25 ವರ್ಷಗಳಲ್ಲಾಗದ ಅಭಿವೃದ್ಧಿ 3 ವರ್ಷದಲ್ಲಿ ಮಾಡಿರುವೆ: ಎಚ್‌ಡಿಕೆ ವಿರುದ್ಧ ಇಕ್ಬಾಲ್ ಹುಸೇನ್ ವಾಗ್ದಾಳಿ

Published : May 10, 2026, 08:32 PM IST
Iqbal Hussain

ಸಾರಾಂಶ

ರಾಮನಗರ ಕ್ಷೇತ್ರದಲ್ಲಿ 25 ವರ್ಷಗಳಿಂದ ಅಧಿಕಾರದಲ್ಲಿದ್ದವರು ಮಾಡಲಾಗದ ಅಭಿವೃದ್ಧಿ ಕಾರ್ಯಗಳನ್ನು ಕೇವಲ 3 ವರ್ಷಗಳಲ್ಲಿ ಮಾಡಿ ತೋರಿಸಿದ್ದೇನೆ ಎಂದು ಎಚ್‌ಡಿಕೆ ವಿರುದ್ಧ ಶಾಸಕ ಇಕ್ಬಾಲ್ ಹುಸೇನ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ರಾಮನಗರ (ಮೇ.10): ರಾಮನಗರ ಕ್ಷೇತ್ರದಲ್ಲಿ 25 ವರ್ಷಗಳಿಂದ ಅಧಿಕಾರದಲ್ಲಿದ್ದವರು ಮಾಡಲಾಗದ ಅಭಿವೃದ್ಧಿ ಕಾರ್ಯಗಳನ್ನು ಕೇವಲ 3 ವರ್ಷಗಳಲ್ಲಿ ಮಾಡಿ ತೋರಿಸಿದ್ದೇನೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಇಕ್ಬಾಲ್ ಹುಸೇನ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಈ ಹಿಂದೆ ಶಾಸಕರಾಗಿದ್ದವರು ಕೇವಲ ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣ ಮಾಡಿದರು. ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದರೂ ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದರು.

ಆದರೆ, ನಾನು ಶಾಸಕನಾದ ಮೇಲೆ ರಸ್ತೆ, ಚರಂಡಿ, ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲು ಒತ್ತು ನೀಡಿದ್ದೇನೆ ಎಂದರು. ಅಭಿವೃದ್ಧಿಕೆ ಕ್ರಮ ಕೈಗೊಂಡಿದ್ದೇನೆ ಎಂದರು. ಸಿ.ಎಂ.ಲಿಂಗಪ್ಪರವರು ಶಾಸಕರಾಗಿದ್ದ ವೇಳೆ ಸೂರಿಲ್ಲದವರಿಗೆ ನಿವೇಶನ ಹಾಗೂ ಬಗರ್ ಹುಕುಂ ಸಾಗುವಳಿದಾರರಿಗೆ ಉಳುಮೆ ಚೀಟಿ ನೀಡಿದ್ದರು. ಆನಂತರ 25 ವರ್ಷಗಳ ಅವಧಿಯಲ್ಲಿ ಒಬ್ಬನೇ ಒಬ್ಬ ಬಡವನಿಗೆ ನಿವೇಶನ, ರೈತರಿಗೆ ಸಾಗುವಳಿ ಚೀಟಿ ನೀಡಿಲ್ಲ. ಇಷ್ಟಾದರೂ ತಾವು ಮಣ್ಣಿನ ಮಕ್ಕಳೆಂದು ಹೇಳಿಕೊಂಡು ಕಣ್ಣೀರು ಹಾಕುತ್ತಾರೆ ಎಂದು ಟೀಕಿಸಿದರು.

