
ಮೈಸೂರು : ಹೋಟೆಲ್ ಉದ್ಯಮಕ್ಕೆ ಕೈಗಾರಿಕಾ ಸ್ಥಾನಮಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ವಿಜಯನಗರದ ಬಂಟರ ಭವನದಲ್ಲಿ ಶನಿವಾರ ನಡೆದ ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹೋಟೆಲ್ ಮಾಲೀಕರ ಸಂಘ ಸಲ್ಲಿಸಿರುವ ಮನವಿಯ ಬೇಡಿಕೆಗಳಲ್ಲಿ ಯಾವುದು ಸಾಧ್ಯವೋ ಅದೆಲ್ಲವನ್ನೂ ಮಾಡುತ್ತೇನೆ. ಹೋಟೆಲ್ ಉದ್ಯಮಕ್ಕೆ ಕೈಗಾರಿಕಾ ಸ್ಥಾನಮಾನ ನೀಡುವ ಬಗ್ಗೆ ಹೇಳಿದ್ದಾರೆ. ಹೋಟೆಲ್ ಉದ್ಯಮ ಮುಖ್ಯವಾಗಿರುವುದರಿಂದ ಕೈಗಾರಿಕಾ ಸ್ಥಾನಮಾನ ನೀಡಿದರೆ ಅನುಕೂಲವಾಗುತ್ತದೆ ಅಂತ ಹೇಳಿರುವುದರಿಂದ ಪರಿಗಣಿಸುವುದಾಗಿ ಹೇಳಿದರು.
ಶಕ್ತಿ ಯೋಜನೆ ಜಾರಿಯಾದ ಮಹಿಳೆ ಮಹಿಳೆಯರು ಪ್ರವಾಸಿ ತಾಣಗಳಿಗೆ ಹೆಚ್ಚು ಹೆಚ್ಚು ಭೇಟಿ ನೀಡುತ್ತಿದ್ದು, ಇದರಿಂದ ಹೊಟೇಲ್ ಉದ್ಯಮಕ್ಕೆ ಹೆಚ್ಚು ನೆರವಾಗುತ್ತಿದೆ. ಮಹಿಳೆಯರ ಖಾತಗೆ ಎರಡು ಸಾವಿರ ರೂ. ಹಾಕುತ್ತಿರುವುದರಿಂದ ಪ್ರವಾಸಿ ತಾಣಗಳ ವೀಕ್ಷಿಸುವ ಜತೆಗೆ ಖರ್ಚು ಮಾಡುತ್ತಿದ್ದಾರೆ ಎಂದರು.
ಪ್ರವಾಸೋದ್ಯಮ ಮತ್ತು ಹೋಟೆಲ್ ಉದ್ಯಮ ದೊಡ್ಡದಲ್ಲಿ ಬೆಳೆಯಬೇಕಿದೆ. ಪ್ರವಾಸೋದ್ಯಮ ಬೆಳೆದರೆ ಪ್ರವಾಸಿಗರಿಗೆ ಮತ್ತು ಸ್ಥಳೀಯ ಜನರಿಗೆ ಅನುಕೂಲವಾಗಲಿದೆ. ಉದ್ಯಮ ಬೆಳವಣಿಗೆಯಾದರೆ ರಾಜ್ಯದ ಆದಾಯವೂ ಹೆಚ್ಚುತ್ತದೆ. ಯೂರೋಪ್ ದೇಶಗಳಲ್ಲಿ ಇರುವಂತೆ ಯೂನಿವರ್ಸಲ್ ಬೇಸಿಕ್ ಇನ್ ಕಮ್ ವ್ಯವಸ್ಥೆಯಂತೆ ಪ್ರತಿಯೊಬ್ಬರಿಗೂ ಖರ್ಚು ಮಾಡುವ ಮತ್ತು ಆದಾಯ ಬರುವಂತಾಗಬೇಕು ಎಂದು ಅವರು ಹೇಳಿದರು.
