ಕನಕದಾಸರ ಮಾರ್ಗದರ್ಶನ ಅನುಸರಿಸಿದರೆ ಶಾಂತಿ, ಸೌಹಾರ್ದತೆ ನೆಲೆಸಲು ಸಾಧ್ಯ: ಸಂಸದೆ ಶೋಭಾ ಕರಂದ್ಲಾಜೆ

By Govindaraj S  |  First Published Nov 30, 2023, 5:32 PM IST

ಕನಕದಾಸರ ಕೀರ್ತನೆ ಹಾಗೂ ಅವರು ರಚಿಸಿದ ಸಾಹಿತ್ಯವನ್ನು ಓದುವ ಮೂಲಕ ಕನಕದಾಸರ ಮಾರ್ಗದರ್ಶನವನ್ನು ಅನುಸರಿಸಿದರೆ ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆ ನೆಲೆಸಲು ಸಾಧ್ಯ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. 


ಉಡುಪಿ (ನ.29): ಕನಕದಾಸರ ಕೀರ್ತನೆ ಹಾಗೂ ಅವರು ರಚಿಸಿದ ಸಾಹಿತ್ಯವನ್ನು ಓದುವ ಮೂಲಕ ಕನಕದಾಸರ ಮಾರ್ಗದರ್ಶನವನ್ನು ಅನುಸರಿಸಿದರೆ ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆ ನೆಲೆಸಲು ಸಾಧ್ಯ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಅವರು ಇಂದು ನಗರದ ಅಜ್ಜರಕಾಡು ಗೋವಿಂದ ಕಲ್ಯಾಣ ಮಂಟಪದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘ (ರಿ) ಹಾಗೂ ಹಾಲುಮತ ಮಹಾ ಸಭಾ (ರಿ) ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ  ಕನಕದಾಸ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕನಕದಾಸರಿಗೂ ಹಾಗೂ ಉಡುಪಿಗೂ ಅವಿನಾಭಾವ ಸಂಬಂಧವಿದೆ. ಕಾಗಿನೆಲೆಯಿಂದ ಉಡುಪಿಗೆ ಕೃಷ್ಣನನ್ನು ಹುಡುಕಿ ಬಂದ ಕನಕದಾಸರ ಭಕ್ತಿಯ ಪರಾಕಾಷ್ಠೆಗೆ ಶ್ರೀ ಕೃಷ್ಣನೇ ಪಶ್ಚಿಮಾಭಿಮುಖವಾಗಿ ತಿರುಗಿ ದರ್ಶನ ನೀಡಿದ ಪ್ರತೀತಿ ಇದ್ದು, ಈಗ ಅದು ಕನಕನ ಕಿಂಡಿ ಎಂದು ಪ್ರಸಿದ್ಧಿ ಪಡೆದಿದೆ.  ಇದರಿಂದ ಉಡುಪಿಗೂ ಕನಕದಾಸನಿಗೂ ಸಂಬಂಧ ಬೆಸೆಯಿತು ಎಂದರು. ತನ್ನ ನೆಚ್ಚಿನ ದೇವರಾದ ಆದಿ ಕೇಶವನನ್ನು ಒಲಿಸಿಕೊಳ್ಳಲು ಮನಸ್ಸಿನಿಂದ ಹಲವಾರು ಕೀರ್ತನೆಗಳನ್ನು ರಚಿಸುವ ಮೂಲಕ ರಾಜ್ಯದಲ್ಲಿ ಹರಿದಾಸ ಆಂದೋಲನಕ್ಕೆ ಶಕ್ತಿ ತುಂಬಿದ ಆದಿ ಕೇಶವನ  ಭಕ್ತ ಕನಕದಾಸರು. ನಾಡಿನಾದ್ಯಂತ ಸಂಚರಿಸಿ, ಶಿಕ್ಷಣವೇ ಇಲ್ಲದಂಥ ಹಾಲುಮತ ಸಮಾಜಕ್ಕೆ ಶಿಕ್ಷಣದ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ ಎಂದರು.

