಂಡುಕೊಳ್ಳದೆ ಮುಂದೆ ಹೋಗಲು ಅವುಗಳು ನಿಮ್ಮನ್ನು ಬಿಡುವುದೇ ಇಲ್ಲ. ಅಷ್ಟು ವೈವಿಧ್ಯಮಯವಾದ ಹಾಗೂ ಗಮಗಮಿಸುವ ಮಾವುಗಳು ನಿಮ್ಮನ್ನು ಸೆಳೆಯುತ್ತಿವೆ. ಕೊಡಗು ಜಿಲ್ಲೆಯಲ್ಲಿ ಕಾಡು ಜಾತಿ ಮಾವುಗಳೇ ಜಾಸ್ತಿ. ಅವುಗಳು ಹಣ್ಣಾಗುವಷ್ಟರಲ್ಲಿ ಮಳೆ ಆರಂಭವಾಗಿರುತ್ತದೆ. ಹೀಗೆ ಮಳೆಯಲ್ಲಿ ಹಣ್ಣಾದ ಅವುಗಳು ಉಳು ಆಗಿರುತ್ತವೆ. ಹೀಗಾಗಿ ಕೊಡಗಿನಲ್ಲಿ ಇಷ್ಟೊಂದು ಬಗೆಬಗೆಯ ಮಾವುಗಳು ಸಿಗುವುದೇ ಇಲ್ಲ. ಈಗ ಮಾವು ಮೇಳಕ್ಕೆ ರಾಮನಗರ ಜಿಲ್ಲೆಯಲ್ಲಿ ವಿವಿಧ ಭಾಗಗಳಿಂದ ಹತ್ತು ಹಲವು ಬಗೆಯ ಮಾವುಗಳು ಬಂದಿವೆ. ಇಷ್ಟೊಂದು ತರಾವರಿ ಮಾವು ಕೊಳ್ಳಲು ಕೊಡಗಿನ ಜನತೆ ಮುಗಿಬಿದ್ದಿದ್ದಾರೆ. ಎಲ್ಲಾ ಬಗೆಯ ಮಾವು ಹಣ್ಣುಗಳನ್ನು ಸ್ವತಃ ರೈತರೇ ಯಾವುದೇ ರಸಾಯನಿಕವಿಲ್ಲದೆ ಹಣ್ಣು ಮಾಡಿ ತಂದು ಮಾರಾಟ ಮಾಡುತ್ತಿದ್ದಾರೆ. 

ಕೊಪ್ಪಳದ ಮಿಯಾಜಾಕಿ ಮಾವಿನ ಹಣ್ಣಿಗೆ 2.50 ಲಕ್ಷ ರೂ: ವಿಶ್ವದ ದುಬಾರಿ ಮಾವು

ಯಾವುದೇ ಮಧ್ಯವರ್ತಿಗಳಿಲ್ಲದೆ ರೈತರೇ ತಂದು ಮಾರಾಟ ಮಾಡುತ್ತಿರುವುದರಿಂದ ರೈತರೇ ಲಾಭ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಜನರು ಕೂಡ ಸ್ವಾಭಾವಿಕವಾಗಿ ಹಣ್ಣಾದ ಹಣ್ಣುಗಳನ್ನು ಕೊಂಡು ಅವುಗಳ ಸವಿಯನ್ನು ಸವಿಯುತ್ತಿದ್ದಾರೆ. ಮಾವು ಹಣ್ಣು ಅಷ್ಟೇ ಅಲ್ಲ, ಸ್ಥಳದಲ್ಲಿಯೇ ತಾಜಾ ಮಾವು ಹಣ್ಣುಗಳಿಂದ ಜೂಸ್ ಮಾಡಿಕೊಡಲಾಗುತ್ತಿದ್ದು ಕೇವಲ 20 ರೂಪಾಯಿಗೆ ನೀವು ತಾಜಾ ಮಾವಿನ ಜ್ಯೂಸ್ ಸವಿಯಬಹುದು. ಇನ್ನು ಮಾವು ಹಣ್ಣನ್ನು ಕೊಂಡ ಮಹಿಳೆಯೊಬ್ಬರು ಇಷ್ಟೊಂದು ವಿವಿಧ ಬಗೆಯ ಮಾವುಗಳನ್ನು ಸವಿದು ಫುಲ್ ಖುಷ್ ಆಗಿದ್ದಾರೆ. 

ಮಲ್ಲಿಕಾ ಹಣ್ಣನ್ನು ಸವಿದೆವು, ನನ್ನ ಮಗಳಿಗೆ ಮಾವು ಎಂದರೆ ಇಷ್ಟ. ಈಗ ಮಲ್ಲಿಕಾ ಮತ್ತು ತೋತಾಪುರಿ ಮಾವು ಕೊಂಡಿದ್ದೇವೆ ಎಂದಿದ್ದಾರೆ. ಮಾವು ಜೊತೆಗೆ ಹಲಸು ಕೂಡ ಇದ್ದು ಬಯಲು ಸೀಮೆಗಳಿಂದ ತಂದಿರುವ ಹಲವು ಬಗೆಯ ಹಲಸಿನ ಗಮಲು ಮೂಗಿಗೆ ರಾಚಿ ಹೋದವರನ್ನೆಲ್ಲಾ ತನ್ನತ್ತ ಸೆಳೆಯುತ್ತಿವೆ. ಹೀಗಾಗಿ ಜನರು ಮಾವು ಅಷ್ಟೇ ಅಲ್ಲ ಮಾವಿನ ಜೊತೆಗೆ ಹಲಸಿನ ರುಚಿಯನ್ನು ಸವಿದು ಕೊಂಡುಕೊಳ್ಳುತ್ತಿದ್ದಾರೆ. 

ಕೊಪ್ಪಳದಲ್ಲಿ ಭೀಕರ ಅಪಘಾತ: ಟೈರ್‌ ಸ್ಪೋಟಗೊಂಡು ಲಾರಿಗೆ ಗುದ್ದಿದ ಇಂಡಿಕಾ ಕಾರು, 6 ಮಂದಿ ಸಾವು

ಮಾವು ಮತ್ತು ಹಲಸು ಮೇಳವನ್ನು ವಿರಾಜಪೇಟೆ ಶಾಸಕ ಎ.ಎಸ್.. ಪೊನ್ನಣ್ಣ ಉದ್ಘಾಟಿಸಿ ಅವರು ಸಹ ಹಣ್ಣು ಕೊಂಡರು. ಈ ಸಂದರ್ಭ ಮಾತನಾಡಿದ ಅವರು ರೈತರು ಹಣ್ಣುಗಳನ್ನು ತಂದು ನೇರವಾಗಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಲಾಭ ಆಗುವುದರ ಜೊತೆಗೆ ಗ್ರಾಹಕರು ಉತ್ತಮವಾದ ಹಣ್ಣುಗಳನ್ನು ಕೊಂಡು ಸವಿದು ಖುಷಿ ಅನುಭವಿಸುತ್ತಿದ್ದಾರೆ ಎಂದಿದ್ದಾರೆ. ಒಟ್ಟಿನಲ್ಲಿ ಮಡಿಕೇರಿಯಲ್ಲಿ ನಡೆಯುತ್ತಿರುವ ಮಾವು ಮೇಳ ಎಲ್ಲರ ಗಮನ ಸೆಳೆಯುತ್ತಿರುವುದಂತು ಸತ್ಯ.

click me!