ಹೇಮೆ ಯೋಜನೆ ಆರಂಭಿಸದಿದ್ದರೆ ಟ್ರ್ಯಾಕ್ಟರ್‌ ಚಲೋ: ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ

By Kannadaprabha News  |  First Published May 30, 2024, 7:17 PM IST

ರಾಜ್ಯ ಸರ್ಕಾರ ಕೂಡಲೇ ಎಕ್ಸ್‌ಪ್ರೆಸ್‌ ಕೆನಾಲ್ ಯೋಜನೆ ವಿರುದ್ಧದ ಹೋರಾಟಗಾರರೊಂದಿಗೆ ಚರ್ಚಿಸಿ ಕಾಮಗಾರಿ ಆರಂಭ ಮಾಡದಿದ್ದರೆ ಮಾಗಡಿಯಿಂದ ವಿಧಾನಸೌಧದವರೆಗೂ ಟ್ರ್ಯಾಕ್ಟರ್ ಚಲೋ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಕೊಡಬೇಕಾಗುತ್ತದೆ ಎಂದು ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು. 


ಮಾಗಡಿ (ಮೇ.30): ರಾಜ್ಯ ಸರ್ಕಾರ ಕೂಡಲೇ ಎಕ್ಸ್‌ಪ್ರೆಸ್‌ ಕೆನಾಲ್ ಯೋಜನೆ ವಿರುದ್ಧದ ಹೋರಾಟಗಾರರೊಂದಿಗೆ ಚರ್ಚಿಸಿ ಕಾಮಗಾರಿ ಆರಂಭ ಮಾಡದಿದ್ದರೆ ಮಾಗಡಿಯಿಂದ ವಿಧಾನಸೌಧದವರೆಗೂ ಟ್ರ್ಯಾಕ್ಟರ್ ಚಲೋ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಕೊಡಬೇಕಾಗುತ್ತದೆ ಎಂದು ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದರು. ತಾಲೂಕಿನ ತಾಳೇಕೆರೆ ಹ್ಯಾಂಡ್ ಪೋಸ್ಟ್‌ನಲ್ಲಿ ವಿವಿಧ ಮಠಾಧೀಶರ ನೇತೃತ್ವದಲ್ಲಿ ಮಾಗಡಿಗೆ ಹೇಮಾವತಿ ನೀರು ಕಲ್ಪಿಸುವ ಯೋಜನೆ ಹೋರಾಟದ ವೇಳೆ ರಾಜ್ಯಾಧ್ಯಕ್ಷರು ಸೇರಿದಂತೆ ರೈತ ಮುಖಂಡರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ ವೇಳೆ ಅವರು ಮಾತನಾಡಿದರು. 

ರಾಜ್ಯದಲ್ಲಿ ಎಲ್ಲಿ ನೋಡಿದರೂ ಪ್ರಜ್ವಲ್ ಪೆನ್‌ಡ್ರೈವ್‌ ಪ್ರಕರಣವೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಕೇಳುವವರೇ ಇಲ್ಲದಂತಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಜ್ವಲ್ ಪ್ರಕರಣವನ್ನು ಇಟ್ಟುಕೊಂಡು ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದಾರೆ. ರೈತರಿಗೆ ಬೇಕಾದ ನೀರಾವರಿ ಸೌಲಭ್ಯ ಪೂರ್ಣಗೊಳಿಸುವ ಕಡೆ ಗಮನಹರಿಸಬೇಕು. ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿದ ಮೇಲೆ ಪ್ರಕರಣವನ್ನು ಅವರು ನೋಡಿಕೊಳ್ಳುತ್ತಾರೆ. ನೀವು ರಾಜ್ಯದ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡಬೇಕು. ನಿಮ್ಮ ಇಲಾಖೆಯ ಯೋಜನೆ ಬಗ್ಗೆ ತುಮಕೂರಿನ ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Tap to resize

