ವಿಮಾನದ ಟೈರ್‌ ಬ್ಲಾಸ್ಟ್‌, ತಪ್ಪಿದ ಭಾರೀ ದುರಂತ

By Kannadaprabha NewsFirst Published Jun 16, 2021, 9:05 AM IST
Highlights
  • ಲ್ಯಾಂಡಿಂಗ್‌ ವೇಳೆ ಇಂಡಿಗೋ ವಿಮಾನದ (6ಛಿ-7676) ಟೈರ್‌ ಸ್ಫೋಟ
  • ಪೈಲಟ್‌ನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ದುರಂತ 
  • ಪ್ರಯಾಣಿಕರು ಸೇರಿದಂತೆ ವಿಮಾನದಲ್ಲಿದ್ದ ಎಲ್ಲರೂ ಸುರಕ್ಷಿತ

 ಹುಬ್ಬಳ್ಳಿ (ಜೂ.16):   ಇಲ್ಲಿನ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ವೇಳೆ ಇಂಡಿಗೋ ವಿಮಾನದ (6ಛಿ-7676) ಟೈರ್‌ ಸ್ಫೋಟಗೊಂಡ ಘಟನೆ ಸೋಮವಾರ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗ ಬಂದಿದೆ. ಪೈಲಟ್‌ನ ಸಮಯ ಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ. ಅದೃಷ್ಟವಶಾತ್ ಪ್ರಯಾಣಿಕರು ಸೇರಿದಂತೆ ವಿಮಾನದಲ್ಲಿದ್ದ ಎಲ್ಲರೂ ಸುರಕ್ಷಿತವಾಗಿ ಹೊರಬಂದಿದ್ದಾರೆ.

ಸದ್ಯ ವಿಮಾನ ಹುಬ್ಬಳ್ಳಿ ನಿಲ್ದಾಣದಲ್ಲಿದ್ದು, ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ.

ಆಗಿದ್ದೇನು?:  ಕೇರಳದ ಕಣ್ಣೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರಿಗೆ ಈ ವಿಮಾನ ತೆರಳುತ್ತಿತ್ತು. ವಿಮಾನದಲ್ಲಿ 7 ಜನ ಪ್ರಯಾಣಿಕರು, ಇಬ್ಬರು ಪೈಲಟ್‌, ಇಬ್ಬರು ಕ್ರ್ಯೂ ಸೇರಿದಂತೆ 11 ಜನ ಇದ್ದರು. ಸೋಮವಾರ ರಾತ್ರಿ ಕಣ್ಣೂರಿನಿಂದ ಹುಬ್ಬಳ್ಳಿಗೆ ಬಂದ ವಿಮಾನ ರಾತ್ರಿ 8ಗಂಟೆಗೆ ಲ್ಯಾಂಡ್‌ ಆಗಬೇಕಿತ್ತು.

ಕಳಚಿದ ನೋಸ್‌ ವೀಲ್‌, ಏರ್‌ ಆಂಬುಲೆನ್ಸ್‌ ತುರ್ತು ಭೂಸ್ಪರ್ಶ!

8.03ಕ್ಕೆ ಲ್ಯಾಂಡ್‌ ಮಾಡಲು ಪೈಲಟ್‌ ಪ್ರಯತ್ನಿಸಿದ್ದಾರೆ. ಆದರೆ ಹವಾಮಾನ ವೈಪರೀತ್ಯದಿಂದಾಗಿ ಅದು ಸಾಧ್ಯವಾಗಿಲ್ಲ. ಹೀಗಾಗಿ ಸುಮಾರು ಅರ್ಧಗಂಟೆ ಆಕಾಶದಲ್ಲಿ ಸುತ್ತಾಡಿ ಬಳಿಕ 8.34ಕ್ಕೆ ಲ್ಯಾಂಡ್‌ ಮಾಡಲು ಪ್ರಯತ್ನಿಸಿದ್ದಾರೆ. ಆಗ ವಿಮಾನದ ನೋಸ್‌ವ್ಹೀಲ್‌ (ಮುಂಭಾಗದ ) ಟೈರ್‌ ಬ್ಲಾಸ್ಟ್‌ ಆಗಿದೆ. ಈ ಶಬ್ದದಿಂದ ಎಚ್ಚೆತ್ತ ಪೈಲಟ್‌ ಕೂಡಲೇ ಎಟಿಸಿ (ಏರ್‌ ಟ್ರಾಫಿಕ್‌ ಕಂಟ್ರೋಲ್‌)ಗೆ ಮಾಹಿತಿ ರವಾನಿಸಿದ್ದಾರೆ. ಎಟಿಸಿ ಸೆಂಟರ್‌ನಲ್ಲಿದ್ದ ಸಿಬ್ಬಂದಿ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ. ಎಟಿಸಿ ಸಲಹೆಯಂತೆ ಸುಮಾರು 200 ಮೀಟರ್‌ ದೂರದವರೆಗೂ ವಿಮಾನ ನಿಧಾನಗತಿಯಲ್ಲಿ ಚಲಾಯಿಸಿಕೊಂಡು ಲ್ಯಾಂಡ್‌ ಮಾಡುವಲ್ಲಿ ಪೈಲಟ್‌ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ವಿಮಾನದಲ್ಲಿದ್ದ ಎಲ್ಲರೂ ಸುರಕ್ಷಿತವಾಗಿ ವಿಮಾನದಿಂದ ಕೆಳಕ್ಕಿಳಿದಿದ್ದಾರೆ.

