ದೇಶದ ಬಂದರುಗಳ ಸುಧಾರಣೆಗೆ 800ಕ್ಕೂ ಅಧಿಕ ಯೋಜನೆ: ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್‌

By Kannadaprabha News  |  First Published Oct 15, 2022, 2:11 PM IST

ದೇಶದ ಬಂದರುಗಳ ಸುಧಾರಣೆಗೆ 800ಕ್ಕೂ ಅಧಿಕ ಯೋಜನೆ: ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್‌. ಗೋವಾದಿಂದಲೇ ವರ್ಚುವಲ್‌ ಮೂಲಕ ಎನ್‌ಎಂಪಿಎ ವಿವಿಧ ಕಾಮಗಾರಿ ಶಿಲಾನ್ಯಾಸ, ಲೋಕಾರ್ಪಣೆ


ಮಂಗಳೂರು (ಅ.15): ಸಾಗರಮಾಲಾ ಯೋಜನೆಯಡಿ ದೇಶದ ಎಲ್ಲ ಬಂದರುಗಳ ಸುಧಾರಣೆಗೆ 800ಕ್ಕೂ ಅಧಿಕ ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು, ಇವುಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುತ್ತಿದೆ ಕೇಂದ್ರ ನೌಕಾಯಾನ ಸಚಿವ ಸರ್ಬಾನಂದ ಸೋನೊವಾಲ್‌ ಹೇಳಿದ್ದಾರೆ. ನವಮಂಗಳೂರು ಬಂದರು ಪ್ರಾಧಿಕಾರ ಹಾಗೂ ಮರ್ಮಗೋವಾ ಬಂದರು ಪ್ರಾಧಿಕಾರಗಳ ವಿವಿಧ ಯೋಜನೆಗಳ ಶಿಲಾನ್ಯಾಸ ಹಾಗೂ ಉದ್ಘಾಟನೆಯನ್ನು ವರ್ಚುವಲ್‌ ವೇದಿಕೆಯಲ್ಲಿ ಗುರುವಾರ ನೆರವೇರಿಸಿ ಅವರು ಮಾತನಾಡಿದರು. ದೇಶದ ಅಭಿವೃದ್ಧಿಯಲ್ಲಿ ಬಂದರುಗಳ ಕೊಡುಗೆಯನ್ನು ಲಕ್ಷ್ಯದಲ್ಲಿರಿಸಿ ಪ್ರಧಾನಿ ಮೋದಿಯವರು ಹಾಕಿಕೊಂಡ ಸಾಗರಮಾಲಾ ಕಾರ್ಯಕ್ರಮದಡಿ 802 ಯೋಜನೆಗಳು ಕಾರ್ಯಗತಗೊಳ್ಳುತ್ತಿವೆ. ಸುಮಾರು 200ಕ್ಕೂ ಅಧಿಕ ಯೋಜನೆಗಳು ಪೂರ್ಣಗೊಂಡಿವೆ. ಬಂದರುಗಳ ಆಧುನೀಕರಣ ನಡೆಯುತ್ತಿದ್ದು, ಬಂದರುಮುಖಿ ಕೈಗಾರಿಕೀಕರಣ, ಸಂಪರ್ಕ ವ್ಯವಸ್ಥೆ, ಕರಾವಳಿ ಸಮುದಾಯ ಅಭಿವೃದ್ಧಿ, ಕರಾವಳಿ ನೌಕಾಯಾನ ಮತ್ತು ಜಲಮಾರ್ಗಗಳ ಅಭಿವೃದ್ಧಿ ಹಂತ ಹಂತವಾಗಿ ನಡೆಯುತ್ತಿದೆ ಎಂದರು. ಸರಕು ನಿರ್ವಹಣೆ ದಿನದಿಂದ ದಿನಕ್ಕೆ ಏರುಗತಿಯಲ್ಲಿದೆ, ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಕೆ, ಯಾಂತ್ರೀಕರಣದಿಂದಾಗಿ ವಿಶ್ವದ ದೊಡ್ಡ ಬಂದರುಗಳ ಜತೆ ನಮ್ಮ ದೇಶದ ಬಂದರುಗಳು ಈಗ ಪೈಪೋಟಿ ನಡೆಸುತ್ತಿವೆ ಎಂದರು.

