
ಇಂಡಿ(ಜೂ.25): ಮಹಾರಾಷ್ಟ್ರ ರಾಜ್ಯದ ಜನರು ಒಳನುಸುಳಿರುವದರಿಂದ ಹಾಗೂ ಹೊಸದಾಗಿ ಬಂದಿರುವುದರಿಂದ ಇಂಡಿ ತಾಲೂಕಿನಲ್ಲಿ ಕೊರೋನಾ ವೈರಸ್ ಕಂಟಕವಾಗಿ ಪರಿಣಮಿಸಿದೆ. ಜನತೆ ಭಯಭೀತರಾಗಿದ್ದಾರೆ. ಮಹಾರಾಷ್ಟ್ರದಿಂದ ಬಂದ ಜನರಿಗೆ ಗಂಟಲು ದ್ರವಪರೀಕ್ಷೆಗೆ ಒಳಪಡಿಸಿಸಬೇಕು. ಪ್ರತಿ ಸೋಮವಾರ 1 ಗಂಟೆಗೆ ಕೋವಿಡ್-19 ರೋಗದ ಬಗ್ಗೆ ವಿಶೇಷ ಸಭೆ ಕರೆಯಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೋವಿಡ್-19 ಹಾಗೂ ಕುಡಿಯುವ ನೀರು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಾರಾಷ್ಟ್ರದಿಂದ ಬರುವ ಜನರಿಗೆ ಯಾವ ಮಾನದಂಡಗಳ ಮೇಲೆ ಪ್ರವೇಶ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ವಿಜಯಪುರ: ಮತ್ತೆ ನಾಲ್ವರಿಗೆ ಅಂಟಿದ ಮಹಾಮಾರಿ ಕೊರೋನಾ ವೈರಸ್
ಸಭೆಯಲ್ಲಿ ಮಾತನಾಡಿದ ತಹಸೀಲ್ದಾರ್ ಚಿದಂಬರ ಕುಲಕರ್ಣಿ, ಮಹಾರಾಷ್ಟ್ರದಿಂದ ಬರುವ ಹೋಗುವರಿಗೆ ಪಾಸ್ ನೀಡಲಾಗುತ್ತದೆ ಎಂದು ಉತ್ತರಿಸಿದರು. ನಂತರ ಡಿಎಚ್‌ಒ ಮಾತನಾಡಿ ಸಾರ್ವಜನಿಕರಿಗೆ ಅಪಘಾತಗಳು, ಕೋವಿಡ್-19 ಪ್ರಕರಣಗಳಿಗೆ ಹಾಗೂ ತುರ್ತು ಸೇವೆ ಒದಗಿಸಬೇಕಾದರೆ 108 ಆಂಬ್ಯುಲೆನ್ಸ್ ವಾಹನ ಉಪಯೋಗಿಸಲಾಗುತ್ತಿದೆ. ತಾಲೂಕಿಗೆ ಒಂದೇ 108 ವಾಹನ ಇರುವದರಿಂದ ಸಮಸ್ಯೆಯಾಗಿದೆ. ಇನ್ನೊಂದು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಸಬೇಕು ಎಂದು ಮನವಿ ಮಾಡಿದರು.
ಸರ್ಕಾರದಿಂದ ಬಂದ ಕಿಟ್‌ಗಳು ಇಲ್ಲಿಯವರೆಗೆ ಕೂಲಿಕಾರ್ಮಿಕರಿಗೆ ಏಕೆ ವಿತರಿಸಿಲ್ಲ ಎಂದು ಕಾರ್ಮಿಕ ಇಲಾಖೆಗೆ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡರು. ಕಾರ್ಮಿಕ ಇಲಾಖೆ ಅಧಿಕಾರಿ ತಕ್ಷಣ ವಿತರಿಸಲಾಗುವುದು ಎಂದು ಉತ್ತರಿಸಿದರು. ಸಭೆಗೆ ಹಾಜರಾಗದ ಅಧಿಕಾರಿಗಳ ಮೇಲೆ ಕೂಡಲೆ ಕ್ರಮಕೈಗೊಳ್ಳುವಂತೆ ತಿಳಿಸಿದರು.
ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಬಗ್ಗೆ ಸಮಸ್ಯೆಗಳಿದ್ದರೆ ತಕ್ಷಣ ಕ್ರಮಕೈಗೊಳ್ಳಬೇಕು. ಪಟ್ಟಣದಲ್ಲಿ 24/7 ಶುದ್ಧ ಕುಡಿಯವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಂಡಿರುವುದರಿಂದ ಎಲ್ಲ ವಾರ್ಡುಗಳಿಗೆ ನೀರು ಪೂರೈಕೆಯಾಗುತ್ತಿದೆಯೇ ಎಂದು ಅಧಿಕಾರಿಗಳಿಗೆ ಕೇಳಿದಾಗ, ಸ್ಥಳೀಯವಾಗಿ ಯಾವುದೇ ಸಮಸ್ಯೆ ಇರುವುದಿಲ್ಲ. ಪ್ರತಿಮನೆಗೆ ನೀರು ಪೂರೈಕೆಯಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸಭೆಗೆ ಮಾಹಿತಿ ನೀಡಿದರು. ಪಿಎಂಜಿಎಸ್‌ವೈ ಯೋಜನೆಯ ಸಮಗ್ರ ಮಾಹಿತಿ ಕೂಡಲೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ರಸ್ತೆಗಳು ಹಾಳಾಗಿದ್ದು, ಸುಧಾರಣೆಗಳಾಗಬೇಕು. ಅಥರ್ಗಾ, ರೂಗಿಯಲ್ಲಿ ರಸ್ತೆ ಅಗಲೀಕರಣ ನಡೆದಿದೆ. ಕಾಮಗಾರಿ ಸರಿಯಾಗಿ ನಡೆಯುವಂತೆ ಅಧಿಕಾರಿಗಳು ಕಾಳಜಿ ವಹಿಸಬೇಕು. ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.
ತಾಪಂ ಇಒ ಡಾ. ವಿಜಯಕುಮಾರ ಅಜೂರ, ಎಇಇ ರಾಜಕುಮಾರ ತೊರವಿ, ಪುರಸಭೆ ಮುಖ್ಯಾಧಿಕಾರಿ ಗಂಗಾಧರ ವಾಲಿ, ಎಇಇ ಎಸ್.ಆರ್. ಕತ್ತಿ, ರಮೇಶ ಲಮಾಣಿ, ಡಾ. ಅರ್ಚನಾ ಕುಲಕರ್ಣಿ, ಬಿಇಒ ವಸಂತ ರಾಠೋಡ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.