
ಕೋಲಾರ: ಗ್ರಾಮೀಣ ಪ್ರತಿಭೆಗಳು ನ್ಯಾಷನಲ್, ಇಂಟರ್ ನ್ಯಾಷನಲ್ ಮಟ್ಟಕ್ಕೂ ಬೆಳೆಯಬಹುದು ಎಂದು ಚಿನ್ನದ ನಾಡಿನ ಮಗಳು ಸಾಬೀತುಪಡಿಸಿದ್ದಾಳೆ. ನವದೆಹಲಿಯಲ್ಲಿ ಸೋಮವಾರ ನಡೆದ 'ಪ್ರೈಡ್ ಆಫ್ ಇಂಡಿಯಾ - ಮಿಸ್ ಟೀನ್ ಇಂಡಿಯಾ 2026' ಸ್ಪರ್ಧೆಯಲ್ಲಿ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕು ಹೊಸಹುಡ್ಯ ಗ್ರಾಮದ ತೇಜಶ್ರೀ ವಿಜೇತಳಾಗಿ, ಮುಂದಿನ ವರ್ಷ ಇಂಡೋನೇಷ್ಯಾದಲ್ಲಿ ನಡೆಯುವ 'ಮಿಸ್ ಪ್ರೀ-ಟೀನ್ ಇಂಡಿಪೆಂಡೆಂಟ್ ಇಂಟರ್‌ನ್ಯಾಷನಲ್' ಸ್ಪರ್ಧೆಗೆ ಆಯ್ಕೆಯಾಗಿ ಜಿಲ್ಲೆಗೆ ಹಿರಿಮೆ ತಂದಿದ್ದಾಳೆ.
ರೈತ ಕುಟುಂಬದ ಹರಿನಾಥ್ ರೂಪ ದಂಪತಿ ಪುತ್ರಿ ತೇಜಶ್ರೀ ಶಿವಮೊಗ್ಗದಲ್ಲಿ ನಡೆದ ಮಿಸ್ ಟೀನ್ ಕರ್ನಾಟಕದಲ್ಲಿ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ವಿಜೇತಳಾದ ಬೆನ್ನಲ್ಲೇ ಡಿಕೆ ಪೇಜೆಂಟ್ 2026ರ ಬ್ರಾಂಡ್ ಅಂಬಾಸಿಡರ್ ಆಗಿಯೂ ಆಯ್ಕೆಯಾಗಿದ್ದು, ಗ್ರಾಮಸ್ಥರು, ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಬಾಲಕರ 14 ರಿಂದ 17ನೇ ವಯಸ್ಸಿನ ವಯೋಮಿತಿಯ ಚೆಸ್ ವಿಭಾಗದಲ್ಲಿ ನಗರದ ಪ್ರತಿಷ್ಠಿತ ರಾಯಲ್ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಉತ್ತೇಜ್ ನಂದ, ನಿತಿನ್‌ರೆಡ್ಡಿ, ವಿಷ್ಣುವಂಶಿ ಹಾಗೂ ವಿಶ್ರುತ್‌ಗೌಡ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನಗರದ ಪ್ರತಿಷ್ಠಿತ ರಾಯಲ್ ಪ್ರೌಢಶಾಲೆಯ ಬಾಲಕರ 17ನೇ ವಯಸ್ಸಿನ ವಯೋಮಿತಿ ವಿಭಾಗದಲ್ಲಿ ಜೀಲಾನ್, ತ್ರಿಷಲ್‌ಕುಮಾರ್, ಮುನೇಶ್, ನವದೀಪ್ ಹಾಗೂ ದೀಪಕ್ ಆಯ್ಕೆಯಾಗಿದ್ದಾರೆ. ಈ ಎರಡೂ ತಂಡಗಳು ತಾಲೂಕು ಮಟ್ಟದ ಕ್ರೀಡೆಯಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು, ಎರಡೂ ತಂಡಗಳ ವಿದ್ಯಾರ್ಥಿಗಳನ್ನು, ತರಬೇತುದಾರರಾದ ಶ್ರೀನಿವಾಸರ್‌ರನ್ನು ಸಂಸ್ಥೆಯ ಆಡಳಿತ ಮಂಡಳಿ ಅಭಿನಂದಿಸಿದ್ದಾರೆ.
ಸಂಸ್ಥೆಯ ಅಧ್ಯಕ್ಷ ಕೆ.ರಾಮಕೃಷ್ಣ, ಕಾರ್ಯದರ್ಶಿ ಕೆ.ಆರ್.ಪ್ರೇಮಲತಾ, ಆಡಳಿತ ಮಂಡಳಿಯ ಕಾರ್ತಿಕ್ ರಾಮ್, ನಿಹಾರಿಕಾ, ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳನ್ನು ಮತ್ತು ತರಬೇತುದಾರರಿಗೆ ಜಿಲ್ಲಾಮಟ್ಟದಲ್ಲೂ ಶುಭವಾಗಲೆಂದು ಹಾರೈಸಿದ್ದಾರೆ.
ಚಿಂತಾಮಣಿ ತಾಲೂಕಿನ ಕೈವಾರದ ಭೈರವರೇಶ್ವರ ಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ವಾಲಿ ಬಾಲ್ ಪಂದ್ಯಾವಳಿಯಲ್ಲಿ ಶ್ರೀ ವಾಸವಿ ವಿದ್ಯಾಸಂಸ್ಥೆಯ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿನಿಯರು ಉತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಪಂದ್ಯಾವಳಿಯಲ್ಲಿ ಅತ್ಯುತ್ತಮ ಕ್ರೀಡಾ ಪ್ರತಿಭೆ ಪ್ರದರ್ಶಿಸಿದ ವಿದ್ಯಾರ್ಥಿನಿಯರು ಶಾಲೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿನಿಯರ ಸಾಧನೆಗೆ ಶ್ರೀ ವಾಸವಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ. ರಾಜ್ಯಮಟ್ಟದ ಪಂದ್ಯಾವಳಿಯಲ್ಲಿಯೂ ಉತ್ತಮ ಪ್ರದರ್ಶನ ನೀಡಿ ವಿಜಯ ಸಾಧಿಸಿ ಶಾಲೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಲಿ ಎಂದು ಆಡಳಿತ ಅಧಿಕಾರಿ ರೂಪಸಿ ರಮೇಶ್ ಮತ್ತು ಸಿಬ್ಬಂದಿ ವರ್ಗ ಶುಭ ಹಾರೈಸಿದ್ದಾರೆ.