ಕೇಂದ್ರ ಸಹಾಯಕ ಸಚಿವ ಶ್ರೀಪಾದ ಯಸ್ಸೊ ನಾಯಕ್‌, ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌, ರಾಜ್ಯ ಸಭಾ ಸದಸ್ಯ ವಿಜಯ್‌ ತೆಂಡುಲ್ಕರ್‌ ಮತ್ತಿತರರಿದ್ದರು. ಎನ್‌ಎಂಪಿಎ ಹಾಗೂ ಮರ್ಮಗೋವಾ ಬಂದರು ಪ್ರಾಧಿಕಾರ ಅಧ್ಯಕ್ಷ ಡಾ. ಎ.ವಿ.ರಮಣ ಸ್ವಾಗತಿಸಿದರು.

Tap to resize

Latest Videos

ರಸ್ತೆ ಅಭಿವೃದ್ಧಿ, ಟ್ರಕ್‌ ಟರ್ಮಿನಲ್‌ ಶಿಲಾನ್ಯಾಸ: ಬಂದರು ಪ್ರಾಧಿಕಾರದ ಮುಖ್ಯ ಗೇಟ್‌ನಿಂದ ಕುದುರೆಮುಖ ಜಂಕ್ಷನ್‌ ವರೆಗೆ 700 ಮೀಟರ್‌ ಉದ್ದಕ್ಕೆ ಇದ್ದ ಸರ್ವಿಸ್‌ ರಸ್ತೆಯನ್ನು ಅಗಲಗೊಳಿಸಿ, ಕಾಂಕ್ರಿಟ್‌ ಹಾಕುವ 3.75 ಕೋಟ ರು.ಗಳ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು. ಕಾಮಗಾರಿಯು 2023ರ ಫೆಬ್ರವರಿಯಲ್ಲಿ ಪೂರ್ತಿಗೊಳ್ಳಲಿದೆ.

ಕಸ್ಟಮ್ಸ್‌ ಹೌಸ್‌ ಸಮೀಪ ಈಗಿರುವ ಟ್ರಕ್‌ ಟರ್ಮಿನಲ್‌ನ್ನು 3.71 ಕೋಟಿ ರು. ವೆಚ್ಚದಲ್ಲಿ ಅತ್ಯಾಧುನಿಕ ಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು. 200ರಷ್ಟು ಟ್ರಕ್‌ಗಳನ್ನು ಇಲ್ಲಿ ಪಾರ್ಕ್ ಮಾಡುವ ಸೌಲಭ್ಯ ಇರಲಿದ್ದು ಕಾಮಗಾರಿ 31.10.2023ಕ್ಕೆ ಪೂರ್ಣಗೊಳ್ಳಲಿದೆ.

ಮಂಗಳೂರು ಬಂದರಿಗೆ ಸ್ವಾಯತ್ತೆ ನೀಡುವ ಮಸೂದೆಗೆ ಅನುಮೋದನೆ!

ಎನ್‌ಎಂಪಿಎ ಮುಖ್ಯಪ್ರವೇಶ ದ್ವಾರ ಯು.ಎಸ್‌.ಮಲ್ಯ ಗೇಟ್‌ನ್ನು 2 ಲೇನ್‌ನಿಂದ 4 ಲೇನ್‌ ಆಗಿ ಪರಿವರ್ತಿಸಲಾಗಿದ್ದು 3.30 ಕೋಟಿ ರು. ವೆಚ್ಚದಲ್ಲಿ ಸುಧಾರಣೆಗೊಳಪಡಿಸಲಾಗಿದೆ. ಅಲ್ಲದೆ ಪರಿಸರ ನಿರ್ವಹಣೆ ಉದ್ದೇಶದೊಂದಿಗೆ 50 ಲಕ್ಷ ರು. ವೆಚ್ಚದಲ್ಲಿ ತ್ಯಾಜ್ಯ ನಿರ್ವಹಣಾ ಘಟಕವನ್ನೂ ನಿರ್ಮಿಸಲಾಗಿದ್ದು, ಇವೆರಡೂ ಸೌಲಭ್ಯಗಳನ್ನೂ ಲೋಕಾರ್ಪಣೆಗೊಳಿಸಲಾಯಿತು.

click me!