ವರದಿ: ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್
ಕೊಪ್ಪಳ (ಮೇ.6) : ಕೊಪ್ಲಳ ಜಿಲ್ಲೆ ಅಂದರೆ ಸಾಕು ನಮಗೆ ನೆನಪಿಗೆ ಬರುವುದು ಬರಪೀಡಿತ ಜಿಲ್ಲೆ ಎಂದು. ಇಲ್ಲಿನ ಜನರು ಬಹುತೇಕರು ಕೃಷಿಕರು ಹಾಗೂ ಕಾರ್ಮಿಕ ವರ್ಗದ ಜನರು. ಇನ್ನು ಇಲ್ಲಿನ ಬಹುತೇಕ ಕಾರ್ಮಿಕ ವರ್ಗದ ಜನರು ಕುಡಿತದ ದಾಸರಾಗಿರುವುದು ನಿಜಕ್ಕೂ ದುರ್ದೈವದ ಸಂಗತಿ. ಈ ಹಿನ್ನಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿನ ಜನರ ಮದ್ಯಸೇವನೆಯ ಪ್ರಮಾಣವನ್ನು ಕಡಿಮೆ ಮಾಡಬೇಕೆನ್ನುವ ದೃಷ್ಟಿಯಿಂದ ಪೊಲೀಸ್ ಇಲಾಖೆ ಜಿಲ್ಲೆಯಲ್ಲಿನ 60 ಗ್ರಾಮಗಳನ್ನು ಮದ್ಯ ಪಾನಮುಕ್ತ ಗ್ರಾಮಗಳನ್ನಾಗಿ ಮಾಡಿದೆ.
ಮದ್ಯಪಾನ ಮುಕ್ತ ಗ್ರಾಮಗಳನ್ನಾಗಿ ಮಾಡಿದ ಪೊಲೀಸ್ ಅಧಿಕಾರಿ ಯಾರು: ಕೊಪ್ಪಳ ಜಿಲ್ಲೆಯ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಮದ್ಯ ಮಾರಾಟ ಅಧಿಕವಾಗಿದ್ದು, ಮದ್ಯದಿಂದ ಎಷ್ಟೋ ಕುಟುಂಬಗಳು ಬೀದಿಗೆ ಬಿದ್ದಿವೆ. ಕೊಪ್ಪಳ ಜಿಲ್ಲೆಯಲ್ಲಿ 600 ಗ್ರಾಮಗಳಿದ್ದು, ಪೊಲೀಸರ ಜಾಗೃತಿಯಿಂದ ಮದ್ಯಪಾನ ಮುಕ್ತ ಗ್ರಾಮಗಳು ಹೆಚ್ಚಾಗುತ್ತಿವೆ. ಇದನ್ನ ಮನಗಂಡ ಸದ್ಯ ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ಆಗಿ ಕಾರ್ಯನಿರ್ವಹಿಸುತ್ತಿರುವ ವಿಶ್ವನಾಥ ಹಿರೇಗೌಡರ ಗ್ರಾಮಗಳಿಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದರ ಭಾಗವಾಗಿ ಅವರು ಗ್ರಾಮಸ್ಥರಿಗೆ ಕುಡಿತದ ದುಶ್ಚಟಗಳಿಂದ ಆಗುವ ಪರಿಣಾಮಗಳು ಕುರಿತು ತಾವೇ ನಿರ್ಮಿಸಿದ ಆಹುತಿ ಹಾಗೂ ಬಸಪ್ಪನವರ್ ಐ ಎ ಎಸ್ ಎನ್ನುವ ಎರಡು ಕಿರುಚಿತ್ರಗಳನ್ನು ಪ್ರದರ್ಶನ ಮಾಡುತ್ತಾರೆ. ಬಳಿಕ ವಿಶ್ವನಾಥ್ ಹಿರೇಗೌಡರ್, ಜನರಿಗೆ ಕುಡಿತದ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡುತ್ತಾರೆ. ಈ ಮೂಲಕ ವಿಶ್ವನಾಥ್ ಹಿರೇಗೌಡರ್, ಜನರಲ್ಲಿ ಕುಡಿತದಿಂದ ದೂರ ಇರಲು ಮನವಿ ಮಾಡುತ್ತಾರೆ.
