ರೈತರಿಗೆ ಸಂತಸದ ಸುದ್ದಿ: ಚಿಟ್ಟೆ ಗುರುತು ಹೇಳಲು ಬಂದಿದೆ ಆ್ಯಪ್‌

By Suvarna NewsFirst Published Jan 8, 2020, 8:35 AM IST
Highlights

ಚಿಟ್ಟೆ ಫೋಟೋ ನೋಡಿ ಪ್ರವರ ಹೇಳುತ್ತೆ ಆ್ಯಪ್‌|ಪತಂಗ, ದುಂಬಿಗಳ ವಿವರ ಪತ್ತೆಗೆ ಕೀಟ ತಜ್ಞರೇ ಬೇಕಿಲ್ಲ| ಫೋಟೋ ಅಪ್‌ಲೋಡ್‌ ಮಾಡಿದ್ರೆ 30 ಸೆಕೆಂಡಲ್ಲಿ ಮಾಹಿತಿ|ಬೆಂಗಳೂರು ಕೃಷಿ ವಿಜ್ಞಾನಿಗಳಿಂದ ಆ್ಯಪ್‌ ಅಭಿವೃದ್ಧಿ|

ಬೆಂಗಳೂರು(ಜ.08): ಕೀಟಗಳ ಕುರಿತು ಆಸಕ್ತಿ ಇರುವವರಿಗೆ ಮತ್ತು ರೈತರಿಗೆ ಸಂತಸದ ಸುದ್ದಿ. ನಮ್ಮ ಸುತ್ತ ಮುತ್ತಲ ಪರಿಸರದಲ್ಲಿ ಹಾರುವ ಚಿಟ್ಟೆಗಳು ಮತ್ತು ನಿಶಾಚರಿ ದುಂಬಿಗಳ (ಮಾತ್‌) ರಹಸ್ಯ ಬಯಲು ಮಾಡಲೆಂದೇ ಆ್ಯಪ್‌ ಮತ್ತು ವೆಬ್‌ಸೈಟ್‌ ಬಂದಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ಮತ್ತು ಸಂರಕ್ಷಣೆ ವಿಭಾಗದ ಐಬಿಐಎನ್‌ ತಂಡ ‘ಪತಂಗಸೂಚಕ’ ಹೆಸರಿನ ವೆಬ್‌ಸೈಟ್‌ ಮತ್ತು ನೂತನ ಆ್ಯಪ್‌ ಹೊರತಂದಿದೆ. ಚಿಟ್ಟೆಗಳು ಮತ್ತು ನಿಶಾಚರಿ ದುಂಬಿಗಳ ತಳಿ, ವೈವಿಧ್ಯತೆ, ಪ್ರದೇಶ ಇತ್ಯಾದಿ ಎಲ್ಲ ಮಾಹಿತಿಯನ್ನು ಕ್ಷಣ ಮಾತ್ರದಲ್ಲಿ ತಮ್ಮ ಮೊಬೈಲ್‌ ಅಥವಾ ಕಂಪ್ಯೂಟರ್‌ನಲ್ಲಿ ಅತ್ಯಂತ ಸುಲಭವಾಗಿ ಪಡೆಯಬಹುದಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರೈತರು ಬೆಳೆದ ಬೆಳೆಗಳ ಮೇಲೆ ಬಂದು ಕೂರುವ ಪತಂಗಗಳಿಂದ ಬೆಳೆಗೆ ಯಾವುದೇ ರೀತಿಯ ಹಾನಿಯಾಗುತ್ತದೆಯೇ? ಅಥವಾ ಇಲ್ಲವೇ ಎಂಬುದು ಈ ಪತಂಗ ಸೂಚಕ ಆ್ಯಪ್‌ನಿಂದ ಸುಲಭವಾಗಿ ಕಂಡು ಹಿಡಿಯಬಹುದಾಗಿದೆ. ಅದಕ್ಕೆ ಕೀಟ ತಜ್ಞರೇ ಬೇಕೆಂದಿಲ್ಲ. ಪತಂಗ ಸೂಚಕ ಆ್ಯಪ್‌ ಅಥವಾ ವೆಬ್‌ಸೈಟ್‌ ಮೂಲಕ ಸಾಮಾನ್ಯ ಜನರು ಕೂಡ ಸುಲಭವಾಗಿ ಪತಂಗಗಳ ಚರಿತ್ರೆಯನ್ನು ಅರಿಯಲು ಸಹಾಯಕವಾಗಿದೆ.

ಚಿಟ್ಟೆಗಳ ಪತ್ತೆ:

