ಕೊರೋನಾ ವೈರಸ್ ದೃಢ ಪಟ್ಟಿರುವ ವ್ಯಕ್ತಿಯ ಮನೆಯ ಹತ್ತಿರದ 20-30 ಮನೆಗಳನ್ನು ಸೀಲ್‌ಡೌನ್| ಈ ವ್ಯಾಪ್ತಿಯ ಪ್ರತಿಯೊಂದು ಮನೆ ಸದಸ್ಯರಿಗೆ ಆರೋಗ್ಯ ಪರೀಕ್ಷೆ| ಅಡವಿಮಲ್ಲನಕೆರೆ ತಾಂಡದಲ್ಲಿ ಒಬ್ಬ ವ್ಯಕ್ತಿಗೆ ಕೊರೋನಾ ವೈರಸ್ ದೃಢ|
ಹೂವಿನಹಡಗಲಿ(ಜೂ. 27): ಪಟ್ಟಣ ಹಾಗೂ ತಾಲೂಕಿನ ಕುರುವತ್ತಿ, ಅಡವಿಮಲ್ಲನಕೆರೆ ತಾಂಡ ಸೇರಿದಂತೆ ಮೂವರು ವ್ಯಕ್ತಿಗಳಿಗೆ ಕೊರೋನಾ ವೈರಸ್ ದೃಢ ಪಟ್ಟಿರುವ ಹಿನ್ನೆಲೆಯಲ್ಲಿ ಆಯಾ ಪ್ರದೇಶದ 100 ಹಾಗೂ 200 ಮೀಟರ್ ಪ್ರದೇಶವನ್ನು ತಾಲೂಕು ಆಡಳಿತ ಸೀಲ್‌ಡೌನ್ ಮಾಡಿದೆ.
ಈ ಕುರಿತು ಹರಪನಹಳ್ಳಿ ಸಹಾಯಕ ಆಯುಕ್ತ ಪ್ರಸನ್ನ ಕುಮಾರ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ಮಾಡಿದರುದರು. ಕೊರೋನಾ ವೈರಸ್ ದೃಢ ಪಟ್ಟಿರುವ ವ್ಯಕ್ತಿಯ ಮನೆಯ ಹತ್ತಿರದ 20-30 ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದ್ದು, ಈ ವ್ಯಾಪ್ತಿಯ ಪ್ರತಿಯೊಂದು ಮನೆ ಸದಸ್ಯರನ್ನು ಆರೋಗ್ಯ ಪರೀಕ್ಷೆ ಮಾಡಬೇಕೆಂದು ಎಸಿ ಪ್ರಸನ್ನಕುಮಾರ ತಹಸೀಲ್ದಾರ್ ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದರು.
ಪಟ್ಟಣದಲ್ಲಿ ವಾಸವಾಗಿರುವ 73 ವರ್ಷದ ವ್ಯಕ್ತಿಗೆ ಕೊರೋನಾ ವೈರಸ್ ಬಂದಿರುವ ಕುರಿತು ಈವರೆಗೂ ತಿಳಿದು ಬಂದಿಲ್ಲ. ಆದರಿಂದ ಪಟ್ಟಣದ ಲೈಫ್‌ಲೈನ್ ಆಸ್ಪತ್ರೆಗೆ ಈ ಹಿಂದೆ ಯಾರಾದರೂ, ಕೊರೋನಾ ವೈರಸ್ ಇರುವ ವ್ಯಕ್ತಿ ಬಂದು ಹೋಗಿರುವ ಬಗ್ಗೆ ಪತ್ತೆ ಮಾಡಬೇಕಿದೆ. ಜತೆಗೆ ಪಟ್ಟಣದ 73 ವರ್ಷದ ವ್ಯಕ್ತಿಯು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಅವರಿಗೆ ಚಿಕಿತ್ಸೆ ನೀಡಿರುವ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈಗಾಗಲೇ ಲೈಫ್‌ಲೈನ್ ಆಸ್ಪತ್ರೆಯ ಸಿಬ್ಬಂದಿಯು ಪ್ರಾಥಮಿಕ ಸಂಪರ್ಕ ಹೊಂದಿರುವ ಕುರಿತು ಮಾಹಿತಿ ಸಂಗ್ರಹಿಸಲು ಆರೋಗ್ಯ, ಪುರಸಭೆ ಹಾಗೂ ತಾಲೂಕು ಆಡಳಿತ ಸೇರಿದಂತೆ ಇತರೆ ಸಿಬ್ಬಂದಿಗಳ ತಂಡ ರಚಿಸಲಾಗಿದೆ ಎಂದು ಎಸಿ ಪ್ರಸನ್ನಕುಮಾರ ಹೇಳಿದರು.
