ಪಟ್ಟಣಗಳಲ್ಲಿ ಆಚರಣೆಯಲ್ಲಿದೆ ಅದೃಶ್ಯ ಅಸ್ಪೃಶ್ಯತೆ : ಎ.ನರಸಿಂಹಮೂರ್ತಿ

By Kannadaprabha NewsFirst Published Apr 6, 2024, 11:08 AM IST
Highlights

ಗ್ರಾಮೀಣ ಪ್ರದೇಶದಲ್ಲಿ ಅಸ್ಪೃಶ್ಯತೆ ಕಣ್ಣಿಗೆ ಕಾಣುತ್ತದೆ. ಆದರೆ ನಗರ ಪ್ರದೇಶದಲ್ಲಿ ಅದು ಕಾಣದಿದ್ದರೂ ಅದೃಶ್ಯ ಅಸ್ಪೃಶ್ಯತೆ ಆಚರಣೆಯಲ್ಲಿದೆ ಎಂದು ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ತಿಳಿಸಿದರು.

 ತುಮಕೂರು :  ಗ್ರಾಮೀಣ ಪ್ರದೇಶದಲ್ಲಿ ಅಸ್ಪೃಶ್ಯತೆ ಕಣ್ಣಿಗೆ ಕಾಣುತ್ತದೆ. ಆದರೆ ನಗರ ಪ್ರದೇಶದಲ್ಲಿ ಅದು ಕಾಣದಿದ್ದರೂ ಅದೃಶ್ಯ ಅಸ್ಪೃಶ್ಯತೆ ಆಚರಣೆಯಲ್ಲಿದೆ ಎಂದು ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ತಿಳಿಸಿದರು.

ನಗರದ ಮಾರಿಯಮ್ಮ ನಗರದ ಸಮುದಾಯ ಭವನದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಪರ್ಯಾಯ ವೇದಿಕೆ ವತಿಯಿಂದ ಆಯೋಜಿಸಿದ್ದ ಎಸ್.ಸಿ/ಎಸ್.ಟಿ ಅಟ್ರಾಸಿಟಿ ಆಕ್ಟ್, ಪಿಟಿಸಿಎಲ್ ಆಕ್ಟ್ ಮತ್ತು ಪಿಇಎಂಆರ್‌ಎಸ್ ಆಕ್ಟ್‌ಗಳ ಕುರಿತು ಕಾನೂನು ಅರಿವಿನ ಕಾರ್ಯಗಾರದಲ್ಲಿ ಮಾತನಾಡಿದರು.

ಎಸ್.ಸಿ/ಎಸ್.ಟಿ ಕುಟುಂಬಗಳಿಗೆ ಇತರೆ ವರ್ಗದವರೂ ಮನೆ ನೀಡದಿರುವುದು. ಕೆಲಸದ ಸ್ಥಳಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜಾತಿ ಆಧಾರಿತವಾಗಿಯೂ ದಮನಿಸುವ ಕಾರ್ಯಗಳ ನಗರದಲ್ಲಿ ರೂಢಿಗತವಾಗಿದ್ದು ಇಂದಿನ ಯುವ ಪೀಳಿಗೆಯಿಂದ ಇದನ್ನು ಅರಿಯಲು ಸಾಧ್ಯವಾಗಿಲ್ಲ ಎಂದರು.

ಎಸ್.ಸಿ/ಎಸ್.ಟಿಗಳ ಭೂಮಿಗಳ ಪರಭಾರೆ ಮಾಡುವಂತಿಲ್ಲ ಎಂದಿದ್ದರು ಯಾವುದೇ ಕಾಯಿದೆ ಉಲ್ಲಂಘಿಸಿ ಭೂಮಿಗಳನ್ನು ಪರಭಾರೆ ಮಾಡಿಕೊಳ್ಳಲಾಗುತ್ತಿದ್ದು ಈ ಬಗ್ಗೆ ಜಾಗೃತರಾಗಬೇಕು. ಹಾಗೆಯೇ ಮಲಹೊರುವ ಪದ್ಧತಿ ರದ್ದಾಗಿದ್ದರು ಸಹ ನಗರದ ಪ್ರದೇಶದ ಹೋಟೆಲ್‌ಗಳಲ್ಲಿ, ಅಪಾರ್ಟ್ಮೆಂಟ್‌ಗಳಲ್ಲಿ, ಛತ್ರಗಳಲ್ಲಿ, ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂ ಇತರೆ ಸ್ಥಳಗಳಲ್ಲಿ ಇಂದಿಗೂ ಪಿಟ್‌ಗಳನ್ನು, ಬಾತ್ ರೂಮ್ ಸ್ವಚ್ಛಗೊಳಿಸುತ್ತಿರುವುದು ಇದೇ ಎಸ್.ಸಿ/ಎಸ್.ಟಿ ಸಮುದಾಯದವರು ಎಂದರು.

