ಬೆಂಗಳೂರು: ಬೊಮ್ಮನಹಳ್ಳಿಯಲ್ಲಿ ಗುಂಡಿಗಳಿಂದ ಅಪಘಾತ ಹೆಚ್ಚಳ..!

Published : Nov 02, 2022, 06:30 AM IST
ಬೆಂಗಳೂರು: ಬೊಮ್ಮನಹಳ್ಳಿಯಲ್ಲಿ ಗುಂಡಿಗಳಿಂದ ಅಪಘಾತ ಹೆಚ್ಚಳ..!

ಸಾರಾಂಶ

ಬೆಂಗಳೂರಿನಲ್ಲಿ ಅತೀ ಹೆಚ್ಚು ಅಪಘಾತ ಆಗುತ್ತಿರುವುದು ಬೊಮ್ಮನಹಳ್ಳಿ ವಲಯದಲ್ಲಿ: ಅಕೊ ಸಂಸ್ಥೆ ಸಮೀಕ್ಷೆಯಲ್ಲಿ ಬಹಿರಂಗ

ಬೆಂಗಳೂರು(ನ.02):  ರಾಜಧಾನಿ ಬೆಂಗಳೂರಿನಲ್ಲಿ ಅತೀ ಹೆಚ್ಚು ರಸ್ತೆ ಅಪಘಾತ ಸಂಭವಿಸುತ್ತಿರುವುದು ಬೊಮ್ಮನಹಳ್ಳಿಯಲ್ಲಿ. ಇದಕ್ಕೆ ಅಲ್ಲಿನ ವಾಹನ ದಟ್ಟಣೆ ಮತ್ತು ಅತ್ಯಂತ ಹಾಳಾದ ರಸ್ತೆಗಳೇ ಕಾರಣ! ಅಕೊ ಎಂಬ ಸಂಸ್ಥೆ ಇತ್ತೀಚೆಗೆ ನಡೆಸಿದ ಅಪಘಾತ ವಲಯಗಳ ಕುರಿತ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಈವರೆಗೆ ಕೈಗಾರಿಕಾ ಮತ್ತು ಐಟಿ ಹಬ್‌ ಖ್ಯಾತಿ ಹೊಂದಿದ್ದ ಬೊಮ್ಮನಹಳ್ಳಿ ಈಗ ಆಕ್ಸಿಡೆಂಟ್‌ ಜೋನ್‌(ವಲಯ) ಎಂಬ ಕುಖ್ಯಾತಿ ಪಡೆದುಕೊಂಡಿದೆ.

ದೇಶದ ಮಹಾನಗರಗಳ ಪೈಕಿ ಬೆಂಗಳೂರಿನಲ್ಲಿ ಕಡಿಮೆ ಅಪಘಾತಗಳು ಸಂಭವಿಸಿವೆ. ನಗರದಲ್ಲಿ ಸರಾಸರಿ ಶೇ.16ರಷ್ಟುಅಪಘಾತ ಪ್ರಮಾಣ ದಾಖಲಾಗಿದೆ. ಆದರೆ, ಬೊಮ್ಮನಹಳ್ಳಿಯಲ್ಲಿ ಶೇ.9ರಷ್ಟುಅಪಘಾತ ಸಂಭವಿಸಿದ್ದು ಬಹುತೇಕ ಅಪಘಾತಗಳಲ್ಲಿ ಹಾಳಾದ ರಸ್ತೆಗಳೇ ಕಾರಣ ಎನ್ನಲಾಗಿದೆ.

