ಪೋಷಕರು ಕಲಿಸಿದ ಸಂಸ್ಕಾರವೇ ಮಕ್ಕಳು ಉನ್ನತ ಸ್ಥಾನಕ್ಕೇ ಏರಲು ಕಾರಣ. ಸಂಸ್ಕಾರ ಮರೆತ ಮಕ್ಕಳಿಂದ ಇಂದು ವೃದ್ಧಾಶ್ರಮಗಳು ಹೆಚ್ಚಾಗಲು ಕಾರಣವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಎನ್ ತಿಪ್ಪೇಸ್ವಾಮಿ ವಿಷಾದಿಸಿದರು.
ಚಿಕ್ಕಬಳ್ಳಾಪುರ : ಪೋಷಕರು ಕಲಿಸಿದ ಸಂಸ್ಕಾರವೇ ಮಕ್ಕಳು ಉನ್ನತ ಸ್ಥಾನಕ್ಕೇ ಏರಲು ಕಾರಣ. ಸಂಸ್ಕಾರ ಮರೆತ ಮಕ್ಕಳಿಂದ ಇಂದು ವೃದ್ಧಾಶ್ರಮಗಳು ಹೆಚ್ಚಾಗಲು ಕಾರಣವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಎನ್ ತಿಪ್ಪೇಸ್ವಾಮಿ ವಿಷಾದಿಸಿದರು.
ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಕಲ್ಯಾಣ ಇಲಾಖೆ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವೆ ಸಲ್ಲುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿರಿಯ ನಾಗರಿಕರನ್ನು ಗೌರವಿಸಿ
ತಾಯಿ-ತಂದೆಗಳಿಗೆ ತಮ್ಮ ಮಕ್ಕಳೇ ಸರ್ವಸ್ವವಾಗಿರುತ್ತಾರೆ. ಅಧೇ ರೀತಿ ಮಕ್ಕಳು ಸಹಾ ತಾಯಿ-ತಂದೆಯೇ ನಮ್ಮ ಸರ್ವಸ್ವ ಎಂದು ಭಾವಿಸಿದರೆ ಶಾಂತಿಯುತ ಮತ್ತು ನೆಮ್ಮದಿಯುತ ಸಮಾಜ ನಿರ್ಮಾಣವಾಗುತ್ತದೆ. ಹಿರಿಯ ನಾಗರೀಕರನ್ನು ತಂದೆ ತಾಯಿಯಂತೆ ಭಾವಿಸಿ ಅವರನ್ನು ಗೌರವಯುತವಾಗಿ ನಡೆಸಿಕೊಂಡಾಗ ಮಾತ್ರ ಅಂತಹ ಸಮಾಜ ಪರಿಪೂರ್ಣ ಸಮಾಜವಾಗುತ್ತದೆ ಎಂದರು.
ತಂದೆತಾಯಿಗಳಿಂದ ಪಡೆದದ್ದನ್ನು ಅವರ ಸಂಧ್ಯಾಕಾಲದಲ್ಲಿ ವಾಪಸ್ ನೀಡುವ ಕೆಲಸವನ್ನು ಮಕ್ಕಳು ಮಾಡಬೇಕು. ಅದು ಅವರ ಜವಾಬ್ದಾರಿಯೂ ಹೌದು. ವೃದ್ಧಾಪ್ಯದಲ್ಲಿ ತಂದೆತಾಯಿಗಳ ಆರೋಗ್ಯ ಮತ್ತು ನೆಮ್ಮದಿಯ ಕಡೆಗೆ ಮಕ್ಕಳು ಹೆಚ್ಚಿನ ಕಾಳಜಿ ವಹಿಸಬೇಕು. ಹಿರಿಯ ನಾಗರಿಕರನ್ನು ಗೌರವಿಸಿದ ಸಮಾಜ ಮಾತ್ರ ಪರಿಪೂರ್ಣ ಸಮಾಜವಾಗಲು ಸಾಧ್ಯ ಎಂದು ತಿಳಿಸಿದರು.
