
ಬಾಗಲಕೋಟೆ; ಅಕ್ರಮ ಭ್ರೂಣಲಿಂಗ ಪತ್ತೆ ಹಾಗೂ ಗರ್ಭಪಾತದಂತಹ ಗಂಭೀರ ಸಾಮಾಜಿಕ ಅಪರಾಧ ತಡೆಯುವ ನಿಟ್ಟಿನಲ್ಲಿ ಬಾಗಲಕೋಟೆ ಜಿಲ್ಲಾಡಳಿತವು ಬೃಹತ್ ಕಾರ್ಯಾಚರಣೆ ನಡೆಸಿದ್ದು, ನೆರೆ ರಾಜ್ಯದಲ್ಲಿ ಸಕ್ರಿಯವಾಗಿದ್ದ ಅಂತರರಾಜ್ಯ ಜಾಲವನ್ನು ಯಶಸ್ವಿಯಾಗಿ ಭೇದಿಸಿದೆ. ಮಹಾಲಿಂಗಪೂರದಿಂದ ಆರಂಭವಾದ ಈ ಕಾರ್ಯಾಚರಣೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ತಂಡವು ತಡರಾತ್ರಿ ಮಹಾರಾಷ್ಟ್ರದ ಗಡಿ ಭಾಗಕ್ಕೆ ತೆರಳಿ ಅಕ್ರಮ ಅಡ್ಡೆಗಳ ಮೇಲೆ ದಿಢೀರ್ ದಾಳಿ ನಡೆಸಿದೆ.
ಈ ಸಾಹಸಮಯ ಕಾರ್ಯಾಚರಣೆಯನ್ನು ಆರೋಗ್ಯ, ಕಂದಾಯ ಹಾಗೂ ಪೊಲೀಸ್ ಇಲಾಖೆಗಳ ಜಂಟಿ ಸಹಯೋಗದೊಂದಿಗೆ ನಡೆಸಲಾಗಿತ್ತು. ದಾಳಿಯ ವೇಳೆ ಅಪರಾಧಿಗಳು ಎಚ್ಚೆತ್ತುಕೊಳ್ಳದಂತೆ ತಡೆಯಲು ಅಧಿಕಾರಿಗಳು ಅತ್ಯಂತ ಚಾಣಾಕ್ಷ ತಂತ್ರಗಾರಿಕೆ ರೂಪಿಸಿದ್ದಾರೆ. ತಂಡದಲ್ಲಿದ್ದ ಮಹಿಳಾ ಅಧಿಕಾರಿಗಳು ಸೇರಿದಂತೆ ವಿವಿಧ ಸಿಬ್ಬಂದಿಗಳು ವಿಭಿನ್ನ ಸೋಗು ಹಾಗೂ ವೇಷ ಧರಿಸಿ ಅಕ್ರಮ ತಾಣಗಳಿಗೆ ನುಗ್ಗುವ ಮೂಲಕ ಜಾಲದ ಸುಳಿವನ್ನು ರಟ್ಟು ಮಾಡಿದರು.
ಮಹಾಲಿಂಗಪೂರ ಕೇಂದ್ರವಾಗಿಸಿಕೊಂಡು ಸಕ್ರಿಯವಾಗಿದ್ದ ಈ ಜಾಲವು ಕಾನೂನಿನ ಕ್ರಮದಿಂದ ಬಚಾವಾಗಲು ಮಹಾರಾಷ್ಟ್ರದ ಗಡಿ ಪ್ರದೇಶಗಳನ್ನು ಬಳಸಿಕೊಳ್ಳುತ್ತಿತ್ತು. ಈ ಕುರಿತು ಲಭಿಸಿದ ಖಚಿತ ಮಾಹಿತಿಯಾಧಾರದಲ್ಲಿ ಬಾಗಲಕೋಟೆ ಜಿಲ್ಲಾಡಳಿತದ ತಂಡವು ಮಹಾರಾಷ್ಟ್ರದ ಜತ್ತ ತಾಲೂಕಿನ ಜಾಡರ ಬಬಲಾದಿ ಹಾಗೂ ಕರ್ಜಿಗಿ ಸೇರಿದಂತೆ ವಿವಿಧ ಶಂಕಿತ ಪ್ರದೇಶಗಳ ಮೇಲೆ ತಡರಾತ್ರಿ ದಾಳಿ ನಡೆಸಿತು. ಜಮಖಂಡಿ ಸಹಾಯಕ ಆಯುಕ್ತರಾದ ಶ್ವೇತಾ ಬಿಡಿಕರ್, ಉಪನಿರ್ದೇಶಕಿ ಶೋಭಾ, ಜಿಲ್ಲಾ ಆರೋಗ್ಯ ಅಧಿಕಾರಿ ಸುವರ್ಣಾ, ರಬಕವಿ ಬನಹಟ್ಟಿ ತಹಶೀಲ್ದಾರ ಗಿರೀಶ ಸಾಧ್ವಿ ಹಾಗೂ ಆರೋಗ್ಯ ಸೌಧದ ಅಧಿಕಾರಿ ಮನು ನೇತೃತ್ವದ ತಂಡ ಈ ದಾಳಿಯಲ್ಲಿ ಪಾಲ್ಗೊಂಡಿತ್ತು.
ಈ ಹಿಂದೆ ಅಕ್ರಮ ಭ್ರೂಣಲಿಂಗ ಪತ್ತೆ ಪ್ರಕರಣದಲ್ಲಿ ಸಿಲುಕಿದ್ದ ಮಹಾಲಿಂಗಪೂರದ ಕವಿತಾ ಎಂಬ ನಕಲಿ ವೈದ್ಯೆಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಈ ಅಂತರರಾಜ್ಯ ಜಾಲದ ಸತ್ಯಾಸತ್ಯತೆ ಬೆಳಕಿಗೆ ಬಂದಿತ್ತು. ಆಕೆ ನೀಡಿದ ಖಚಿತ ಸುಳಿವಿನ ಆಧಾರದ ಮೇಲೆಯೇ ಮಹಾರಾಷ್ಟ್ರದಲ್ಲಿದ್ದ ಅಡ್ಡೆಗಳನ್ನು ಗುರುತಿಸಿ ಕಾರ್ಯಾಚರಣೆ ರೂಪಿಸಲಾಗಿತ್ತು.
ದಾಳಿಯ ಸಮಯದಲ್ಲಿ ಸ್ಥಳದಲ್ಲಿದ್ದ ನಿಖಿಲ್ ತೇಲಿ ಹಾಗೂ ದಾನಮ್ಮ ತೇಲಿ ಎಂಬ ಇಬ್ಬರು ಆರೋಪಿಗಳನ್ನು ಅಧಿಕಾರಿಗಳು ಬಂಧಿಸಿದ್ದು, ಭ್ರೂಣಲಿಂಗ ಪತ್ತೆಗೆ ಬಳಸಲಾಗುತ್ತಿದ್ದ ಸ್ಕ್ಯಾನಿಂಗ್ ಯಂತ್ರವನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಮಹಾರಾಷ್ಟ್ರದ ಉಮದಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆ ವೇಳೆ ಈ ಜಾಲದ ಮೂಲ ಆರೋಪಿ ಸಂಜಯ್ ವಾಘ್ಮೋರೆ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಅಧಿಕಾರಿಗಳ ಶೋಧ ಕಾರ್ಯಾಚರಣೆ ಮುಂದುವರಿದಿದೆ.