Latest Videos

undefined

ಪ್ರಧಾನಿ ಮೋದಿ ಯೋಜನೆಗೆ ಸಿದ್ದರಾಮಯ್ಯ ತಡೆ: ಶೋಭಾ ಕರಂದ್ಲಾಜೆ ಕಿಡಿ

ಸಮಾಜದಲ್ಲಿ ತುಳಿತಕ್ಕೆ ಒಳಗಾದ ಒಬ್ಬ ವ್ಯಕ್ತಿ ಇಂದು    ದೇಶದ್ಯಾದಂತ ಪೂಜಿಸಲ್ಪಡುತ್ತಿರುವುದು ಅಧಿಕೇಶವನ ಆಶೀರ್ವಾದ ಮತ್ತು ಅವರ ಪರಿಶ್ರಮ ದಿಂದ ಮಾತ್ರ ಸಾಧ್ಯ. ಹುಟ್ಟುವ ಜಾತಿ ಯಾವುದು ಎನ್ನುವುದು ಮುಖ್ಯವಲ್ಲ.  ನಾವು ಮಾಡುವ ಕೆಲಸ ಮತ್ತು ಅನುಸರಿಸುತ್ತಿರುವ ದಾರಿ ಮುಖ್ಯವೆಂದು ಕನಕದಾಸರು ತೋರಿಸಿಕೊಟ್ಟಿದ್ದಾರೆ ಎಂದರು. ಕನಕದಾಸ ಕೇವಲ ಒಂದು ಜಾತಿಗೆ ಸೀಮಿತವಾದ ಭಕ್ತ ಅಲ್ಲ. ಅವರು ನಮ್ಮೆಲ್ಲರ ಗುರು.  ಇವರು ತಮ್ಮ ಭಜನೆ ಮತ್ತು ಹಾಡಿನ ಮೂಲಕ ಸಮಾಜಕ್ಕೆ ಅನೇಕ ಸಂದೇಶವನ್ನು ನೀಡಿದ್ದು, ಅವರ ಮಾರ್ಗದಲ್ಲಿ ನಾವೆಲ್ಲರೂ ನಡೆದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು .
 
ಶಾಸಕ ಯಶ್‌ಪಾಲ್ ಎ ಸುವರ್ಣ ಅಧ್ಯಕ್ಷತೆ ವಹಿಸಿ, ಉಡುಪಿಗೂ ಕನಕನಿಗೂ ಭಾವನತ್ಮಕ ಸಂಬಂಧವಿದೆ. ಕನಕದಾಸರ ಭಕ್ತಿ ಸಂಧಿಗ್ಧತೆ ಗೆ ಭಕ್ತ ವತ್ಸಲ ಶ್ರೀ ಕೃಷ್ಣನೇ ತಿರುಗಿ ದರ್ಶನ ನೀಡಿದ್ದು,  ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಇಂದಿಗೂ ಶ್ರೀ ಕೃಷ್ಣ ಮಠಕ್ಕೆ ಆಗಮಿಸುವ ಭಕ್ತರು ಪ್ರಥಮವಾಗಿ ಕನಕನ ಕಿಂಡಿಯನ್ನು ವೀಕ್ಷಿಸಿದ ನಂತರವಷ್ಟೆ ಕೃಷ್ಣನ ದರ್ಶನ ಪಡೆಯುತ್ತಾರೆ.  ಜಿಲ್ಲೆಯಲ್ಲಿ ಕನಕ ಭವನವನ್ನು ನಿರ್ಮಾಣ ಮಾಡುವ ಪ್ರಸ್ತವನೆಯನ್ನು ಸರ್ಕಾರದ ಮುಂದಿಟ್ಟು, ಮುಂದಿನ ದಿನಗಳಲ್ಲಿ  ಕನಕ ಜಯಂತಿಯನ್ನು  ಕನಕ ಭವನದಲ್ಲಿಯೇ ನಡೆಸುವಂತ ಪ್ರಾಮಾಣಿಕ ಪ್ರಯತ್ನವನ್ನು ಈ ಬಾರಿಯ ಅಧಿವೇಶನದಲ್ಲಿ ಮಾಡಲಾಗುವುದು ಎಂದರು.

