24 ಗೇಟ್ ಮೂಲಕ 75 ಸಾವಿರ ಕ್ಯುಸೆಕ್ ಹೊರಕ್ಕೆ| ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನಲ್ಲಿರುವ ಆಲಮಟ್ಟಿ ಡ್ಯಾಂ| ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತ| ಬಹುತೇಕ ಕಡೆ ಬೆಳೆ ಸಂಪೂರ್ಣ ಜಲಾವೃತ|
ಆಲಮಟ್ಟಿ(ಸೆ.27): ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಕರ್ನಾಟಕ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚಳವಾಗಿದೆ. ಶನಿವಾರ ಬೆಳಗ್ಗೆ 53,979 ಕ್ಯುಸೆಕ್ ಇದ್ದ ಒಳಹರಿವು ಸಂಜೆ 75,000 ಕ್ಯುಸೆಕ್‌ಗೆ ಹೆಚ್ಚಿದೆ. ಭಾನುವಾರ ಮತ್ತಷ್ಟು ಹೆಚ್ಚಳವಾಗುವುದರಿಂದ ಮುಂಜಾಗ್ರತೆಯಾಗಿ ಹೊರಹರಿವು ಹೆಚ್ಚಿಸಲಾಗಿದೆ.
ಜಲಾಶಯದ 26ರ ಪೈಕಿ 24 ಗೇಟ್‌ಗಳ ತೆರೆದು ಹಾಗೂ ಬಲಭಾಗದ ಕೆಪಿಸಿಎಲ್ ಮೂಲಕ 75,000 ಕ್ಯುಸೆಕ್ ನೀರನ್ನು ನದಿಪಾತ್ರಕ್ಕೆ ಹರಿಬಿಡಲಾಗುತ್ತಿದೆ. ಕಳೆದ 15 ದಿನಗಳಿಂದ ಹೊರಹರಿವು 40 ಸಾವಿರ ಕ್ಯುಸೆಕ್ ಆಸುಪಾಸು ಇತ್ತು. ಮಳೆ ಹೆಚ್ಚಾಗಿದ್ದರಿಂದ ಒಳಹರಿವು ಶನಿವಾರ ಸಂಜೆ 519.60 ಮೀ ಗರಿಷ್ಠ ಎತ್ತರದ ಜಲಾಶಯದಲ್ಲಿ 519.57 ಮೀ ವರೆಗೆ ನೀರು ಸಂಗ್ರಹವಾಗಿದೆ ಎಂದು ಮೂಲಗಳು ತಿಳಿಸಿವೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮಳೆಯ ಅಬ್ಬರವಿಲ್ಲ, ಆದರೆ ಕರ್ನಾಟಕಕ್ಕೆ ಬಂದು ಸೇರುವ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ಬಳಿ ಕೃಷ್ಣಾ ನದಿಯ ಹರಿವು 38,125 ಕ್ಯುಸೆಕ್ ಇದೆ ಎಂದು ಮೂಲಗಳು ತಿಳಿಸಿವೆ.
undefined
ವಿಜಯಪುರ: ಭೀಮಾ, ಡೋಣಿ ನದಿಯಲ್ಲಿ ತಗ್ಗಿದ ಪ್ರವಾಹ
21 ಮನೆ ಕುಸಿತ:
ಶುಕ್ರವಾರದಿಂದ ಸುರಿದ ಮಳೆಯಿಂದಾಗಿ ನಿಡಗುಂದಿ ತಾಲೂಕಿನಾದ್ಯಂತ 21 ಮನೆಗಳು ಕುಸಿದಿವೆ. ಗಣಿ, ಚಿಮ್ಮಲಗಿ, ವಂದಾಲ, ಯಲಗೂರ ಸೇರಿದಂತೆ ನಾನಾ ಕಡೆ ಮನೆಗಳು ಭಾಗಶಃ ಕುಸಿದಿವೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಆಲಮಟ್ಟಿಯಲ್ಲಿ 27 ಮಿಮೀ ಮಳೆಯಾಗಿದೆ. ತಾಲೂಕಿನ ಬಹುತೇಕ ಕಡೆ ಬೆಳೆ ಸಂಪೂರ್ಣ ಜಲಾವೃತಗೊಂಡಿವೆ. ತೊಗರಿ, ಸಜ್ಜೆ, ಮೆಕ್ಕೆಜೋಳ ಬೆಳೆ ಜಲಾವೃತಗೊಂಡಿದೆ.