ಕೊಪ್ಪಳ: ಕುದುರೆಗಳ ಹಾವಳಿಯಿಂದ ಅನ್ನದಾತರು ಹೈರಾಣ

Published : Jul 10, 2022, 09:15 PM IST
ಕೊಪ್ಪಳ: ಕುದುರೆಗಳ ಹಾವಳಿಯಿಂದ ಅನ್ನದಾತರು ಹೈರಾಣ

ಸಾರಾಂಶ

*  ದೋಟಿಹಾಳ ಸುತ್ತಮುತ್ತಲಿನ ಹಳ್ಳಿಗಳ ರೈತರಿಗೆ ಸಮಸ್ಯೆ *  ಜಮೀನುಗಳಲ್ಲಿ ಬೀಡು ಬಿಟ್ಟ ಕುದುರೆಗಳು  *  ಹೆಸರು, ಎಳ್ಳು, ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆ ನಾಶ  

ದೋಟಿಹಾಳ(ಜು.10): ಸಮೀಪದ ಹೊಲ, ತೋಟಗಳಿಗೆ ಕಾಲಿಟ್ಟಿರುವ ಅಶ್ವಪಡೆ, ರಸ್ತೆ ಅಂಚಿನ ಕೃಷಿ ಜಮೀನುಗಳಿಗೆ ನುಗ್ಗಿ ಕಾಳು ಕಟ್ಟುವ ಹಂತಕ್ಕೆ ಬಂದಿರುವ ಬೆಳೆಗಳನ್ನು ತಿನ್ನುತ್ತಿವೆ. ಜತೆಗೆ ಜಮೀನಿನಲ್ಲಿ ಹೆಸರು, ಎಳ್ಳು, ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳನ್ನು ನಾಶ ಮಾಡುತ್ತಿವೆ.

ಸಮೀಪದ ಕೇಸೂರ, ತೋನಸಿಹಾಳ, ನಡುವಲಕೊಪ್ಪ ಸೇರಿದಂತೆ ಬಳೂಟಗಿ, ಮೇಗೂರು, ಕುಡೂರು, ಶಿರಗುಂಪಿ, ಭಾಗದ ಜಮೀನು ಮತ್ತು ತೋಟ, ಗದ್ದೆಗಳಿಗೆ ಕುದುರೆಗಳು ನುಗ್ಗುತ್ತಿರುವುದರಿಂದ ಬೆಳೆ ರಕ್ಷಿಸಿಕೊಳ್ಳುವುದು ಒಂದು ರೈತರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ.

ಗದಗ, ಕೊಪ್ಪಳದಲ್ಲಿ ಯೂರಿಯಾಕ್ಕೆ ಅಂಗಡಿಗಳ ಮುಂದೆ ರೈತರ ಕ್ಯೂ!

ದಿನನಿತ್ಯ ಲಗ್ಗೆ:

ಮಳೆ ನೆಚ್ಚಿ ಬಿತ್ತಿರುವ ಮುಂಗಾರು ಬೆಳೆಗಳು ಈಗಾಗಲೆ ಚಿಗುರು ಒಡೆದು ಕಾಳು ಕಟ್ಟುವ ಹಂತಕ್ಕೆ ಬಂದಿವೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಮಳೆ ಅಭಾವದ ಮಧ್ಯೆ ಬೆಳೆದಿರುವ ಬೆಳೆಗಳನ್ನು ಕುದುರೆಯ ಪಡೆಯು ಬೇರು ಸಮೇತ ಕಿತ್ತು ತಿಂದು ಹಾಕುತ್ತಿವೆ. ಈ ಭಾಗದಲ್ಲಿ ಕುದುರೆಗಳ ಹಿಂಡು ಇದ್ದು, ಒಂದೊಂದು ಭಾಗದಲ್ಲಿ ಸುಮಾರು ಐದಾರು ಕುದುರೆಗಳಿವೆ. ಎಲ್ಲವೂ ಜಮೀನುಗಳಲ್ಲಿ ಬೀಡು ಬಿಟ್ಟಿವೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಹೊಲ, ತೋಟಗಳಲ್ಲಿನ ಬೆಳೆ ತಿಂದು, ಮಧ್ಯಾಹ್ನವಾಗುತ್ತಿದ್ದಂತೆ ಮುಳ್ಳಿನ ಪೊದೆ, ಗಿಡದ ನೆರಳು, ಪಕ್ಕದ ಹಳ್ಳದಲ್ಲಿ ಕಾಲ ಕಳೆದು, ಪುನಃ ಸಂಜೆ ಲಗ್ಗೆ ಹಾಕುತ್ತಿವೆ.

ಎಲ್ಲಿಂದ ಬಂದವು?:

ಉತ್ತರ ಕರ್ನಾಟಕದ ಭಾಗದಿಂದ ಕುರಿಗಳನ್ನು ಮೇಯಿಸಲು ಆಗಮಿಸಿದ ಕೆಲವರು ತಮ್ಮ ಕುರಿಗಳ ಹಿಂಡುಗಳೊಂದಿಗೆ ಕುದುರೆಗಳನ್ನು ಕರೆತಂದಿದ್ದಾರೆ. ನಂತರ ಮಳೆಗಾಲ ಆರಂಭವಾಗುತ್ತಲೆ ಕುರಿ ಹಿಂಡು ತಂದವರು ತಮ್ಮ ಕುದುರೆಗಳನ್ನು ಹೊರ ವಲಯದಲ್ಲಿ ಬಿಟ್ಟು ಹೋಗಿದ್ದಾರೆ. ಕೆಲವು ಅನಾರೋಗ್ಯದಿಂದ ಬಳಲುತ್ತಾ ಗ್ರಾಮೀಣ ಭಾಗದಲ್ಲಿ ಎಲ್ಲೆಂದರಲ್ಲಿ ಸಂಚರಿಸುತ್ತಿವೆ. ಕೆಲವು ಕಡೆ ನಡುರಸ್ತೆಯಲ್ಲಿ ಮಲಗುತ್ತಿವೆ. ಮಿತಿ ಮೀರಿರುವ ಬಿಡಾಡಿ ಕುದುರೆಗಳ ಹಾವಳಿ ತಡೆ ಹಾಕುವ ನಿಟ್ಟಿನಲ್ಲಿ ಸ್ಥಳೀಯ ಆಡಳಿತ ಮುಂದಾಗಬೇಕಾದ ತುರ್ತು ಅಗತ್ಯವಿದೆ ಎಂದು ರೈತರು ಒತ್ತಾಯಿಸಿದ್ದಾರೆ.
 

PREV
Read more Articles on
click me!

Recommended Stories

Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!
ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