
ಬೆಂಗಳೂರು (ನ.8): ಆನ್‌ಲೈನ್ ಬೆಟ್ಟಿಂಗ್ ಆಡಲು ಹೆಂಡತಿ ಹಣ ನೀಡದ ಕಾರಣಕ್ಕೆ ಆಕೆಯ ಬೆತ್ತಲೆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಗಂಡ ವಿಕೃತಿ ಮೆರೆದಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ತನ್ನ ಬೆತ್ತಲೆ ಫೋಟೋ ಪ್ರಕಟವಾಗಿದ್ದನ್ನು ಕಂಡ ಪತ್ನಿ, ಗಂಡನ ವಿರುದ್ಧವೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಮಾಲ್‌ನಲ್ಲಿ ಮೊದಲ ಬಾರಿಗೆ ಪರಿಚಯವಾಗಿದ್ದ ಗೋವಿಂದರಾಜು ಹಾಗೂ ವಸುಂಧರದೇವಿ ಬಳಿಕ ಪ್ರೀತಿ ಮಾಡಿ ಮದುವೆಯಾಗಿದ್ದರು. ಮದುವೆ ಆದ ಕೆಲವೇ ತಿಂಗಳಲ್ಲಿ ಗಂಡ ಆನ್ ಲೈನ್ ಬೆಟ್ಟಿಂಗ್ ಚಟಕ್ಕೆ ಬಿದ್ದಿರುವುದು ಪತ್ನಿಗೆ ಗೊತ್ತಾಗಿತ್ತು. ಇಂದು ಬದಲಾಗ್ತಾನೆ, ನಾಳೆ ಬದಲಾಗ್ತಾನೆ ಅಂತ ಎರಡು ವರ್ಷ ಪತ್ನಿ ಕಾದಿದ್ದಳು. ಕೊನೆಗೆ ನಾನು ಮುಖ್ಯನಾ..? ಆನ್ ಲೈನ್ ಗೇಮ್ ಮುಖ್ಯನಾ ಅಂತಾ ನೇರವಾಗಿ ಗಂಡನಿಗೆ ಕೇಳಿದ್ದಳು. ಇದಕ್ಕೆ ಆತ ಹೆಂಡತಿಗಿತ ಆನ್‌ಲೈನ್ ಗೇಮ್ ಮುಖ್ಯ ಎಂದಿದ್ದ.
ಗಂಡ ಗೋವಿಂದರಾಜು ಆನ್ ಲೈನ್ ಚಟಕ್ಕೆ ಪತ್ನಿ ವಸುಂಧರ ದೇವಿ ಬೇಸತ್ತು ಹೋಗಿದ್ದಳು. ಕೊನೆಗೆ ಪ್ರೀತಿಸಿ ಮದುವೆ ಆದ ಗಂಡ ಬೇಡ ಅಂತ ಆಂಧ್ರದಲ್ಲಿದ್ದ ತನ್ನ ತವರು ಮನೆಗೆ ಹೋಗಿದ್ದಳು. ಇತ್ತ ಆನ್ ಲೈನ್ ಬೆಟ್ಟಿಂಗ್ ನಲ್ಲಿ ಹಣ ಸೋತು ಗೋವಿಂದರಾಜು ಹೆಂಡತಿ ಜೊತೆ ಸಂಪರ್ಕ ಸಾಧಿಸುವ ಕೆಲಸ ಮಾಡಿದ್ದ. ಕೂಡಲೇ ಬೆಂಗಳೂರಿಗೆ ಬರಬೇಕು ಇಲ್ಲ ಅಂದ್ರೆ ನಿನ್ನ ಅಶ್ಲೀಲ ಪೋಟೋ ವೈರಲ್ ಮಾಡ್ತೀನಿ ಎಂದು ಬೆದರಿಕೆ ಹಾಕಿದ್ದ.
ಇದಕ್ಕೆ ಪತ್ನಿ ಜಗ್ಗಿರಲಿಲ್ಲ. ಕೊನೆಗೆ ಆಕೆಯ ಬೆತ್ತಲೆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಗೋವಿಂದರಾಜು ವಿಕೃತಿ ಮೆರೆದಿದ್ದ. ಗಂಡನ ವಿಕೃತಿಗೆ ಬೇಸತ್ತು ಬೆಂಗಳೂರಿಗೆ ಬಂದು ವಸುಂಧರದೇವಿ ಪಿಜಿಯಲ್ಲಿ ವಾಸವಿದ್ದಳು.
ಪಿಜಿಯಲ್ಲಿದ್ದ ವಸುಂಧರ ದೇವಿಗೆ ಗೋವಿಂದರಾಜು ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದ. ಹೆಂಡತಿಯ ಅಶ್ಲೀಲ ಫೊಟೋಗಳನ್ನು ಥ್ರೆಡ್ ಹಾಗೂ ಇತರ ಅಪ್ಲಿಕೇಶನ್‌ನಲ್ಲಿ ಹಾಕಿದ್ದ ಗೋವಿಂದರಾಜು ಇದು ವಿವಾದವಾಗುತ್ತಿದ್ದಂತೆ ಡಿಲೀಟ್ ಮಾಡಿದ್ದಾನೆ.
ಸದ್ಯ ಗಂಡನ ವಿಕೃತಿಗೆ ಬೇಸತ್ತು ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಗಂಡನಿಂದ ನೆಮ್ಮದಿ ಕೊಡಿಸಿ ಅಂತ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಸದ್ಯ ಎಫ್ ಐ ಆರ್ ದಾಖಲಿಸಿ ಗೋವಿಂದರಾಜು ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದು, ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.