ಕ್ವಿಂಟಾಲ್ ಕೊಬ್ಬರಿಗೆ 20 ಸಾವಿರ ರು. ಬೆಂಬಲ ಬೆಲೆ ನಿಗದಿ ಪಡಿಸುವಂತೆ ಆಗ್ರಹಿಸಿ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ ವತಿಯಿಂದ ಉಪ ವಿಭಾಗಾಧಿಕಾರಿಗಳ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ಮತ್ತು ಅನಿರ್ದಿಷ್ಟಾವಧಿ ಧರಣಿಯನ್ನು ನಡೆಯಿತು.
ತಿಪಟೂರು : ಕ್ವಿಂಟಾಲ್ ಕೊಬ್ಬರಿಗೆ 20 ಸಾವಿರ ರು. ಬೆಂಬಲ ಬೆಲೆ ನಿಗದಿ ಪಡಿಸುವಂತೆ ಆಗ್ರಹಿಸಿ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ ವತಿಯಿಂದ ಉಪ ವಿಭಾಗಾಧಿಕಾರಿಗಳ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ಮತ್ತು ಅನಿರ್ದಿಷ್ಟಾವಧಿ ಧರಣಿಯನ್ನು ನಡೆಯಿತು.
ಈ ವೇಳೆ ಸಮಿತಿ ಕಾರ್ಯದರ್ಶಿ ಎಸ್.ಎನ್. ಸ್ವಾಮಿ ಮಾತನಾಡಿ, ಕೊಬ್ಬರಿ ಬೆಲೆ ಕುಸಿತವಾಗಿಅತಂತ್ರ ಸ್ಥಿತಿಯಲ್ಲಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉದಾಸೀನ ಮನೋಭಾವತಾಳಿವೆ. ಕೃಷಿ ವಸ್ತುಗಳು, ಯಂತ್ರೋಪಕರಣಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿದ್ದು ರೈತರ ಜೀವನ ಕಷ್ಟಕರವಾಗುತ್ತಿದೆ. ಸರ್ಕಾರ ರೈತರಿಗಾಗಿ ಭೂಸಿರಿ, ಫಸಲ್ ಭೀಮಾ ಹೀಗೆ ಹಲವು ಯೋಜನೆಗಳನ್ನು ತಂದಿದ್ದರೂ ರೈತರಿಗೆ ಇದರಿಂದ ಯಾವುದೇ ಪ್ರಯೋಜನವಿಲ್ಲದೆ ಕೇವಲ ವಿಮಾ ಕಂಪನಿಗಳ ಉದ್ದಾರಕ್ಕೆ ಮಾತ್ರ. ಕೊಬ್ಬರಿ ಬೆಲೆ ದಿನೇ ದಿನೇ ಇಳಿಕೆಯಾಗುತ್ತಿದ್ದರೂ ಸರ್ಕಾರಗಳು ಮಾತ್ರ ಬೆಂಬಲ ಬೆಲೆ ಹೆಚ್ಚು ನೀಡದೆ ಮೋಸಮಾಡಿವೆ. ಕೊಬ್ಬರಿಗೆ ಕನಿಷ್ಠ 20ಸಾವಿರ ಬೆಂಬಲ ಬೆಲೆ ನಿಗಧಿ ಮಾಡಬೇಕು ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು.
ಸಮಿತಿ ಗೌರವಾಧ್ಯಕ್ಷ ಬಿ.ಬಿ. ಸಿದ್ದಲಿಂಗಸ್ವಾಮಿ ಮಾತನಾಡಿ, ತುಮಕೂರಿಗೆ ಪ್ರಧಾನಿ ಮೋದಿ ಬಂದರೂ ತೆಂಗು ಬೆಳೆಗಾರರ ಬಗ್ಗೆ ಮಾತನಾಡಲಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ತಿಪಟೂರಿಗೆ ಬಂದರೂ ಕೊಬ್ಬರಿ ಬೆಲೆ ಬಗ್ಗೆ ಚಕಾರವೆತ್ತಲಿಲ್ಲ. ರಾಜಕಾರಣಿಗಳಿಗೆ ರೈತರ ಕಷ್ಟಗಳು ಅರ್ಥಮಾಡಿಕೊಳ್ಳದೆ ಮನಸ್ಸಿಗೆ ಬಂದಂತೆ ಅಧಿಕಾರ ಮಾಡುತ್ತಾ ದೇಶ ಸಾಕುವ ರೈತನಿಗೆ ಮೋಸ ಮಾಡುತ್ತಿದ್ದಾರೆ. ಸಾಲಸೂಲ ಮಾಡಿ ಬೆಳೆ ಬೆಳೆದರೂ ಬೆಲೆ ಇಲ್ಲದೆ ರೈತ ಆತ್ಮಹತ್ಯೆಯತ್ತ ಮುಖ ಮಾಡುವಂತಾಗಿದೆ. ಕೂಡಲೆ ಸರ್ಕಾರಗಳು ಕೊಬ್ಬರಿಗೆ ವೈಜ್ಞಾನಿಕ ಬೆಲೆ ಕೊಟ್ಟು ರೈತನ ಬದುಕನ್ನು ಹಸನು ಮಾಡಬೇಕೆಂದರು.
