ಗೋ ಮಾತೆ ಭಾರತದ ಪಂಚ ಕನ್ಯೆಯರಲ್ಲಿ ಒಬ್ಬಳು| ದೇವತೆಗೆ ಸಮನಾದ ಗೋಮಾತೆ ಕೊಲ್ಲುವುದರಿಂದಲೇ ಅವಳ ಶಾಪದಿಂದ ರೋಗಗಳು ಉಲ್ಬಣ| ಕೊರೋನಾಕ್ಕೆ ಹೆದರುವ ಅವಶ್ಯಕತೆಯಿಲ್ಲ. ಅದು ಕೆಲದಿನಗಳು ಬಂದು ಹೋಗುವ ಕಾಯಿಲೆ| ನಾವು ನಮ್ಮ ನಮ್ಮ ಧರ್ಮದ ಜಪ, ತಪ ಮಾಡಿದರೆ ಕೊರೋನಾ ಹೋಗಿ ನಮಗೆ ಆತ್ಮ ಬಲದ ಧೀಮಂತ ಶಕ್ತಿ ಪ್ರಾಪ್ತ: ಶಿವಲಿಂಗ ಶ್ರೀಗಳು|
ಶಿರಸಿ(ಏ.15): ಜಗತ್ತಿನಲ್ಲಿ ಕೊರೋನಾದಂತಹ ಬೇರೆ ಬೇರೆ ರೋಗಗಳು ತಾಂಡವಾಡಲು ಗೋ ಹತ್ಯೆಯೇ ಪ್ರಮುಖ ಕಾರಣ ಎಂದು ಬಣ್ಣದ ಮಠದ ಶಿವಲಿಂಗ ಶ್ರೀಗಳು ಹೇಳಿದ್ದಾರೆ.
ನಗರದ ಮಾರಿಕಾಂಬಾ ದೇವಾಲಯದ ಸಭಾಭವನದಲ್ಲಿ ಯುಗಾದಿ ಉತ್ಸವ ಸಮಿತಿ ವತಿಯಿಂದ ಭಾನುವಾರ ರಾತ್ರಿ ಏರ್ಪಡಿಸಿದ್ದ ಯುಗಾದಿ ಉತ್ಸವವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಗೋ ಮಾತೆ ಭಾರತದ ಪಂಚ ಕನ್ಯೆಯರಲ್ಲಿ ಒಬ್ಬಳು. ದೇವತೆಗೆ ಸಮನಾದ ಗೋಮಾತೆಯನ್ನು ಕೊಲ್ಲುವುದರಿಂದಲೇ ಅವಳ ಶಾಪದಿಂದ ರೋಗಗಳು ಉಲ್ಬಣವಾಗುತ್ತಿದೆ. ಮೊದಲೆಲ್ಲ ರೋಗ ಬಂದಾಗ ರೋಗವನ್ನು ತಡೆಯಲು ದೇವಾಲಯಗಳಲ್ಲಿ ಜಪ, ತಪ ಮಾಡಲು ಡಂಗುರ ಸಾರುತ್ತಿದ್ದರು. ಈಗ ರೋಗ ಎದುರಿಸಲಾಗದೇ ಲಾಕ್‌ಡೌನ್ ಮಾಡಿ ಜನರ ಬಾಯಿ ಮುಚ್ಚಿಸುತ್ತಿದ್ದಾರೆ. ಕೊರೋನಾಕ್ಕೆ ಹೆದರುವ ಅವಶ್ಯಕತೆಯಿಲ್ಲ. ಅದು ಕೆಲದಿನಗಳು ಬಂದು ಹೋಗುವ ಕಾಯಿಲೆ. ನಾವು ನಮ್ಮ ನಮ್ಮ ಧರ್ಮದ ಜಪ, ತಪ ಮಾಡಿದರೆ ಕೊರೋನಾ ಹೋಗಿ ನಮಗೆ ಆತ್ಮ ಬಲದ ಧೀಮಂತ ಶಕ್ತಿ ಪ್ರಾಪ್ತವಾಗುತ್ತದೆ ಎಂದರು.
ಮನುಷ್ಯ ನಿಸರ್ಗವನ್ನು ಅಧ್ಯಯನ ಮಾಡಿ ತನ್ನತನವನ್ನು ತಾನು ಸಾರ್ಥಕ ಮಾಡಿಕೊಳ್ಳುವಂತಹ ಸಾಕಾರ ರೂಪವೇ ಯುಗಾದಿ ಹಬ್ಬದ ಮೂಲ ಸ್ವರೂಪವಾಗಿದೆ. ನಿಸರ್ಗ ಮತ್ತು ಯುಗಾದಿಯ ಪರಿಕಲ್ಪನೆ ಭಾರತ ಬಿಟ್ಟು ಬೇರೆ ಯಾವ ದೇಶದಲ್ಲೂ ಇಲ್ಲ. ಕಾರಣ ಆ ದೇಶಗಳೆಲ್ಲವೂ ಭಾರತದಷ್ಟು ಇತಿಹಾಸ ಹೊಂದಿಲ್ಲವೆಂದು ನುಡಿದರು.