ಈಗ 10 ಸಾವಿರ ನಿವೇಶನ ಹಂಚಲು 300 ಎಕರೆ ಜಾಗ ಗುರುತಿಸಲಾಗಿದೆ. ಈಗಾಗಲೇ ಸೂರಿಲ್ಲದ ಕಡುಬಡವರನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು, ಮುಂಬರುವ 3 -4 ತಿಂಗಳಲ್ಲಿ ನಿವೇಶನ ಹಂಚಲಾಗುವುದು. ಬಗರ್‌ಹುಕುಂ ಸಾಗುವಳಿದಾರರ ಜಮೀನುಗಳ ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಶೀಘ್ರದಲ್ಲಿಯೇ ಉಳುಮೆ ಚೀಟಿ ನೀಡಲಾಗುವುದು ಎಂದರು. ಕಳೆದ ಮೂರು ದಶಕಗಳಿಂದ ಜೆಡಿಎಸ್ ಪಕ್ಷದಲ್ಲಿ ದುಡಿದವರು ಸೂಕ್ತ ಸ್ಥಾನಮಾನ ದೊರೆಯದ ಹಿನ್ನೆಲೆ ಹಾಗೂ ತಮ್ಮ ಗ್ರಾಮಗಳ ಅಭಿವೃದ್ಧಿ ಆಗದಿರುವುದರಿಂದ ಬೇಸತ್ತು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ.

ಕಾಂಗ್ರೆಸ್ ಪಕ್ಷವನ್ನು ಸೇರುವಂತೆ ಮನವಿ

ಸಮ ಸಮಾಜದ ನಿರ್ಮಾಣ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ರವರ ಕೈ ಬಲಪಡಿಸಲು ಯುವಕರು ಕಾಂಗ್ರೆಸ್ ಪಕ್ಷವನ್ನು ಸೇರುವಂತೆ ಇಕ್ಬಾಲ್ ಹುಸೇನ್ ಮನವಿ ಮಾಡಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು ಮಾತನಾಡಿ, ಈ ಹಿಂದೆ ಶಾಸಕರಾಗಿದ್ದವರ ನಿರ್ಲಕ್ಷ್ಯದಿಂದ ಕ್ಷೇತ್ರವು ಅಭಿವೃದ್ಧಿಯಲ್ಲಿ ಹಿಂದುಳಿದಿತ್ತು. ಆದರೀಗ ಇಕ್ಬಾಲ್ ಹುಸೇನ್ ಶಾಸಕರಾದ ನಂತರ ಅಭಿವೃದ್ಧಿ ಪರ್ವ ಪ್ರಾರಂಭಗೊಂಡಿದೆ.

ಇದನ್ನು ಮೆಚ್ಚಿದ ಅನ್ಯಪಕ್ಷಗಳ ಮುಖಂಡರು ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗುತ್ತಿದ್ದಾರೆ. ಇದು ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಎಂದು ಹೇಳಿದರು. ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್ ಮಾತನಾಡಿ, ಈ ಹಿಂದೆ ಶಾಸಕರನ್ನು ನೋಡಲು ಬೆಂಗಳೂರಿಗೆ ಹೋಗಬೇಕಿತ್ತು. ಈಗ ಶಾಸಕರು ನಿಮ್ಮ ಮನೆ ಬಾಗಿಲಿಗೇ ಆಗಮಿಸಿ, ನಿಮ್ಮ ಸಮಸ್ಯೆಗಳನ್ನು ಆಲಿಸಿ, ಅವುಗಳನ್ನು ಬಗೆಹರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಯುವಕರು ಕಾಂಗ್ರೆಸ್ ಪಕ್ಷ ಸೇರುವ ಮೂಲಕ ಶಾಸಕರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.

PREV
Read more Articles on
click me!

Recommended Stories

ಮನೆ ತಲುಪಲು 2 ಕಿ.ಮಿ ಬಾಕಿ ಇರುವಾಗಲೇ ಮದುವೆಗೆ ತೆರಳಿದ್ದ ಬಸ್ ಯಲ್ಲಾಪುರದ ಬಳಿ ಅಪಘಾತ
ಭ್ರಷ್ಟಾಚಾರದ ವಿರುದ್ಧ ವಾಟಾಳ್ ಪಕ್ಷದಿಂದ ರಾಜ್ಯಾದ್ಯಂತ ಹೋರಾಟ: ವಾಟಾಳ್ ನಾಗರಾಜ್