ರೈತ ಮುಖಂಡ ಗಂಗಾಧರಯ್ಯ ತಿಮ್ಲಾಪುರ ಮಾತನಾಡಿ, ದೇಶದಲ್ಲಿ ಶೇ.80ರಷ್ಟುರೈತರಿದ್ದು ನಷ್ಟಮಾಡಿಕೊಂಡು ಬೆಳೆದ ಬೆಳೆಯಿಂದ ಇಡೀ ದೇಶವನ್ನೆ ಸಾಕುತಿದ್ದಾನೆ. ಆದರೆ ಸರ್ಕಾರಗಳು ಇದಾವುದನ್ನು ಅರ್ಥಮಾಡಿಕೊಳ್ಳದೆ ಬೆಳೆದ ಬೆಳೆಗಳಿಗೆ ನಿಗಧಿತ ಬೆಲೆ ಕೊಡದೆ ಬದುಕನ್ನು ಮೂರಾಬಟ್ಟೆಮಾಡುತ್ತಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿ ಜನಪ್ರತಿನಿಧಿಗಳಿಗೆ ತಕ್ಕಪಾಠ ಕಲಿಸಬೇಕು. ಮತ ಕೇಳಲು ಬರುವ ರಾಜಕಾರಣಿಗಳನ್ನು ನಿಮ್ಮ ಗ್ರಾಮಕ್ಕೆ ಬಿಟ್ಟುಕೊಳ್ಳಬೇಡಿ. ಯಾವುದೇ ಭರವಸೆ, ಆಮಿಷದ ಮಾತುಗಳಿಗೆ ಮರುಳಾಗಬೇಡಿ ಎಂದರು.
ಸಮಿತಿ ಅಧ್ಯಕ್ಷ ಬಿ. ಯೋಗೀಶ್ವರಸ್ವಾಮಿ ಮಾತನಾಡಿ, ಜನಪರ ಸರ್ಕಾರವೆಂದು ಬಿಂಬಿಸುವ ಬಿಜೆಪಿ ಸರ್ಕಾರಕ್ಕೆ ರೈತರ ಕಷ್ಟಅರ್ಥವಾಗುತ್ತಿಲ್ಲ. ಕೇವಲ ಸುಳ್ಳು ಆಶ್ವಾಸನೆ ಹೇಳಿಕೊಂಡು ಕಾಲಹರಣ ಮಾಡುತ್ತಿದೆ. ಆದ್ದರಿಂದ ಕೂಡಲೆ ಕ್ವಿಂಟಾಲ್ ಕೊಬ್ಬರಿಗೆ 20ಸಾವಿರ ರೂ ನೀಡಿ 5ಸಾವಿರ ರೂ ಸಹಾಯ ಧನ ನೀಡಬೇಕು. ಇಲ್ಲವಾದಲ್ಲಿ ನಿರಂತರ ಧರಣಿ ಹಮ್ಮಿಕೊಳ್ಳಲಾಗುವುದು ಎಂದರು.
ಪ್ರತಿಭಟನಾ ಧರಣಿಯಲ್ಲಿ ಸಮಿತಿ ಸಹ ಕಾರ್ಯದರ್ಶಿ ಜಯಚಂದ್ರ ಶರ್ಮ, ಅರಸೀಕೆರೆ ಉಪಾಧ್ಯಕ್ಷ ಮಧುಸೂದನ್, ತಾ. ಉಪಾಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ, ಸಹ ಕಾರ್ಯದರ್ಶಿ ಸಿದ್ದಯ್ಯ, ಮನೋಹರ ಪಟೇಲ್, ಚಿದಾನಂದ್ ಬಳುವನೇರಲು, ದೇವರಾಜು ತಿಮ್ಲಾಪುರ, ನಾಗರಾಜು, ದೇವಾನಂದ್ ಸಿದ್ದಾಪುರ, ರೇಣುಕಾರಾಧ್ಯ, ಚೆಲುವನಹಳ್ಳಿ ತೇಜ್‌ಪಾಲ್, ಗಡಬನಹಳ್ಳಿ ಸದಾಶಿವಯ್ಯ ಸೇರಿದಂತೆ ತಿಪಟೂರು, ಅರಸೀಕೆರೆ, ತುರುವೇಕೆರೆಯ ರೈತರು ಭಾಗವಹಿಸಿದ್ದರು.