ಜೀವಕೊಟ್ಟು ನಿಮಗಾಗಿ ಹೋರಾಟ ಮಾಡುತ್ತೇನೆ. ನೀವು ನನ್ನ ಜೊತೆಗಿರಿ ಸಾಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾರ್ಯಕರ್ತರಿಗೆ ಕರೆ ನೀಡಿದರು.
ಬನ್ನೂರು : ಜೀವಕೊಟ್ಟು ನಿಮಗಾಗಿ ಹೋರಾಟ ಮಾಡುತ್ತೇನೆ. ನೀವು ನನ್ನ ಜೊತೆಗಿರಿ ಸಾಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾರ್ಯಕರ್ತರಿಗೆ ಕರೆ ನೀಡಿದರು.
ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ವರುಣ ಮತ್ತು ಟಿ. ನರಸೀಪುರ ಕ್ಷೇತ್ರದ ಬನ್ನೂರು ಹೋಬಳಿ ವ್ಯಾಪ್ತಿಯಲ್ಲಿ ಅವರು ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಹುಟ್ಟು ಸಾವಿನ ನಡುವೆ ನಾವು ಏನೂ ಕೆಲಸ ಮಾಡುತ್ತೇವೆ ಎಂಬುದು ಮುಖ್ಯ ಎಂದರು.
ಸಿಎಂ ಡಿಕೆಶಿಗೆ ಜೈ ಎಂದ ಕಾರ್ಯಕರ್ತರು
ಡಿ.ಕೆ. ಶಿವಕುಮಾರ್ ಅವರ ಭಾಷಣದ ನಡುವೆ ಮುಂದಿನ ಸಿಎಂ ಎಂದು ಕಾರ್ಯಕರ್ತರು ಜೈ ಕಾರ ಕೂಗಿದರು. ನನ್ನ ಮುಖ್ಯಮಂತ್ರಿ ಆಮೇಲೆ ಮಾಡುವಿರಂತೆ. ಮೊದಲು ಎಚ್.ಡಿ. ದೇವೇಗೌಡರು, ಆಡಳಿತ ಕಾಲದಲ್ಲಿ ಏನೂ ಕೆಲಸ ಆಗಿದೆ ಮೊದಲು ಹೇಳಿ. ಸಿದ್ದರಾಮಯ್ಯರ ಬೆಡ್ ರೂಂಗೆ ಹೋಗುತ್ತಿದ್ದ ಸಚಿವರೊಬ್ಬರು, ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೂರೇ ಜನ ಸತ್ತಿದ್ದು ಎಂದಿದ್ದರು. ಆ ಮಂತ್ರಿಗೆ ಸಿದ್ದರಾಮಯ್ಯ ಲಾಯರ್ ಭಾಷೆಯಲ್ಲಿ ಕೇಳಿದಾಗ 33 ಜನ ಸತ್ತರು ಎಂದು ಒಪ್ಪಿಕೊಂಡ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರನ್ನು ಮೊದಲಿಸಿದರು.
ಆರೋಗ್ಯ ಸಚಿವ ಡಿ. ಸುಧಾಕರ್ ಹಾಗೂ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಆಕ್ಸಿಜನ್ ಇಲ್ಲದೆ ಸತ್ತವರ ಮನೆಗೆ ಹೋಗಲಿಲ್ಲ ಎಂದು ಟೀಕಿಸಿದರು.
ಅಭಿಮಾನದಿಂದ ಈಗ ಜೆಸಿಬಿಯಲ್ಲಿ ಹೂ ಎರಚಿದಂತೆ ಆಗ ಸರ್ಕಾರ ಕೋವಿಡ್‌ನಲ್ಲಿ ಸತ್ತ ಜನರನ್ನು ಜೆಸಿಬಿ ಮೂಲಕ ಎತ್ತಿ ಬಿಸಾಕಿದರು. ಸಿದ್ದರಾಮಯ್ಯರಿಗೆ ಇಷ್ಟಇತ್ತೋ ನನಗೆ ಇಷ್ಟಇತ್ತೋ ಇಲ್ಲವೋ ಆದರೂ ನಾವು ಕುಮಾರಣ್ಣನಿಗೆ ಅಧಿಕಾರ ಕೊಟ್ಟೆವು. ಕುಮಾರಣ್ಣ ನಾವು ಕೊಟ್ಟಅಧಿಕಾರ ಉಳಿಸಿ ಕೊಂಡ್ರಾ? ಇವತ್ತು ಭ್ರಷ್ಟಆಡಳಿತದ ಸರ್ಕಾರ ಬರಲು ಯಾರು ಕಾರಣ ಅನ್ನೋದು ಜನರಿಗೆ ಗೊತ್ತಿದೆ. ಎಚ್.ಡಿ. ದೇವೇಗೌಡರನ್ನು ಕಾಂಗ್ರೆಸ್ ಪ್ರಧಾನಿ ಮಾಡಿತು. ಕುಮಾರಣ್ಣನಿಗೆ ಕಾಂಗ್ರೆಸ್ ಸಿಎಂ ಮಾಡಿತು. ಅವರಿಬ್ಬರೂ ಅದನ್ನು ಉಳಿಸಿ ಕೊಳ್ಳಲಿಲ್ಲ. ಈಗ ನನ್ನ ಕೈ ಬಲಪಡಿಸಿ. ನಿಮ್ಮ ಕೈಮುಗಿದು ಕೇಳುತ್ತೇನೆ ಎಂದು ಅವರು ಕೋರಿದರು.