ಹಾಗೆಯೇ ಪಟ್ಟಣ ಪಂಚಾಯ್ತಿಗಳಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ಅಲ್ಲಲ್ಲಿ ಮಲ ಶುಚಿಗೊಳಿಸುವ ಕಾರ್ಯ ಕಂಡಬರುತ್ತದೆ. ಇದು ಹೆಚ್ಚಾಗಿ ಗುತ್ತಿಗೆ ಆಧಾರವಾಗಿ ದಲಿತ ಸಮುದಾಯ ಕಾರ್ಮಿಕರನ್ನು ನೇಮಿಸಿಕೊಂಡು ಚಾಲ್ತಿಯಲ್ಲಿರುವುದು ವಿರ್ಪ ಯಾಸ ಮತ್ತು ಪ್ರಭುತ್ವ ಕೂಡ ಜಾತಿ ಭ್ರಾಂತಿಗೆ ಒಳಗಾಗಿರುವುದರಿಂದ ಸಫಾಯಿ ಕರ್ಮಚಾರಿಗಳನ್ನು ಗುರುತಿಸುವಲ್ಲಿ ವಿಫಲವಾಗಿದ್ದು ತನ್ನ ತಾರತಮ್ಯ ಧೋರಣೆಯನ್ನು ಮುಂದುವರೆಸಿದೆ ಎಂದರು.

ಪಿಟಿಸಿಎಲ್ ಕಾಯಿದೆ ಮತ್ತು ಭೂಮಿ ಸಂಬಂಧಿಸಿದಂತೆ ಮಾತನಾಡಿದ ರಂಗಯ್ಯ ಅವರು, ತುಮಕೂರು ಜಿಲ್ಲೆಯಲ್ಲಿ ಇನಾಂ ಲ್ಯಾಂಡ್‌ಗಳಿಗೆ ಯಾವುದೇ ಕೊರತೆ ಇಲ್ಲ ಆದರೆ ಯಾವಕ್ಕೂ ಸೂಕ್ತ ದಾಖಲೆಗಳಲ್ಲಿದೆ ಜಿಲ್ಲೆಯ ಎಸ್.ಸಿ/ಎಸ್.ಟಿಗಳ ಬದುಕು ದುಸ್ತರವಾಗಿದೆ ಎಂದರು.

ಎಸ್.ಸಿ/ಎಸ್.ಟಿ ಅಟ್ರಾಸಿಟಿ ಕಾಯಿದೆ -1989 ಕುರಿತು ವಿಷಯ ಪ್ರಸ್ತಾಪಿಸಿದ ನರಸಿಂಹಪ್ಪನವರು ಕಾಯಿದೆ ಅಡಿನಲ್ಲಿ ನಾವು ಸರಿಯಾಗಿ ದೂರು ದಾಖಲಿಸಿದರೆ ಮಾತ್ರ ಸಮರ್ಪಕವಾಗಿ ಕಾಯಿದೆ ಅನುಷ್ಠಾನಗೊಳ್ಳುತ್ತದೆ. ಮೊದಲಿಗೆ ನಾವು ದೌರ್ಜ ನ್ಯವಾದಾಗ ಹೇಗೆ ಎಫ್.ಐ.ಆರ್ ದಾಖಲಿಸಬೇಕೆಂದನ್ನು ತಿಳಿದುಕೊಳ್ಳಬೇಕು ಮತ್ತು ಯಾವ ಸೆಕ್ಷನ್ ಅಡಿಯಲ್ಲಿ ನಮ್ಮ ಮೇಲಾದ ದೌರ್ಜನ್ಯವನ್ನು ಉಲ್ಲೇಖಿಸಬೇಕೆಂದು ತಿಳಿದುಕೊಂಡಿರಬೇಕು ಎಂದರು.

