ಉಸ್ತುವಾರಿ ಸಚಿವರ ಗಮನಕ್ಕೆ ಬಾರದೆ ವರ್ಗಾವಣೆ ದಂಧೆ

By Kannadaprabha News  |  First Published Jun 6, 2020, 11:21 AM IST

ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಬಾರದೆ ಜಿಲ್ಲೆಯಲ್ಲಿ ವರ್ಗಾವಣೆ ದಂಧೆ ನಡೆದಿದೆ ಎಂದು ಜೆಡಿಎಸ್‌ ಶಾಸಕ ಸಾ.ರಾ. ಮಹೇಶ್‌ ಆರೋಪಿಸಿದರು.


ಮೈಸೂರು(ಜೂ.06): ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಬಾರದೆ ಜಿಲ್ಲೆಯಲ್ಲಿ ವರ್ಗಾವಣೆ ದಂಧೆ ನಡೆದಿದೆ ಎಂದು ಜೆಡಿಎಸ್‌ ಶಾಸಕ ಸಾ.ರಾ. ಮಹೇಶ್‌ ಆರೋಪಿಸಿದರು.

ಮೈಸೂರಿನ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಧಿಕೃತ, ಅನಧಿಕೃತ ಉಸ್ತುವಾರಿ ಸಚಿವರಿದ್ದು, ವರ್ಗಾವಣೆ ದಂಧೆ ಜೋರಾಗಿ ನಡೆಯುತ್ತಿದೆ. ಎರಡು ಕೋಟಿಗೆ ಅಬಕಾರಿ ಡಿಸಿ ಹುದ್ದೆ ಮಾರಾಟವಾಗಿದೆ. ಜಿಲ್ಲೆಗೆ ಇಬ್ಬರು ಉಸ್ತುವಾರಿ ಸಚಿವರಿದ್ದಾರೆ. ಒಬ್ಬರು ಅನಧಿಕೃತ, ಮತ್ತೊಬ್ಬರು ಅಧಿಕೃತವೆಂದು ಮಾಜಿ ಸಚಿವ ಎಚ್‌. ವಿಶ್ವನಾಥ್‌ ಅವರ ಹೆಸರು ಪ್ರಸ್ತಾಪಿಸದೆ ಟೀಕಿಸಿದರು.

Tap to resize

Latest Videos

'ಮಹಾರಾಷ್ಟ್ರದಿಂದ ಮರಳುವವರಿಗೆ ಇನ್ಮುಂದೆ ಲಿಮಿಟೆಡ್ ಪಾಸ್'..!

ಅಬಕಾರಿ ಡಿಸಿ ಮೈಸೂರಿಗೆ ಬಂದು ಕೇವಲ 9 ತಿಂಗಳಾಗಿತ್ತು. ಏಕಾಏಕಿ ಯಾಕೇ ವರ್ಗಾವಣೆ ಮಾಡಲಾಯಿತು? ಯಾರು ಪತ್ರ ವ್ಯವಹಾರ ಮಾಡಿದ್ದು? ಈ ಪ್ರಕರಣದಲ್ಲಿ ಸುಮಾರು ಎರಡು ಕೋಟಿ ರು. ವ್ಯವಹಾರ ನಡೆದಿರುವ ಮಾಹಿತಿ ಇದೆ ಎಂದು ಅವರು ಆರೋಪಿಸಿದರು.

ಲೋಕೋಪಯೋಗಿ ಇಲಾಖೆ ಎಇ ಹುದ್ದೆಗೆ ಇತ್ತೀಚೆಗೆ ನೇಮಕವಾಗಿದ್ದು, . 50 ಲಕ್ಷ ಹಣ ಯಾರಿಗೆ ಹೋಗಿದೆ? ವರ್ಗಾವಣೆಯ ದಂಧೆಯಲ್ಲಿ ತೊಡಗಿರುವ ಆ ಮಹಾಶಯನ ಹೆಸರನ್ನ ನಾನು ಹೇಳುವುದಿಲ್ಲ. ಹುಣಸೂರಿನ ಜನ ಅವರನ್ನ 90 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದರು. ಈಗ ಅದರ ಅರ್ಧದಷ್ಟುಮತಗಳಿಂದ ಸೋಲಿಸಿದ್ದಾರೆ ಎಂದು ಪರೋಕ್ಷವಾಗಿ ಎಚ್‌. ವಿಶ್ವನಾಥ್‌ ಮೇಲೆ ಕಿಡಿಕಾರಿದರು.

