ಹಿರಿತನ ಪರಿಗಣಿಸದ್ದಕ್ಕೆ ನೋವಿದೆ: ಹೆಬ್ಬಾಳ್‌ ಶ್ರೀ

By Kannadaprabha News  |  First Published Oct 18, 2022, 2:13 PM IST
  • ಹಿರಿತನ ಪರಿಗಣಿಸದ್ದಕ್ಕೆ ನೋವಿದೆ: ಹೆಬ್ಬಾಳ್‌ ಶ್ರೀ
  • ಒಂದೂವರೆ ತಿಂಗಳು ಮುರುಘಾ ಮಠದ ಉತ್ತರಾಧಿಕಾರಿಯಾಗಿದ್ದರೂ ತಪ್ಪಿದ ಅವಕಾಶಕ್ಕೆ ಬೇಸರ
  • ಮುರುಗೇಶನ ಪೂಜೆ ಮರೆಯಲಾರೆ, ಆಹ್ವಾನ ಇಲ್ಲದೇ ಹೋಗಲಾರೆ

ದಾವಣಗೆರೆ (ಅ.18) : ಚಿತ್ರದುರ್ಗ ಮುರುಘಾ ಮಠದ ಉತ್ತರಾಧಿಕಾರಿಯಾಗಿ ತಮ್ಮನ್ನು ಮುಂದುವರಿಸುತ್ತಾರೆಂಬ ವಿಶ್ವಾಸವಿತ್ತು. ಆದರೆ, ಆಗಲಿಲ್ಲ ಅಷ್ಟೇ. ಅದೆಲ್ಲದಕ್ಕೂ ಭಾಗ್ಯವಿರಬೇಕಲ್ಲವೇ ಎಂದು ಹೆಬ್ಬಾಳ್‌ ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.

Chitradurgaದ ಐತಿಹಾಸಿಕ ಮುರುಘಾ ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ

Latest Videos

undefined

ಶ್ರೀಮಠಕ್ಕೆ ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಪೀಠಾಧಿಪತಿಯಾಗಿ ನೇಮಕಗೊಂಡ ಬೆನ್ನಲ್ಲೇ ಒಂದೂವರೆ ತಿಂಗಳ ಕಾಲ ಶ್ರೀಮಠದ ಉಸ್ತುವಾರಿ ವಹಿಸಿ ಕೊಂಡಿದ್ದ ಹೆಬ್ಬಾಳ್‌ ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಪೀಠಾಧಿಪತಿ ಸ್ಥಾನಕ್ಕೆ ತಮ್ಮ ಹಿರಿತನ ಪರಿಗಣಿಸದ ನೋವಿದ್ದು, ಎಲ್ಲದಕ್ಕೂ ಭಾಗ್ಯ ಇರಬೇಕಲ್ಲವೇ ಎಂಬುದಾಗಿ ಮಾಧ್ಯಮಗಳ ಬಳಿ ಬೇಸರ ತೋಡಿದ್ದಾರೆ.