ಮದ್ಯ ಮುಕ್ತ ಗ್ರಾಮಕ್ಕೆ ಸಿಪಿಐ ಹಿರೇಗೌಡರ ಎಂಟ್ರಿಗೆ ಕಾರಣ: ಇನ್ನು ಸಿಪಿಐ ವಿಶ್ವನಾಥ್ ಹಿರೇಗೌಡರ ಪಿ ಎಸ್ ಐ ಆಗಿದ್ದ ವೇಳೆ ಅವರ ಠಾಣೆಗಳಿಗೆ ಬರುತ್ತಿದ್ದ ಬಹುತೇಕ ಅಪರಾಧ ಪ್ರಕರಣಗಳಿಗೆ ಕುಡಿತವೇ ಮೂಲ ಕಾರಣವಾಗಿರುತ್ತಿದ್ದವು. ಪತಿ ಕುಡಿದು ಬಂದು ಪತ್ನಿ,ಮಕ್ಕಳಿಗೆ ಹೊಡೆಯುವುದು, ಪಾನಮತ್ತರಾಗಿ ವಾಹನ ಚಲಾಯಿಸಿ ಅಪಘಾತದಲ್ಲಿ ಮೃತಪಡುವುದು,ಕುಡಿತದ ಚಟಕ್ಕೆ ದಾಸರಾಗಿ ಆರೋಗ್ಯ ಹಾಳು ಮಾಡಿಕೊಂಡಿರುವ ಪ್ರಕರಣಗಳು, ಕುಡಿತದ ಹಿನ್ನಲೆಯಲ್ಲಿ ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಹೀಗೆ ಹತ್ತು ಹಲವಾರು ಪ್ರಕರಣಗಳು ಕುಡಿತದಿಂದಲೇ ಆಗಿರುತ್ತಿದ್ದವು. ಹೀಗಾಗಿ ಕುಡಿತವನ್ನು ಕಡಿಮೆ ಮಾಡಿಸಿದರೆ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಿಸಬಹುದು ಎನ್ನುವ ಉದ್ದೇಶದಿಂದ ಮದ್ಯಮುಕ್ತ ಗ್ರಾಮಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಆ ಮೂಲಕ ಇದೀಗ ವಿಶ್ವನಾಥ್ ಹಿರೇಗೌಡರ ಅನೇಕ ಗ್ರಾಮಗಳನ್ನು ಮದ್ಯಮುಕ್ತ ಗ್ರಾಮಗಳನ್ನಾಗಿ ಮಾಡುವ ಮೂಲಕ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡಿಸಿದ್ದಾರೆ.
Chhatrapati Shivaji Jayanti ಬೆಳಗಾವಿಯಲ್ಲಿ ಸತತ 12 ಗಂಟೆಗಳ ಕಾಲ ಅದ್ಧೂರಿ
ಯಾವೆಲ್ಲ ಗ್ರಾಮಗಳು ಮದ್ಯಪಾನ ಮುಕ್ತವಾಗಿವೆ: ಪೊಲೀಸ್ ಇಲಾಖೆ ಸಿಪಿಐ ವಿಶ್ವನಾಥ್ ಹಿರೇಗೌಡರ್ ಹಾಗೂ ಇತರ ಪೊಲೀಸ್ ಅಧಿಕಾರಿಗಳ ನಿರಂತರ ಜಾಗೃತಿಯಿಂದ ಕೊಪ್ಪಳ ಜಿಲ್ಲಾದ್ಯಂತ 60ಕ್ಕೂ ಹೆಚ್ಚು ಗ್ರಾಮಗಳು ಮದ್ಯಮುಕ್ತವಾಗಿವೆ. ಕೊಪ್ಪಳ ತಾಲೂಕಿನ ಕಾಟ್ರಳ್ಳಿ, ಕುಣಿಕೇರಿ, ನೆಲೋಗಿಪುರ ಗ್ರಾಮಗಳು 'ಮದ್ಯಪಾನ ಮುಕ್ತ ಗ್ರಾಮಗಳಾಗಿದ್ದು, ಗ್ರಾಮಸ್ಥರು ಮದ್ಯಮುಕ್ತ ಗ್ರಾಮ ಎಂದು ಘೋಷಿಸಿ ಬೋರ್ಡ್ ಹಾಕಿಕೊಂಡಿದ್ದಾರೆ.