ಕೃತಕ ಬುದ್ಧಿಮತ್ತೆ ವ್ಯವಸ್ಥೆ ಬಳಸಿ ‘ಪತಂಗ ಸೂಚಕ’ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್‌ನಲ್ಲಿ ಸುಮಾರು 800 ಪ್ರಭೇದದ ಚಿಟ್ಟೆಗಳು ಹಾಗೂ 500 ಪ್ರಭೇದದ ದುಂಬಿಗಳ ಸಂಪೂರ್ಣ ಮಾಹಿತಿಯನ್ನು ಈಗಾಗಲೇ ಅಪ್‌ಲೋಡ್‌ ಮಾಡಲಾಗಿದೆ. ಪ್ರತಿ ಪ್ರಭೇದದ ಚಿಟ್ಟೆಇಲ್ಲವೇ ದುಂಬಿಗಳ ವಿವಿಧ ಭಂಗಿಯಲ್ಲಿ ಕುಳಿತ, ಹಾರಾಟದ ಸುಮಾರು 30 ರಿಂದ 100 ಚಿತ್ರಗಳನ್ನು ಹಾಕಲಾಗಿದೆ. ಯಾವುದೇ ರೀತಿಯಲ್ಲಿ ಮೊಬೈಲ್‌ ಅಥವಾ ಕ್ಯಾಮೆರಾದಿಂದ ಈ ಚಿಟ್ಟೆಗಳ ಫೋಟೋ ತೆಗೆದು ಆ್ಯಪ್‌ ಅಥವಾ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿದರೆ ಕೇವಲ 30 ಸೆಕೆಂಡ್‌ಗಳಲ್ಲಿ ಆ ಚಿಟ್ಟೆವಾಸಿಸುವ ಪ್ರದೇಶ, ಪ್ರಭೇದ, ವಿಸ್ತಾರ, ವೈವಿಧ್ಯತೆ ಎಲ್ಲ ಮಾಹಿತಿಯೂ ಲಭ್ಯವಾಗುತ್ತದೆ.

ಡೇಟಾ ಸಂಗ್ರಹಣೆ:

ಯಾವುದೇ ಪ್ರದೇಶದಲ್ಲಿ ದುಂಬಿಗಳ ಇಲ್ಲವೇ ಚಿಟ್ಟೆಯ ಫೋಟೋ ತೆಗೆದು, ಯಾವ ಪ್ರಭೇದದ್ದು ಎಂದು ಆ್ಯಪ್‌ ಅಥವಾ ವೆಬ್‌ಸೈಟ್‌ನಲ್ಲಿ ಹುಡುಕಾಟ ನಡೆಸಿದರೆ, ಯಾರು, ಎಲ್ಲಿ ಚಿಟ್ಟೆಯ ಫೋಟೋ ತೆಗೆದಿದ್ದಾರೆ, ಯಾವ ಚಿಟ್ಟೆಯ ಫೋಟೋ ಅದು ಎಂಬಿತ್ಯಾದಿ ಎಲ್ಲ ಮಾಹಿತಿಯೂ ವೆಬ್‌ಸೈಟ್‌ನಲ್ಲಿ ಸಂಗ್ರಹವಾಗಲಿದೆ. ಇದರಿಂದ ಪತಂಗದ ಪ್ರಭೇದ ಎಲ್ಲೆಲ್ಲಿ ಇದೆ, ಯಾರು ಫೋಟೋ ತೆಗೆದರು ಎಂಬಿತ್ಯಾದಿ ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ಸಾಮಾನ್ಯ ಜನರು ಭಾಗಿ ಆಗುವಂತೆ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ದೇಶದಲ್ಲಿ 1600 ಪ್ರಭೇದದ ಚಿಟ್ಟೆಗಳು ಮತ್ತು 800 ಪ್ರಭೇದದ ದುಂಬಿಗಳು ಇವೆ. ಆ್ಯಪ್‌ನಲ್ಲಿ ಶೇ.50ರಷ್ಟು ಮಾತ್ರ ಮಾಹಿತಿ ಇದ್ದು, ಮುಂದಿನ ಆರೆಂಟು ತಿಂಗಳಲ್ಲಿ ಉಳಿದ ಪತಂಗಗಳ ಮಾಹಿತಿ ಸೇರ್ಪಡೆಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪರಿಸರ ವಿಜ್ಞಾನ ಮತ್ತು ಸಂರಕ್ಷಣೆ ವಿಭಾಗದ ಸಂಯೋಜಕ ಕೆ.ಎನ್‌.ಗಣೇಶ್‌ ಮಾಹಿತಿ ನೀಡಿದ್ದಾರೆ.

ಆಂಡ್ರಾಯ್ಡ್‌ ಮೊಬೈಲ್‌ ಪ್ಲೇ ಸ್ಟೋರ್‌ನಲ್ಲಿ ‘ಪತಂಗಸೂಚಕ’ ಎಂದು ಟೈಪ್‌ ಮಾಡಿ ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು. ಯಾವುದೇ ಚಿಟ್ಟೆಯ ಫೋಟೋಗಳನ್ನು ತೆಗೆದು ಈ ಆ್ಯಪ್‌ಗೆ ಅಪ್‌ಲೋಡ್‌ ಮಾಡಿದರೆ, ಕೇವಲ 30 ಸೆಕೆಂಡ್‌ಗಳಲ್ಲಿ ಚಿಟ್ಟೆಯ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಇಲ್ಲವೇ ಕ್ಯಾಮೆರಾ ಮೂಲಕ ಫೋಟೋ ತೆಗೆದು ವೆಬ್‌ಸೈಟ್‌: www. pathangasuchaka.in ಗೆ ಅಪ್‌ಲೋಡ್‌ ಮಾಡಿದರೂ ಚಿಟ್ಟೆಯ ಮಾಹಿತಿ ಸಿಗಲಿದೆ. ಹೆಚ್ಚಿನ ಮಾಹಿತಿಗೆ ಕೆ.ಎನ್‌.ಗಣೇಶ್‌, ಸಂಯೋಜಕ, ಪರಿಸರ ವಿಜ್ಞಾನ ಮತ್ತು ಸಂರಕ್ಷಣೆ ವಿಭಾಗ, ಬೆಂಗಳೂರು ಕೃಷಿ ವಿವಿ. ಮೊಬೈಲ್‌: 9342160639 ಸಂಪರ್ಕಿಸಬಹುದು.
 

click me!