ನಾನು ಮತ್ತು ಸಿದ್ದರಾಮಯ್ಯ ನುಡಿದಂತೆ ನಡೆಯದಿದ್ದರೆ ಮುಂದಿನ ಬಾರಿ ನಿಮ್ಮ ಮುಂದೆ ಬಂದು ಮತ ಕೇಳುವುದಿಲ್ಲ. ಜನರಿಗೆ ಕೊಟ್ಟಭರವಸೆಯನ್ನು ಈಡೇರಿಸಿಯೇ ಈಡೇರಿಸುತ್ತೇವೆ. ಒಬ್ಬ ಮಂತ್ರಿ ಮಂಚಕ್ಕೆ, ಒಬ್ಬ ಮಂತ್ರಿ ಲಂಚಕ್ಕೆ ಸ್ಥಾನ ಬಿಡಬೇಕಾಯಿತು. ಇಂತಹ ಭ್ರಷ್ಟಸರ್ಕಾರ ತೆಗೆಯಬೇಕು. ಇಲ್ಲಿ ಮಹದೇವಪ್ಪ ಅಲ್ಲ, ಸುನೀಲ್ ಬೋಸ್ ಅಭ್ಯರ್ಥಿ ಅಲ್ಲ. ಇಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಅಭ್ಯರ್ಥಿ. ಡಿಕೆಶಿಯನ್ನು ವಿಧಾನಸೌಧದಲ್ಲಿ ಕೂರಿಸಬೇಕಾದರೆ ನಿಮ್ಮ ಮತ ನನಗೆ ಬೇಕು. ನನಗೆ ಶಕ್ತಿ ತುಂಬಿ ಎಂದು ಅವರು ಮನವಿ ಮಾಡಿದರು.
ನಿಮ್ಮ ಅಭಿಮಾನವನ್ನು ಚುನಾವಣೆಯಲ್ಲಿ ತೋರಿಸಿ. ಒಂದಕ್ಕೆ ನಾಲ್ಕು ಮತ ಕೊಡಿಸಿ. ಕುಮಾರಣ್ಣ ನಾನು ನಿನಗೆ ಮೋಸ ಮಾಡಿದ್ದೇನಾ? ಇಲ್ಲ ತಾನೇ. ನಿನ್ನ ಜೊತೆ ಕೈ ಜೋಡಿಸಿ ನಿಂತಿದ್ದೆ ತಾನೇ. ನನಗೂ ಒಂದು ಅವಕಾಶ ಬೇಕು ತಾನೇ? ನನಗೂ ನಿಮ್ಮ ಸೇವೆ ಮಾಡುವ ಅವಕಾಶ ಕೊಡಬೇಕು ತಾನೇ ಎಂದರು.
ಅದ್ಧೂರಿ ಸ್ವಾಗತ
ಟಿ. ನರಸೀಪುರ ಕ್ಷೇತ್ರದಲ್ಲಿ ಪ್ರಜಾಧ್ವನಿ ಯಾತ್ರೆ ನಡೆಯಿತು. ಕಾರ್ಯಕರ್ತರು ಡಿ.ಕೆ. ಶಿವಕುಮಾರ್‌ಗೆ ಅದ್ಧೂರಿ ಸ್ವಾಗತ ಕೋರಿದರು. ನಾಲ್ಕು ಜೆಸಿಬಿಗಳ ಮೂಲಕ ಡಿ.ಕೆ. ಶಿವಕುಮಾರ್‌ಗೆ ಪುಷ್ಪಾರ್ಚನೆ ಮಾಡಿದರು.