ಪರಿಶೀಲನೆ:

ಈ ನಡುವೆ ಮೇಲ್ನೋಟಕ್ಕೆ ಹಾಷ್‌ರ್‍ ಲ್ಯಾಂಡಿಂಗ್‌ (ರಭಸದಿಂದ ಇಳಿಸುವಿಕೆ) ವೇಳೆ ತಾಂತ್ರಿಕ ತೊಂದರೆಯಿಂದ ನೋಸ್‌ ವ್ಹೀಲ್‌ ಬ್ಲಾಸ್ಟ್‌ ಆಗಿರಬಹುದು ಎಂಬ ಶಂಕೆ ನಿಲ್ದಾಣದ ಅಧಿಕಾರಿಗಳದ್ದು. ಈ ಬಗ್ಗೆ ಪರಿಶೀಲಿಸಲು ಡಿಜಿಸಿಎ ಅಧಿಕಾರಿಗಳ ತಂಡ ವಿಮಾಣ ನಿಲ್ದಾಣಕ್ಕೆ ಬಂದಿದ್ದು, ತನಿಖೆ ಶುರು ಮಾಡಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕವೇ ನೈಜ ಕಾರಣ ಗೊತ್ತಾಗುತ್ತದೆ.

ರದ್ದಾದ ಪ್ರಯಾಣ:

ಈ ವಿಮಾನ ಇಲ್ಲಿಂದ ಬೆಂಗಳೂರಿಗೆ ತೆರಳಬೇಕಿತ್ತು. ಅಲ್ಲಿಂದ ಬಂದಿದ್ದ 7 ಜನ ಪ್ರಯಾಣಿಕರು ಹಾಗೂ ಹುಬ್ಬಳ್ಳಿಯಿಂದ 18 ಜನ ಪ್ರಯಾಣಿಕರು ಬೆಂಗಳೂರಿಗೆ ಪ್ರಯಾಣಿಸುವವರಿದ್ದರು. ಆದರೆ ಟೈರ್‌ ಬ್ಲಾಸ್ಟ್‌ ಆದ ಹಿನ್ನೆಲೆಯಲ್ಲಿ ವಿಮಾನ ಪ್ರಯಾಣವನ್ನು ರದ್ದುಪಡಿಸಿ ಪ್ರಯಾಣಿಕರಿಗೆ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಯಿತು. ಬಳಿಕ ತಡರಾತ್ರಿ 2.20ಕ್ಕೆ ವಿಮಾನವನ್ನು ರನ್‌ವೇದಿಂದ ಸಿಬ್ಬಂದಿ ಹೊರಕ್ಕೆ ತಂದಿದ್ದಾರೆ. ರನ್‌ವೇ ಆಗಲಿ, ವಿಮಾನಕ್ಕಾಗಲಿ ಯಾವುದೇ ಹಾನಿಯಾಗಿಲ್ಲ. ಪ್ರಯಾಣಿಕರನ್ನು ಮಂಗಳವಾರ ಬೆಳಗ್ಗೆ ಇಲ್ಲಿಂದ ಬೆಂಗಳೂರಿಗೆ ಬೇರೆ ವಿಮಾನದ ಮೂಲಕ ಕಳುಹಿಸಲಾಯಿತು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ವಿಮಾನ ಹಾರಾಟ ಶುರು:

ಸೋಮವಾರ ರಾತ್ರಿ ನಡೆದ ಘಟನೆಯಿಂದ ಸಮಸ್ಯೆಯೇನೂ ಆಗಿಲ್ಲ. ರನ್‌ವೇಗೆ ಯಾವುದೇ ಬಗೆಯ ತೋಂದರೆಯಾಗಿಲ್ಲ. ಮಂಗಳವಾರ ಇಲ್ಲಿಂದ ಬೆಂಗಳೂರು ಹಾಗೂ ಗೋವಾಕ್ಕೆ ಎರಡು ವಿಮಾನಗಳು ಹಾರಾಟ ನಡೆಸಿವೆ. ಒಟ್ಟಿನಲ್ಲಿ ಪೈಲಟ್‌ನ ಸಮಯಪ್ರಜ್ಞೆಯಿಂದ ಭಾರೀ ದುರಂತವೊಂದು ತಪ್ಪಿದಂತಾಗಿದೆ.

ಕಣ್ಣೂರುನಿಂದ ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ವಿಮಾನದ ಟೈರ್‌ ಲ್ಯಾಂಡಿಂಗ್‌ ವೇಳೆ ಬ್ಲಾಸ್ಟ್‌ ಆಗಿದೆ. ಪ್ರಯಾಣಿಕರು ಸೇರಿದಂತೆ 11 ಜನ ವಿಮಾನದಲ್ಲಿದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ. ಕೆಲ ವೇಳೆ ರಭಸದಿಂದ ಇಳಿಸುವ ವೇಳೆ ಈ ರೀತಿ ಆಗುವ ಸಾಧ್ಯತೆ ಇರುತ್ತದೆ. ತಾಂತ್ರಿಕ ತೊಂದರೆಯೂ ಇದಕ್ಕೆ ಕಾರಣವಿರಬಹುದು. ಈ ಬಗ್ಗೆ ಪರಿಶೀಲನೆ ನಡೆದಿದೆ. ಬಳಿಕವಷ್ಟೇ ನೈಜ ಕಾರಣ ಗೊತ್ತಾಗಲಿದೆ.

ಪ್ರಮೋದಕುಮಾರ ಠಾಕ್ರೆ, ನಿರ್ದೇಶಕ, ಹುಬ್ಬಳ್ಳಿ ವಿಮಾನ ನಿಲ್ದಾಣ

click me!