ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ದೇಶ ಸಾಲದಲ್ಲಿ ಮುಳುಗಿದೆ: ಸಚಿವ ಸಂತೋಷ್ ಲಾಡ್

Published : Apr 27, 2026, 06:27 PM IST
santosh lad

ಸಾರಾಂಶ

ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆಡಳಿತಾವಧಿಯಲ್ಲಿ ದೇಶ ಸಾಲದಲ್ಲಿ ಮುಳುಗಿದೆ. 1947ರಲ್ಲಿ ₹55 ಲಕ್ಷ ಕೋಟಿಯಷ್ಟಿದ್ದ ದೇಶದ ಸಾಲ ಇಂದು ₹225 ಲಕ್ಷ ಕೋಟಿಯಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ಸಂಡೂರು (ಏ.27): ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆಡಳಿತಾವಧಿಯಲ್ಲಿ ದೇಶ ಸಾಲದಲ್ಲಿ ಮುಳುಗಿದೆ. 1947ರಲ್ಲಿ ₹55 ಲಕ್ಷ ಕೋಟಿಯಷ್ಟಿದ್ದ ದೇಶದ ಸಾಲ ಇಂದು ₹225 ಲಕ್ಷ ಕೋಟಿಯಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ತಾಲೂಕಿನ ತಾಳೂರು ಗ್ರಾಮದಲ್ಲಿ ತಾಲೂಕು ಆಡಳಿತ, ತಾಪಂ, ಕಾರ್ಮಿಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಡೂರು ಸಂಕಲ್ಪ ಸಮರ್ಪಣಾ ಸಮಾವೇಶ ಕಾರ್ಯಕ್ರಮದಲ್ಲಿ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ವಾರ್ಷಿಕ 2 ಕೋಟಿ ಉದ್ಯೊಗ ನೀಡುವ, ರೈತರ ಸಾಲಮನ್ನಾ ಮಾಡುವ ಭರವಸೆಯನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಡೇರಿಸಿಲ್ಲ. ಇದೇ ಕೇಂದ್ರ ಸರ್ಕಾರ ಉದ್ದಿಮೆದಾರರ ₹16.5 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ದೇಶದ ವಾರ್ಷಿಕ ಬಜೆಟ್ ₹50 ಲಕ್ಷ ಕೋಟಿ ಇದ್ದರೆ, ಅದಾನಿ ಅಂಬಾನಿಯವರ ವಾರ್ಷಿಕ ವಹಿವಾಟು ₹30 ಲಕ್ಷ ಕೋಟಿ ಇದೆ. 2016ರಲ್ಲಿ ಅದಾನಿಯ ಆದಾಯ ₹50 ಸಾವಿರ ಕೋಟಿ ಇದ್ದದ್ದು, ಇಂದು ₹15 ಲಕ್ಷ ಕೋಟಿಗೆ ಹೆಚ್ಚಿದೆ. ದೇಶದಲ್ಲಿ ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ತಿನ್ನುತ್ತಿವೆ. ದೇಶದ ಕೇವಲ ಶೇ. 1ರಷ್ಟು ಜನರ ಕೈಯಲ್ಲಿ ಶೇ. 40ರಷ್ಟು ಆಸ್ತಿ ಇದೆ ಎಂದು ದೂರಿದರು.

₹60 ಸಾವಿರ ಕೋಟಿ ಖರ್ಚು

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಜಾರಿಗಾಗಿ ವಾರ್ಷಿಕ ₹60 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಇಲ್ಲಿವರೆಗೆ 65-0 ಕೋಟಿ ಮಹಿಳೆಯರು ಉಚಿತವಾಗಿ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಸಂಚಾರ ಮಾಡಿದ್ದಾರೆ. ವಿವಿಧ ಗ್ಯಾರಂಟಿ ಯೋಜನೆಗಳಿಂದ ಪ್ರತಿ ಮನೆಗೆ ಸರಾಸರಿ 7-8 ಸಾವಿರ ತಲುಪುತ್ತಿದೆ. ದೇಶದಲ್ಲಿ ಆಶಾ, ಬಿಸಿಯೂಟ, ವೃದ್ಧಾಪ್ಯ, ವಿಧವಾ, ಅಂಗವಿಕಲ ವೇತನ ವ್ಯವಸ್ಥೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ ಎಂದರು.

ಸಂಸದ ಈ. ತುಕಾರಾಂ ಮಾತನಾಡಿ, ಎಂ.ವೈ. ಘೋರ್ಪಡೆ, ಸಂತೋಷ್ ಲಾಡ್ ಆದಿಯಾಗಿ ಇಲ್ಲಿವರೆಗೆ ಕ್ಷೇತ್ರವನ್ನು ಪ್ರತಿನಿಧಿಸಿದ ಎಲ್ಲ ಶಾಸಕರ ಅವಧಿಯಲ್ಲಿ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವ, ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಲಾಗಿದೆ. ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಕ್ಷೇತ್ರದಲ್ಲಿ ಮಾದರಿಯಾಗಿ ಆರಂಭಿಸಿದ ಕ್ಲಿನಿಕ್ ಆನ್ ವೀಲ್ ಮೂಲಕ ಇಲ್ಲಿಯವರೆಗೆ 1.60 ಲಕ್ಷ ಜನರಿಗೆ ಅವರ ಮನೆ ಬಾಗಿಲ ಬಳಿ ಚಿಕಿತ್ಸೆ ನೀಡಲಾಗಿದೆ ಎಂದರು.

ಶಾಸಕಿ ಅನ್ನಪೂರ್ಣಾ ಈ. ತುಕಾರಾಂ ಮಾತನಾಡಿದರು. ಸಮಾವೇಶದಲ್ಲಿ ರಾಜ್ಯ ಮೋಟಾರ್ ಸಾರಿಗೆ ಮತ್ತು ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಸ್ಮಾರ್ಟ್‌ಕಾರ್ಡ್‌ಗನ್ನು ವಿತರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ವಿವಿಧ ಯೋಜನೆಗಳ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು.

PREV
Read more Articles on
click me!

Recommended Stories

ಮಂಗಳೂರು ಕುಕ್ಕರ್ ಬ್ಲಾಸ್ಟ್: ಉಗ್ರ ಮೊಹಮ್ಮದ್ ಶಾರೀಖ್‌ಗೆ 10 ವರ್ಷ ಕಠಿಣ ಜೈಲು ಶಿಕ್ಷೆ, 94 ಸಾವಿರ ದಂಡ!
ಮಹಿಳಾ ಜನಾಕ್ರೋಶ ಸಭೆಗೆ ಕರೆ: ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