ಉಷ್ಣಾಂಶಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ| ಉಷ್ಣಾಂಶ ಹೆಚ್ಚಿರುವ ಪ್ರದೇಶದಲ್ಲಿಯೂ ಅದು ಹಬ್ಬಬಹುದು| ತಡೆಗಟ್ಟಬೇಕಾದರೆ ಮುಂಜಾಗ್ರತೆ, ಸ್ವಚ್ಛತೆ ಹಾಗೂ ಜನಜಾಗೃತಿ ಅವಶ್ಯ| ಜನರು ಭಯ ಬೀಳುವುದು ಬೇಡ, ಮುಂಜಾಗ್ರತೆ ವಹಿಸಿ|
ಯಾದಗಿರಿ(ಮಾ.15): ತಾಪಮಾನ 27 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚು ಉಷ್ಣಾಂಶವಿದ್ದರೆ ಅಂತಹ ಪ್ರದೇಶದಲ್ಲಿ ಕೊರೋನಾ ಬರಲು ಸಾಧ್ಯವಿಲ್ಲ ಎಂಬ ಮಾತುಗಳಿಗೆ ತೆರೆ ಎಳೆದಿರುವ ಭಾರತೀಯ ವೈದ್ಯಕೀಯ ಸಂಘ (ಐಎಂಎ), ಉಷ್ಣಾಂಶಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಹೆಚ್ಚಿರುವ ಪ್ರದೇಶದಲ್ಲಿಯೂ ಅದು ಹಬ್ಬಬಹುದು ಎಂದು ತಿಳಿಸಿದ್ದು, ಇದನ್ನು ತಡೆಗಟ್ಟಬೇಕಾದರೆ ಮುಂಜಾಗ್ರತೆ, ಸ್ವಚ್ಛತೆ ಹಾಗೂ ಜನಜಾಗೃತಿ ಅವಶ್ಯ ಎಂದು ಸಂಘದ ಜಿಲ್ಲಾಧ್ಯಕ್ಷ ಡಾ. ಸಿ.ಎಂ. ಪಾಟೀಲ್ ಹೇಳಿದ್ದಾರೆ.
ಕೊರೋನಾ ತಡೆಗಟ್ಟುವ ಬಗ್ಗೆ ಹಾಗೂ ಈ ಬಗ್ಗೆ ಜನಜಾಗೃತಿ ಮೂಡಿಸುವಲ್ಲಿ ವೈದ್ಯಾಧಿಕಾರಿಗಳ ಸಂಘ ಹಮ್ಮಿಕೊಂಡಿರುವ ಗ್ರಾಮೀಣ ಪ್ರದೇಶದಲ್ಲೂ ಕಾರ್ಯಕ್ರಮಗಳ ಕುರಿತು ಶನಿವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಜನರು ಭಯ ಬೀಳುವುದು ಬೇಡ. ಮುಂಜಾಗ್ರತೆ ವಹಿಸಿದರೆ ಸಾಕು ಎಂದರು.
ಸಂಪೂರ್ಣ ಬೆಂಗಳೂರು ಖಾಲಿ ಖಾಲಿ! ಎಲ್ಲವೂ ಬಂದ್
ನೆಗಡಿ, ಜ್ವರ ಲಕ್ಷಣ ಹಾಗೂ ಶ್ವಾಸಕೋಶ ಸಂಬಂಧಿ ಸೋಂಕು ಪೀಡಿತರ ನಿಕಟ ಸಂಪರ್ಕದಿಂದ ದೂರವಿರುವಂತೆ, ಆಹಾರ ಸೇವಿಸುವ ಮೊದಲು, ಕೆಮ್ಮು,ಸೀನಿದಾಗ, ಅಥವಾ ರೋಗಿಯ ಸಂಪರ್ಕಕ್ಕೆ ಬಂದಾಗ ಸಾಬೂನಿನಿಂದ ಚೆನ್ನಾಗಿ ಕೈತೊಳೆಯುವಂತೆ ಮುಂತಾದವುಗಳ ಬಗ್ಗೆ ತಿಳಿಸಿದರು.
ಬಿಸಿಲಿದ್ರೆ ಕೊರೋನಾ ವೈರಸ್ ಬರೋಲ್ವಾ?
ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಜಿಲ್ಲೆಯ ಖಾಸಗಿ ವೈದ್ಯರುಗಳ ಸಂಘದ ಸಭೆ ನಡೆದಿದ್ದು, ಜಿಲ್ಲಾಡಳಿತಕ್ಕೆ ಈ ವಿಚಾರವಾಗಿ ಪೂರ್ಣ ಸಹಕಾರ ನೀಡಲಾಗುವುದು. ರೋಗ ಲಕ್ಷಣಗಳುಳ್ಳ ವ್ಯಕ್ತಿಗಳು ಬಂದರೆ ಜಿಲ್ಲಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲಾಗುವುದು, ಸಾರ್ವಜನಿಕರಲ್ಲಿಯೂ ಈ ಬಗೆಗಿನ ಆತಂಕ ನಿವಾರಿಸುವಲ್ಲಿ ಪ್ರಯತ್ನಿಸಲಾಗುವುದು ಎಂದು ಡಾ. ಜಿ.ಡಿ. ಹುನಗುಂಟಿ ತಿಳಿಸಿದರು.
ಜನ ಗಾಬರಿಯಾಗೋದು ಬೇಡ. ಈ ರೋಗ ತಡೆಗಟ್ಟುವ ಮುಂಜಾಗ್ರತೆ ವಹಿಸುವುದು ಸೂಕ್ತ. ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಯಾದಗಿರಿ ಡಾ. ಸಿ.ಎಂ. ಪಾಟೀಲ್ ಹೇಳಿದ್ದಾರೆ.
ಉಷ್ಣಾಂಷ (ತಾಪಮಾನ) ಹೆಚ್ಚಳವಾಗಿರುವ ಪ್ರದೇಶದಲ್ಲಿ ಕೊರೋನಾ ಬರುವುದಿಲ್ಲ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಈ ಬಗ್ಗೆ ವರ್ಲ್ಡ್ ಹೆಲ್ಥ್ ಆರ್ಗನೈಜೇಶನ್ ಅಂತಹ ಯಾವುದೇ ಸಂದೇಶ ನೀಡಿಲ್ಲ. ಹೆಚ್ಚಿರಲಿ, ಕಡಮೆಯಿರಲಿ ನಿರ್ಲಕ್ಷ್ಯ ವಹಿಸಿದರೆ ರೋಗ ಹಬ್ಬುವುದರಲ್ಲಿ ಸಂದೇಹವಿಲ್ಲ ಎಂದು ಯಾದಗಿರಿ ಡಾ. ವೀರೇಶ್ ಜಾಕಾ ಹೇಳಿದ್ದಾರೆ.
ಇಂದಿನ ಪರಿಸ್ಥಿತಿಯಲ್ಲಿ ಜನರು ಸಮೂಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಬಹುತೇಕ ಕಮ್ಮಿಯಾದರೆ ಒಳ್ಳೆಯದು. ಆತಂಕ ಬೇಡ, ಆದರೆ ಕಟ್ಟೆಚ್ಚರ ವಹಿಸಿದರೆ ರೋಗ ತಡೆಗಟ್ಟಲು ಸಾಧ್ಯ. ಸಾಮಾನ್ಯ ಜ್ವರ ಲಕ್ಷಣಗಳೇ ಕೊರೋನಾ ಎಂಬ ಭಯಬೇಡ ಎಂದು ಯಾದಗಿರಿ ಡಾ. ಪ್ರಶಾಂತ ಬಾಸೂತ್ಕರ್ ಹೇಳಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ರೋಗ ಲಕ್ಷಣಗಳಿರುವ ವ್ಯಕ್ತಿಗಳು ಬಂದರೆ ಜಿಲ್ಲಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲಾಗುತ್ತಿದೆ. ವೈದ್ಯರು ಹಾಗೂ ಆಸ್ಪತ್ರೆಗಳು ಹಗಲೂ ರಾತ್ರಿ ಕೆಲಸ ಮಾಡುತ್ತಿವೆ. ಕೊರೋನಾ ಬಗ್ಗೆ ಭಯಪಡುವ ಬದಲು ಕಾಳಜಿ ವಹಿಸಿ ಎಂದು ಯಾದಗಿರಿ ಡಾ. ಜಿ. ರಾಜೇಂದ್ರ ತಿಳಿಸಿದ್ದಾರೆ.