ಬಳ್ಳಾರಿ: ಕೊರೋನಾಗೆ ಮತ್ತೊಂದು ಬಲಿ, ಒಂದೇ ದಿನ ಹೊಸ 47 ಪಾಸಿಟಿವ್ ಕೇಸ್
ಲೈಫ್‌ಲೈನ್ ಆಸ್ಪತ್ರೆಯಲ್ಲಿ 30ಕ್ಕೂ ಹೆಚ್ಚು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದು, ಇವರನ್ನು ಆಸ್ಪತ್ರೆಯಲ್ಲಿಯೇ 7 ದಿನ ಕ್ವಾರಂಟೈನ್ ಮಾಡಲಾಗಿದೆ. 7 ದಿನ ಆಸ್ಪತ್ರೆ ತೆರೆಯಬಾರದು ಎಂದು ಟಿಎಚ್‌ಒ ಡಾ. ಶಿವಕುಮಾರ ಸಾಲಗೇರಿ ಸೂಚಿಸಿದರು.
ಈಗಾಗಲೇ ಅಡವಿಮಲ್ಲನಕೆರೆ ತಾಂಡದಲ್ಲಿ ಒಬ್ಬ ವ್ಯಕ್ತಿಗೆ ಕೊರೋನಾ ವೈರಸ್ ದೃಢ ಪಟ್ಟಿದ್ದು, ಈ ವ್ಯಕ್ತಿ ಜಿಂದಾಲ್ ಕಂಪನಿಯಲ್ಲಿ ಆಟೋ ಓಡಿಸುತ್ತಿದ್ದ, ಈ ವ್ಯಕ್ತಿಯು ಜೂ. 20ರಂದು ಗ್ರಾಮಕ್ಕೆ ಬಂದಿದ್ದು, ಈ ವ್ಯಕ್ತಿಯು ಮನೆಯಲ್ಲಿ 21 ದಿನಗಳ ಕಾಲ ಇರಬೇಕೆಂದು ತಿಳಿಸಿದ್ದರೂ, ಗ್ರಾಮದ ಅನೇಕ ಕಡೆಗಳಲ್ಲಿ ತಿರುಗಾಡಿದ್ದಾನೆಂದು ತಿಳಿದು ಬಂದಿದೆ. ಆ ವ್ಯಕ್ತಿಯ ಮನೆಯ ಸುತ್ತಲ್ಲೂ 20-30 ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ತಾಲೂಕಿನ ಕುರುವತ್ತಿ ಗ್ರಾಮದ 15 ವರ್ಷದ ಸೋಂಕಿತ ಯುವತಿ ರಾಣಿಬೆನ್ನೂರು ತಾಲೂಕಿನ ಮುದೇನೂರಿಗೆ ಹೋಗಿದ್ದಳು ಎಂಬ ಮಾಹಿತಿ ಇದೆ. ಕುರುವತ್ತಿ ಗ್ರಾಮದ ಬಸವೇಶ್ವರ ನಗರ ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ.
ಈ ವೇಳೆ ತಹಸೀಲ್ದಾರ್ ಕೆ. ವಿಜಯಕುಮಾರ, ತಾಪಂ ಇಒ ಯು.ಎಚ್. ಸೋಮಶೇಖರ, ತಾಲೂಕು ಆರೋಗ್ಯಾಧಿಕಾರಿ ಡಾ. ಶಿವಕುಮಾರ ಸಾಲಗೇರಿ, ಪುರಸಭೆ ಮುಖ್ಯಾಧಿಕಾರಿ ಡಿ.ಬಿ. ವೀರಣ್ಣ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ಪಿ.ಎಂ. ಅಶೋಕ, ಕಂದಾಯ ಹಾಗೂ ಪುರಸಭೆ ಮತ್ತು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.