ಯಕ್ಷಗಾನದಲ್ಲಿ ಕಾಲಮಿತಿ ಪ್ರದರ್ಶನ ಅನಿವಾರ್ಯವೇ?

By Kannadaprabha News  |  First Published Oct 23, 2022, 11:23 AM IST
  • ಯಕ್ಷಗಾನದಲ್ಲಿ ಕಾಲಮಿತಿ ಪ್ರದರ್ಶನ ಅನಿವಾರ್ಯವೇ?
  • ಮೈಕ್‌ ಬಳಕೆಗೆ ನಿರ್ಬಂಧ
  • ಕಾಲಮಿತಿ ಬಗ್ಗೆ ಕೇಳಿ ಬರುತ್ತಿವೆ ಮೇಳಗಳ ಪರ-ವಿರೋಧ ಅಭಿಪ್ರಾಯ

ವಸಂತಕುಮಾರ ಕತಗಾಲ

 ಕಾರವಾರ (ಅ.23) : ರಾತ್ರಿಯಿಡೀ ಯಕ್ಷಗಾನ ಮೊಳಗಿಸುತ್ತಿರುವ ಯಕ್ಷಗಾನ ಮೇಳಗಳ ಪ್ರದರ್ಶನ ಇನ್ನು ಮುಂದೆ ಕಾಲಮಿತಿಗೆ ಸೀಮಿತವಾಗುವ ಸಾಧ್ಯತೆ ಕಂಡುಬಂದಿದೆ. ಬಡಗುತಿಟ್ಟಿನ ಪ್ರಮುಖ ಡೇರೆ ಮೇಳವಾದ ಪೆರ್ಡೂರು ಅನಂತ ಪದ್ಮನಾಭ ದಶಾವತಾರ ಯಕ್ಷಗಾನ ಮಂಡಳಿ ಕಾಲಮಿತಿ ಪ್ರದರ್ಶನಕ್ಕೆ ಒತ್ತು ನೀಡುವುದಾಗಿ ಹೇಳಿದೆ. ಸಂಘಟಕರು ಬಯಸಿದಲ್ಲಿ ರಾತ್ರಿಯಿಡೀ ಪ್ರದರ್ಶನ ನೀಡುವುದಾಗಿಯೂ ತಿಳಿಸಿದೆ.

Tap to resize

Latest Videos

ಯಕ್ಷಗಾನಕ್ಕೆ ಕಾಲಮಿತಿ, ಕಟೀಲು ದೇವಿಯ ಮೊರೆ ಹೋಗಲು ನಿರ್ಧಾರ, ರಾತ್ರಿ ಪ್ರದರ್ಶನಕ್ಕೆ ಆಗ್ರಹ!

ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಬಹು ಹಿಂದೆಯೇ ಕಾಲಮಿತಿ ಪ್ರದರ್ಶನವನ್ನು ಜಾರಿಗೊಳಿಸಿತ್ತು. ತೆಂಕು ತಿಟ್ಟಿನಲ್ಲಿ ಧರ್ಮಸ್ಥಳ ಮೇಳ ಮೊಟ್ಟಮೊದಲು ತನ್ನ ಪ್ರದರ್ಶನವನ್ನು ಕಾಲಮಿತಿಗೆ ಸೀಮಿತಗೊಳಿಸಿ ಈಗಾಗಲೇ 2-3 ತಿರುಗಾಟ ಪೂರೈಸಿದೆ.

ಈಚೆಗೆ ಆರಂಭವಾದ ಪಾವಂಜೆ ಮೇಳ ಅರಂಭದಿಂದಲೂ ಕಾಲಮಿತಿಗೆ ಒತ್ತು ನೀಡುತ್ತಿದೆ. ಪ್ರದರ್ಶನ ಯಶಸ್ವಿಯೂ ಆಗುತ್ತಿದೆ. ಈ ಬಾರಿ ಕಟೀಲಿನ ಆರು ಮೇಳಗಳಲ್ಲೂ ಸಮಯ ಮಿತಿಯ ಪ್ರದರ್ಶನದ ಬಗ್ಗೆ ಚಿಂತನೆಗಳು ಶುರುವಾಗಿವೆ. ಆದರೆ ಕಟೀಲು ಮೇಳ ಕಾಲಮಿತಿ ಪ್ರದರ್ಶನ ನಡೆಸಬಾರದೆಂದು ಅದರ ಸೇವಾಕರ್ತರು ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ.

ಸುಪ್ರಿಂಕೋರ್ಚ್‌ ರಾತ್ರಿ 10 ಗಂಟೆಯ ನಂತರ ಬಹಿರಂಗವಾಗಿ ಮೈಕ್‌ ಬಳಕೆಗೆ ನಿರ್ಬಂಧ ವಿಧಿಸಿರುವುದರಿಂದ ಸಮಯಮಿತಿಗೆ ಮುಂದಾಗಬೇಕಾಗಿದೆ ಎಂದು ಕಟೀಲು ಮೇಳ ತಿಳಿಸಿದೆ. ಅದರೆ ಈ ಬಗ್ಗೆ ಸೇವಾಕರ್ತರಿಂದ ವಿರೋಧವೂ ವ್ಯಕ್ತವಾಗಿದೆ. ಕಾಲಮಿತಿಯ ಯಕ್ಷಗಾನದ ಬಗ್ಗೆ ಕಲಾವಿದರು ಹಾಗೂ ಪ್ರೇಕ್ಷಕರಿಂದ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಇಡೀ ರಾತ್ರಿ ನಡೆಯುವ ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆಯಾಗುತ್ತದೆ. ಮಧ್ಯರಾತ್ರಿ ನಂತರ ಯಕ್ಷಗಾನಕ್ಕೆ ಪ್ರೇಕ್ಷಕರೇ ಇರುವುದಿಲ್ಲ. ಪ್ರೇಕ್ಷಕರ ಹಾಜರಾತಿ, ಕಲಾವಿದರ ಆರೋಗ್ಯದ ದೃಷ್ಟಿಯಿಂದಲೂ ಕಾಲಮಿತಿ ಪ್ರಯೋಗ ಆಗಬೇಕು ಎಂದು ಒಂದು ವರ್ಗ ವಾದಿಸುತ್ತಿದೆ.

ಸಮಯ ಮಿತಿಯಿಂದ ಯಕ್ಷಗಾನದ ಮೂಲ ಆಶಯಕ್ಕೇ ಪೆಟ್ಟು ಬೀಳಲಿದೆ. ಅದೆಷ್ಟೋ ಕಲಾವಿದರಿಗೆ ಅವಕಾಶವೇ ಸಿಗುವುದಿಲ್ಲ. ಮಧ್ಯರಾತ್ರಿ ಕಲಾವಿದರು ಸಂಚರಿಸುವುದರಿಂದ ಅಪಘಾತ ಉಂಟಾಗುವ ಸಾಧ್ಯತೆ ಇದೆ. ಕಲಾವಿದರ ವಾಸ್ತವ್ಯಕ್ಕೂ ಸಮಸ್ಯೆಯಾಗಲಿದೆ. ಈ ರೀತಿಯ ವಾದ ಇನ್ನೊಂದು ವರ್ಗದ್ದು. ರಾತ್ರಿ ಧ್ವನಿವರ್ಧಕ ಬಳಸದಂತೆ ಸುಪ್ರಿಂ ಕೋರ್ಚ್‌ ಆದೇಶ 22 ವರ್ಷಗಳ ಹಿಂದೆಯೇ ಆಗಿದೆ. ಆ ನಂತರ ಕಳೆದ ವರ್ಷದ ತನಕವೂ ಯಕ್ಷಗಾನ ಪ್ರದರ್ಶನಕ್ಕೆ ಯಾವುದೇ ತೊಂದರೆ ಆಗಿರಲಿಲ್ಲ. ಆಜಾನ್‌ ವಿವಾದದ ತರುವಾಯ ಸಮಸ್ಯೆ ಉಂಟಾಗುತ್ತಿದೆ. ಯಕ್ಷಗಾನಕ್ಕೆ ವಿಶೇಷ ಪರವಾನಗಿ ನೀಡಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಆಗ್ರಹವೂ ಕೇಳಿಬಂದಿದೆ.

ಉಡುಪಿ: ಇಲ್ಲಿ ದೇವಿಗೆ ಯಕ್ಷಗಾನ ಹರಕೆ ತೀರಿಸಲು 2043ರವರೆಗೂ ಕಾಯಬೇಕು!

ಯಕ್ಷಗಾನ ಪ್ರದರ್ಶನವನ್ನು ಕಾಲಮಿತಿಗೆ ಒಳಪಡಿಸುವುದು ಸೂಕ್ತ. ಇದರಿಂದ ಕಲಾವಿದರು ಹಾಗೂ ಪ್ರೇಕ್ಷಕರಿಗೂ ಅನುಕೂಲ.

-ವಿದ್ಯಾಧರ ರಾವ್‌ ಜಲವಳ್ಳಿ, ಕಲಾವಿದ

ನಾವು ಮೊದಲಿನಿಂದಲೂ ಬೆಳಗಿನ ತನಕ ಯಕ್ಷಗಾನ ಪ್ರದರ್ಶನ ಮಾಡುತ್ತಿದ್ದೇವೆ. ಕಲಾವಿದನಿಗೆ ಕಾಲಮಿತಿ ಆದಲ್ಲಿ ತಿರುಗಾಟ, ವಾಸ್ತವ್ಯದ ಸಮಸ್ಯೆ ಉಂಟಾಗಬಹುದು. ಆದರೂ ಕಾಲಮಿತಿ ಪ್ರದರ್ಶನದಲ್ಲಿ ಕಲಾವಿದರು ಹಾಗೂ ಪ್ರೇಕ್ಷಕರ ಹೊಂದಾಣಿಕೆ ಮುಖ್ಯ.

-ರಮೇಶ ಭಂಡಾರಿ, ಯಕ್ಷಗಾನ ಹಾಸ್ಯ ಕಲಾವಿದ

click me!