ರೇಷ್ಮೆನಗರಿಯಲ್ಲಿ 16 ವರ್ಷದ ಬಳಿಕ ಜಿಲ್ಲಾಸ್ಪತ್ರೆ ಉದ್ಘಾಟನೆ: ಕ್ರೆಡಿಟ್‌ ಪಡೆಯಲು 3 ಪಕ್ಷಗಳ ಗುದ್ದಾಟ

By Sathish Kumar KH  |  First Published Mar 1, 2023, 7:55 PM IST

ರೇಷ್ಮೆನಗರಿ ರಾಮನಗರ ಜಿಲ್ಲೆಯಾಗಿ 16 ವರ್ಷ ನಂತರ ಜಿಲ್ಲಾಸ್ಪತ್ರೆ ಕಟ್ಟಡ ನಾಳೆ ಉದ್ಘಾಟನೆಗೆ ಸಜ್ಜುಗೊಂಡಿದೆ. ಇದರೊಂದಿಗೆ ಜಿಲ್ಲಾಸ್ಪತ್ರೆ ನಿರ್ಮಾಣದ ಕ್ರೆಡಿಟ್ ವಾರ್ ಪಡೆದುಕೊಳ್ಳಲೂ 3 ಪಕ್ಷಗಳಿಗೆ ವೇದಿಕೆ ಸಿದ್ಧವಾದಂತಿದೆ.


ವರದಿ- ಜಗದೀಶ್ ಏಷ್ಯಾನೆಟ್ ಸುವರ್ಣನ್ಸೂಸ್ 

ರಾಮನಗರ (ಮಾ.01): ರೇಷ್ಮೆನಗರಿ ರಾಮನಗರ ಜಿಲ್ಲೆಯಾಗಿ 16 ವರ್ಷ ನಂತರ ಜಿಲ್ಲಾಸ್ಪತ್ರೆ ಕಟ್ಟಡಕ್ಕೆ ಕಡೆಗೂ ಉದ್ಘಾಟನಾ ಭಾಗ್ಯ ದೊರೆಯಲಿದೆ. ನಾಳೆ ನೂತನ ಜಿಲ್ಲಾಸ್ಪತ್ರೆ ಕಟ್ಟಡವನ್ನ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಲೋಕಾರ್ಪಣೆ ಮಾಡಲಿದ್ದಾರೆ. ಆದರೆ ನೂತನ ಜಿಲ್ಲಾಸ್ಪತ್ರೆ ಮತ್ತೊಂದು ಸುತ್ತಿನ ಕ್ರೆಡಿಟ್ ವಾರ್ ಗೆ ವೇದಿಕೆ ಸಜ್ಜಾಗಿದೆ. 

Tap to resize

Latest Videos

ರಾಮನಗರ ಜಿಲ್ಲೆಯಾಗಿ 16ವರ್ಷ ಕಳೆದಿದ್ದರೂ ಸುಸಜ್ಜಿತವಾದ ಜಿಲ್ಲಾಸ್ಪತ್ರೆ ಇಲ್ಲದೇ ಪರದಾಡುವಂತಾಗಿತ್ತು. ಪಕ್ಕದ ಮಂಡ್ಯ ಮತ್ತು ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗೆ ರೋಗಿಗಳು ತೆರಳಬೇಕಿತ್ತು. ಆದರೆ ಇದೀಗ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ನೂತನ ಆಸ್ಪತ್ರೆ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ನಾಳೆ ನೂತನ ಜಿಲ್ಲಾಸ್ಪತ್ರೆ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ. ಆದರೆ, ಈ ಜಿಲ್ಲಾ ಆಸ್ಪತ್ರೆಯನ್ನು ನಿರ್ಮಾಣ ಮಾಡಿದ ಕ್ರೆಡಿಟ್‌ ಅನ್ನು ಪಡೆಯಲು ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ನಾಯಕರು ಮುಂದಾಗಿದ್ದಾರೆ. 

ರಾಮನಗರ ಅಭಿವೃದ್ಧಿ ಮಾಡಿದ್ದು ನನ್ನ ಗಂಡ ಎಂದ ಅನಿತಾ ಕುಮಾರಸ್ವಾಮಿ!

500 ಹಾಸಿಗೆ ಸಾಮರ್ಥ್ಯದ 16 ವಿಭಾಗಗಳಿರುವ ಆಸ್ಪತ್ರೆ: ರಾಮನಗರದಲ್ಲಿ ನಿರ್ಮಾಣ ಮಾಡಲಾಗಿರುವ ಜಿಲ್ಲಾ ಆಸ್ಪತ್ರೆಯಲ್ಲಿ  ಸುಮಾರು 99.63ಕೋಟಿ‌ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಸುಸಜ್ಜಿತ ಆಸ್ಪತ್ರೆಯಲ್ಲಿ 500 ಹಾಸಿಗೆ ಸಾಮರ್ಥ್ಯವಿದ್ದು, ಹೈಟೆಕ್ ಆಗಿರುವ ವೈದ್ಯಕೀಯ ಉಪಕರಣಗಳನ್ನು ಬಳಕೆ ಮಾಡಲಾಗುತ್ತದೆ. ಇನ್ನು ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಆಗಿರುವುದು ಜಿಲ್ಲೆಯ ಜನರಿಗೆ ಖುಷಿ ತರಿಸಿದೆ. ತುರ್ತುಚಿಕತ್ಸಾ ವಿಭಾಗ, ಶಸ್ತ್ರ ಚಿಕಿತ್ಸೆ ಸೇರಿ 16 ವಿವಿಧ ವಿಭಾಗಗಳನ್ನು ಹೊಂದಿರುವ ಜಿಲ್ಲಾಸ್ಪತ್ರೆಯನ್ನ ಆರೋಗ್ಯ ಸಚಿವ ಸುಧಾಕರ್ ಉದ್ಘಾಟನೆ ಮಾಡಲಿದ್ದಾರೆ.

