ನಾನು ಕಲಘಟಗಿಯಿಂದಲೇ ಸ್ಪರ್ಧಿಸುತ್ತೇನೆ: ಸಂತೋಷ್‌ ಲಾಡ್‌

By Kannadaprabha News  |  First Published Oct 6, 2021, 3:41 PM IST

*  ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಲ್ಲ
*  ನನ್ನದು ಇಲ್ಲಿ ಯಾವುದೇ ಗುಂಪು ಇಲ್ಲ. ನನ್ನದು ಒಂದೇ ಗುಂಪು
*  ಸಂತೋಷ್‌ ಲಾಡ್‌ ಫೌಂಡೇಶನ್‌ನಿಂದ ಸಾಮಾಜಿಕ ಕೆಲಸ


ಹರಪನಹಳ್ಳಿ(ಅ.06): ನಾನು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಲ್ಲ. ಕಾಂಗ್ರೆಸ್‌(Congress) ಬಲವರ್ಧನೆ ಮಾಡುವ ಉದ್ದೇಶ ಹೊಂದಿದ್ದೇನೆ ಎಂದಿರುವ ಮಾಜಿ ಸಚಿವ ಸಂತೋಷ ಲಾಡ್‌(Santosh Lad) ಅವರು ಕಲಘಟಗಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಪಟ್ಟಣದ ವಾಲ್ಮೀಕಿ ನಗರದ ಹಾಲಸ್ವಾಮಿ ಮಠಕ್ಕೆ ಭೇಟಿ ನೀಡಿ ಗದ್ದುಗೆ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷ ಬಲವರ್ಧನೆಗಾಗಿ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದು, ಸಂತೋಷ್‌ ಲಾಡ್‌ ಫೌಂಡೇಶನ್‌ನಿಂದ(Santosh Lad Foundation) ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದೇನೆ ಹೊರತು ಇನ್ಯಾವುದೇ ಬೇರೆ ಉದ್ದೇಶವಿಲ್ಲ ಎಂದರು.

Tap to resize

Latest Videos

undefined

ನನ್ನದು ಇಲ್ಲಿ ಯಾವುದೇ ಗುಂಪು ಇಲ್ಲ. ನನ್ನದು ಒಂದೇ ಗುಂಪು, ಅದು ಕಾಂಗ್ರೆಸ್‌ ಗುಂಪು. ಹರಪನಹಳ್ಳಿಯಲ್ಲಿ ಉಚಿತ ಆಹಾರ ವಿತರಣೆಯಲ್ಲಿ ಯಾವುದೇ ವಿಶೇಷತೆ ಇಲ್ಲ. ನನ್ನ ಈ ಸಾಮಾಜಿಕ ಕಾರ್ಯಗಳಿಂದ ಬಡವರ ಹಸಿವು ನೀಗಿ ಪಕ್ಷಕ್ಕೆ ಬಲ ಸಿಕ್ಕರೆ ಸಾಕು. ನಾನು ಕಲಘಟಗಿ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸುವುದು ಖಚಿತ ಎಂದ ಅವರು, ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಎದ್ದಿದ್ದ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದರು.
ಕೋವಿಡ್‌(Covid19) ಸಂದರ್ಭದಲ್ಲಿ ಮೊದಲ ಬಾರಿಗೆ ಕಲಘಟಗಿಯಲ್ಲಿ ಕ್ಯಾಂಟೀನ್‌ ತೆರೆದಿದ್ದು, ಆನಂತರ ನನ್ನ ಸೇಹಿತರ ಆಶಯದಂತೆ ಬಳ್ಳಾರಿ(Ballari), ಕುಡಿತಿನಿ, ಸಂಡೂರು, ಕೂಡ್ಲಿಗಿ ಹಾಗೂ ಹರಪನಹಳ್ಳಿ ಸೇರಿದಂತೆ 9 ಕಡೆ ಉಚಿತ ಕ್ಯಾಂಟಿನ್‌ ತೆರೆದಿದ್ದು, ನಿತ್ಯ 13000 ಜನ ಊಟ ಮಾಡುತ್ತಿದ್ದಾರೆ. ಈಗಾಗಲೇ ಅಂದಾಜು ಹತ್ತು ಲಕ್ಷ ಜನರಿಗೆ ಉಚಿತವಾಗಿ ಆಹಾರ ವಿತರಣೆ ಮಾಡಿದ್ದೇವೆ ಎಂದರು.

ನೂತನ ವಿಜಯನಗರ ಜಿಲ್ಲೆಯಲ್ಲಿ ನೀರಿನಿಂದ ಸರಣಿ ಸಾವು: ಪರಿಹಾರ ಘೋಷಿಸಿದ ಸಿಎಂ

ಆಹಾರ ವಿತರಣೆಗೆ ದಿನನಿತ್ಯ ಒಟ್ಟು 2 ಲಕ್ಷ ವ್ಯಯವಾಗುತ್ತಿದ್ದು, ಎಲ್ಲಿಯವರೆಗೂ ಆಹಾರ ವಿತರಿಸಲು ನನ್ನಿಂದ ಸಾಧ್ಯವಾಗುತ್ತದೆಯೋ ಅಲ್ಲಿಯವರೆಗೂ ವಿತರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಬಳಿಕ ನವರಾತ್ರಿ ಹಬ್ಬದ ಅಂಗವಾಗಿ ತಾಲೂಕಿನ ಅನಂತನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ‘ಮನೆ- ಮನೆಗೆ ಬಣ್ಣ’ ಎನ್ನುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ತಾಲೂಕಿನ ದೇವರತಿಮ್ಮಾಲಾಪುರದ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಈ ವೇಳೆ ಮಠದ ಸಣ್ಣ ಹಾಲಸ್ವಾಮಿಗಳು, ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ. ಉಚ್ಚಂಗೆಪ್ಪ, ಪುರಸಭೆ ಮಾಜಿ ಸದಸ್ಯಅರುಣ ಪೂಜಾರ, ಇರ್ಫಾನ್‌ ಮುದುಗಲ್‌, ತೆಲಿಗಿ ಮಂಜುನಾಥ, ತೆಲಿಗಿ ಉಮಾಕಾಂತ, ಚಿಗಟೇರಿ ಯುವ ಕಾಂಗ್ರೆಸ್‌ ಉಪಾಧ್ಯಕ್ಷ ಸಾಸ್ವಿಹಳ್ಳಿ ನಾಗರಾಜ್‌, ಅಡವಿಹಳ್ಳಿ ಗ್ರಾಪಂ ಸದಸ್ಯ ಪೂಜಾರ ಪ್ರಸನ್ನ, ಮುಖಂಡರಾದ ತಿಪ್ಪನಾಯಕನಹಳ್ಳಿ ತಿಮ್ಮಣ್ಣ, ಸುರೇಶ ಮಂಡಕ್ಕಿ, ರಾಯದುರ್ಗದ ದುರುಗಪ್ಪ, ಎಚ್‌. ಬಾಲಾಜಿ, ಅಣ್ಣೇಶ, ಪಿ. ಹಾಲೇಶ ಸೇರಿದಂತೆ ಇತರರು ಇದ್ದರು.
 

click me!