Latest Videos

ಲೂಟಿಕೋರ ಸರ್ಕಾರಕ್ಕೆ ಕೇಂದ್ರದತ್ತ ಬೊಟ್ಟು ಮಾಡುವುದೇ ಕೆಲಸ: ಕೇಂದ್ರ ಸಚಿವ ಭಗವಂತ ಖೂಬಾ

ಸರ್ಕಾರದ ಯೋಜನೆ ಚಾಲನೆ ನೀಡಿದ ಮೇಲೆ ಕಾಮಗಾರಿಯನ್ನು ಪೂರ್ಣ ಮಾಡುವ ಜವಾಬ್ದಾರಿ ಜಲ ಸಂಪನ್ಮೂಲ ಸಚಿವರ ಮೇಲಿದೆ. ಹೇಮಾವತಿ ಯೋಜನೆಯನ್ನು ಪೂರ್ಣ ಮಾಡಲು ತುಮಕೂರಿನಲ್ಲಿರುವ ಜನಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಿ ಯೋಜನೆಯನ್ನು ಪೂರ್ಣಗೊಳಿಸಬೇಕು. ಹೇಮಾವತಿ ಯೋಜನೆ, ಎತ್ತಿನಹೊಳೆ ಯೋಜನೆ ವಿಳಂಬವಾಗಿದೆ. ಹೀಗೆ ನೀರಾವರಿ ಯೋಜನೆಗಳು ವಿಳಂಬವಾದರೆ ರೈತರು ನೆಮ್ಮದಿಯಾಗಿ ವ್ಯವಸಾಯದಲ್ಲಿ ತೊಡಗಿಕೊಳ್ಳಲು ಹೇಗೆ ಸಾಧ್ಯ? ನೀವು ಇದೇ ರೀತಿ ರೈತ ವಿರೋಧಿ ನೀತಿಗಳನ್ನು ಅನಿಸರಿಸುವುದಾದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಗಣ್ಣಯ್ಯ ಮಠದ ಚೆನ್ನಬಸವ ಸ್ವಾಮೀಜಿ ಮಾತನಾಡಿ, ತುಮಕೂರಿನಲ್ಲಿ ಪ್ರತಿಭಟನೆ ಮುನ್ನವೇ ರಾಜ್ಯೋತ್ಸವ ಸಮಾರಂಭವನ್ನು ತಾಳೆಕೆರೆ ಹ್ಯಾಂಡ್ ಪೋಸ್ಟ್‌ನಲ್ಲಿ ಮಾಡಿ ಹೇಮಾವತಿ ಜಲಾಶಯದಿಂದ ನೀರು ತಂದು ತಾಲೂಕಿನ ಕೆರೆಗಳಿಗೆ ನೀರು ತುಂಬಿಸಬೇಕೆಂದು ಸರ್ಕಾರದ ಗಮನ ಸೆಳೆದಿದ್ದೆವು. ನಮ್ಮ ತಾಲೂಕಿನಲ್ಲಿರುವ ಜಲಾಶಯಗಳು ಬೆಂಗಳೂರಿನ ಜನಗಳಿಗೆ ನೀರು ಕೊಡುವ ಕೆಲಸ ಮಾಡುತ್ತಿದ್ದೇವೆ. ಆದರೆ ಈಗ ಹೇಮಾವತಿ ಯೋಜನೆಗೆ ತುಮಕೂರಿನಲ್ಲಿ ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ನಮಗೆ ಬರಬೇಕಾದ ನೀರಿನ ಹಕ್ಕನ್ನು ಕೇಳಲು ನಾವು ಹೊರಟಿದ್ದೇವೆ. ಹೋರಾಟದ ಮೂಲಕ ನೀರು ಪಡೆಯಬೇಕು ಎಂದರೆ ಎಷ್ಟರಮಟ್ಟಿಗೆ ಸರಿ ರೈತರಿಗೆ ನೀರಿನ ಅವಶ್ಯಕತೆ ಹೆಚ್ಚಾಗಿದ್ದು ರೈತರು ವ್ಯವಸಾಯ ಮಾಡದಿದ್ದರೆ ಯಾರಿಗೂ ಅನ್ನ ಸಿಗುವುದಿಲ್ಲ. ಹೇಮಾವತಿ ಯೋಜನೆಗೆ ಅಡ್ಡಿಪಡಿಸುವ ಕೆಲಸ ಯಾರೂ ಮಾಡಬಾರದು. ಹೋರಾಟಕ್ಕೆ ಎಲ್ಲರೂ ಮುಂಚೂಣಿಯಲ್ಲಿರಬೇಕು. ನಿಮ್ಮ ಜೊತೆ ನಾವಿರುತ್ತೇವೆ ಎಂದು ಹೇಳಿದರು.

ಚಂದ್ರಶೇಖರನ್‌ ಸಾವಿಗೆ ಸರ್ಕಾರದಿಂದ ನ್ಯಾಯ ಸಿಗಲಿದೆ: ಸಚಿವ ಮಧು ಬಂಗಾರಪ್ಪ

ತಾಲೂಕಿಗೆ ಹೇಮಾವತಿ ಯೋಜನೆಯ ಎಕ್ಸ್‌ಪ್ರೆಸ್‌ ಕೆನಾಲ್ ಕಾಮಗಾರಿ ಪೂರ್ಣ ಮಾಡಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಹೋರಾಟಕ್ಕೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸುವ ವೇಳೆ ರಾಷ್ಟ್ರೀಯ ಹೆದ್ದಾರಿ ತಡೆಯಲು ಮುಂದಾದ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ರೈತ ಮುಖಂಡರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಹಸಿರು ಸೇನೆ ರೈತ ಸಂಘದ ಜಿಲ್ಲಾಧ್ಯಕ್ಷ ಬೈರೇಗೌಡ, ತಾಲೂಕು ಅಧ್ಯಕ್ಷ ಗೋವಿಂದರಾಜು, ಗದ್ದಿಗೆ ಮಠದ ಮಹಾಂತ ಸ್ವಾಮೀಜಿ ಬಂಡೆಮಠದ ಮಹಾಲಿಂಗೇಶ್ವರ ಸ್ವಾಮೀಜಿ ಮಾತನಾಡಿದರು. ಕಸಾಪ ತಾಲೂಕು ಅಧ್ಯಕ್ಷ ತಿಪ್ಪಸಂದ್ರ ಪದ್ಮನಾಭ್, ತಾಪಂ ಮಾಜಿ ಅಧ್ಯಕ್ಷದ ಶಿವರಾಜು, ಮಾಜಿ ಸದಸ್ಯ ವೆಂಕಟೇಶ್, ನಿವೃತ್ತ ಶಿಕ್ಷಕರಾದ ಮರಿಗೌಡ, ವಿದ್ಯಾರ್ಥಿ ಮಿತ್ರ ಕಿರಣ್, ಕುದುರು ಹೋಬಳಿ ಅಧ್ಯಕ್ಷ ಮಂಜುನಾಥ್, ರೈತ ಮುಖಂಡರಾದ ವೆಂಕಟಪ್ಪ, ಕೃಷ್ಣಮೂರ್ತಿ, ಲೆಂಕಪ್ಪ, ನಾರಾಯಣ್ ಮತ್ತಿತರರು ಭಾಗವಹಿಸಿದ್ದರು.

click me!