ಆರ್ಥಿಕ ಚಟುವಟಿಕೆಯಾದರೆ ಜಿಡಿಪಿ ಬೆಳವಣಿಗೆ ವೃದ್ಧಿಯಾಗಲಿದೆ. ಹೋಟೆಲ್ ಉದ್ಯಮ ನಡೆಸುವುದು ಸುಲಭವಲ್ಲ. ಹೋಟೆಲ್ ಉದ್ಯಮ ಬದುಕಿಗಾಗಿ ಅಲ್ಲ. ಅದೊಂದು ವೃತ್ತಿ. 50 ವರ್ಷಗಳ ಕಾಲ ಉದ್ಯಮ ನಡೆಸಿಕೊಂಡು ಬರುವುದು ದೊಡ್ಡ ಕೆಲಸ. ವರನಟ ಡಾ. ರಾಜಕುಮಾರ್ ಅಭಿಮಾನಿಗಳೇ ನನ್ನ ದೇವರು ಹೇಳಿರುವಂತೆ ಹೋಟೆಲ್ ಮಾಲೀಕರು ಅತಿಥಿ ದೇವೋಭವ ಎನ್ನುವಂತೆ ನೋಡಿ ಸತ್ಕರಿಸುತ್ತಿದ್ದಾರೆ ಎಂದರು.
ನಾನು ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಹೋಟೆಲ್ ನಲ್ಲಿ ಮೂರು ಹೊತ್ತು ತಿಂಡಿ, ಊಟ ಮಾಡುತ್ತಿದ್ದೆ. ದಿನಾಲೂ ಚೆನ್ನಾಗಿರುವ ಹೋಟೆಲ್ ಹುಡುಕಿ ಹೋಗ್ತಾ ಇದ್ದರೆ, ರಾತ್ರಿ ವೇಳೆ ನಾನ್ ವೆಜ್ ಹೋಟೆಲ್ ಹುಡುಕಿಕೊಂಡು ಹೋಗುತ್ತಿದ್ದೆ. ನಮ್ಮ ವಕೀಲರ ಕಚೇರಿ ಇಂದ್ರಕೆಫೆ ಪಕ್ಕ ಇದ್ದುದ್ದರಿಂದ ಜಾಸ್ತಿ ಅಲ್ಲಿಗೆ ಹೋಗುತ್ತಿದ್ದೆ ಎಂದು ಹಳೆಯ ನೆನಪನ್ನು ಸ್ಮರಿಸಿದರು.
ನಾನು ಮೊನ್ನೆ ಮೊನ್ನೆ ಹಾಸನ ರೋಡ್ನಲ್ಲಿ ಹೋಗುತ್ತಿರುವಾಗ ಸ್ವಾತಿ ಹೋಟೆಲ್ ನಲ್ಲಿ ನಿಲ್ಲಿಸಿ ಕಾಫಿ ಕುಡಿದಿದ್ದೆ. ಆಗ ಸ್ವಲ್ಪ ಹೊತ್ತು ಗಮನಿಸಿದಾಗ ಪ್ರವಾಸಿ ತಾಣಗಳನ್ನು ವೀಕ್ಷಿಸುವ ಮಹಿಳೆಯರು ಹೋಟೆಲ್ ಗೆ ಬರುತ್ತಿದ್ದರು. ನಾನು ಸೋತಾಗ ಹೋಟೆಲ್ಗೆ ಹೋಗುತ್ತಿದ್ದೆ. ಆದರೆ, ಈಗ ಮನೆಯಲ್ಲಿ ಊಟ, ತಿಂಡಿ ಮಾಡುತ್ತಿದ್ದೇನೆ ಎಂದು ನುಡಿದರು.