ಉಡುಪಿ ಸ.ಪ.ಪೂ ಕಾಲೇಜಿನ ಹಿರಿಯ ಉಪನ್ಯಾಸಕಿ ಡಾ. ಸುಮಾ ಎಸ್ ಉಪನ್ಯಾಸ ನೀಡಿ, ಮಾತಿನಿಂದ ಮಾಡಲು ಸಾಧ್ಯವಿಲ್ಲದ ಕೆಲಸವನ್ನು ಸಂಗೀತ ಮಾಡುತ್ತದೆ. ಕನಕದಾಸರು ಹಾಡಿನ ಮೂಲಕ ಸಮಾಜಕ್ಕೆ ಅನೇಕ ಸಂದೇಶಗಳನ್ನು ನೀಡಿದ  ಮಹಾಪುರುಷ. ಕಳೆದ 2 ದಶಕಗಳಿಂದ ಕನಕ ದಾಸರ ನೆನಪನ್ನು  ಮೆಲುಕು ಹಾಕುವ ಪ್ರಕ್ರಿಯೆ ನಾಡಿನ ಎಲ್ಲಾ ಕಡೆ ದಿನನಿತ್ಯ ಸಾಗುತ್ತಿದೆ.  ಹಲವಾರು ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಕಾರಣಗಳಿಗಾಗಿ  ನಾವು ಕನಕನ ನೆನಪನ್ನು ಕಟ್ಟುತ್ತಾ ಇದ್ದೇವೆ ಎಂದರು.

ಯುದ್ಧ, ಕೌರ್ಯ,  ಹಿಂಸೆಗಳೇ ಜಗತ್ತಿನ ಮೂಲೆ ಮೂಲೆ ಗಳಲ್ಲಿ ವಿಜೃಂಬಿಸುತ್ತಿರುವ ಈ ಕಾಲ ಘಟ್ಟದಲ್ಲಿ  ಬದುಕಿನ ಸಾರ್ಥಕತೆಯ ನಿಜವಾದ ಪರ್ಯಾಯ ಯಾವುದೆಂದರೆ ಅದು ಕನಕದಾಸರು. ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಪಾರ.  ಸಮಾಜದಲ್ಲಿ ಮೇಲು-ಕೀಳು ತಾರತಮ್ಯವನ್ನು ಅನುಭವಿಸಿಕೊಂಡು ಬಂದ ಅವರು ಮನನೊಂದು ಸಮಾಜವನ್ನು ಪರಿವರ್ತನೆಗೊಳಿಸಿ ಅರೋಗ್ಯಕರವಾದ ಸಮಾಜದ ನಿರ್ಮಾಣಕ್ಕಾಗಿ ಕುಂದು ಕೊರತೆಗಳನ್ನು ಎತ್ತಿ ಹಿಡಿಯಲು ಕಾವ್ಯವನ್ನು ಮಾಧ್ಯಮವಾಗಿ ಬಳಸಿಕೊಂಡರು ಎಂದರು.

ತಾಯಿ ಸ್ಥಾನದಲ್ಲಿ‌ ನಿಂತು ನಿಮ್ಮ ಬೇಡಿಕೆ ಈಡೇರಿಸುವೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ

ಕಾರ್ಯಕ್ರಮದಲ್ಲಿ  ಶಾಸಕ  ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಡಾ. ಅರುಣ್ ಕೆ, ಕನಕದಾಸ ಸಮಾಜ ಸಂಘದ ಜಿಲ್ಲಾ ಅಧ್ಯಕ್ಷ ಹನುಮಂತ ಡೊಳ್ಳಿನ ಹಾಗೂ ಪದಾಧಿಕಾರಿಗಳು, ಹಾಲುಮತ ಮಹಾ ಸಭಾ ಜಿಲ್ಲಾ ಅಧ್ಯಕ್ಷ ಸಿದ್ಧಪ್ಪ ಹೆಚ್ ಐಹೊಳೆ ಮತ್ತು  ಸಮಾಜದ ಪದಾಧಿಕಾರಿಗಳು  ಹಾಗೂ ಮತ್ತಿತರರು  ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಕಟೀಲು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರದೀಪ್ ಡಿ.ಎಂ. ಹಾವಂಜೆ ನಿರೂಪಿಸಿ ವಂದಿಸಿದರು.

click me!