ಸ್ನೇಹಿತನೊಂದಿಗೆ ಪತ್ನಿ ಅಕ್ರಮ ಸಂಬಂಧ : ರೆಡ್ ಹ್ಯಾಂಡ್‌ಆಗಿ ಸಿಕ್ಕಳು ಅವನ ಜೊತೆ

By Kannadaprabha News  |  First Published Apr 9, 2021, 3:24 PM IST

ಆತನ ಸ್ನೇಹಿತ ಹಾಗೂ ಪತ್ನಿ ಅವನದ್ದೆ ಮನೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.  ಇದರಿಂದ ರೊಚ್ಚಿಗೆದ್ದ ಗಂಡ ಕೈಗೆ ಸಿಕ್ಕಿದ್ದನ್ನು ಎತ್ತಿಕೊಂಡು ಮಾರಣಾಂತಿಕ ಹಲ್ಲೆ ನಡೆಸಿದ್ದ.


ಮಂಡ್ಯ (ಏ.09):  ಪತ್ನಿಯ ಅಕ್ರಮ ಸಂಬಂಧ ಬಗ್ಗೆ ಶಂಕೆ ವ್ಯಕ್ತಪಡಿಸಿದ ರೌಡಿ ಶೀಟರ್‌ವೊಬ್ಬ ಇಬ್ಬರ ಮೇಲೆ ದೋಸಾ ತವಾದಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದ ಹೊಸಹಳ್ಳಿ ಬಡಾವಣೆಯಲ್ಲಿ ನಡೆದಿದೆ.

ಹರ್ಷಿತಾ ಹಾಗೂ ಆಕೆಯ ಪ್ರಿಯಕರ ಚೇತನ್‌ ಹಲ್ಲೆಗೊಳಗಾದವರು. ನಾಗೇಂದ್ರ ಅಲಿಯಾಸ್‌ ಕುಳ್ಳನಾಗ ಇಬ್ಬರ ಮೇಲೆ ಹಲ್ಲೆ ಮಾಡಿದ ರೌಡಿಶೀಟರ್‌ ಆಗಿದ್ದಾನೆ. ತನ್ನ ಮನೆಯಲ್ಲೇ ಪ್ರಿಯಕರನೊಂದಿಗೆ ಸಿಕ್ಕಿಬಿದ್ದಿದ್ದನ್ನು ಕಂಡು ರೋಷಾವೇಷಗೊಂಡ ನಾಗೇಂದ್ರ ಮನಸೋಇಚ್ಛೆ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಚೇತನ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು.

Tap to resize

Latest Videos

ಹಲ್ಲೆ ನಡೆಸಲು ರೌಡಿಶೀಟರ್‌ ನಾಗೇಂದ್ರನಿಗೆ ಸ್ನೇಹಿತ ಯೋಗೇಶ್‌ ಅಲಿಯಾಸ್‌ ಕಟ್ಟೆಯೋಗೇಶ್‌ ಸಾಥ್‌ ನೀಡಿದ್ದನು ಎನ್ನಲಾಗಿದ್ದು, ಹಲ್ಲೆ ನಡೆಸುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಮಂಡ್ಯ ಪೂರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ನಾಗೇಂದ್ರ, ಯೋಗೇಶ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ನಾಗೇಂದ್ರನಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಮಿಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಆರೋಪಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ತನ್ನ ಮನೆಗೆ ಬಂದ ಪ್ರೇಯಸಿ ಉಸಿರುಗಟ್ಟಿಸಿ ಕೊಂದ : ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ! ...

ಘಟನೆಯ ಹಿನ್ನೆಲೆ:  ಒಂಬತ್ತು ವರ್ಷಗಳ ಹಿಂದೆ ನಾಗೇಂದ್ರ ಹಾಗೂ ಹರ್ಷಿತಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಹರ್ಷಿತಾ ಶಾಲೆಗೆ ಹೋಗುವ ದಿನಗಳಲ್ಲೇ ಇಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ರೌಡಿಶೀಟರ್‌ ಎಂಬ ಕಾರಣಕ್ಕೆ ಪ್ರೀತಿಯ ಬಲೆಯಲ್ಲಿ ಹರ್ಷಿತಾ ಬಿದ್ದಿದ್ದಳು. ಪದವಿ ವ್ಯಾಸಂಗದ ವೇಳೆ ಇವರಿಬ್ಬರ ಪ್ರೀತಿ ಮನೆಯವರಿಗೆ ಗೊತ್ತಾಗಿತ್ತು. ನಾಗೇಂದ್ರನೊಂದಿಗೆ ಮದುವೆ ಮಾಡಿಕೊಡಲು ಹರ್ಷಿತಾ ಮನೆಯವರು ಸಂಪೂರ್ಣವಾಗಿ ನಿರಾಕರಿಸಿದ್ದರು ಎಂದು ತಿಳಿದುಬಂದಿದೆ.

