300 ಮಕ್ಕಳಿದ್ದಾರೆ ಶಿಕ್ಷಕರಿಲ್ಲ, ಒಂದೇ ಕೊಠಡಿ ಎರಡು ತರಗತಿಗಳಿಗೆ ಪಾಠ, ಇದು ಸರ್ಕಾರಿ ಶಾಲೆಯೋ, ಕುರಿದೊಡ್ಡಿಯೋ?

Kannadaprabha News   | Kannada Prabha
Published : Jun 12, 2026, 09:03 AM IST
Huvanahadagali govt school with 6 rooms for 300 children

ಸಾರಾಂಶ

ಹೂವಿನಹಡಗಲಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 300 ವಿದ್ಯಾರ್ಥಿಗಳಿದ್ದರೂ, ಇರುವುದು ಕೇವಲ 6 ಶಿಥಿಲಗೊಂಡ ಕೊಠಡಿಗಳು. ಕೊಠಡಿಗಳ ತೀವ್ರ ಕೊರತೆಯಿಂದಾಗಿ ಮಕ್ಕಳು ಮರದ ನೆರಳಿನಲ್ಲಿ ಮತ್ತು ಶಾಲಾ ಕಟ್ಟೆಯ ಮೇಲೆ ಕುಳಿತು ಪಾಠ ಕಲಿಯುವ ದಯನೀಯ ಸ್ಥಿತಿ ನಿರ್ಮಾಣವಾಗಿದೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ (ಜೂ.12): ಈ ಸರ್ಕಾರಿ ಶಾಲೆಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸರಿಸುಮಾರು 300 ಮಕ್ಕಳು ದಾಖಲಾತಿ ಆಗಿದೆ. ಆದರೆ, ಇಲ್ಲಿರುವುದು ಕೇವಲ 6 ಕೊಠಡಿಗಳು. ಮಕ್ಕಳು ಕುಳಿತುಕೊಳ್ಳಲು ಕೋಣೆಗಳೇ ಇಲ್ಲದೆ ಈ ಶಾಲೆ ಅಕ್ಷರಶಃ ಕುರಿ ದೊಡ್ಡಿಯಾಗಿದೆ. ಮರದ ನೆರಳು, ಶಾಲೆಯ ಕಟ್ಟೆಯನ್ನು ಆಶ್ರಯಿಸಿ ಮಕ್ಕಳು ಓದುತ್ತಿವೆ.

ಹೌದು, ತಾಲೂಕು ಕೇಂದ್ರದಲ್ಲೇ ಮಿನಿ ವಿಧಾನಸೌಧ ಹೆಸರಿನಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಇದು.

ಕ್ಲಾಸ್ ಮಾಡಲು ಅಗತ್ಯ ಕೊಠಡಿಗಳೇ ಇಲ್ಲ!

ಈ ಶಾಲೆಯಲ್ಲಿ ಎಲ್‌ಕೆಜಿ(LKG), ಯುಕೆಜಿ(UKG), 1 ರಿಂದ 7ನೇ ತರಗತಿವರೆಗೂ ತರಗತಿ ನಡೆಯುತ್ತಿವೆ. 2018ರಲ್ಲಿ ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲು ಈ ಶಾಲೆಗೆ ಅನುಮತಿ ಸಿಕ್ಕಿದೆ. ಪಟ್ಟಣದ ಮಕ್ಕಳು ಸೇರಿ ತಾಲೂಕಿನ ಅಕ್ಕಪಕ್ಕದ ಹಳ್ಳಿಗಳ ಪಾಲಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಲು ದುಂಬಾಲು ಬಿದ್ದಿರುವ ಕಾರಣ ಆಂಗ್ಲ ಮಾಧ್ಯಮ ಶಾಲೆಗೆ ಬೇಡಿಕೆ ಹೆಚ್ಚಾಗಿದೆ. ಕಳೆದ 7 ವರ್ಷಗಳ ಹಿಂದೆ ಆಂಗ್ಲ ಮಾಧ್ಯಮ ತರಗತಿಗಳು ಆರಂಭವಾಗಿದ್ದು, ಅಂದಿನಿಂದ ಈವರೆಗೂ ಆಂಗ್ಲ ಮಾಧ್ಯಮ ಶಾಲೆಗೆ, ಅಗತ್ಯವಿರುವ ತರಗತಿ ನಡೆಸಲು ಕೊಠಡಿಗಳೇ ಇಲ್ಲ.

ಪೂರ್ಣಾವಧಿ ಶಿಕ್ಷರಿಲ್ಲ; ಅತಿಥಿ ಶಿಕ್ಷಕರುಗಳೇ ಗತಿ!

ಇತ್ತ ಪೂರ್ಣಾವಧಿ ಶಿಕ್ಷಕರೂ ಇಲ್ಲದೇ ಅತಿಥಿ ಶಿಕ್ಷಕರೇ ಆಸರೆಯಾಗಿದ್ದಾರೆ.ಇಲ್ಲಿ 7 ಕೋಣೆಗಳಿವೆ. ಇದರಲ್ಲಿ 5 ಕೋಣೆಗಳು ಮಳೆಗೆ ಸೋರುತ್ತಿದ್ದವು. ಅಕ್ಷರ ಆವಿಷ್ಕಾರ ಯೋಜನೆಯಡಿ ಅವುಗಳ ಚಾವಣಿ ಮೇಲೆ ತಗಡಿನ ಸೀಟ್‌ ಹಾಕಲಾಗಿದೆ. ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರಿಗೆ ಒಂದು ಕೊಠಡಿ ಮೀಸಲಿದೆ. ಉಳಿದಂತೆ 6 ಕೋಣೆಗಳು ಶಿಥಿಲವಾಗಿವೆ. ಚಾವಣಿಯ ಸಿಮೆಂಟ್‌ ಉದುರುತ್ತಿದೆ. ಇಂತಹ ಅಪಾಯಕಾರಿ ಸ್ಥಿತಿಯಲ್ಲಿ ಸರ್ಕಾರಿ ಶಾಲೆಗೆ ಸೇರಿದ ಮಕ್ಕಳು ಓದುವ ಪರಿಸ್ಥಿತಿ ಬಂದಿದೆ.

