ಶಶಿಕಲಾ ಬಂಧು ಇಳವರಸಿಗೂ ಅನಾರೋಗ್ಯ : ವಿಕ್ಟೋರಿಯಾಗೆ ಶಿಫ್ಟ್‌

Kannadaprabha News   | Asianet News
Published : Jan 24, 2021, 07:58 AM IST
ಶಶಿಕಲಾ ಬಂಧು ಇಳವರಸಿಗೂ ಅನಾರೋಗ್ಯ : ವಿಕ್ಟೋರಿಯಾಗೆ ಶಿಫ್ಟ್‌

ಸಾರಾಂಶ

ಶಶಿಕಲಾ ನಟರಾಜ್‌ಗೆ ಅನಾರೋಗ್ಯ ಉಂಟಾದ ಬೆನ್ನಲ್ಲೇ ಆಕೆಯ ಸಂಬಂಧಿ ಹಾಗೂ ಪರಪ್ಪನ ಅಗ್ರಹಾರ ಜೈಲಿನ ಸಹ ಕೈದಿ ಇಳವರಸಿಗೂ ಅನಾರೋಗ್ಯ ಉಂಟಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಬೆಂಗಳೂರು (ಜ.24 ):  ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಆಪ್ತೆ ಶಶಿಕಲಾ ನಟರಾಜ್‌ಗೆ ಕೊರೋನಾ ಸೋಂಕು ದೃಢಪಟ್ಟಬೆನ್ನಲ್ಲೇ ಆಕೆಯ ಸಂಬಂಧಿ ಹಾಗೂ ಪರಪ್ಪನ ಅಗ್ರಹಾರ ಜೈಲಿನ ಸಹಕೈದಿ ಇಳವರಸಿಗೂ ಕೊರೋನಾ ದೃಢಪಟ್ಟಿದ್ದು, ಶನಿವಾರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ 4 ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ಇದೇ ತಿಂಗಳ 27ರಂದು ಬಿಡುಗಡೆಯಾಗಬೇಕಿರುವ ಶಶಿಕಲಾಗೆ ಗುರುವಾರ ಕೊರೋನಾ ಸೋಂಕು ದೃಢಪಟ್ಟಿತ್ತು. ತೀವ್ರ ಉಸಿರಾಟ ತೊಂದರೆ ಹಾಗೂ ಶ್ವಾಸಕೋಶ ಸೋಂಕಿನಿಂದಾಗಿ ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಆಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ಜೈಲಿಂದ ಜ.27ರಂದು ಶಶಿಕಲಾ ಬಿಡುಗಡೆ: ವಕೀಲ ...

ಇದೀಗ ಶನಿವಾರ ಶಶಿಕಲಾ ನಟರಾಜ್‌ ಸಂಬಂಧಿ ಇಳವರಸಿಗೂ ಸೋಂಕು ದೃಢಪಟ್ಟಿದ್ದು, ಪರಪ್ಪನ ಅಗ್ರಹಾರ ಜೈಲು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಳವರಸಿಗೆ ಎಲ್ಲಾ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ್ದು ಆರೋಗ್ಯ ಉತ್ತಮವಾಗಿದೆ. ಕೊರೋನಾ ಲಕ್ಷಣಗಳೂ ಇಲ್ಲ. ಭದ್ರತಾ ಕಾರಣಗಳಿಗೆ ವಿಶೇಷ ಕೊಠಡಿಯಲ್ಲಿ ಇರಿಸಿ ನಿಗಾ ವಹಿಸಲಾಗಿದೆ. ವೈದ್ಯರು ನಿರಂತರವಾಗಿ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕಿ ಡಾ.ಸಿ.ಆರ್‌. ಜಯಂತಿ ಹೇಳಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾ ಹಾಗೂ ಇಳವರಸಿ ಒಂದೇ ಕೊಠಡಿಯಲ್ಲಿದ್ದರು. ಶಶಿಕಲಾಗೆ ಕೊರೋನಾ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಾಥಮಿಕ ಸಂಪರ್ಕಿತೆಯಾಗಿದ್ದ ಇಳವರಸಿಗೂ ಸೋಂಕು ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಶಶಿಕಲಾ ಆರೋಗ್ಯದಲ್ಲಿ ಸುಧಾರಣೆ:  ಇನ್ನು ತೀವ್ರ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಶಶಿಕಲಾ ನಟರಾಜನ್‌ ಆರೋಗ್ಯ ಸುಧಾರಿಸಿದೆ. ಶ್ವಾಸಕೋಶದಲ್ಲಿ ಸೋಂಕು ಹೆಚ್ಚಿದ್ದರಿಂದ ತುರ್ತು ನಿಗಾ ಘಟಕದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ತಾವೇ ಆಹಾರ ಸೇವಿಸುತ್ತಿದ್ದಾರೆ. ರಕ್ತದೊತ್ತಡ, ಮಧುಮೇಹ ಸೇರಿ ಎಲ್ಲವೂ ನಿಯಂತ್ರಣದಲ್ಲಿದೆ. ಹತ್ತು ದಿನಗಳ ನಂತರ ಮತ್ತೊಮ್ಮೆ ಕೋವಿಡ್‌ ಪರೀಕ್ಷೆ ನಡೆಸಲಾಗುವುದು. ಅಷ್ಟರಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದು, ವರದಿಯಲ್ಲಿ ನೆಗೆಟಿವ್‌ ಆಗಿದ್ದರೆ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು