ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ ಆಗಿದ್ದರೆ ಬಸವರಾಜ ಬೊಮ್ಮಾಯಿ ಯಾಕೆ ಹೋರಾಟ ಮಾಡಿರಲಿಲ್ಲ? ಈಗ ತನಿಖಾ ಸಂಸ್ಥೆಗಳೆಲ್ಲವೂ ಅವರ ಕೈಯಲ್ಲೇ ಇದ್ದರೂ ಯಾಕೆ ತನಿಖೆ ಮಾಡುತ್ತಿಲ್ಲ? ಈಗಲೂ ನಾನೇ ಆಗ್ರಹ ಮಾಡುತ್ತಿದ್ದೇನೆ, ನಮ್ಮ ಬಗ್ಗೆ ತನಿಖೆ ಮಾಡಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಬೆಂಗಳೂರು (ಜ.23) : ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ ಆಗಿದ್ದರೆ ಬಸವರಾಜ ಬೊಮ್ಮಾಯಿ ಯಾಕೆ ಹೋರಾಟ ಮಾಡಿರಲಿಲ್ಲ? ಈಗ ತನಿಖಾ ಸಂಸ್ಥೆಗಳೆಲ್ಲವೂ ಅವರ ಕೈಯಲ್ಲೇ ಇದ್ದರೂ ಯಾಕೆ ತನಿಖೆ ಮಾಡುತ್ತಿಲ್ಲ? ಈಗಲೂ ನಾನೇ ಆಗ್ರಹ ಮಾಡುತ್ತಿದ್ದೇನೆ, ನಮ್ಮ ಬಗ್ಗೆ ತನಿಖೆ ಮಾಡಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಬಿಜೆಪಿಗರು(BJP Leaders) ತಮ್ಮ ವಿರುದ್ಧ ಮಾಡುತ್ತಿರುವ ಆರೋಪಕ್ಕೆ ಸೋಮವಾರ ವಿವಿಧೆಡೆ ತಿರುಗೇಟು ನೀಡಿದ ಅವರು, ರಾಜ್ಯ ಸರ್ಕಾರದಲ್ಲಿ ಮಿತಿ ಮೀರಿರುವ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಬಗ್ಗೆ ಆರೋಪ ಮಾಡುತ್ತಿದ್ದಾರೆ ಎಂದರು.
ಪ್ರಧಾನಿ ಮೋದಿ ಕರ್ನಾಟಕದ ರೈತರಿಗೆ ಟೋಪಿ ಹಾಕಿ ಮೋಸ ಮಾಡಿದ್ದಾರೆ: ಸಿದ್ದರಾಮಯ್ಯ
ಬೆಂಗಳೂರಿನಲ್ಲಿ 20 ಕ್ಷೇತ್ರದಲ್ಲಿ ಗೆಲುವು:
ನಗರದಲ್ಲಿ ಭ್ರಷ್ಟಾಚಾರದಿಂದಾಗಿ ರಸ್ತೆಗಳು ಬಾಯ್ತೆರೆದಿವೆ. ರಸ್ತೆ ಗುಂಡಿಗಳಿಗೆ ಈವರೆಗೆ 17ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಇತ್ತೀಚೆಗಷ್ಟೇ ಕಳಪೆ ಕಾಮಗಾರಿಗೆ ಮಗು ಹಾಗೂ ತಾಯಿ ಬಲಿಯಾಗಿದ್ದನ್ನು ಜನರು ನೋಡಿದ್ದಾರೆ. ಸರ್ಕಾರದ ಬಗ್ಗೆ ಜನರು ಆಕ್ರೋಶಗೊಂಡಿದ್ದು, ಸೋಲಿನ ಭೀತಿಯಿಂದಲೇ ಬಿಬಿಎಂಪಿ ಚುನಾವಣೆಯನ್ನು ನಡೆಸಲೂ ಸಹ ಹೆದರುತ್ತಿದ್ದಾರೆ. ಹೀಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷ ನಗರದಲ್ಲಿ 20 ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಲಂಚ ಇಲ್ಲದೆ ಯಾವ ಕೆಲಸವೂ ಆಗುತ್ತಿಲ್ಲ. ಅಧಿಕಾರಿ, ಸಿಬ್ಬಂದಿ ಪೋಸ್ಟಿಂಗ್, ನೇಮಕಾತಿ ಎಲ್ಲದಕ್ಕೂ ಲಂಚ ನೀಡಬೇಕು. 40 ಪರ್ಸೆಂಟ್ ಕಮಿಷನ್‌ನಿಂದಾಗಿ ಇಡೀ ದೇಶದಲ್ಲೇ ರಾಜ್ಯ ಸರ್ಕಾರ ಹೆಸರುವಾಸಿಯಾಗಿದೆ. ಇಂತಹ ಭ್ರಷ್ಟರ ವಿರುದ್ಧ ಜನ ಜಾಗೃತಿ ಮೂಡಿಸಲು ನಗರಾದ್ಯಂತ ಮೌನ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು.