ನಾಗೇಂದ್ರನ ಸಹವಾಸದಿಂದ ಹರ್ಷಿತಾಳನ್ನು ದೂರವಿಡಲು ಪೋಷಕರು ಸಾಕಷ್ಟುಪ್ರಯತ್ನಿಸಿದರು. ಆದರೂ ಹರ್ಷಿತಾ ಓಡಿಹೋಗಿ ನಾಗೇಂದ್ರನನ್ನೇ ವಿವಾಹವಾಗಿದ್ದಳು. ಮದುವೆ ಬಳಿಕ ಇಬ್ಬರೂ ಬೆಂಗಳೂರಲ್ಲಿ ವಾಸವಾಗಿದ್ದರು. ನಾಗೇಂದ್ರ ಕ್ಯಾಬ್‌ ಓಡಿಸುತ್ತಾ ಸಂಸಾರ ನಿರ್ವಹಣೆ ಮಾಡುತ್ತಿದ್ದನು. ಹರ್ಷಿತಾ ಕೂಡ ಸಣ್ಣಪುಟ್ಟಸೀರಿಯಲ್‌ಗಳಲ್ಲಿ ನಟನೆ ಮಾಡುತ್ತಾ ಸಂಸಾರ ನಿರ್ವಹಣೆಗೆ ಹೆಗಲಾಗಿದ್ದಳು ಎನ್ನಲಾಗಿದೆ.

ಚೇತನ್‌ ಪರಿಚಯ :  ಇದೇ ಸಮಯದಲ್ಲಿ ಪತಿ ನಾಗೇಂದ್ರನ ಮೂಲಕ ಚೇತನ್‌ ಎಂಬಾತನ ಪರಿಚಯವಾಯಿತು. ಇಬ್ಬರೂ ಚಿಕ್ಕಂದಿನಿಂದ ಸ್ನೇಹಿತರಾಗಿದ್ದರಿಂದ ಹರ್ಷಿತಾ ಜೊತೆಗೂ ಪರಿಚಯ ಬೆಳೆದಿತ್ತು. ಚೇತನ್‌ ಹಾಗೂ ನಾಗೇಂದ್ರ ಒಟ್ಟಿಗೆ ಚಾಲಕ ವೃತ್ತಿ ಮಾಡುತ್ತಿದ್ದರು. ನಾಗೇಂದ್ರನ ಮನೆಗೆ ಚೇತನ್‌ ಆಗಾಗ್ಗೆ ಬಂದು ಹೋಗುತ್ತಿದ್ದನು ಎಂದು ಹೇಳಲಾಗಿದೆ. ಮಗು ಹುಟ್ಟಿದ ಬಳಿಕ ಹರ್ಷಿತಾ ಪೋಷಕರು ಮಗಳು-ಅಳಿಯನೊಂದಿಗೆ ವಿರಸ ಮರೆತು ಒಂದಾಗಿದ್ದರು. ಆರ್ಥಿಕವಾಗಿ ಚೆನ್ನಾಗಿದ್ದರಿಂದ ಅಳಿಯನಿಗೆ ಸ್ವಂತ ಉದ್ಯೋಗ ಮಾಡಿಕೊಡುತ್ತೇವೆ. ಮಂಡ್ಯಕ್ಕೆ ಬಂದುಬಿಡುವಂತೆ ಪೋಷಕರು ಹರ್ಷಿತಾಗೆ ತಿಳಿಸಿದ್ದರು. ಅದರಂತೆ ದಂಪತಿ ಮಂಡ್ಯಕ್ಕೆ ಬಂದು ಹೊಸಹಳ್ಳಿ ಬಡಾವಣೆಯಲ್ಲಿ ವಾಸವಾಗಿದ್ದರು.