ಅರ್ಜಿ ಕೊಟ್ಟರೆ ಆಸ್ತಿ ವಾಪಸ್
ಮಕ್ಕಳು ತಂದೆ, ತಾಯಿಯನ್ನು ಸರಿಯಾಗಿ ಪಾಲನೆ ಪೋಷಣೆ ಮಾಡದೆ ನಿರ್ಲಕ್ಷವಹಿಸಿದರೆ, ಅಂತಹ ಹಿರಿಯ ನಾಗರಿಕರು ಉಪ ವಿಭಾಗಾಧಿಕಾರಿಗೆ ಲಿಖಿತ ದೂರು ಅರ್ಜಿ ನೀಡಿದರೆ ತಮ್ಮ ಮಕ್ಕಳಿಗೆ ನೋಂದಣಿ ಮಾಡಿಕೊಟ್ಟಿರುವ ಹಿಂದಿನ ಆಸ್ತಿ ಪತ್ರಗಳು ರದ್ದಾಗಿ ತಮ್ಮ ಹೆಸರಿಗೆ ಆಸ್ತಿಯನ್ನು ಹಿಂಪಡೆಯಲು ಕಾನೂನಿನಲ್ಲಿ ಅವಕಾಶವಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅಶ್ವತಮ್ಮ ಅವರು ಮಾತನಾಡಿ, ಜಿಲ್ಲೆಯಲ್ಲಿ 14,7000 ಹಿರಿಯ ನಾಗರಿಕರಿಗದ್ದು, ಈ ಪೈಕಿ 57,452 ಜನರಿಗೆ ಗುರುತಿನ ಚೀಟಿ ವಿತರಿಸಲಾಗಿದೆ. ಅನಿವಾರ್ಯ ಕಾರಣಗಳಿಂದ ಹಿರಿಯ ನಾಗರಿಕರು ಮನೆಯಿಂದ ಆಚೆ ಬಂದಲ್ಲಿ ಅಂತವರಿಗೆ ಆಶ್ರಯ ನೀಡಲು ಜಿಲ್ಲಾ ವಲಯದಲ್ಲಿ 2 ವೃದ್ಧಾಶ್ರಮಗಳಿವೆ ಎಂದರು.
ಚಿಂತಾಮಣಿ ತಾಲ್ಲೂಕಿನ ಕೈವಾರದ ಚೈತನ್ಯ ವೃದ್ಧಾಶ್ರಮ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕಿನ ಸುಲ್ತಾನ್ ಪೇಟೆ ಶ್ರೀ ಸಾಯಿ ದ್ವಾರಕಾಮಯಿ ವೃದ್ಧಾಶ್ರಮಗಳಿದ್ದು ಹೆತ್ತ ಮಕ್ಕಳಿಂದ ಪರಿತ್ಯೆಕ್ತರಾದವರು, ಮಕ್ಕಳೇ ಇಲ್ಲದವರು ಈ ವೃದ್ಧಾಶ್ರಮಗಳಲ್ಲಿ ಆಶ್ರಯ ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ, ಸಾಧನೆ ಮಾಡಿ ನಿವೃತ್ತ ರಾದ ನಸಿರ್ ಅಹಮದ್, ಚಂದ್ರಶೇಖರ್, ರಂಗಣ್ಣ, ರಮೇಶ್, ಕಾಸಿರ್ ಫೀರ್ ಮತ್ತು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಗೈದ ನರಸಮ್ಮ ರನ್ನು ಮತ್ತು ಚುನಾವಣೆ ಆಯೋಗದ ವತಿಯಿಂದ ತಾಲೂಕಿನಲ್ಲಿ 100ವರ್ಷ ಪೂರೈಸಿದ ಶತಾಯುಷಿ ಮತದಾರರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ವೈಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಗಂಗಾಧರಯ್ಯ , ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ವೆಂಕಟೇಗೌಡ, ನಿವೃತ್ತ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ವಿ ಕೃಷ್ಣಪ್ಪ, ಉನ್ನತಿ ಸ್ವಯಂಸೇವಾ ಸಂಸ್ಥೆಯ ಉನ್ನತಿ ವಿಶ್ವನಾಥ್,ಆಸರೆ ಪೌಂಡೇಶನ್‌ನ ನಿರ್ಮಲ, ಉಪನ್ಯಾಸಕ ಸತೀಶ್‌ಕುಮಾರ್ ಇದ್ದರು.