
ಗೋಕಾಕ(ನ.20): ಮಾಜಿ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಸಹೋದರ ರಮೇಶ್ ಜಾರಕಿಹೊಳಿ ವಿರುದ್ಧ ಏಕವಚನದಲ್ಲಿ ಮಾತನಾಡ್ತಿದ್ದಾರೆ ಎಂದು ಗೋಕಾಕ ಬಿಜೆಪಿ ಕಾರ್ಯಕರ್ತರು ಚುನಾವಣಾಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆ, ಈ ಬಗ್ಗೆ ಚುನಾವಣಾಧಿಕಾರಿಗಳು ಸತೀಶ್ ಜಾರಕಿಹೊಳಿಗೆ ಎಚ್ಚರಿಕೆ ನೀಡಿದ್ದರು. ಈ ಸಂಬಂಧ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿ, ಚುನಾವಣೆ ಅಧಿಕಾರಿಗಳು ಏಕವಚನದಲ್ಲಿ ಮಾತನಾಡಬಾರದು ಎಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ನನಗೂ ರಮೇಶ್ ಜಾರಕಿಹೊಳಿ ಬಗ್ಗೆ ಏಕವಚನದಲ್ಲಿ ಮಾತನಾಡಲು ಇಷ್ಟವಿಲ್ಲ. ಆದ್ರೆ ರಾಜಕೀಯದಲ್ಲಿ ಕೆಲವು ಬಾರಿ ಹೀಗಾಗುತ್ತೆ. ಈ ರೀತಿ ದೂರು ಕೊಟ್ಟು ನಮ್ಮನ್ನ ಟಾರ್ಗೆಟ್ ಮಾಡಲಾಗಿದೆ ಅಂತಾ ನಾನು ಅಂದುಕೊಳ್ಳುವುದಿಲ್ಲ. ಕಳೆದ ನಾಲ್ಕು ತಿಂಗಳಿಂದ ಇಲ್ಲಿನ ಮತದಾರರಿಗೆ ಸಮೀಪವಾಗಿದ್ದೇವೆ ಎಂದು ಸತೀಶ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.
ಅಣ್ಣನ ಮೇಲೆ ವೈರಲ್ ವಿಡಿಯೋ ಬಿಟ್ಟ ತಮ್ಮ, ಸತೀಶ್ ವಿಡಿಯೋ ಬಾಂಬ್!
ರಮೇಶ್ ಜಾರಕಿಹೊಳಿ ವಿರುದ್ಧ ಹಾಡಿನ ಮೀಮ್ಸ್ ಬಿಡುಗಡೆಯಾಗಿವೆ. ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗ ರಮೇಶ್ ಜಾರಕಿಹೊಳಿ ನಾವು ಮೋಸ ಮಾಡಿದ್ದೇವೆ ಅಂತಿದ್ದಾರೆ. ಅದಕ್ಕಾಗಿ ಚುನಾವಣೆಯಲ್ಲಿ ಕಾಮಿಡಿಯಾಗಿರಲಿ ಜನ ಡೈವರ್ಟ್ ಆಗಲಿ ಅಂತಾ ಮೀಮ್ಸ್ ಮಾಡಿದ್ದೇವೆ ಎಂದರು.ಜನರು ತಾವು ಹೇಳಿದಂತೆಯೇ ಕೇಳಬೇಕು ಎಂದು ರಮೇಶ ಅಂದುಕೊಳ್ಳುತ್ತಾರೆ. ಹೀಗಾಗಿ ಈ ಮೀಮ್ಸ್ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಜಾರಕಿಹೊಳಿ ಬ್ರದರ್ಸ್ ಒಂದೇ ಅಂತಾ ರಮೇಶ್ ಜಾರಕಿಹೊಳಿ ಟೀಮ್ ಬಿಂಬಿಸುತ್ತಿದ್ದಾರೆ ಎಂಬ ಮಾತಿನ ಬಗ್ಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿ, ಅವರು ನಮ್ಮ ಟೀಮ್‌ನಿಂದ ಈ ರೀತಿ ಮಾಡಿ ಲಾಭ ಪಡೆಯುತ್ತಿದ್ದಾರೆ. ಜನರು ಈಗ ಅವರ ಮಾತನ್ನು ನಂಬುವುದಿಲ್ಲ. ಗೋಕಾಕ್‌ನಲ್ಲಿ ರಾಜಕೀಯ ಬದಲಾವಣೆ ಹಾಗೂ ಎಲ್ಲರಿಗೂ ಸಮಾನತೆ ಆಗಬೇಕೆಂಬ ಉದ್ದೇಶದಿಂದ ಲಖನ್ ಜಾರಕಿಹೊಳಿ ಸ್ಪರ್ಧೆ ಮಾಡುತ್ತಿದ್ದಾರೆ ಎಂದರು.