ನನಗೆ ಗೊತ್ತಿಲ್ಲದೇ ಯಾವುದೇ ವರ್ಗಾವಣೆಯೂ ಆಗಿಲ್ಲ- ಎಸ್‌ಟಿಎಸ್‌

ಜಿಲ್ಲೆಯಲ್ಲಿ ನನಗೆ ಗೊತ್ತಿಲ್ಲದೇ ಯಾವುದೇ ವರ್ಗಾವಣೆಯೂ ಆಗಿಲ್ಲ ಎನ್ನುವ ಮೂಲಕ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ಜೆಡಿಎಸ್‌ ಶಾಸಕ ಸಾ.ರಾ. ಮಹೇಶ್‌ ಅವರ ಆರೋಪವನ್ನು ತಳ್ಳಿ ಹಾಕಿದರು.

ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅಧಿಕೃತವಾಗಿ ನನ್ನನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ್ದಾರೆ. ಜಿಲ್ಲೆಗೆ ಇಬ್ಬರು ಮಂತ್ರಿಯೂ ಇಲ್ಲ. ಅಧಿಕೃತ, ಅನಧಿಕೃತ ಮಂತ್ರಿ ಅನ್ನುವುದು ಇಲ್ಲ. ರಾಜಕಾರಣಕ್ಕಾಗಿ ಏನನ್ನಾದರೂ ಮಾತನಾಡಬೇಕೆಂತಲೇ ಹೇಳಿದರೆ ಅದಕ್ಕೆ ಉತ್ತರ ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.

ಗ್ರೀನ್ ಝೋನ್ ಆಗಿದ್ದ ಉಡುಪಿಯಲ್ಲಿ ಮುಂದುವರಿದ ಕೊರೋನಾ ಅಟ್ಟಹಾಸ: ಒಂದೇ ದಿನ 204 ಸೋಂಕಿತರು

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ನನ್ನನ್ನು ಜಿಲ್ಲೆಗೆ ಉಸ್ತುವಾರಿಯನ್ನಾಗಿ ನೇಮಕ ಮಾಡಿದ್ದಾರೆ. ಜವಾಬ್ದಾರಿ ತೆಗೆದುಕೊಂಡ ಮೇಲೆ ಎಲ್ಲರನ್ನ ವಿಶ್ವಾಸಕ್ಕೆ ಪಡೆದು ಅಭಿವೃದ್ಧಿ ಕಡೆಗೆ ಗಮನಹರಿಸಿದ್ದೇನೆ. ಅಧಿಕಾರಿಗಳ ವರ್ಗಾವಣೆಗೆ ಅಷ್ಟುಮಹತ್ವ ಕೊಡಬೇಕಾದ ಅಗತ್ಯವಿಲ್ಲ. ಅನಗತ್ಯವಾದ ವಿಚಾರದಲ್ಲಿ ಕಾಲಾಹರಣ ಮಾಡಬಾರದು ಎಂದರು.

ನನ್ನ ಬಳಿ ಯಾರು ಬಂದು ವರ್ಗಾವಣೆ ಮಾಡಿಸಿ ಅಂತ ಕೇಳಿಲ್ಲ. ಅಧಿಕಾರಿಗಳ ವರ್ಗಾವಣೆಯಲ್ಲಿ ದಂಧೆ ನಡೆಯುತ್ತಿರುವುದು ನನಗೆ ಗೊತ್ತಿಲ್ಲ. ತೆಗೆದುಕೊಂಡಿರುವವರಿಗೆ ದಂಧೆ ಗೊತ್ತಿರಬಹುದು. ಅಬಕಾರಿ ಡಿಸಿ ಬಗ್ಗೆ ದೂರು ಬಂದಿದ್ದರ ಆಧಾರದ ಮೇಲೆ ವರ್ಗಾವಣೆ ಆಗಿದೆ. ನನ್ನ ಗಮನಕ್ಕೆ ತಂದಿಯೇ ವರ್ಗಾವಣೆ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

click me!