ಒಂದೇ ಕೋಣೆ, ಎರಡು ತರಗತಿ ಮಕ್ಕಳಿಗೆ ಪಾಠ!

ಒಂದೇ ಕೋಣೆಯಲ್ಲಿ ಎರಡು ತರಗತಿಗಳ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಜತೆಗೆ ಉಳಿದ ತರಗತಿ ಮಕ್ಕಳನ್ನು ಕೋಣೆ ಮುಂದಿನ ಕಟ್ಟೆ ಹಾಗೂ ಮರದ ನೆರಳಿನಲ್ಲಿ ಪಾಠ ಮಾಡುತ್ತಿದ್ದಾರೆ. ಕೋಣೆಯ ಗೋಡೆಗೆ ಬ್ಲಾಕ್‌ ಬೋರ್ಡ್‌ ತೂಗುಹಾಕಿ ಮಕ್ಕಳಿಗೆ ಅಕ್ಷರಾಭ್ಯಾಸದ ಕಲಿಕೆ ನಡೆಯುತ್ತಿದೆ. ಹೊರಗಡೆಯೂ ಇಬ್ಬರು ಶಿಕ್ಷಕರು ಕುಳಿತು ಮಕ್ಕಳಿಗೆ ಪಾಠ ಓದಿಸುತ್ತಾರೆ. ಇನ್ನು ಕೆಲವು ಮಕ್ಕಳು ಮರದ ನೆರಳಿನಲ್ಲೇ ಅಭ್ಯಾಸ ಮಾಡುತ್ತಿದ್ದಾರೆ.

ಬಿಸಿಯೂಟದ ಕೋಣೆ ಕುಸಿದು ಬೀಳಲಿದೆ!

ಈ ಶಾಲೆಯ ಅಕ್ಷರ ದಾಸೋಹ ಯೋಜನೆಯ ಬಿಸಿಯೂಟದ, ಕೋಣೆ ಕುಸಿದು ಬೀಳಲು ದಿನ ಎಣಿಸುತ್ತಿದೆ. ಮಳೆ ಬಂದಾಗ ಸಂಪೂರ್ಣ ಸೋರುತ್ತಿದೆ. ಮಹಿಳೆಯರು ಅಪಾಯದಡಿ ಅನ್ನ ಬೇಯಿಸುತ್ತಿದ್ದಾರೆ. 30 ಮೀಟರ್‌ ಉದ್ದ, 40 ಮೀಟರ್‌ ಅಗಲ ಈ ಶಾಲೆ ನಿವೇಶನ ಹೊಂದಿದೆ. ಇಂತಹ ಕಿರಿದಾದ ಜಾಗದಲ್ಲಿ ಕೋಣೆಗಳು ಮಂಜೂರಾದರೂ ನಿರ್ಮಾಣಕ್ಕೆ ನಿವೇಶನವಿಲ್ಲ.

ಪಟ್ಟಣದ ಮಿನಿ ವಿಧಾನಸೌಧ ಶಾಲೆಯಲ್ಲಿ ತರಗತಿ ನಡೆಸಲು ಕೊಠಡಿಗಳ ಕೊರತೆ ಇದೆ. ಮಕ್ಕಳು ಹೊರಗಡೆ ಕುಳಿತು ಅಭ್ಯಾಸ ಮಾಡುತ್ತಿದ್ದಾರೆ. ಈ ಸಮಸ್ಯೆ ಕುರಿತು ಶಾಸಕರಿಗೆ ಪತ್ರ ಬರೆದು ಕೊಠಡಿ ನೀಡುವಂತೆ ಮನವಿ ಮಾಡಿದ್ದೇವೆ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ಕೆ.

ಆಂಗ್ಲ ಮಾಧ್ಯಮ ಶಾಲೆ ಆಗಿರುವ ಕಾರಣ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಾಗಿದೆ. ಅಕ್ಕಪಕ್ಕದೂರಿನ ಮಕ್ಕಳು ಈ ಶಾಲೆಯ ಪ್ರವೇಶ ಪಡೆಯುತ್ತಿದ್ದಾರೆ. ತರಗತಿ ನಡೆಸಲು ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಹೂವಿನಹಡಗಲಿ ಮಿನಿ ವಿಧಾನಸೌಧ ಶಾಲೆಯ ಮುಖ್ಯ ಶಿಕ್ಷಕಿ ಎಲ್‌.ಲಲಿತಾಬಾಯಿ.

PREV
Read more Articles on
click me!

Recommended Stories

ಕೊಲೆ ನಡೆದು 2 ವರ್ಷ: ಜೈಲಿನಲ್ಲಿ ವಾರಕ್ಕೆ 3 ಪುಸ್ತಕ ಓದುತ್ತಿರುವ ದರ್ಶನ್, ಬರವಣಿಗೆಯಲ್ಲಿ ನಿರತಳಾದ ಪವಿತ್ರಾಗೌಡ!
Bengauru Ladies PG: ಬೆಂಗಳೂರಲ್ಲಿ ರಾತ್ರೋರಾತ್ರಿ ಪಿಜಿಯಲ್ಲಿ ಕಿರಿಕ್, ಮಾಲೀಕರ ವಿರುದ್ಧ ತಿರುಗಿಬಿದ್ದ ಯುವತಿಯರು