ಕೇಸರಿ ಧ್ವಜ ಕಂಡರೆ ಕಾಂಗ್ರೆಸ್ ನಾಯಕರಿಗೆ ಕಣ್ಣುರಿ : ಸಂಸದ ಬಸವರಾಜು

By Kannadaprabha News  |  First Published Jan 30, 2024, 11:45 AM IST

ಮಂಡ್ಯ ಜಿಲ್ಲೆ ಕೆರಗೋಡಿನಲ್ಲಿ ಧ್ವಜಸ್ತಂಭದಲ್ಲಿ ಹಾರಿಸಿದ್ದ ಹನುಮ ಧ್ವಜ ತೆರವುಗೊಳಿಸಿ ಕಾಂಗ್ರೆಸ್ ಸರ್ಕಾರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಆಪಾದಿಸಿ, ಸರ್ಕಾರದ ಧೋರಣೆ ಖಂಡಿಸಿ ಜಿಲ್ಲಾ ಬಿಜೆಪಿ ಮುಖಂಡರು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.


 ತುಮಕೂರು :  ಮಂಡ್ಯ ಜಿಲ್ಲೆ ಕೆರಗೋಡಿನಲ್ಲಿ ಧ್ವಜಸ್ತಂಭದಲ್ಲಿ ಹಾರಿಸಿದ್ದ ಹನುಮ ಧ್ವಜ ತೆರವುಗೊಳಿಸಿ ಕಾಂಗ್ರೆಸ್ ಸರ್ಕಾರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಆಪಾದಿಸಿ, ಸರ್ಕಾರದ ಧೋರಣೆ ಖಂಡಿಸಿ ಜಿಲ್ಲಾ ಬಿಜೆಪಿ ಮುಖಂಡರು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರದ ವಿರೋಧಿ ಧೋರಣೆಯಿಂದ ಬಹು ಸಂಖ್ಯಾತ ಹಿಂದುಗಳ ಧಾರ್ಮಿಕ ಭಾವನೆಗೆ ನೋವು ಉಂಟುಮಾಡಿದೆ. ಸರ್ಕಾರ ಈ ಧೋರಣೆ ಕೈಬಿಡದಿದ್ದರೆ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಹಾಳಾಗಬಹುದು. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೋರಿ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

Latest Videos

undefined

ಸಂಸದ ಜಿ.ಎಸ್. ಬಸವರಾಜು ಮಾತನಾಡಿ,ನವರಿಗೆ ನಮ್ಮ ಧಾರ್ಮಿಕ ಆಚರಣೆಯ ಕೇಸರಿ ಧ್ಜಜ ಕಂಡರೆ ಕಣ್ಣುರಿ. ಹಿಂದುಗಳು ತಮ್ಮ ಧರ್ಮ, ಸಂಸ್ಕೃತಿಯ ಆಚರಣೆಗೆ ಸರ್ಕಾರ ಅವಕಾಶ ನೀಡದೆ ಪದೇಪದೆ ಅಡ್ಡಿ ಮಾಡುವ ಪ್ರಯತ್ನ ಮಾಡುತ್ತಿದೆ. ಮಂಡ್ಯದ ಕೆರಗೋಡಿನ ಆಂಜನೇಯ ದೇವಸ್ಥಾನದ ಬಳಿ ಭಕ್ತರು ಹಾಕಿದ್ದ ಹನುಮ ಧ್ವಜ ತೆರವು ಮಾಡುವ ಮೂಲಕ ಸರ್ಕಾರ ಹಿಂದುಗಳ ಭಾವನೆಗೆ ಧಕ್ಕೆ ತಂದಿರುವುದನ್ನು ಖಂಡಿಸುತ್ತೇವೆ ಎಂದರು.

ಶಾಸಕ ಬಿ. ಸುರೇಶ್‌ಗೌಡ ಮಾತನಾಡಿ, ಮಂಡ್ಯದ ಕೆರಗೋಡಿನಲ್ಲಿ ಹಾರಿಸಿದ್ದ ಹನುಮ ಧ್ವಜ ಕೆಳಗಿಳಿಸಿ ಹಿಂದೂಗಳಿಗೆ ಅವಮಾನ ಮಾಡಿರುವ ಕಾಂಗ್ರೆಸ್‌ನವರು ವಿವಾದ ಸೃಷ್ಟಿಮಾಡಿ ಜನರ ಶಾಂತಿ, ನೆಮ್ಮದಿ ಹಾಳು ಮಾಡುವ ಕುತಂತ್ರ ಮಾಡುತ್ತಿದ್ದಾರೆ. ಈ ವರ್ತನೆ ಕೈಬಿಡದಿದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪ್ರತಿದಿನ ಸರ್ಕಾರದ ಕುಮ್ಮಕ್ಕಿನಿಂದ ಒಂದಲ್ಲಾ ಒಂದು ರೀತಿಯಲ್ಲಿ ಹಿಂದೂಗಳನ್ನು ಅವಹೇಳನ ಮಾಡುವ, ಹಿಂದೂಗಳ ಭಾವನಗೆ ಧಕ್ಕೆ ತರುವಂತಹ ಕೃತ್ಯ ನಡೆಯುತ್ತಲೆ ಇವೆ. ರಾಷ್ಟ್ರ ವೀರೋಧಿ, ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿರುವ ಕಾಂಗ್ರೆಸ್ ನಾಯಕರ ವರ್ತನೆ ಖಂಡನೀಯ. ಕೆರಗೋಡು ಹನುಮ ಧ್ವಜಕ್ಕೆ ಅಪಮಾನ ಮಾಡಿದ ಪ್ರಕರಣಕ್ಕೆ ಸರ್ಕಾರ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಹೀಗೇ ಮುಂದುವರೆದರೆ ಜನರು ಕಾಂಗ್ರೆಸ್ ಅನ್ನು ದೇಶದಿಂದಲೇ ಮುಕ್ತಗೊಳಿಸುತ್ತಾರೆ ಎಂದು ಹೇಳಿದರು.