ಒಂದೂವರೆ ತಿಂಗಳ ಜವಾಬ್ದಾರಿ ಸಮರ್ಥವಾಗಿ ನಿರ್ವಹಿಸಿದ್ದೇನೆ. ಶರಣ ಸಂಸ್ಕೃತಿ ಉತ್ಸವ, ಸಾಮೂಹಿಕ ವಿವಾಹ ಸೇರಿದಂತೆ ಅನೇಕ ಉತ್ತಮ ಕೆಲಸ ಮಾಡುವ ಪ್ರ ಯತ್ನ ಮಾಡಿದ್ದು, ಶ್ರೀಮಠದ ಉತ್ತರಾಧಿಕಾರಿಯಾಗಿ ಮುಂದುವರಿಸುವ ವಿಶ್ವಾಸ ಇತ್ತು. ಆದರೆ, ಅದು ಆಗಿಲ್ಲ. ಈ ಬಗ್ಗೆ ಅಸಮಾಧಾನವಿದೆಯೆಂಬುದನ್ನು ಹೇಳಬೇಕಿಲ್ಲ. ಎಲ್ಲರಿಗೂ ಗೊತ್ತಾಗುವ ವಿಚಾರವಲ್ಲವೇ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಮುರುಘಾ ಮಠದ ಪರಂಪರೆ ಬಹು ದೊಡ್ಡದು. ಕೋಟ್ಯಾಂತರ ಭಕ್ತರನ್ನು ಹೊಂದಿರುವ ಶ್ರೀಮಠಕ್ಕೆ ಉತ್ತರಾಧಿಕಾರಿಯಾಗುವಂತೆ 32 ವರ್ಷದ ಹಿಂದೆಯೇ ಆಗಿನ ಶ್ರೀ ಮಲ್ಲಿಕಾರ್ಜುನ ಗುರುಗಳು ಸೂಚಿಸಿದ್ದರು. ನಮ್ಮ ಮೇಲೆ ತುಂಬಾ ಪ್ರೀತಿ ಇತ್ತಲ್ಲದೇ, ಜಯದೇವ ಜಗದ್ಗುರುಗಳ ಮಠಕ್ಕೆ ಪೀಠಾಧಿಪತಿಯಾಗುವಂತೆ ಸೂಚನೆ ನೀಡಿದ್ದರು. ಆಗ ಅದನ್ನು ನಯವಾಗಿಯೇ ನಾನು ತಿರಸ್ಕರಿಸಿದ್ದಾರೆ. ಪಾಂಡಿತ್ಯ, ಸಂಸ್ಕೃತ ಸೇರಿದಂತೆ ಎಲ್ಲಾ ರೀತಿಯಲ್ಲೂ ಅತ್ಯುತ್ತಮ ಜ್ಞಾನ ಇದ್ದವರ ನೇಮಿಸಲು ಮನವಿ ಮಾಡಿದ್ದೆ ಎಂದು ಸ್ಮರಿಸಿದರು.

ನಮ್ಮನ್ನು ಈಗ ಪೀಠಾಧಿಪತಿ ಮಾಡಬಹುದೆಂಬ ವಿಶ್ವಾಸವಿತ್ತು. ಆದರೆ, ಅದು ಕಾರ್ಯ ರೂಪಕ್ಕೆ ಬರಲಿಲ್ಲ. ಎಲ್ಲದಕ್ಕೂ ಭಾಗ್ಯ ಇರಬೇಕು. ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿಗೆ ಭಾಗ್ಯವಿತ್ತು. ಹಾಗಾಗಿಯೇ ಮಠದ ಉತ್ತರಾಧಿಕಾರಿಯಾಗಿದ್ದಾರೆ. ಒಂದೂವರೆ ತಿಂಗಳ ಹಿಂದೆ ಸ್ವತಃ ಡಾ.ಶಿವಮೂರ್ತಿ ಮುರುಘಾ ಶರಣರೇ ನನ್ನನ್ನು ಮಠಕ್ಕೆ ಕರೆಸಿಕೊಂಡಿದ್ದರು. ಮಠದ ವ್ಯವಸ್ಥಾಪಕರಾಗಿದ್ದ ಪರಮಶಿವಯ್ಯ ರಾತ್ರಿ 8ಕ್ಕೆ ಕರೆ ಮಾಡಿ, ಬರುವಂತೆ ಆಹ್ವಾನಿಸಿದರು. ಅಂದು ಶರಣರ ಜೊತೆಗೆ ಡಿಸಿ, ಎಸ್ಪಿ, ಸಮಾಜದ ಮುಖಂಡರು ಸಮಾಲೋಚನೆ ನಡೆಸುತ್ತಿದ್ದರು. ಆಗ ನನಗೆ ಮಠದ ಜವಾಬ್ದಾರಿ ತಾವು ವಾಪಸ್‌ ಬರುವವರೆಗೆ ನೋಡಿಕೊಳ್ಳಿ ಎಂಬುದಾಗಿ ಮೌಖಿಕವಾಗಿ ಸೂಚಿಸಿದ್ದಕ್ಕೆ ಸಮ್ಮತಿಸಿದ್ದೆ ಎಂದು ತಿಳಿಸಿದರು.