ಸುಧಾಕರ್‌ಗೆ ತಿರುಗೇಟು:
‘ಕೊರೋನಾ ಅವಧಿಯಲ್ಲಿ ಲೂಟಿ ಹೊಡೆದಿದ್ದು ಯಾರು? ಔಷಧಿ ಖರೀದಿ ಹೆಸರಿನಲ್ಲಿ ಹಗರಣ ನಡೆಸಿದ್ದು ಯಾರು? ಯಾವ ಇಲಾಖೆಯಲ್ಲಿ ಕೊರೋನಾ ಹೆಸರಿನಲ್ಲಿ ಸಾಲು-ಸಾಲು ಹಗರಣಗಳು ನಡೆದವು?’ ಎಂದು ಸಚಿವ ಡಾ.ಕೆ. ಸುಧಾಕರ್ ಅವರಿಗೆ ತಿರುಗೇಟು ನೀಡಿದರು
‘ಕಾಂಗ್ರೆಸ್‌ಗೆ ಭ್ರಷ್ಟಾಚಾರ ರಕ್ತಗತವಾಗಿ ಬಂದಿದೆ. ಭ್ರಷ್ಟಾಚಾರ ಪದ ಹುಟ್ಟಿಗೆ ಕಾರಣವೇ ಕಾಂಗ್ರೆಸ್. ಅವರು ತಮ್ಮ ಮುಖ ನೋಡಿಕೊಳ್ಳಲಿ’ ಎಂಬ ಸುಧಾಕರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ನಮ್ಮ ಮುಖಗಳು ಸರಿಯಾಗಿಯೇ ಇವೆ. ನಾವು ನಿತ್ಯವೂ ಕನ್ನಡಿ ನೋಡಿಕೊಂಡೇ ತಲೆ ಬಾಚಿಕೊಳ್ಳುವುದು. ಮೊದಲು ಅವರ ಮುಖವನ್ನು ನೋಡಿಕೊಳ್ಳಲು ಹೇಳಿ’ ಎಂದು ಕಿಡಿಕಾರಿದರು.
ನಮ್ಮ ವಿರುದ್ಧ ಮಾತನಾಡುತ್ತಿರುವ ಸುಧಾಕರ್ ಮೊದಲು ಎಲ್ಲಿದ್ದರು? ಈಗ ಅಲ್ಲಿಗೆ ಹೋದ ತಕ್ಷಣ ಬಿಜೆಪಿಯನ್ನು ಹೊಗಳಿ ಕಾಂಗ್ರೆಸ್‌ಗೆ ತೆಗಳಿದರೆ ಜನ ನಂಬುತ್ತಾರಾ? ಔಷಧ ಖರೀದಿಯಲ್ಲಿ ಅಕ್ರಮ ಮಾಡಿದವರು ಯಾರು? ಎಂದು ಪ್ರಶ್ನಿಸಿದರು.
ಕೋಲಾರದಲ್ಲಿ ಸಿದ್ದು ಸೋಲಿಸಲು ದಳಪತಿ ತಂತ್ರ: ಒಕ್ಕಲಿಗ, ಮುಸ್ಲಿಂ ಮತ ಸೆಳೆಯುವ ಜೆಡಿಎಸ್ ಪ್ಲಾನ್
ರಾಜ್ಯದಲ್ಲಿ 40 ಪರ್ಸೆಂಟ್ ಅಲ್ಲ 50 ಪರ್ಸೆಂಟ್ ಕಮಿಷನ್ ನಡೆಯುತ್ತಿದೆ. ರಾಜ್ಯದಲ್ಲಿ ಲಂಚ ನೀಡದಿದ್ದರೆ ಯಾವ ಕೆಲಸವೂ ಆಗಲ್ಲ. ಟೆಂಡರ್‌ಗೆ ಮೊದಲೇ ಲಂಚ ನೀಡಬೇಕು. ಕೆಲಸ ಮಾಡಿದ ಮೇಲೆ ಬಿಲ್ ಮಂಜೂರು ಮಾಡಲೂ ಹಣ ನೀಡಬೇಕು. ಇಂತಹ ಭ್ರಷ್ಟರಿಂದ ಬೆಂಗಳೂರು ಹಾಗೂ ರಾಜ್ಯ ಉಳಿಯಬೇಕಾದರೆ ಬಿಜೆಪಿಯನ್ನು ಕಿತ್ತೊಗೆಯಬೇಕು. ಹೀಗಾಗಿ ಜನರಿಗೆ ಜಾಗೃತಿ ಮೂಡಿಸಲು ಹೋರಾಟ ಮಾಡುತ್ತಿದ್ದೇವೆ ಎಂದರು.