ಹೊಸಪೇಟೆ: ತುಂಗಭದ್ರಾ ಡ್ಯಾಂ ಒಳ ಹರಿವಿನ ಅಬ್ಬರ, ಪ್ರವಾಹ ಭೀತಿ

By Kannadaprabha News  |  First Published Jul 10, 2022, 9:23 PM IST

*  ಅಲರ್ಟ್‌ ಸಂದೇಶ ರವಾನೆ
*  ಜಲಾಶಯದ ಒಳಹರಿವು 98 ಸಾವಿರ ಕ್ಯುಸೆಕ್‌
*  ಗೇಟ್‌ಗಳನ್ನು ತೆರೆದು ನದಿಗೆ ನೀರು ಬಿಡುವ ಸೂಚನೆ
 


ಹೊಸಪೇಟೆ/ಮುನಿರಾಬಾದ್‌(ಜು.10): ತುಂಗಭದ್ರಾ ಜಲಾಶಯದ ಒಳಹರಿವಿನಲ್ಲಿ ಭಾರಿ ಏರಿಕೆಯಾಗಿದ್ದು, ಯಾವುದೇ ಕ್ಷಣದಲ್ಲಿ ಜಲಾಶಯದ ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಗುವುದು ಎಂದು ತುಂಗಭದ್ರಾ ಮಂಡಳಿ ನದಿಪಾತ್ರದ ಜಿಲ್ಲಾಡಳಿತಗಳಿಗೆ ಶನಿವಾರ ಪ್ರವಾಹ ಅಲರ್ಟ್‌ ಸಂದೇಶ ರವಾನಿಸಿದೆ.

ಜಲಾಶಯದ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದೆ. ಜತೆಗೆ ತುಂಗಾ ಜಲಾಶಯದಿಂದಲೂ ತುಂಗಭದ್ರಾ ಜಲಾಶಯಕ್ಕೆ ನೀರು ಬಿಡಲಾಗಿದೆ. ಹಾಗಾಗಿ ಜಲಾಶಯದ ಒಳಹರಿವು 98 ಸಾವಿರ ಕ್ಯುಸೆಕ್‌ ತಲುಪಿದೆ. ಹಾಗಾಗಿ ಯಾವುದೇ ಕ್ಷಣದಲ್ಲಿ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಹರಿಸಲಾಗುವುದು. ಮುನ್ನೆಚ್ಚರಿಕಾ ಕ್ರಮವಹಿಸಬೇಕು ಎಂದು ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು, ಕರ್ನೂಲ ಜಿಲ್ಲಾಡಳಿತಗಳಿಗೆ ತುಂಗಭದ್ರಾ ಮಂಡಳಿ ಪ್ರವಾಹ ಮುನ್ನೆಚ್ಚರಿಕಾ ಸಂದೇಶ ರವಾನಿಸಿದೆ.

Tap to resize

Latest Videos

undefined

ಒಂದೇ ದಿನದಲ್ಲಿ ತುಂಗಭದ್ರಾ ಒಡಲಿಗೆ 6 ಟಿಎಂಸಿ ನೀರು..!

ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 105.788 ಟಿಎಂಸಿ ಇದ್ದು, ಈಗಾಗಲೇ 73.939 ಟಿಎಂಸಿ ನೀರು ಡ್ಯಾಂನಲ್ಲಿ ಸಂಗ್ರಹವಾಗಿದೆ. ಜಲಾಶಯದ ಮಟ್ಟ 1633 ಅಡಿ ಇದ್ದು ಈಗಾಗಲೇ 1624.210 ಅಡಿಯವರೆಗೆ ನೀರು ಸಂಗ್ರಹವಾಗಿದೆ. ಒಳ ಹರಿವು ಉತ್ತಮವಾಗಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಾಗಾಗಿ ಜಲಾಶಯದಿಂದ ನೀರು ಹರಿಸಲಾಗುವುದು ಎಂದು ತುಂಗಭದ್ರಾ ಮಂಡಳಿ ಸಂದೇಶ ರವಾನಿಸಿದೆ.

ಎಚ್ಚೆತ್ತ ಜಿಲ್ಲಾಡಳಿತ:

ತುಂಗಾ ಜಲಾಶಯದಿಂದ ನೀರು ಹೊರಬಿಟ್ಟಿರುವ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲಾಡಳಿತ ಈಗಾಗಲೇ ಎಚ್ಚೆತ್ತುಕೊಂಡು ನದಿಪಾತ್ರದ ಹಳ್ಳಿ, ತಾಂಡಾಗಳಲ್ಲಿ ಡಂಗುರ ಸಾರಿದೆ. ನದಿಪಾತ್ರದ ಹಳ್ಳಿಗಳು ಪ್ರವಾಹ ಭೀತಿ ಎದುರಿಸುತ್ತಿದ್ದರೆ, ಕಾಳಜಿ ಕೇಂದ್ರ ತೆರೆದು ಸ್ಥಳಾಂತರಿಸಲು ವಿಜಯನಗರ ಜಿಲ್ಲಾಡಳಿತ ಸೂಚಿಸಿದೆ. ಹಾಗಾಗಿ ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ತುಂಗಭದ್ರಾ ಜಲಾಶಯಕ್ಕೆ ಒಂದು ದಿನದ ಅಂತರದಲ್ಲಿ 9 ಟಿಎಂಸಿ ನೀರು ಹರಿದು ಬಂದಿದೆ. ಹಾಗಾಗಿ ಜಲಾಶಯದ ಒಳಹರಿವು ಇದೇ ರೀತಿ ಮುಂದುವರಿದರೆ, ಜಲಾಶಯ ಬಹುಬೇಗನೆ ಭರ್ತಿಯಾಗುವ ಸಾಧ್ಯತೆ ಇದೆ. ಜಲಾಶಯದ ಒಳಹರಿವು 98 ಸಾವಿರ ಕ್ಯುಸೆಕ್‌ ಇದ್ದು, ಹೊರಹರಿವು ಬರೀ 216 ಕ್ಯುಸೆಕ್‌ ಇರುವುದರಿಂದ ಜಲಾಶಯ ಬೇಗನೆ ಭರ್ತಿಯಾಗುವ ಸಾಧ್ಯತೆ ಇದೆ.
 

click me!