ಮುಂಬರುವ ವಿಧಾನಸಭಾ ಚುನಾವಣೆಗೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ವಿಶ್ವಾಸವನ್ನು ಮಾಜಿ ಸಚಿವ ಸೊಗಡು ಶಿವಣ್ಣ ವ್ಯಕ್ತಪಡಿಸಿದ್ದಾರೆ
ತುಮಕೂರು : ಮುಂಬರುವ ವಿಧಾನಸಭಾ ಚುನಾವಣೆಗೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ವಿಶ್ವಾಸವನ್ನು ಮಾಜಿ ಸಚಿವ ಸೊಗಡು ಶಿವಣ್ಣ ವ್ಯಕ್ತಪಡಿಸಿದ್ದಾರೆ
ಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸದ್ಯದಲ್ಲೇ ಎನ್.ಆರ್. ಕಾಲೋನಿಯಿಂದ ಜೋಳಿಗೆ ಹಿಡಿದು ಮತ ಭಿಕ್ಷೆಯನ್ನು ಪ್ರಾರಂಭಿಸುವೆ. ನನ್ನ ಅಭಿಮಾನಿಗಳು, ಕಾರ್ಯಕರ್ತರು ಜೋಳಿಗೆಗೆ ಠೇವಣಿ ಹಣವನ್ನು ನೀಡಲಿದ್ದಾರೆ ಎಂದರು.
1975ರಿಂದ ಪಕ್ಷ ಕಟ್ಟಿಕೊಂಡು ಬಂದವನು, ನಾಲ್ಕು ಬಾರಿ ಗೆದ್ದು, ಸಚಿವನಾಗಿ ಕೆಲಸ ಮಾಡಿದ್ದೇನೆ. ನಾನು ಮಾಡಿದ ಅಭಿವೃದ್ಧಿ ಕೆಲಸಗಳೇ ನನಗೆ ಶ್ರೀರಕ್ಷೆ, ಪಕ್ಷದ ನಾಯಕರು, ತುಮಕೂರು ಜನತೆ ನನ್ನ ಪರವಾಗಿದ್ದಾರೆ, ಎಲ್ಲವನ್ನೂ ಪಕ್ಷ ಮತ್ತು ಜನತೆಯ ಮುಂದೆ ಇಡುತ್ತೇನೆ. ಈ ಬಾರಿ ಯಾರು ಏನೇ ಹೇಳಿಕೊಂಡರೂ ನಾನು ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದ ಶಿವಣ್ಣನವರು, ನನ್ನ ಅಭಿಮಾನಿಗಳು, ಹಿತೈಷಿಗಳೇ ನನ್ನನ್ನು ಚುನಾವಣೆಗೆ ನಿಲ್ಲುವಂತೆ ಒತ್ತಾಯಿಸಿದ್ದು, ಈ ಹಿಂದಿನ ನಾಲ್ಕು ಬಾರಿಯ ಅವಧಿಯಲ್ಲಿನ ಶಾಂತಿ ಮಂತ್ರ ಮತ್ತು ಕಾಯಕ ಮಂತ್ರವೇ ನನಗೆ ಶ್ರೀರಕ್ಷೆ ಎಂದರು.
ಈಗಾಗಲೇ ಚುನಾವಣಾ ಸಿದ್ಧತೆ ನಡೆಸಿದ್ದೇನೆ. ಇನ್ನು 10 ರಿಂದ 12 ದಿವಸದೊಳಗೆ ಮತಭಿಕ್ಷೆಗೆ ಹೊರಡುವೆ. ಪಕ್ಷದಿಂದ ಬಿ ಫಾರಂಗೆ ಕಾಯುತ್ತಿರುವುದಾಗಿ ತಿಳಿಸಿದರು. 2013 ಹಾಗೂ 2018ರಲ್ಲಿ ಬೇರೆ ಪಕ್ಷದ ದೊಡ್ಡ ದೊಡ್ಡ ಲೀಡರ್‌ಗಳು ಪಕ್ಷಕ್ಕೆ ಆಹ್ವಾನ ಕೊಟ್ಟರು. ಆದರೆ ನನ್ನದು ಜನಸಂಘದ ರಕ್ತ. ಹೀಗಾಗಿ ಎಲ್ಲೂ ಹೋಗುವುದಿಲ್ಲ , ಬಿಜೆಪಿಯಲ್ಲೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.
