Injured Tiger: ಉರುಳಿಗೆ ಸಿಲುಕಿ ನರಳುತ್ತಿರುವ ಹುಲಿ: ಮುಳ್ಳಯ್ಯನಗಿರಿ ತಪ್ಪಲಿನ ಗ್ರಾಮಗಳಲ್ಲಿ ಆತಂಕ!

Published : Jun 13, 2026, 05:59 PM IST
Injured Tiger

ಸಾರಾಂಶ

Chikkamagaluru: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಉರುಳಿಗೆ ಸಿಲುಕಿದ ಗಾಯಗೊಂಡ ಹುಲಿ ಕಳೆದ ನಾಲ್ಕು ದಿನಗಳಿಂದ ಸಂಚರಿಸುತ್ತಿದೆ. ಅರಣ್ಯ ಇಲಾಖೆ ಸೆರೆ ಕಾರ್ಯಾಚರಣೆ ನಡೆಸುತ್ತಿದ್ದು, ಗ್ರಾಮಸ್ಥರು ಹಾಗೂ ಕಾರ್ಮಿಕರಲ್ಲಿ ಆತಂಕ ಮನೆಮಾಡಿದೆ.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಜೂ.13): ತಾಲೂಕಿನ ಮುಳ್ಳಯ್ಯನಗಿರಿ ತಪ್ಪಲಿನ ಏಳುನೂರ್ ಖಾನ್ ಎಸ್ಟೇಟ್ ಸಮೀಪ ಉರುಳಿಗೆ ಸಿಲುಕಿರುವ ಹುಲಿಯೊಂದು ಕಳೆದ ನಾಲ್ಕೈದು ದಿನಗಳಿಂದ ಗಾಯಗೊಂಡ ಸ್ಥಿತಿಯಲ್ಲೇ ಸಂಚರಿಸುತ್ತಿದ್ದು, ಸ್ಥಳೀಯ ಗ್ರಾಮಸ್ಥರು ಹಾಗೂ ತೋಟದ ಕಾರ್ಮಿಕರಲ್ಲಿ ಆತಂಕ ಮನೆಮಾಡಿದೆ.

ನೋವಿನ ನಡುವೆ ಆಹಾರಕ್ಕಾಗಿ ಸಂಚರಿಸುತ್ತಿರುವ ಹುಲಿ: ಹುಲಿಯ ಸೊಂಟದ ಭಾಗಕ್ಕೆ ಉರುಳು ಸಿಲುಕಿದ್ದು, ಅದೇ ನೇತಾಡುತ್ತಿರುವ ಸ್ಥಿತಿಯಲ್ಲಿ ಪ್ರಾಣಿ ಓಡಾಡುತ್ತಿರುವುದು ಕಂಡುಬಂದಿದೆ. ತೀವ್ರ ನೋವಿನ ನಡುವೆಯೂ ಆಹಾರಕ್ಕಾಗಿ ಅರಣ್ಯ ಹಾಗೂ ತೋಟದ ಸುತ್ತಮುತ್ತ ಸಂಚರಿಸುತ್ತಿರುವ ಹುಲಿ, ಜಿಂಕೆ ಹಾಗೂ ಕಡವೆಯನ್ನು ಬೇಟೆಯಾಡಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಈ ಪ್ರದೇಶದಲ್ಲಿ ಕೆಲವು ಪ್ರಾಣಿಗಳ ಕಳೆಬರಹಗಳು ಪತ್ತೆಯಾಗಿರುವುದರಿಂದ ಹುಲಿಯ ಚಟುವಟಿಕೆ ಮುಂದುವರಿದಿರುವುದು ದೃಢಪಟ್ಟಿದೆ.