ಮಠಕ್ಕೆ ಕಾಲಿಡಲ್ಲವೆಂದು ಅಪಪ್ರಚಾರ:

ಬಸವಪ್ರಭುಗಳ ನೇಮಿಸುವಂತೆ ಹೇಳಿ, ಪತ್ರವನ್ನೂ ನೀಡಿದ್ದಾರೆಂದು ತಿಳಿದು ಬಂದಿದೆ. ಹಾಗಾಗಿ ನಾನು ಹೆಬ್ಬಾಳ ಮಠಕ್ಕೆ ವಾಪಾಸ್ಸು ಬಂದಿದ್ದೇನೆ. ಪೀಠಾಧಿಪತಿ ಸ್ಥಾನ ತಪ್ಪಿದ್ದಕ್ಕೆ ಮುರುಘಾ ಮಠಕ್ಕೆ ಹೋಗುವುದಿಲ್ಲವೆಂದು ನಾನು ಶಪಥ ಮಾಡಿಲ್ಲ. ಶ್ರೀಮಠದ ಮುರುಗೇಶ ದೇವರ ಪೂಜೆ, ಪುನಸ್ಕಾರ ಮಾಡುತ್ತೇನೆ. ಅಲ್ಲಿನ ಅನ್ನ ಉಂಡಿದ್ದೇನೆ. ಹೊಟ್ಟೆಹಸಿದಾಗ ಪ್ರಸಾದ ಸ್ವೀಕರಿಸಿದ್ದೇನೆ. 18 ವರ್ಷದಿಂದಲೂ ಮುರುಗೇಶನ ಆರಾಧನೆ ಮಾಡಿ ಬಂದವನು. ಎಲ್ಲಾ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುತ್ತೇನೆ. ಮಠದಿಂದ ಯಾವುದೇ ಆಹ್ವಾನ ಬಂದರೂ ಹಾಜರಾಗುತ್ತೇನೆ. ಆಹ್ವಾನ ಬರದಿದ್ದರೆ ಹೋಗಲ್ಲ ಎಂದಷ್ಟೇ ಹೇಳಿರುವೆ. ಆದರೆ, ಕೆಲವರು ಮಠಕ್ಕೆ ಕಾಲಿಡಲ್ಲವೆಂದ್ದೆನೆಂಬ ಅಪಪ್ರಚಾರ ಮಾಡಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕಳೆದ 48 ವರ್ಷದಿಂದಲೂ ಸ್ವಾಮೀಜಿಯಾಗಿದ್ದೇನೆ. ಹಾಸನ ಜಿಲ್ಲೆ ಅರಕಲಗೂಡು ಚಿಮುಮೆ ಮಠಕ್ಕೆ ಉತ್ತರಾಧಿಕಾರಿಯಾಗಿ 1976ರಲ್ಲಿ ಉತ್ತರಾಧಿಕಾರಿಯಾಗಿ ನೇಮಕ ಮಾಡಿ, ಆಗಿನ ಶ್ರೀ ಮಲ್ಲಿಕಾರ್ಜುನ ಗುರುಗಳು ಘೋಷಣೆ ಮಾಡಿದ್ರು. ಆಗ ದಸರಾ ಉತ್ಸವಕ್ಕೂ ಚಾಲನೆ ನೀಡಿದ್ದೆವು. 1980ರಲ್ಲಿ ದಾವಣಗೆರೆ ತಾ. ಹೆಬ್ಬಾಳ್‌ ವಿರಕ್ತ ಮಠದ ಸ್ವಾಮೀಜಿಯಾಗಿ ಈವರೆಗೂ ಇದ್ದೇನೆ. ಗೋ ಶಾಲೆ, ರೈತರ ಬದುಕನ್ನು ಹಸನಾಗಿಸುವುದು, ಧಾರ್ಮಿಕ ಕಾರ್ಯ, ಪೂಜೆ ಪುನಸ್ಕಾರ ಎಲ್ಲಾ ನಡೆಸಿಕೊಂಡು ಬರುತ್ತಿದ್ದೇನೆ. ಹೈನುಗಾರಿಕೆ ಮೂಲಕ ಒಂದು ಸಾವಿರ ಜನರಿಗೆ ಗಿಣ್ಣ ನೀಡುವ ಕಾರ್ಯಕ್ರಮ ಏರ್ಪಡಿಸಲಿದ್ದೇನೆ. ಮುರುಘಾ ಮಠಕ್ಕೆ ತರಕಾರಿ ಸೇರಿದಂತೆ ನಮ್ಮ ಕೈಲಾದಷ್ಟುದಾಸೋಹ ಸೇವೆ ಮಾಡಿದ್ದೇನೆ. ಮರುಗೇಶನ ಮರೆಯುವುದು ಅಸಾಧ್ಯ, ಎಲ್ಲವೂ ಆತನಿಂದಲೇ ಆಗಿರುವುದು, ನಾನು ಮರೆತರೆ ಕ್ಷಮೆ ಇರದು ಎಂದು ಹೇಳಿದರು.