ಕಾಯಿದೆ ಉದ್ದೇಶವೇ ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯ ಹೋಗಲಾಡಿಸುವುದು, ಆದರೆ ಕಾಯಿದೆ ಅನುಷ್ಠಾನದಲ್ಲಿ ಅಧಿಕಾರಗಳ ಕರ್ತವ್ಯ ಲೋಪ ಮತ್ತು ನಮ್ಮ ಜನಗಳ ಅರಿವಿನ ಕೊರತೆಯಿಂದಾಗಿ ದೌರ್ಜನ್ಯ ಪ್ರಕರಣಗಳ ಹೆಚ್ಚಾಗುತ್ತಿದ್ದು ಶಿಕ್ಷೆ ಪ್ರಮಾಣ ಮಾತ್ರ ಕಡಿಮೆಯಾಗುತ್ತಿದೆ. ಆದ್ದರಿಂದ ನಾವು ಹೆಚ್ಚಾಗಿ ಈ ಕಾಯಿದೆಯ ಉದ್ದೇಶದ ಬಗ್ಗೆ ಅರಿತು ಇದರ ಅನುಷ್ಠಾನಕ್ಕೆ ಸಹಕಾರಿಯಾಗಬೇಕಿದೆ ಎಂದರು.

ಮಲ ಹೊರುವ ಪದ್ಧತಿ ಮತ್ತು ಇದರ ಅಡಿಯಲ್ಲಿ ಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳುವುದನ್ನು ನಮ್ಮ ರಾಜ್ಯದಲ್ಲಿ 2013ರಲ್ಲಿ ನಿಷೇಧಗೊಳಿಸಿದ್ದಾರೆ. ಆದರೆ ಇದು ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯದ ಭಾಗವೆಂದು ನಾವು ಪರಿಗಣಿ ಸಬೇಕು. ಈ ಹಿಂದೆ ಕಾಯಿದೆ ಜಾರಿಗೂ ಮುನ್ನ ಎಸ್.ಸಿ/ಎಸ್.ಟಿ ಸಮುದಾಯದವರನ್ನು ಈ ಕೆಲಸಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದರು ಆದರೆ ಈಗ ಅದನ್ನು ಮಾಡುವಂತಿಲ್ಲ ಎಂದು ಕಾಯಿದೆ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟರು.

ಕಾರ್ಯಗಾರದ ನಿರೂಪಣೆಯನ್ನು ಪರ್ಯಾಯ ಕಾನುನೂ ವೇದಿಕೆ ತುಮಕೂರು ವಿಭಾಗದ ವಕೀಲ ತಿರುಮಲಯ್ಯ ನೆರವೇರಿಸಿದರು. ಸಂಯೋಜನೆಯನ್ನು ಜಿಲ್ಲಾ ಸಂಯೋಜಕ ತೇಜಸ್ ಕುಮಾರ್, ಮತ್ತು ಫೀಲ್ಡ್ ಸಂಯೋಜಕ ಕೃಷ್ಣ ಮೂರ್ತಿ ಮಾಡಿದರು. ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಶಂಕರಯ್ಯ, ಅರುಣಾ, ಶಾರದಮ್ಮ, ಕಣ್ಣನ್, ಧನಂಜಯ, ಮೋಹನ್‌ಟಿ.ಆರ್ ಮುರುಗನ್ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಹಾಗೆಯೇ ಮಾರಿಯಮ್ಮ ನಗರದ ಚಕ್ರಪಾಣಿ ಮತ್ತು ಯುವಜನರು ಸೇರಿದಂತೆ ಇತರೆ ಗ್ರಾಮೀಣ ಭಾಗದ ಯುವಜನರು, ರಾಷ್ಟ್ರೀಯಾ ಮಾದಿಗ ಪ್ರಚಾರಾಂದೋಲನ ಸಮಿತಿಯ ಸಹಕಾರ್ಯದರ್ಶಿ ಮನೋಜ್ ಕುಮಾರ್ ಮತ್ತು ಸದಸ್ಯರಾದ ಮೋಹನ್ ಉಪಸ್ಥಿತರಿದ್ದರು.

click me!