ಸರ್ಕಾರಿ ಆಸ್ಪತ್ರೆಗಳಲ್ಲಿ 900 ಹುದ್ದೆ ಖಾಲಿ: ವಾರದೊಳಗೆ ನೇಮಕಾತಿಗೆ ಸಚಿವ ಖಾದರ್ ಖಡಕ್ ಸೂಚನೆ

Published : Jun 07, 2026, 10:17 PM IST
UT Khader

ಸಾರಾಂಶ

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 900 ರಷ್ಟು ಹುದ್ದೆಗಳು ಖಾಲಿ ಇದ್ದು, ಭರ್ತಿಗೆ ವಾರದೊಳಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಯು.ಟಿ.ಖಾದರ್‌ ಹೇಳಿದ್ದಾರೆ.

ಮಂಗಳೂರು (ಜೂ.07): ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 900 ರಷ್ಟು ಹುದ್ದೆಗಳು ಖಾಲಿ ಇದ್ದು, ಭರ್ತಿಗೆ ವಾರದೊಳಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ.ಖಾದರ್‌ ಹೇಳಿದ್ದಾರೆ. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಭಾನುವಾರ ಮಂಗಳೂರಿಗೆ ಆಗಮಿಸಿದ ಅವರು ಕುದ್ರೋಳಿ ದೇವಸ್ಥಾನದಲ್ಲಿ ಸುದ್ದಿಗಾರರಲ್ಲಿ ಮಾತನಾಡಿದರು.

ಎಂಬಿಬಿಎಸ್‌ ಪೂರೈಸಿದವರು ಕರ್ತವ್ಯ ಸಲ್ಲಿಸಲು ಬಂದರೆ ಅವರಿಗೆ ಆಯಾ ಜಿಲ್ಲೆಯ ಆರೋಗ್ಯಾಧಿಕಾರಿಗಳು ಒಂದು ವಾರದೊಳಗೆ ತಾತ್ಕಾಲಿಕ ನೇಮಕಾತಿಯ ಆದೇಶ ಪತ್ರ ನೀಡಬೇಕು. ಇಲ್ಲದಿದ್ದಲ್ಲಿ ಅಂತಹ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು. ನೇಮಕಗೊಂಡವರಿಗೆ ಮಾಸಿಕ 60,000 ರು. ವೇತನ ನೀಡಲಾಗುವುದು ಎಂದು ಯು.ಟಿ.ಖಾದರ್‌ ತಿಳಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇರುವುದು ಗಮನದಲ್ಲಿದೆ. ಕಾಯಂ ನೇಮಕಾತಿ ಪ್ರಕ್ರಿಯೆ ಆಗುವವರೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುವುದು. ಹಂತ ಹಂತವಾಗಿ ಸರ್ಕಾರಿ ಆಸ್ಪತ್ರೆಗಳ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಒತ್ತು ನೀಡುವುದಾಗಿ ತಿಳಿಸಿದರು.

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳು ಯಾವ ರೀತಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದನ್ನು ಖುದ್ದಾಗಿ ಸ್ಥಳಕ್ಕೆ ತೆರಳಿ ಪರಿಶೀಲಿಸುತ್ತೇನೆ. ಈ ನಿಟ್ಟಿನಲ್ಲಿ ರಾತ್ರಿ ವೇಳೆ ಆಸ್ಪತ್ರೆಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದು, ಇದೇ ರೀತಿ ಜಿಲ್ಲೆ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕೂಡ ದಿಢೀರ್‌ ರಾತ್ರಿ ಭೇಟಿ ಪರಿಶೀಲಿಸಲು ಸೂಚಿಸುವುದಾಗಿ ಅವರು ತಿಳಿಸಿದರು.

ಮಸೀದಿ, ಚರ್ಚ್‌, ದೇವಸ್ಥಾನ ಖಾದರ್‌ ಭೇಟಿ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಂಪುಟದಲ್ಲಿ ಸಚಿವರಾದ ಬಳಿಕ ಮೊದಲ ಬಾರಿಗೆ ಯು.ಟಿ.ಖಾದರ್‌ ಭಾನುವಾರ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದಾಗ ವಿಮಾನ ನಿಲ್ದಾಣದಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಅದ್ದೂರಿಯ ಸ್ವಾಗತ ಕೋರಿದರು. ಬಳಿಕ ಜಿಲ್ಲೆಯಲ್ಲಿ ಮಸೀದಿ, ಚರ್ಚ್‌ ಹಾಗೂ ದೇವಸ್ಥಾನಗಳಿಗೆ ಸಚಿವ ಯು.ಟಿ.ಖಾದರ್‌ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಮೂರು ವರ್ಷ ಸ್ಪೀಕರ್ ಆಗಿದ್ದೆ, ಸದ್ಯ ಸಚಿವನಾಗಿ ಮಂಗಳೂರಿಗೆ ಬಂದಿದ್ದೇನೆ. ಉಳ್ಳಾಲ ಸಯ್ಯದ್‌ ಮದನಿ ದರ್ಗಾ, ಉಳ್ಳಾಲ ಭಗವತೀ ಕ್ಷೇತ್ರ, ಬೆಂದೂರ್‌ವೆಲ್‌ನ ಸೇಂಟ್‌ ಸೆಬಾಸ್ಟಿನ್‌ ಚರ್ಚ್, ಈಗ ಕುದ್ರೋಳಿ ದೇವಸ್ಥಾನಕ್ಕೆ ಭೇಟಿ ನೀಡಿದ್ದೇನೆ. ಎಲ್ಲರ ಆಶೀರ್ವಾದ ನಾನು ಬೇಡುತ್ತಿದ್ದು, ಆರೋಗ್ಯ ಖಾತೆ ಉತ್ತಮವಾಗಿ ನಡೆಸುತ್ತೇನೆ. ನನ್ನ ಕೆಲಸ ಕಡಿಮೆ ಅಥವಾ ಜಾಸ್ತಿಯಾದರೂ ಜಿಲ್ಲೆಯ ಜನತೆ ತಲೆ ತಗ್ಗಿಸುವ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.

PREV
Read more Articles on
click me!

Recommended Stories

Kodagu ಜಿಲ್ಲಾ ನ್ಯಾಯಾಲಯ ಸಂಕೀರ್ಣಕ್ಕೆ ಮತ್ತೆ ಹುಸಿ ಬಾಂಬ್ ಬೆದರಿಕೆ: ಪೊಲೀಸರು ಹೈ ಅಲರ್ಟ್
Hebbal ಟ್ರಾಫಿಕ್‌ ಕಿರಿಕಿರಿಗೆ ಮುಕ್ತಿ, ವೆಟರ್ನರಿ ಕಾಲೇಜು ಆವರಣದಲ್ಲಿ ಸುರಂಗ ಮಾರ್ಗಕ್ಕೆ ಮಣ್ಣು ಪರೀಕ್ಷೆ ಆರಂಭ