ಆಸ್ಪತ್ರೆ ನಿರ್ಮಾಣದ ಕ್ರೆಡಿಟ್‌ ಯಾರಿಗೆ?: ಇನ್ನೂ ನೂತನ ಜಿಲ್ಲಾಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮ ಮತ್ತೊಂದು ಸುತ್ತಿನ ಕ್ರೆಡಿಟ್ ವಾರ್ ಗೆ ವೇದಿಕೆಯಾಗುವ ಸಾಧ್ಯತೆ ಇದೆ. ಯಾಕಂದ್ರೆ ಜಿಲ್ಲಾಸ್ಪತ್ರೆಯ ನಿರ್ಮಾಣದ ಹಿಂದೆ ಮೂರು ಪಕ್ಷಗಳ ಕೊಡುಗೆ ಇರುವುದರಿಂದ ಇದೀಗ ನೂತನ ಆಸ್ಪತ್ರೆ ಕ್ರೆಡಿಟ್ ಪಡೆಯಲು 3 ಪಕ್ಷದ ಮುಖಂಡರು ಮುಂದಾಗಿದ್ದಾರೆ. ಇದರಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎಸ್. ಅಶ್ವತ್ಥನಾರಾಯಣ ಅವರು ಆಸ್ಪತ್ರೆ ನಿರ್ಮಾಣದ ಕ್ರೆಡಿಟ್‌ ಪಡೆಯಲು ಮುಂದಾಗಿದ್ದಾರೆ.

ಆಸ್ಪತ್ರೆ ನಿರ್ಮಾಣಕ್ಕೆ ಯಾರ ಅವಧಿಯಲ್ಲಿ ಏನು ಕೊಡುಗೆ? 
ರಾಮನಗರ ಜಿಲ್ಲೆಗೆ ನೂತನ ಜಿಲ್ಲಾಸ್ಪತ್ರೆಯನ್ನ 2007ರ ಮೈತ್ರಿ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದ್ದರು. ಬಳಿಕ ಹಲವು ವರ್ಷ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ 2017ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಭೂಮಿ ಹಸ್ತಾಂತರ ಮಾಡಿ ಅನುದಾನ ಬಿಡುಗಡೆ ಮಾಡಿದ್ದರು. ಆದರೆ ಕಾರಣಾಂತರಗಳಿಂದ ಕಾಮಗಾರಿ ವಿಳಂಬವಾಗಿತ್ತು. ಬಳಿಕ ಸಚಿವ ಅಶ್ವಥ್ ನಾರಾಯಣ್ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ಮೇಲೆ ಹೆಚ್ಚುವರಿ ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಹಾಗಾಗಿ ಮೂರು ಪಕ್ಷದ ನಾಯಕರು ಆಸ್ಪತ್ರೆ ಕ್ರೆಡಿಟ್ ಪಡೆಯಲು ವೇದಿಕೆ ಸಜ್ಜಾಗಿದೆ.

ರಾಮನಗರದಲ್ಲಿ ವೇದಿಕೆ ಮೇಲೆ ಅಶ್ವತ್ಥ್‌ನಾರಾಯಣ Vs ಅನಿತಾ ಕುಮಾರಸ್ವಾಮಿ ಟಾಕ್‌ವಾರ್!

ಒಂದೇ ವೇದಿಕೆಯಲ್ಲಿ 3 ಪಕ್ಷದ ಘಟಾನುಘಟಿಗಳು ಭಾಗಿ: ಅಂದಹಾಗೆ ನಾಳಿನ ಆಸ್ಪತ್ರೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ್, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಭಾಗಿಯಾಗಲಿರೂದು ತೀವ್ರ ಕುತೂಹಲ ಮೂಡಿಸಿದೆ. ರಾಜಕೀಯ ಬದ್ಧವೈರಿಗಳು ಒಂದೇ ವೇದಿಕೆ ಹಂಚಿಕೊಳ್ಳುತ್ತಿರುವುದು ಕುತೂಹಲ ಹೆಚ್ಚಾಗಿದೆ.

ಒಟ್ಟಾರೆ ಬಹಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡವೇನೋ ನಿರ್ಮಾಣವಾಗಿದೆ. ಆದರೆ ಅದಕ್ಕೆ ಬೇಕಾದ ಮೂಲ ಸೌಕರ್ಯಗಳು, ಸಿಬ್ಬಂದಿ ಕೊರತೆ ಬಾರದಂತೆ ಸರ್ಕಾರ ಕ್ರಮವಹಿಸಬೇಕಿದೆ. ರಾಜಕೀಯ ಗುದ್ದಾಟಗಳು ಏನೇ ಇದ್ದರೂ ನೂತನ ಜಿಲ್ಲಾಸ್ಪತ್ರೆ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಂತಾಗಲಿ ಎಂಬುದೇ ನಮ್ಮ ಆಶಯವಾಗಿದೆ.

click me!