ರಾಜ್ಯ ಬಿಜೆಪಿ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಟಿ. ಭೈರಪ್ಪ, ಉಪಾಧ್ಯಕ್ಷ ಗಂಗರಾಜು, ಬ್ಯಾಟರಂಗೇಗೌಡ, ಭೈರಣ್ಣ ಮಾತನಾಡಿ, ಚಿತ್ರದುರ್ಗದಲ್ಲಿ ನಡೆದ ಶೋಷಿತರ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮ ಅವರನ್ನು ಏಕವಚನದಲ್ಲಿ ನಿಂದಿಸಿದ್ದನ್ನು ಟೀಕಿಸಿದರು.

ನಗರ ಬಿಜೆಪಿ ಅಧ್ಯಕ್ಷ ಹನುಮಂತರಾಜು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಯಶಸ್, ಮುಖಂಡರಾದ ದಿಲೀಪ್‌ಕುಮಾರ್, ಬಿ.ಎಸ್. ನಾಗೇಶ್, ಟಿ.ಆರ್‌. ಸದಾಶಿವಯ್ಯ, ವಿಷ್ಣುವರ್ಧನ್, ರುದ್ರೇಶ್, ಅಂಜನಮೂರ್ತಿ, ಸಂದೀಪ್‌ಗೌಡ, ಕೆ. ವೇದಮೂರ್ತಿ, ವಕ್ತಾರ ಜಗದೀಶ್, ಗಣೇಶ್‌ಪ್ರಸಾದ್, ಸತ್ಯಮಂಗಲ ಜಗದೀಶ್, ಪುರುಷೋತ್ತಮ್, ಕುಮಾರ್, ಕೆ.ಟಿ. ಶಿವಕುಮಾರ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಹಿಂದೂ ಧ್ವಜ ಅವಮಾನಿಸುವ ಪ್ರವೃತ್ತಿ ನಿಲ್ಲಿಸಿ

ಭಾರತದಲ್ಲಿ ಹಿಂದೂ ಧರ್ಮದ ಧ್ವಜ ಹಾಕುವುದು ಮಹಾಪಾಪ ಎನ್ನುವಂತೆ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿದೆ. ತುಮಕೂರಿನಲ್ಲಿ ದಿನಬೆಳಗಾದರೆ ಕೇಸರಿ ಧ್ವಜ ತೆರವುಗೊಳಿಸುವ ಪ್ರಯತ್ನವನ್ನು ಪೊಲೀಸರು ಮಾಡುತ್ತಲೇ ಇದ್ದಾರೆ. ಕಳ್ಳರು, ಡ್ರಗ್ಸ್ ದಂಧೆಕೋರರನ್ನು ಹಿಡಿಯಬೇಕಾದ ಪೊಲೀಸರು ಕೇಸರಿ ಧ್ವಜ ತೆರವಿನ ಕೆಲಸ ಮಾಡುತ್ತಿರುವುದು ದುರಾದೃಷ್ಟಕರ. ಕ್ರಿಕೆಟ್ ಪಂದ್ಯದ ಸಮಯದಲ್ಲಿ ಪಾಕಿಸ್ತಾನದ ಧ್ವಜ ಹಾರಿಸುವವರ ಬಗ್ಗೆ ಕ್ರಮ ತೆಗೆದುಕೊಳ್ಳದ ಸರ್ಕಾರ ನಮ್ಮ ಧಾರ್ಮಿಕ ಭಾವನೆಯ ಕೇಸರಿ ಧ್ವಜ ಹಾರಿಸುವುದನ್ನು ಅಪರಾಧವೆನ್ನುವಂತೆ ನಡೆದುಕೊಳ್ಳುತ್ತದೆ. ಹಿಂದೂ ಧ್ವಜ ಅವಮಾನಿಸುವ ಪ್ರವೃತ್ತಿಯನ್ನು ಸರ್ಕಾರ ನಿಲ್ಲಿಸಬೇಕು ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಒತ್ತಾಯಿಸಿದರು.

click me!