ಸ್ಪರ್ಧಿಸಲು ನನಗೆ ತಾಕತ್ ಇದೆ. ನನಗೆ ಯಾರೂ ಸರಿಸಾಟಿಯಿಲ್ಲ ಎಂದ ಅವರು ಈ ಚುನಾವಣೆಯಲ್ಲಿ ಕಣದಲ್ಲಿರುವುದು ನೂರಕ್ಕೆ ನೂರರಷ್ಟು ಪಕ್ಕ ಎಂದರು.
ಚಿಕ್ಕನಾಯಕನಹಳ್ಳಿಯ ಮಾಜಿ ಶಾಸಕ ಕೆ.ಎಸ್.ಕಿರಣ…ಕುಮಾರ್ ಕಾಂಗ್ರೆಸ್ ಸೇರ್ಪಡೆಗೊಂಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಕೆಲವರು ರಾಜಕೀಯ ಆಸೆ-ಅಕಾಂಕ್ಷೆಗಳನ್ನಿಟ್ಟುಕೊಂಡು ಪಕ್ಷಾಂತರಿಗಳಾಗುತ್ತಾರೆ, ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ನನ್ನದು ಜನಸಂಘದ ರಕ್ತ, ಆದ್ದರಿಂದ ಯಾವ ಆಮಿಷಗಳಿಗೆ ಒಳಗಾಗಿ ಪಕ್ಷಾಂತರ ಮಾಡುವುದಿಲ್ಲ, ನಾನು ಕೊನೆಯವರಿಗೂ ಬಿಜೆಪಿಯಲ್ಲೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಾಂತಕುಮಾರ್, ಜಯಸಿಂಹ, ನವೀನ್ ಮುಂತಾದವರಿದ್ದರು.
ಭರ್ಜರಿ ತಯಾರಿ
ತುಮಕೂರು : ಬಿಜೆಪಿ ತುಮಕೂರು ಸಂಘಟನಾತ್ಮಕ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಂಡ ಜಯ ಪಡೆಯಲು ಕೇಂದ್ರ, ರಾಜ್ಯದ ಪ್ರಮುಖ ದಿಗ್ಗಜ ನಾಯಕರು ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಆಗಮಿಸುತ್ತಿದ್ದು, ಬಿಜೆಪಿ ಭರ್ಜರಿ ತಯಾರಿ ನಡೆಸಿದೆ. ಈ ಬಾರಿ ಕರ್ನಾಟಕ ವಿಧಾನಸಭೆ - 2023ರ ಚುನಾವಣೆ ಹೈ-ವೋಲ್ಟೇಜ್ ಚುನಾವಣೆಯಾಗಿರುವುದರಿಂದ ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ್ಲೂ ಭರ್ಜರಿ ಗೆಲುವಿಗೆ ಭಾರೀ ರಣತಂತ್ರವನ್ನು ಹೆಣೆದಿದೆ.
ಬಿಜೆಪಿ ಅಭ್ಯರ್ಥಿಗಳ ಭಾರೀ ಅಂತರದ ಗೆಲುವಿಗೆ ಕೇಂದ್ರ, ರಾಜ್ಯ ಸರ್ಕಾರಗಳ ಜನಪರ ಮತ್ತು ಅಭಿವೃದ್ಧಿ ಪರ ಕಾರ್ಯಕ್ರಮಗಳನ್ನು ಮತದಾರರಿಗೆ ತಲುಪುವಂತೆ ಬೂತ್ ಮಟ್ಟದಿಂದ ಕಾರ್ಯಕರ್ತರನ್ನು ಹುರಿದುಂಬಿಸಿ, ಮನೆ-ಮನ ಮುಟ್ಟುವ ಕಾರ್ಯಕ್ರಮಗಳನ್ನು ನಡೆಸಲು ಬಿಜೆಪಿ ಕಾರ್ಯೋಮುಖವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಸುದ್ದಿಗೋಷ್ಠಿಯಲ್ಲಿ ಹೇಳಿದರು.