ಬೆಂಗ್ಳೂರಲ್ಲಿ ಗುಂಡಿ ಮುಚ್ಚದ ಬಿಬಿಎಂಪಿ ನಡೆಗೆ ಹೈಕೋರ್ಟ್‌ ಬೇಸರ

ಕೈಗಾರಿಕಾ ಪ್ರದೇಶಗಳಲ್ಲಿ ಒಂದಾದ ಬೊಮ್ಮಸಂದ್ರ, ದೊಡ್ಡ ಬೊಮ್ಮಸಂದ್ರ, ಎಚ್‌ಎಸ್‌ಆರ್‌ ಲೇಔಟ್‌, ಬೇಗೂರು, ಪುಟ್ಟೇನಹಳ್ಳಿ, ಬಿಳೇಕಹಳ್ಳಿ, ಮಂಗಮ್ಮನಪಾಳ್ಯ, ಜರಗನಹಳ್ಳಿ ಸೇರಿದಂತೆ ಹಲವು ವಾರ್ಡ್‌ಗಳ ರಸ್ತೆಗಳಂತೂ ಹೇಳಲು ಅಸಾಧ್ಯವಾದಷ್ಟುಹಾಳಾಗಿವೆ. ಹೈಕೋರ್ಚ್‌ ರಸ್ತೆ ಗುಂಡಿಗಳ ಬಗ್ಗೆ ವಿಚಾರಣೆ ಕೈಗೆತ್ತಿಕೊಂಡು ಪಾಲಿಕೆ ವಿರುದ್ಧ ಆಗಾಗ ಚಾಟಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಬಹಳಷ್ಟುರಸ್ತೆಗಳ ಗುಂಡಿಗಳಿಗೆ ತೇಪೆ ಹಾಕಲಾಗಿದೆ. ಆದರೂ ಲೆಕ್ಕಕ್ಕೆ ಸಿಗದ ನೂರಾರು ರಸ್ತೆಗುಂಡಿಗಳು ಇವೆ ಎಂದು ಅಂದಾಜಿಸಲಾಗಿದೆ.

ಜರಗನಹಳ್ಳಿಯ (ವಾರ್ಡ್‌ ಸಂಖ್ಯೆ 186) ರಸ್ತೆಗಳು ಅದ್ವಾನದಿಂದ ಕೂಡಿದ್ದು, ಇಲ್ಲಿನ ರಾಮಾಂಜನೇಯ ದೇವಸ್ಥಾನ ಮುಂಭಾಗದ ಮತ್ತು ಪ್ರಸನ್ನ ಗಂಗಾಧರೇಶ್ವರ ದೇವಸ್ಥಾನ ಪಕ್ಕದ ರಸ್ತೆಯಲ್ಲಿ ಹತ್ತಾರು ಗುಂಡಿಗಳಿವೆ. ಹಾಗೆಯೇ ಅಣ್ಣಯ್ಯಪ್ಪ ಗಾರ್ಡನ್‌ ಜರಗನಹಳ್ಳಿ ರಸ್ತೆಯ ಸ್ಥಿತಿಯನ್ನು ಕೇಳುವವರೇ ಇಲ್ಲ. ಕೇವಲ ನೂರು ಮೀಟರ್‌ ರಸ್ತೆಯಲ್ಲಿ ನೂರಾರು ರಸ್ತೆ ಗುಂಡಿಗಳು ಸಿಗುತ್ತವೆ. ಇನ್ನು ಚಾಮುಂಡಿ ನರ್ಸರಿ ರಸ್ತೆ, ರಾಜೀವ್‌ಗಾಂಧಿ ರಸ್ತೆ, ಜಿಕೆಎಂ ಕಲೇಜು ರಸ್ತೆ, ಗೋವಿಂದಪ್ಪ ಬಡಾವಣೆ, ಪಟೇಲ್‌ ತಕ್ಕಪ್ಪ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ರಸ್ತೆ ಗುಂಡಿಗಳದ್ದೇ ಕಾರುಬಾರು.

ಅದೇ ರೀತಿ ಪುಟ್ಟೇನಹಳ್ಳಿಯ ಮುಖ್ಯ ರಸ್ತೆ, ಜೆ.ಪಿ.ನಗರ 7ನೇ ಹಂತದ ನೆಕ್ಸ್ಟ್‌ಟು ಟಿವಿಎಸ್‌ ಶೋರೂಮ್‌ ರಸ್ತೆ, ಪುಟ್ಟೇನಹಳ್ಳಿ 28ನೇ ಮುಖ್ಯ ಮತ್ತು 17ನೇ ಅಡ್ಡ ರಸ್ತೆ, ಮುನಿಯಪ್ಪ ಗಾರ್ಡ್‌ನ್‌ ರಸ್ತೆಯಲ್ಲೂ ಸಾಕಷ್ಟುಗುಂಡಿಗಳಿವೆ. ಬೇಗೂರು ರಸ್ತೆ, ಮರಿಯಮ್ಮನ ಪಾಳ್ಯದ ಮುಖ್ಯ ರಸ್ತೆ ಒಳಗೊಂಡಂತೆ ತಿರುವು ರಸ್ತೆಗಳು ಗುಂಡಿಮಯವಾಗಿವೆ. ಎಚ್‌ಎಸ್‌ಆರ್‌ಲೇಔಟ್‌, ಬೊಮ್ಮಸಂದ್ರದ ವಾರ್ಡ್‌ ರಸ್ತೆಗಳಲ್ಲಿ ಹಲವೆಡೆಗೆ ರಸ್ತೆ ಗುಂಡಿಗಳು ವಾಹನ ಸವಾರರಿಗೆ ಸಿಂಹಸಪ್ನವಾಗಿ ಕಾಡುತ್ತಿವೆ.