ಗ್ರಾಮದಿಂದ ಗ್ರಾಮಕ್ಕೆ ಹಬ್ಬಿದ ಮದ್ಯ ಮುಕ್ತ ಗ್ರಾಮ ಅಭಿಯಾನ: ಇನ್ನು ಸಿಪಿಐ ವಿಶ್ವನಾಥ್ ಹಿರೇಗೌಡರ್ ಪಿ ಎಸ್ ಐ ಆಗಿ ಮುನಿರಾಬಾದ,ಕುಕನೂರು ಹಾಗೂ ಕುಷ್ಟಗಿಯಲ್ಲಿ ಸೇವೆ ಸಲ್ಲಿಸುವ ವೇಳೆಯಲ್ಲಿಯೇ ಮದ್ಯಪಾನದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬರುತ್ತಿದ್ದಾರೆ. ಇನ್ನು ಸಿಪಿಐ ಆಗಿ ಬಡ್ತಿ ಹೊಂದಿ ಕೊಪ್ಪಳಕ್ಕೆ ಬಂದ ಮೇಲೂ ಸಹ ಮದ್ಯಪಾನದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಆರಂಭ ಮಾಡಿದರು.ಅದರ ಫಲವಾಗಿ ಹೈದರ್ ನಗರ ಮದ್ಯಪಾನ ಮುಕ್ತ ಎಂದು ಘೋಷಿಸಿಕೊಂಡಿತು. ನಂತರ ತಿಗರಿ ಗ್ರಾಮದಲ್ಲಿಯೂ ಅದೇ ಬದಲಾವಣೆ ಗಾಳಿ ಬೀಸಿತು.ಅದೇ ರೀತಿಯಾಗಿ ಗ್ರಾಮದಿಂದ ಗ್ರಾಮದಲ್ಲಿ ವಿಶ್ವನಾಥ್ ಹಿರೇಗೌಡರ ಆಶಯಕ್ಕೆ ಯುವಕರು,ಗ್ರಾಮಸ್ಥರು ಸಾಥ್ ನೀಡುತ್ತಾ ತಮ್ಮ ಗ್ರಾಮಗಳನ್ನು ಮದ್ಯ ಮುಕ್ತ ಗ್ರಾಮಗಳನ್ನಾಗಿ ಘೋಷಿಸಿಕೊಳ್ಳುತ್ತಿದ್ದಾರೆ.
Mangaluru ವಿದ್ಯಾರ್ಥಿನಿ ಆತ್ಮಹತ್ಯೆಗೆ ಲವ್ ಜಿಹಾದ್ ಕಾರಣ: ವಿಎಚ್ ಪಿ ಆರೋಪ
ಮರಳಿ ಮದ್ಯ ಮಾರಾಟ ಮಾಡಿದರೆ ದಂಡ: ಇನ್ನು ಮದ್ಯಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡಿದ ಬಳಿಕ ಯಾರಾದರೂ ಮದ್ಯ ಮಾರಾಟ ಮಾಡಿದರೆ ಏನು ಎನ್ನುವ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಹಾಗೊಂದು ವೇಳೆ ಮದ್ಯ ಮುಕ್ತ ಘೋಷಣೆ ಮಾಡಿದ ನಂತರ ಆ ಗ್ರಾಮದಲ್ಲಿ ಯಾರಾದರೂ ಮದ್ಯ ಮಾರಾಟ ಮಾಡಿದರೆ, ಮದ್ಯ ಸೇವಿಸಿ ಗಲಾಟೆ ಮಾಡಿದರೆ ಗ್ರಾಮಸ್ಥರು ಅಂತವರಿಗೆ ದಂಡ ವಿಧಿಸಿ, ಎಚ್ಚರಿಕೆ ನೀಡುತ್ತಾರೆ. ಮೇಲಿಂದ ಮೇಲೆ ಮದ್ಯ ಸೇವಿಸಿದ ಪ್ರಕರಣ ಕಂಡು ಬಂದರೆ ಅಂತವರನ್ನು ಗ್ರಾಮದಿಂದ ಗಡಿಪಾರು ಮಾಡುವ ನಿರ್ಣಯವನ್ನು ಆಯಾ ಗ್ರಾಮಗಳ ಗ್ರಾಮಸ್ಥರು ಕೈಗೊಂಡಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಇದೀಗ ದಿನದಿಂದ ದಿನಕ್ಕೆ ಮದ್ಯಮುಕ್ತ ಗ್ರಾಮಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಜಿಲ್ಲೆಯಲ್ಲಿ ಹೊಸ ಪರಿವರ್ತನೆ ಗಾಳಿ ಬೀಸಿದ್ದು, ಸಿಪಿಐ ವಿಶ್ವನಾಥ್ ಹಿರೇಗೌಡರ ಅವರ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ ಕಾರ್ಯಕ್ಕೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ಇಂತಹ ಅಧಿಕಾರಿಗಳು ಜಿಲ್ಲೆಗೆ ಒಬ್ಬರಂತೆ ಇರಬೇಕು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಏನಿವೇ ಮದ್ಯಮುಕ್ತ ಗ್ರಾಮಗಳನ್ನು ಮಾಡುವ ಮೂಲಕ ಪೊಲೀಸ್ ಇಲಾಖೆಯ ಕೆಲಸದ ಜೊತೆಗೆ ಸಾಮಾಜಿಕ ಕೆಲಸ ಮಾಡುತ್ತಿರುವ ವಿಶ್ವನಾಥ್ ಹಿರೇಗೌಡರ ಅವರ ಕಾರ್ಯಕ್ಕೆ ಹ್ಯಾಟ್ಸ್ ಆಫ್ ಹೇಳಲೇಬೇಕು.