ಈ ವೇಳೆ ಟಿಕೆಟ್ ಆಕಾಂಕ್ಷಿಗಳಾದ ಡಾ.ಎಚ್.ಸಿ. ಮಹದೇವಪ್ಪ, ಸುನಿಲ್ ಬೋಸ್, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್, ರಾಜ್ಯಸಭಾ ಸದಸ್ಯ ಚಂದ್ರಶೇಖರ್, ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ವಿ.ಎಸ್. ಉಗ್ರಪ್ಪ, ಮಾಜಿ ಸಚಿವ ಎಚ್.ಎಂ. ರೇವಣ್ಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ವರುಣ ಕ್ಷೇತ್ರದಲ್ಲಿ ಡಿಕೆಶಿ ಅಬ್ಬರ
ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್ ಪ್ರಜಾಧ್ವನಿ ಸಮಾವೇಶದ ಮೂಲಕ ಪ್ರಚಾರನ ನಡೆಸಿದರು. ವರುಣ ಕ್ಷೇತ್ರದ ಮೇಗಳಾಪುರದಲ್ಲಿ ನಡೆದ ಕಾರ್ಯಕ್ರಮಕ್ಕೆ ನಗಾರಿ ಬಾರಿಸಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಬಹಳ ಸಂತೋಷದಿಂದ ವರುಣ ಕ್ಷೇತ್ರಕ್ಕೆ ಬಂದಿದ್ದೇನೆ. ಚಾಮುಂಡೇಶ್ವರಿ ಉಪಚುಣೆಯಲ್ಲಿ ಈ ಕ್ಷೇತ್ರಕ್ಕೆ ಬಂದಿದೆ. ಸಿದ್ದರಾಮಯ್ಯ ನಮ್ಮ ನಾಯಕರು. ಅವರ ಕೈ ಕೆಳಗೆ ಕೆಲಸ ಮಾಡಿದ್ದೇನೆ. ಸಿದ್ದರಾಮಯ್ಯ ಅವರು ರಾಷ್ಟ್ರ ಮಟ್ಟದಲ್ಲಿ ಗುರುತಿಸುವ ಕೆಲಸ ಮಾಡಿದ್ದಾರೆ. ಅಂತಹವರನ್ನು ಆಯ್ಕೆ ಮಾಡಿದ ನಿಮಗೆ ಕೋಟಿ ನಮಸ್ಕಾರಗಳು. ದೇವರು ವರ ಹಾಗೂ ಶಾಪವನ್ನು ಕೊಡುವುದಿಲ್ಲ. ಆದರೆ ಅವಕಾಶ ಕೊಡುತ್ತಾನೆ. ಅದನ್ನು ಉಪಯೋಗಿಸಿಕೊಳ್ಳಬೇಕು. ನಿಮ್ಮ ಆಶೀರ್ವಾದಿಂದ ರಾಜ್ಯಕ್ಕೆ ಸಿಎಂ ಆಗಿದ್ದಾಗಿ ಅವರು ತಿಳಿಸಿದರು.
ನಮ್ಮ ಸಿದ್ರಾಮ್ಮಣ್ಣ ಒಳ್ಳೆಯ ಕೆಲಸ ಮಾಡಿದ್ದಾರೆ. ನಾನು 7 ಭಾರಿ ಗೆದ್ದಿದ್ದೇನೆ. ಸಿದ್ದರಾಮಯ್ಯ ಕೂಡ 7 ಭಾರಿ ಗೆದಿದ್ದಾರೆ. ಅವರಿಗೆ ದೊಡ್ಡ ಅವಕಾಶ ಸಿಕ್ಕಿತು. ಗೆದ್ದಾಗ ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ, ರಾಜ್ಯಸಭಾ ಸದಸ್ಯ ಚಂದ್ರಶೇಖರ್, ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ವಿ.ಎಸ್. ಉಗ್ರಪ್ಪ, ಮಾಜಿ ಸಚಿವ ಎಚ್.ಎಂ. ರೇವಣ್ಣ ಸೇರಿ ಪ್ರಮುಖರು ಪಾಲ್ಗೊಂಡಿದ್ದರು.
ಕಾರ್ಯಕರ್ತರಿಗೆ ಕ್ಲಾಸ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭಾಷಣ ಮಾಡುವಾಗ ಶಿಳ್ಳೆ, ಚಪ್ಪಾಳೆ ನಿಲ್ಲಿಸದ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೆ ಕ್ಲಾಸ್ ತೆಗೆದುಕೊಂಡರು. ಶಿಳ್ಳೆ, ಜೈಕಾರ ಹಾಕ್ತಿದ್ರೆ ನಾನು ಭಾಷಣ ಮಾಡಲ್ಲ ಎಂದು ಒಮ್ಮೆ ಎಚ್ಚರಿಕೆ ನೀಡಿದರು. ಆದರೂ ಶಿಳ್ಳೆ, ಜೈಕಾರ ಮುಂದುವರೆದ ಹಿನ್ನೆಲೆಯಲ್ಲಿ ಭಷಣ ಮಾಡದೆ ಕುಳಿತುಕೊಂಡರು.