ಇಬ್ಬರ ನಡುವೆ ಅಕ್ರಮ ಸಂಬಂಧ :  ಆದರೆ, ಕಾರಣಾಂತರಗಳಿಂದ ಮತ್ತೆ ಕ್ಯಾಬ್‌ ಓಡಿಸಲು ನಾಗೇಂದ್ರ ಬೆಂಗಳೂರಿಗೆ ತೆರಳಿದ್ದನು. ಈ ನಡುವೆ ಚೇತನ್‌ ಬೆಂಗಳೂರು ಬಿಟ್ಟು ಮಂಡ್ಯಕ್ಕೆ ಬಂದಿದ್ದನು. ಮೊದಲೇ ಪರಿಚಯ ಇದ್ದ ಕಾರಣ ಹರ್ಷಿತಾ ಮತ್ತು ಚೇತನ್‌ ನಡುವೆ ಸ್ನೇಹ ಮುಂದುವರೆದಿತ್ತು. ಸ್ನೇಹ ಪ್ರೀತಿಗೆ ತಿರುಗಿ ಇಬ್ಬರ ಮಧ್ಯೆ ಅಕ್ರಮ ಸಂಬಂಧ ಬೆಳೆದಿತ್ತು ಎಂದು ತಿಳಿದುಬಂದಿದೆ.

ಹೊಸಹಳ್ಳಿಯ ಮನೆಗೆ ಚೇತನ್‌ ಆಗಾಗ ಬಂದು ಹೋಗುವ ವಿಚಾರ ಬೆಂಗಳೂರಲ್ಲಿ ಕ್ಯಾಬ್‌ ಚಾಲನೆ ಮಾಡುತ್ತಿದ್ದ ನಾಗೇಂದ್ರನಿಗೂ ತಿಳಿದಿತ್ತು. ಸ್ನೇಹಿತನೆಂಬ ಕಾರಣಕ್ಕೆ ತಪ್ಪು ತಿಳಿಯದೆ ಸುಮ್ಮನಾಗಿದ್ದನು. ಆದರೆ, ದಿನಕಳೆದಂತೆ ಹೆಂಡತಿ ನಡವಳಿಕೆ ಬದಲಾಗಿತ್ತು. ಸದಾ ಫೋನ್‌ನಲ್ಲಿ ಮಾತನಾಡುವುದು, ಗಂಡನ ಬಗ್ಗೆ ಅಸಡ್ಡೆ ತೋರುತ್ತಿದ್ದರಿಂದ ಇಬ್ಬರ ನಡುವೆ ಜಗಳ ಏರ್ಪಟ್ಟಿತ್ತು ಎನ್ನಲಾಗಿದೆ.

ಪತಿಗೆ ಸಿಕ್ಕಿದ ಲವ್‌ ಚಾಟ್‌ :  ಈ ನಡುವೆ ಹರ್ಷಿತಾ ಫೋನ್‌ನಲ್ಲಿ ಚೇತನ್‌ ಜೊತೆಗಿನ ಲವ್‌ ಚಾಟ್‌ ಸಿಕ್ಕಿತ್ತು. ಅಲ್ಲಿಂದ ಹೆಂಡತಿ ಮೇಲೆ ಅನುಮಾನ ಹೆಚ್ಚಾಯಿತು. ಈ ವಿಚಾರವಾಗಿ ಚೇತನ್‌ಗೂ ಎಚ್ಚರಿಕೆ ನೀಡಿದ್ದ. ಆದರೂ ಇಬ್ಬರ ಸಂಬಂಧ ಮುಂದುವರೆದಿತ್ತು, ಇದು ನಾಗನಿಗೆ ಸಿಟ್ಟು ತರಿಸಿತ್ತು. ಏ.4ರ ರಾತ್ರಿ ತನ್ನ ಮನೆಯಲ್ಲಿ ಚೇತನ್‌ ಇದ್ದ ವೇಳೆ ಮನೆಗೆ ಬಂದ ನಾಗೇಂದ್ರನಿಗೆ ಇಬ್ಬರೂ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದರು. ಈ ಸಮಯದಲ್ಲಿ ರೌದ್ರಾವತಾರ ತಾಳಿದ ನಾಗೇಂದ್ರ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದನು. ಇದರಲ್ಲಿ ಚೇತನ್‌ ಗಂಭೀರವಾಗಿ ಗಾಯಗೊಂಡಿದ್ದನು. ಘಟನೆ ಬಳಿಕ ಹೊಸಹಳ್ಳಿಯಲ್ಲಿರುವ ಮನೆಯನ್ನು ಹರ್ಷಿಕಾ ಖಾಲಿ ಮಾಡಿದ್ದಾಳೆ ಎಂದು ಗೊತ್ತಾಗಿದೆ.

click me!