ಸಂಘದ ಅಧ್ಯಕ್ಷ ನಾರಾಯಣ ಎ.ಹೆಗ್ಡೆ ಪ್ರಾಸ್ತಾವಿಕ ಭಾಷಣಮಾಡಿ, ರಜತ ಮಹೋತ್ಸವ ಅಂಗವಾಗಿ ಬೆಳ್ಳಿ ಚಪ್ಪರ ಕಾರ್ಯಕ್ರಮ ಆಯೋಜಿಸಿದ ಸಾಧಕ ಮಾಲೀಕರಿಗೆ ಸನ್ಮಾನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಕಾರ್ಮಿಕರಿಗೆ ಕಣ್ಣಿನ ತಪಾಸಣೆ ಸೇರಿದಂತೆ ಹಲವು ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕ ತನ್ವೀರ್ ಸೇಠ್, ಎಂಡಿಎ ಮಾಜಿ ಅಧ್ಯಕ್ಷ ಸಿ. ಬಸವೇಗೌಡ, ಜಿಪಂ ಮಾಜಿ ಅಧ್ಯಕ್ಷ ಕೆ. ಮರೀಗೌಡ, ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ, ಹೊಟೇಲ್ ಮಾಲೀಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ಎ. ಹೆಗ್ಡೆ, ಸಹಕಾರ ಸಂಘಗಳ ಜಂಟಿ ನಿಬಂಧಕ ಪ್ರಸಾದ್ ರೆಡ್ಡಿ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ, ಹೋಟೆಲ್ ಮಾಲೀಕರ ಧರ್ಮದತ್ತಿ ಅಧ್ಯಕ್ಷ ರವಿಶಾಸ್ತ್ರಿ, ಹೇಮಂತ್ ಕುವಾರ್ ಭಟ್, ಸುಮಿತ್ರಾ ಆನಂದ್ ತಂತ್ರಿ ಇದ್ದರು.
ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
ಸಂಸದ ಪ್ರತಾಪ ಸಿಂಹಗೆ ಟೀಕೆ
ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ನಾನು ಮಾಡಿದೆ, ನಾ ಮಾಡಿದ್ದೇನೆಂದು ಪ್ರತಾಪ್ ಸಿಂಹ ಬರೀ ಬುರುಡೆ ಬಿಡುತ್ತಾರೆ. ನೀವು ಚಪ್ಪಾಳೆ ತಟ್ಟಿದ್ದೆ ತಟ್ಟಿದ್ದು ಎಂದು ಟೀಕಿಸಿದರು.
ಶಾಸಕ ಟಿ.ಎಸ್. ಶ್ರೀವತ್ಸ ಎದುರು ಟೀಕಿಸಿದ ಸಿಎಂ, ಕಾಂಗ್ರೆಸ್ ಸರ್ಕಾರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದರೆ, ನಂತರದಲ್ಲಿ ನಾವು ಹೋದ ಮೇಲೆ ಯಾವ ಅಭಿವೃದ್ಧಿ ಕೆಲಸಗಳು ಆಗಲಿಲ್ಲ. ನಾವು ಹೇಳಿದನ್ನು ಮಾಡುತ್ತೇವೆ. ಅದರಂತೆ ನಡೆಯುತ್ತೇವೆ ಎಂದು ನುಡಿದರು. ನಾನು ಯಾರನ್ನು ಟೀಕೆ ಮಾಡುವುದಕ್ಕೆ ಹೇಳುತ್ತಿಲ್ಲ. ಇದು ಚಪ್ಪಾಳೆ ತಟ್ಟುವ ವಿಚಾರವಲ್ಲ. ಮಾಡಿರುವ ಕೆಲಸವನ್ನು ಪ್ರಶಂಸಿಸಬೇಕು ಹೊರತು ವಿರೋಧ ಮಾಡುವುದಲ್ಲ. ನಾವು ಕೆಲಸ ಮಾಡಿಲ್ಲವೇ ಎಂದು ಆತ್ಮಸಾಕ್ಷಿಯಾಗಿ ಹೇಳು ನಾರಾಯಣಗೌಡ ಅಂತ ಎದೆಮುಟ್ಟಿ ಹೇಳಿದರು.