2ನೇ ಪೋಕ್ಸೋ ಕೇಸಲ್ಲಿ ಮುರುಘಾಶ್ರೀಗೆ ಸಂಕಷ್ಟ: ಮೈಸೂರಿಗೆ ತೆರಳಿ ಇಬ್ಬರು ಸಂತ್ರಸ್ತರ ಹೇಳಿಕೆ ದಾಖಲಿಸಿದ ಪೊಲೀಸರು

.ಸ್ವಾಮೀಜಿ ಅನಿಸಿಕೆಗಳು

  • ಬಸವಪ್ರಭು ಸ್ವಾಮೀಜಿ ನೇಮಕಕ್ಕೆ ನನ್ನ ವಿರೋಧವಿಲ್ಲ.
  • ಮುರುಘಾ ಶರಣರೊಂದಿಗೂ ನನಗೆ ಭಿನ್ನಮತ ಇಲ್ಲ.
  • ಶ್ರೀಮಠದ ವಿಚಾರವಾಗಿ ಶರಣರ ನಿರ್ಧಾರಕ್ಕೆ ಬದ್ಧ
  • ಶ್ರೀಮಠದ ಮುರುಗೇಶನಿಗೆ ನನ್ನ ಪೂಜೆ ನಿಲ್ಲಿಸೆನು
  • ಹೋಗಬೇಕೆನಿಸಿದರೆ ಹೋಗಿಯೇ ಹೋಗುತ್ತೇನೆ
  • ಅಧಿಕಾರ ಎಂಬುದು ಎಲ್ಲರಿಗೂ ಒಲಿಯುವುದಿಲ್ಲ

ಲಿಂಗಾಯತ ಸಮಾಜದ ಮುಖಂಡರೂ ಈಗಲೂ ನಮ್ಮೊಂದಿಗೆ ಉತ್ತಮ ಬಾಂಧವ್ಯ, ನನ್ನ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ. ಈಗಲೂ ಅಷ್ಟೇ ಅಭಿಮಾನ ತೋರುತ್ತಾರೆ. ಮುರುಘಾ ಶರಣರ ಮನಸ್ಸಿನಲ್ಲಿ ಏನಿತ್ತೋ? ನಿಮ್ಮ ಮನಸ್ಸಿನಲ್ಲಿ ಏನಿದೆ ಅಂತಾ ನಾನು ಹೇಳಲಾಗದು. ಈಗ ಆದ ನೇಮಕದ ಬಗ್ಗೆಯೂ ನನ್ನದು ಅಷ್ಟೇ ಅಭಿಪ್ರಾಯ. ಒಟ್ಟಿನಲ್ಲಿ ಯಾರೇ ಆಗಲಿ, ಉತ್ತಮ ಕೆಲಸಗಳು ಶ್ರೀಮಠದಿಂದ ಆಗಲಿ ಎಂಬುದಷ್ಟೇ ನಮ್ಮ ಆಶಯ.

click me!