ಗದಗ ಬೈಪಾಸ್ ಎಫೆಕ್ಟ್? ನಾವು ಹೋಗಬೇಕಲ್ವಾ ? ನಾವೇನು ಮಾಡೋದು? ರೈಲು ಪ್ರಯಾಣಿಕರ ಆಕ್ರೋಶ

Published : Jun 23, 2026, 01:02 PM IST
Gadag Railway Station

ಸಾರಾಂಶ

ಮೈಸೂರು-ಪಂಢರಪುರ ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ರೈಲನ್ನು ಗದಗ ಬೈಪಾಸ್ ಮೂಲಕ ಸಂಚರಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಈ ನಿರ್ಧಾರದಿಂದ ಪಂಢರಪುರಕ್ಕೆ ಹೋಗುವ ಭಕ್ತರು ಸೇರಿದಂತೆ ಸಾವಿರಾರು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದ್ದು, ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಶಿವಕುಮಾರ ಕುಷ್ಟಗಿ

ಗದಗ: ವಿಜಯಪುರ, ಯಶವಂತಪುರ ನಂತರ ಈಗ ಮೈಸೂರು, ಪಂಢರಪುರ ಗೋಲ್ ಗುಂಬಜ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 16535/36) ಸಂಚಾರವನ್ನೂ ಗದಗ ಮತ್ತು ಹುಬ್ಬಳ್ಳಿ ಬೈಪಾಸ್ ಮೂಲಕ ಕಾರ್ಯಾಚರಣೆ ನಡೆಸಲು ರೈಲ್ವೆ ಇಲಾಖೆ ಅಣಿಯಾಗುತ್ತಿದ್ದು, ಆ ಮೂಲಕ ಗದಗ ಜಿಲ್ಲೆಯ ಜನರಿಗೆ ಮಾಡುತ್ತಿರುವ ದೊಡ್ಡ ಅನ್ಯಾಯವಾಗಿದೆ.

ಪಂಢರಪುರದ ವಿಠ್ಠಲನ ದರ್ಶನಕ್ಕೆ ಹೋಗುವ ಸಾವಿರಾರು ಭಕ್ತರಿಗೆ ಈ ರೈಲು ಆಸರೆಯಾಗಿತ್ತು. ಆದರೆ, ಈಗ ತರಾತುರಿಯಲ್ಲಿ ಈ ರೈಲನ್ನು ಮುಖ್ಯ ನಿಲ್ದಾಣಗಳ ಬದಲಿಗೆ ಬೈಪಾಸ್ ಲೈನ್ ಮೂಲಕ ಓಡಿಸಲು ನಿರ್ಧರಿಸಿರುವುದು ಯಾವ ಉದ್ದೇಶಕ್ಕಾಗಿ ಮತ್ತು ಯಾರ ಹಿತಕ್ಕಾಗಿ ಎನ್ನುವುದನ್ನು ರೈಲ್ವೆ ಇಲಾಖೆ ಅಧಿಕಾರಿಗಳು ಸ್ಪಷ್ಟ ಪಡಿಸಬೇಕಿದೆ.

ಇತ್ತೀಚೆಗಷ್ಟೇ ಆರಂಭವಾದ ವಿಜಯಪುರ, ಯಶವಂತಪುರ ರೈಲು ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ಸಂಚರಿಸುವಾಗ ಗದಗ ಬೈಪಾಸ್ ನಿಲ್ದಾಣದಲ್ಲಿ ನಿಲುಗಡೆ ನೀಡಲಾಗಿತ್ತು. ನಂತರದ ದಿನಗಳಲ್ಲಿ ಅದನ್ನು ರದ್ದುಗೊಳಿಸಿದ್ದ ಇಲಾಖೆ ಈಗ ಪಂಢರಪುರ, ಮೈಸೂರು ರೈಲಿಗೆ ಗದಗ ಮತ್ತು ಹುಬ್ಬಳ್ಳಿ ಬೈಪಾಸ್ ನಲ್ಲಿ ಮಾತ್ರ ನಿಲುಗಡೆಗೆ ಅವಕಾಶ ನೀಡಿದೆ. ಆದರೆ, ಬೈಪಾಸ್ ರೈಲು ನಿಲ್ದಾಣಗಳಿಗೆ ತಲುಪಲು ಸಾರ್ವಜನಿಕರಿಗೆ ಸಾಧ್ಯವಾಗದ ಸ್ಥಿತಿ ಇದೆ. ಇದು ಇಲಾಖೆ ಅಧಿಕಾರಿಗಳಿಗೆ ಯಾಕೆ ಗೊತ್ತಾಗುತ್ತಿಲ್ಲ ಎನ್ನುವುದು ಆಶ್ಚರ್ಯದ ಸಂಗತಿಯಾಗಿದೆ.