ನಾನು 20 ವರ್ಷಗಳಿಂದ ರ‌್ಯಾಂಕ್ ಸ್ಟೂಡೆಂಟ್
ಕಳೆದ 20 ವರ್ಷಗಳಿಂದ ನಾನು ರ‌್ಯಾಂಕ್ ಸ್ಟೂಡೆಂಟ್. ನಾನು ಪ್ರಶ್ನೆಪತ್ರಿಕೆ ಲೀಕ್ ಮಾಡಲ್ಲ ಎಂದು ಗೋಕಾಕ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ತಿಳಿಸಿದ್ದು, ಇದರೊಂದಿಗೆ ಗೋಕಾಕ್ ಕ್ಷೇತ್ರದ ರಾಜಕೀಯದ ಆಳವನ್ನು ಬಲ್ಲೆ ಎಂಬುದನ್ನು ಸೂಚ್ಯವಾಗಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮತ್ತು ಸತೀಶ್ ಜಾರಕಿಹೊಳಿ ಸ್ಟಾರ್ ಪ್ರಚಾರಕರಿದ್ದಂತೆ. ನೀವು ಎಷ್ಟೇ ಟ್ವಿಸ್ಟ್ ಮಾಡಿ ಪ್ರಶ್ನೆ ಕೇಳಿದರೂ ನಾನು ಪ್ರಶ್ನೆಪತ್ರಿಕೆ ಲೀಕ್ ಮಾಡಲ್ಲ ಎಂದರು.
ಕಳೆದ 20 ವರ್ಷದಿಂದ ರಮೇಶ್ ಜಾರಕಿಹೊಳಿ ಮಾತನ್ನು ಕೇಳುತ್ತಿದ್ದೇವೆ. ಆಗ ನಾವು ಅವರಿಗೆ ಒಳ್ಳೆಯವರಾಗಿದ್ದೆವು. ಅವರ ಅಳಿಯಂದಿರ ಭ್ರಷ್ಟಾಚಾರ ಹೊರಗೆ ತೆಗೆದಿದ್ದಕ್ಕೆ ಈಗ ನಾವು ಬೆನ್ನಿಗೆ ಚೂರಿ ಹಾಕಿದಂತಾಗುತ್ತಾ? ಎಂದು ಪ್ರಶ್ನಿಸಿದ ಲಖನ್, ರಮೇಶ್ ಮತ್ತು ಅವರ ಅಳಿಯಂದಿರು ಕ್ಷೇತ್ರದ ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ. ರಮೇಶ್ ಜಾರಕಿಹೊಳಿ ದಿನವೊಂದಕ್ಕೆ ಹೇಳಿಕೆ ಕೊಡ್ತಾರೆ. ನನಗೆ ಟಿಕೆಟ್ ತಪ್ಪಿಸಲು ನನ್ನ ಪ್ರೀತಿಯ ತಮ್ಮ ಅಂತಿದ್ದರು. ನನಗೆ ‘ಬಿ’ ಫಾರಂ ಸಿಗುತ್ತಿದ್ದಂತೆ ಬೆನ್ನಿಗೆ ಚೂರಿ ಹಾಕಿದೆ ಅಂತಿದ್ದಾರೆ. ಅಣ್ಣತಮ್ಮಂದಿರ ನಡುವೆ ಜಗಳ ಹಚ್ಚಿದ್ದು ರಮೇಶ್ ಜಾರಕಿಹೊಳಿಯೇ ಎಂದು ದೂರಿದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪ್ರಚಾರಕ್ಕೆ ಬರಲಿದ್ದಾರೆ. ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ್, ಡಿ.ಕೆ.ಶಿವಕುಮಾರ್ ಪ್ರಚಾರಕ್ಕೆ ಬರುವ ಕುರಿತು ಸತೀಶ್ ಜಾರಕಿಹೊಳಿ ಮಾಹಿತಿ ನೀಡಲಿದ್ದಾರೆ ಎಂದರು.
ಮಾತನಾಡದ ರಮೇಶ್-ಲಖನ್
ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ ಅಕ್ಕಪಕ್ಕದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಮತ್ತು ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಕುಳಿತು ಮಾತುಕತೆ ನಡೆಸಿದರು. ಇನ್ನೂ ಒಂದೇ ಕೊಠಡಿಯಲ್ಲಿದ್ದರೂ ಅಣ್ಣನಿಂದ ಲಖನ್ ಜಾರಕಿಹೊಳಿ ಅಂತರ ಕಾಯ್ದುಕೊಂಡರು.
ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9 ರಂದು ಮತ ಎಣಿಕೆ ನಡೆಯಲಿದೆ.