ಸಚಿವ ಜಾರ್ಜ್ ತೋಟದ ಸಮೀಪ ನಡೆದಿರುವ ಘಟನೆ

ಈ ಘಟನೆ ಸಚಿವ ಕೆ.ಜೆ. ಜಾರ್ಜ್ ಒಡೆತನಕ್ಕೆ ಸಂಬಂಧಿಸಿದ ಏಳುನೂರ್ ಖಾನ್ ಎಸ್ಟೇಟ್ ಸಮೀಪದ ಪ್ರದೇಶದಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ. ಹುಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತೋಟದ ಕಾರ್ಮಿಕರು ಕೆಲಸಕ್ಕೆ ತೆರಳದಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ. ಇದರಿಂದ ಪಂಡರವಳ್ಳಿ, ಕೊಳಗಾಮೆ ಹಾಗೂ ಏಳುನೂರ್ ಖಾನ್ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಆತಂಕದಲ್ಲಿದ್ದಾರೆ. ಗಾಯಗೊಂಡ ಹುಲಿಯನ್ನು ಸುರಕ್ಷಿತವಾಗಿ ಸೆರೆಹಿಡಿಯಲು ಅರಣ್ಯ ಇಲಾಖೆ ಕಳೆದ ಮೂರು-ನಾಲ್ಕು ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ.

ಹುಲಿ ಸಂಚರಿಸುವ ಮಾರ್ಗಗಳಲ್ಲಿ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಅಳವಡಿಸಲಾಗಿದ್ದು, ಅದರ ಚಲನವಲನದ ಮೇಲೆ ನಿಗಾ ಇಡಲಾಗಿದೆ. ಪಶುವೈದ್ಯರು ಹಾಗೂ ವಿಶೇಷ ಅರಣ್ಯ ಸಿಬ್ಬಂದಿಯನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ. ಈ ನಡುವೆ, ಹುಲಿಗೆ ಉರುಳು ಹೇಗೆ ಸಿಲುಕಿತು ಮತ್ತು ಅದನ್ನು ಯಾರು ಹಾಕಿದ್ದಾರೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಪರಿಸರವಾದಿಗಳು ಆಗ್ರಹಿಸಿದ್ದಾರೆ. ಅಕ್ರಮ ಬೇಟೆಗಾಗಿ ಉರುಳು ಹಾಕಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಹುಲಿ ಕಂಡುಬಂದ ಪ್ರದೇಶಗಳಿಗೆ ಅನಗತ್ಯವಾಗಿ ತೆರಳದಂತೆ ಹಾಗೂ ಪ್ರವಾಸಿಗರು ಮುಳ್ಳಯ್ಯನಗಿರಿ ಸುತ್ತಮುತ್ತ ಎಚ್ಚರಿಕೆಯಿಂದ ಸಂಚರಿಸುವಂತೆ ಮನವಿ ಮಾಡಿದ್ದಾರೆ. ಕಳೆದ ಐದಾರು ವರ್ಷಗಳ ಹಿಂದೆ ಪಂಡರವಳ್ಳಿ ಸಮೀಪ ಹುಲಿ ಪ್ರತ್ಯಕ್ಷವಾಗಿ ಕಾರ್ಮಿಕರ ಮೇಲೆ ಎರಗಿ ಓರ್ವ ಮಹಿಳೆಯನ್ನು ಬಲಿಪಡೆದಿತ್ತು. ಅಂದು ತಕ್ಷಣ ಕಾರ್ಯಪೂರಿತರಾದ ಅರಣ್ಯ ಇಲಾಖೆ ಹುಲಿಯನ್ನು ಸೆರೆಹಿಡಿದು, ಬೇರೆಡೆಗೆ ಸ್ಥಳಾಂತರ ಮಾಡಲಾಗಿತ್ತು. ಈ ಘಟನೆ ನಡೆದು ಐದಾರು ವರ್ಷಗಳ ಬಳಿಕ ಅದೇ ಪ್ರದೇಶದಲ್ಲಿ ಮತ್ತೆ ಹುಲಿ ಕಾಣಿಸಿಕೊಂಡಿರುವುದು, ಜನರಲ್ಲಿ ಆತಂಕ ಮೂಡಿಸಿದೆ.

PREV
Read more Articles on
click me!

Recommended Stories

ಬೆಂಗಳೂರಿನಲ್ಲಿ ಮಳೆ ಆರಂಭ, ಮುಂದಿನ ಮೂರು ಗಂಟೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ
Energy Drink: ಯಾದಗಿರಿಯಲ್ಲಿ ಆಘಾತಕಾರಿ ಘಟನೆ: ಎನರ್ಜಿ ಡ್ರಿಂಕ್ ಚಟಕ್ಕೆ 18 ವರ್ಷದ ಯುವಕ ಬಲಿ?