ಕಿಂಚಿತ್ತು ಗಮನ ನೀಡದ ಸಂಸದರು

ಹಾವೇರಿ-ಗದಗ ಸಂಸದರಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾದ ನಂತರ ರೈಲು ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಶಾಶ್ವತ ಮುಕ್ತಿ ಸಿಗುತ್ತದೆ. ಇವರು ಮಾಜಿ ಸಿಎಂ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ, ಪ್ರಧಾನಿ ಮೋದಿ ಅವರೊಂದಿಗೆ ಬೊಮ್ಮಾಯಿ ಅತ್ಯಂತ ಆತ್ಮೀಯ ಸಂಪರ್ಕ ಹೊಂದಿದ್ದಾರೆ. ಇದನ್ನು ಬಳಕೆ ಮಾಡಿಕೊಂಡು ಗದಗ ಜಿಲ್ಲೆಯ ಜನತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಾರೆ ಎನ್ನುವ ವಿಶ್ವಾಸದಲ್ಲಿದ್ದರು ಜಿಲ್ಲೆಯ ಜನತೆ. ಸಧ್ಯ ಸಂಸದರು ಜಿಲ್ಲೆಯ ರೈಲು ಬಳಕೆದಾರರ ಸಮಸ್ಯೆಗಳಿಗೆ ಕಿಂಚಿತ್ತೂ ಗಮನ ನೀಡುತ್ತಿಲ್ಲ ಎನ್ನುವ ಬೇಸರ ಜನ ವ್ಯಕ್ತಪಡಿಸುತ್ತಾರೆ.

ಗದಗ ಬೈಪಾಸ್ ನಿಲ್ದಾಣದಲ್ಲಿ ಯಾವುದೇ ಪ್ರಯಾಣಿಕ ರೈಲುಗಳನ್ನು ನಿಲ್ಲಿಸುವುದಿಲ್ಲ ಎಂದು ರೈಲ್ವೆ ಇಲಾಖೆ ಆರಂಭದಿಂದಲೂ ಜನರಿಗೆ ಭರವಸೆ ನೀಡುತ್ತ ಬಂದಿತ್ತು. ವಿಜಯಪುರ-ಯಶವಂತಪುರ ರೈಲು ಸಂಚಾರದ ವೇಳೆಯೂ ಇದೇ ಮಾತನ್ನು ಪುನರುಚ್ಚರಿಸಿತ್ತು. ಆದರೆ, ಕೊಟ್ಟ ಮಾತಿಗೆ ತಪ್ಪಿ ಕೆಲವೇ ದಿನಗಳಲ್ಲಿ ಹೊಸ ರೈಲನ್ನು ಇದೇ ಮಾರ್ಗದಲ್ಲಿ ಓಡಿಸುತ್ತಿದೆ. ಇದರಿಂದ ಕೇವಲ ಗದಗ ಜಿಲ್ಲೆ ಮಾತ್ರವಲ್ಲ ಅಕ್ಕ ಪಕ್ಕದ ಜಿಲ್ಲೆಯ ನಿತ್ಯವೂ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಲಿದೆ ಎಂದು ರೈಲ್ವೆ ಹೋರಾಟಗಾರ ಗಣೇಶಸಿಂಗ್ ಬ್ಯಾಳಿ ಹೇಳಿದರು.

ಈ ಬಗ್ಗೆ ನೈಋತ್ಯ ರೈಲ್ವೆ ವಲಯ ಯಾವುದೇ ನಿರ್ಧಾರ ಕೈಗೊಂಡಿಲ್ಲ. ರೈಲ್ವೆ ಮಂಡಳಿ ಆದೇಶ ಈಗಷ್ಟೆ ಬಂದಿದೆ ಎಂದು ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿ ಪಿ.ಆರ್.ಓ. ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.

PREV
Read more Articles on
click me!

Recommended Stories

ಬಳ್ಳಾರಿ RDPR ಎಇಇ ತಿಪ್ಪೇಸ್ವಾಮಿಗೆ ಲೋಕಾಯುಕ್ತ ಶಾಕ್! ನಗದು, ಚಿನ್ನಾಭರಣ, ಕೋಟ್ಯಂತರ ಮೌಲ್ಯದ ಸೈಟ್‌ಗಳು ಪತ್ತೆ!
Vande Bharat Success: ದಕ್ಷಿಣ ರೈಲ್ವೆಯಲ್ಲೇ ನಂ.1! ತಿರುವನಂತಪುರಂ–ಮಂಗಳೂರು ವಂದೇ ಭಾರತ್ ಆದಾಯದಲ್ಲಿ ದಾಖಲೆ