ಮುಂಡಗೋಡ: ಕೈಬಾಂಬ್ ಸ್ಪೋಟ, ಹೋರಿ ಬಾಯಿ ಛಿದ್ರ
ಸ್ವರ್ಣವಲ್ಲಿಯ ಗಂಗಾಧರೆಂದ್ರ ಸರಸ್ವತಿ ಶ್ರೀಗಳು ಆಶೀರ್ವಚನ ನೀಡಿ, ಯುಗಾದಿ ಎಂದರೆ ಹೊಸ ಚಕ್ರದ ಹೊಸ ವರ್ಷ. ನಾವು ಹೊಸ ವರ್ಷವನ್ನು ಅಮಲಿನಲ್ಲಿ ಆಚರಣೆ ಮಾಡದೇ ಬೇವು ಬೆಲ್ಲದೊಂದಿಗೆ ಆಚರಣೆ ಮಾಡುವಂತಾಗಬೇಕು. ನಾವು ಸುಂಸಂಸ್ಕೃತವಾದ ರೀತಿಯಲ್ಲಿ ಹೊಸ, ಹೊಸ ಚಿಂತನೆಗಳೊದಿಗೆ ಹೊಸ ಸಂವತ್ಸರವನ್ನು ಆಚರಣೆ ಮಾಡಬೇಕು. ಯುಗಾದಿ ಅರ್ಥವು ಸಹ ಇದನ್ನೆ ಹೇಳುತ್ತದೆ. ದಿನಗಳಲ್ಲಿ ಬೇವು ಬೆಲ್ಲದೊಂದಿಗೆ ನಮ್ಮ ಜೀವನದ ಕ್ರಮ ಆರಂಭವಾಗುವಂತೆ ಮಾಡಬೇಕು. ವರ್ಷದಿಂದ ವರ್ಷಕ್ಕೆ ನಾವು ಮರಣಕ್ಕೆ ಹತ್ತಿರ ಹೋಗುತ್ತಿದ್ದೇವೆ. ಅದರರ್ಥ ನಾವು ನಮ್ಮ ಆಯುಷ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ಇದರ ಮಧ್ಯ ನಾವು ಮಾಡಬೇಕಾದ ಕರ್ತವ್ಯ ಹೆಚ್ಚಾಗುತ್ತಿರುವುದರಿಂದ ಇರುವಷ್ಟುದಿನ ಸತ್ಕಾರ್ಯಗಳನ್ನು ಮಾಡಿ ದೇವರಿಗೆ ಹತ್ತಿರವಾಗಬೇಕು ಎಂದರು.
ರುದ್ರ ದೇವರ ಮಠದ ಮಲ್ಲಿಕಾರ್ಜುನ ಶ್ರೀಗಳು ಆಶೀರ್ವಚನ ನೀಡಿದರು. ದೇವಾಲಯದ ಅಧ್ಯಕ್ಷ ಡಾ. ವೆಂಕಟೇಶ ನಾಯ್ಕ, ಉಪಾಧ್ಯಕ್ಷ ಮನೋಹರ ಮಲ್ಮನೆ, ಧರ್ಮದರ್ಶಿ ಲಕ್ಷ್ಮಣ ಕಾನಡೆ, ಶಾಂತರಾಮ ಹೆಗಡೆ ಬಂಡಿಮನೆ, ಶಶಿಕಲಾ ಚಂದ್ರಾಪಟ್ಟಣ, ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಕೃಷ್ಣ ಕೊಡಿಯಾ, ಸಮಿತಿ ಮಹಿಳಾ ಅಧ್ಯಕ್ಷೆ ಸವಿತಾ ಐತಾಳ, ಗೌರವಾಧ್ಯಕ್ಷ ಎಂ.ಎಂ. ಭಟ್, ಗೋಪಾಲ ದೇವಾಡಿಗ ಮುಂತಾದವರು ಇದ್ದರು.
ಪ್ರತಿದಿನ ಬೆಳಗ್ಗೆ ಧನ್ವಂತರಿ ಸಹಸ್ರನಾಮ, ಪ್ರಾಣಾಯಾಮ ಹಾಗೂ ಸೂರ್ಯ ನಮಸ್ಕಾರ ಮಾಡುವುದರಿಂದ ನಾವು ಎಲ್ಲ ರೋಗವನ್ನು ತಡೆಯಬಹುದು. ಹೀಗೆ ಮಾಡುವುದು ಎಲ್ಲರ ಜೀವನ ಕ್ರಮವಾಗಬೇಕು. ಕೊರೋನಾ ಪರಿಣಾಮ ಮುಂಬರುವ ದಿನಗಳಲ್ಲಿ ಭಯಾನಕವಾಗಲಿದೆ. ಹಾಗಾಗಿ ನಾವೆಲ್ಲರೂ ಕೊರೋನಾ ತಡೆಗೆ ಸೂಕ್ತ ಕ್ರಮಗಳನ್ನು ಅನುಸರಿಸಬೇಕಿದೆ ಎಂದು ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ತಿಳಿಸಿದ್ದಾರೆ.