1400ಕ್ಕೂ ಹೆಚ್ಚು ರಸ್ತೆ ಗುಂಡಿಗಳು

ಬೊಮ್ಮನಹಳ್ಳಿ ವಲಯ ಎರಡು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ(ಹೊಸದಾಗಿ ವಿಂಗಡಣೆ ವಾರ್ಡ್‌ಗಳು 14) ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ (ಹೊಸ ವಿಂಗಡಣೆಯಲ್ಲಿ 13) ತಲಾ ಎಂಟು ವಾರ್ಡ್‌ಗಳನ್ನು ಒಳಗೊಂಡಿದೆ. ಈ ವಲಯದಲ್ಲಿ ಒಟ್ಟು 12,154 ವಾರ್ಡ್‌ ರಸ್ತೆಗಳಿದ್ದು, 1776 ಕಿ.ಮೀ. ಉದ್ದವನ್ನೊಳಗೊಂಡಿದೆ. ಅದರಲ್ಲಿ 3 ಸಾವಿರ ಕಿ.ಮೀ ಉದ್ದದ ರಸ್ತೆಯಲ್ಲಿ ಕಾವೇರಿ ಕುಡಿಯುವ ನೀರಿನ ಕಾಮಗಾರಿ ಮತ್ತು ಯುಜಿಡಿ ಕಾಮಗಾರಿಗಳು ನಡೆಯುತ್ತಿವೆ. ಉಳಿದಂತೆ ಬೊಮ್ಮನಹಳ್ಳಿ ವಲಯದಲ್ಲಿ ಈವರೆಗೂ 1409 ರಸ್ತೆ ಗುಂಡಿಗಳನ್ನು ಗುರುತಿಸಲಾಗಿದ್ದು, 1090 ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನೂ 319 ಗುಂಡಿಗಳನ್ನು ನ.6ರೊಳಗೆ ಭರ್ತಿ ಮಾಡುವ ಗುರಿ ಹೊಂದಲಾಗಿದೆ ಎಂದು ವಲಯದ ಎಂಜಿನಿಯರ್‌ಗಳು ಮಾಹಿತಿ ನೀಡಿದ್ದಾರೆ.

3 ವಾರ್ಡದಲ್ಲಿ 100 ಗುಂಡಿ ಭರ್ತಿಗೆ ಬಾಕಿ

ಬೊಮ್ಮನಹಳ್ಳಿ (ವಾರ್ಡ್‌ 175) ವಾರ್ಡ್‌ ರಸ್ತೆಗಳು 55 ಕಿ.ಮೀ ಉದ್ದವಿದ್ದು, 41 ಗುಂಡಿಗಳನ್ನು ಗುರುತಿಸಲಾಗಿದೆ. ಬಿಳೇಕಹಳ್ಳಿ (ವಾರ್ಡ್‌ ಸಂಖ್ಯೆ 188) 75 ಕಿ.ಮೀ ಉದ್ದದ ರಸ್ತೆಗಳಿದ್ದು, 97 ಮತ್ತು ಹೊಂಗಸಂದ್ರ(ವಾರ್ಡ್‌ ಸಂಖ್ಯೆ 189) ರಸ್ತೆಯು 63 ಕಿ.ಮೀ. ಉದ್ದವಿದ್ದು, 84 ರಸ್ತೆಗುಂಡಿಗಳನ್ನು ಗುರುತಿಸಲಾಗಿತ್ತು. 240ಕ್ಕೂ ಹೆಚ್ಚು ಗುಂಡಿಗಳ ಪೈಕಿ ಈಗಾಗಲೇ 137ಕ್ಕೂ ಹೆಚ್ಚು ಗುಂಡಿಗಳನ್ನು ಭರ್ತಿ ಮಾಡಲಾಗಿದ್ದು, ಉಳಿದ ಗುಂಡಿಗಳನ್ನು ವಾರದೊಳಗೆ ಮುಚ್ಚಲು ಕ್ರಮಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದರು.

ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಸಾಲು ಸಾಲು ಗುಂಡಿಗಳು..!

ವಲಯ ಒಟ್ಟು ಗುಂಡಿಗಳು ಭರ್ತಿ ಬಾಕಿ ಬೊಮ್ಮನಹಳ್ಳಿ 1409 1090 319

ನಾಲ್ಕು ವರ್ಷದ ಹಿಂದೆ ಜರಗನಹಳ್ಳಿ ವಾರ್ಡ್‌ ಡಾಂಬರೀಕರಣ ಆಗಿತ್ತು. ಆ ನಂತರ ಯಾರು ಈ ಕಡೆ ತಿರುಗಿ ನೋಡಿಲ್ಲ. ಜನಪ್ರತಿನಿಧಿಗಳು ಇದ್ದರೆ, ಅವರಿಗೆ ಹೇಳಿ ರಸ್ತೆ ರಿಪೇರಿ ಮಾಡಿಸಬಹುದಿತು. ಈಗ ಅಧಿಕಾರಿಗಳು ಕೈಗೂ ಸಿಗುವುದಿಲ್ಲ. ಹಾಳಾದ ರಸ್ತೆಗಳಿಂದ ಆಗಾಗ ಅಪಘಾತಗಳು ನಡೆಯುತ್ತಲೇ ಇವೆ ಅಂತ ಜರಗನಹಳ್ಳಿ ವಾರ್ಡ್‌, ಅಣ್ಣಯಪ್ಪ ಗಾರ್ಡನ್‌ ಉದ್ಯಮಿ ಶ್ರೀನಿವಾಸಲು ತಿಳಿಸಿದ್ದಾರೆ.  

ನಾಲ್ಕೈದು ತಿಂಗಳ ಹಿಂದೆ ಒಡೆದು ಹೋಗಿದ್ದ ಕುಡಿಯುವ ನೀರಿನ ಪೈಪ್‌ ದುರಸ್ತಿಗೆಂದು ರಸ್ತೆ ಅಗೆದಿದ್ದರು. ಆ ನಂತರ ಯಾರು ಮುಚ್ಚಲು ಬರಲಿಲ್ಲ. ನಾವೇ ಮಣ್ಣು ತುಂಬಿ ಮುಚ್ಚಿದ್ದೆವು. ಆದರೆ, ಮಳೆಗೆ ಮತ್ತೆ ಗುಂಡಿಯಾಗಿದೆ. ಪಾಲಿಕೆಯಿಂದ ಸ್ವಚ್ಛತೆಯನ್ನು ದಿನವೂ ಮಾಡುತ್ತಾರೆ. ಗುಂಡಿ ಮುಚ್ಚಲು ಮಾತ್ರ ಯಾರೂ ಬರುತ್ತಿಲ್ಲ ಅಂತ ಮುನಿಯಪ್ಪ ಗಾರ್ಡನ್‌, ಪುಟ್ಟೇನಹಳ್ಳಿ ಸ್ಥಳೀಯ ನಿವಾಸಿ ಮಹೇಶ್‌ ಹೇಳಿದ್ದಾರೆ.  
 

PREV
Read more Articles on
click me!

Recommended Stories

ದಾವಣಗೆರೆ ಮಹಿಳೆಯನ್ನ ಕಚ್ಚಿಕೊಂದ 2 ರಾಟ್‌ವೀಲರ್ ನಾಯಿಗಳು ಜನರ ಹಲ್ಲೆಯಿಂದ ಸಾವು; ಶ್ವಾನಗಳ ಮಾಲೀಕ ಬಂಧನ
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