ಕಬ್ಬಿನ ದರ ಹೆಚ್ಚಳಕ್ಕೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ: ಕುರುಬೂರು ಶಾಂತಕುಮಾರ

By Kannadaprabha NewsFirst Published Dec 25, 2022, 7:05 PM IST
Highlights

ಎಫ್‌ಆರ್‌ಪಿ ನಿಯಮ ಪ್ರಕಾರ 14 ದಿವಸದಲ್ಲಿ ಹಣ ಪಾವತಿಸಬೇಕು ಆದರೂ ಕಾರ್ಖಾನೆಗಳು ಉಲ್ಲಂಘನೆ ಮಾಡಿ, ಸಾವಿರಾರು ಕೋಟಿಗೂ ಹೆಚ್ಚು ಹಣ ಕಾನೂನು ಭಾಹಿರವಾಗಿ ಉಳಿಸಿಕೊಂಡಿದ್ದಾರೆ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದ ಕುರುಬೂರು ಶಾಂತಕುಮಾರ 

ಬೆಳಗಾವಿ(ಡಿ.25): ಕಬ್ಬಿನ ಎಫ್‌ಆರ್‌ಪಿ ದರ ಏರಿಕೆ, ಕಟಾವ ಕೂಲಿ ಸಾಗಾಣಿಕೆ ವೆಚ್ಚ ಕಡಿತ ಮಾಡುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 10 ದಿನಗಳ ಹಿಂದೆ ಭರವಸೆ ನೀಡಿದಂತೆ, ಕಬ್ಬು ಬೆಳೆಗಾರರ ಸಮಸ್ಯೆಗೆ ಕ್ರಮ ಕೈಗೊಳ್ಳಬೇಕು. ಬೆಂಗಳೂರಿನಲ್ಲಿ 33 ದಿನದಿಂದ ನಿರಂತರ ಆಹೋರಾತ್ರಿ ಧರಣಿ ಮುಂದುವರೆದಿದ್ದು ಡಿ. 26 ರಿಂದ ಸರದಿ ಉಪವಾಸ ನಡೆಸಲು ತೀರ್ಮಾನಿಸಲಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ತಿಂಗಳಿಂದ ಕಬ್ಬು ನುರಿಸಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಬ್ಬಿನ ಎಫ್‌ಆರ್‌ ಪಿ ಹಣವನ್ನೇ ಪಾವತಿಸಿಲ್ಲ. ಕೆಲವು ಕಾರ್ಖಾನೆಗಳು ನೆಪ ಮಾತ್ರಕ್ಕೆ ಅಲ್ಪ ಸ್ವಲ್ಪ ಪಾವತಿಸಿದ್ದಾರೆ. ಎಫ್‌ಆರ್‌ಪಿ ನಿಯಮ ಪ್ರಕಾರ 14 ದಿವಸದಲ್ಲಿ ಹಣ ಪಾವತಿಸಬೇಕು ಆದರೂ ಕಾರ್ಖಾನೆಗಳು ಉಲ್ಲಂಘನೆ ಮಾಡಿ, ಸಾವಿರಾರು ಕೋಟಿಗೂ ಹೆಚ್ಚು ಹಣ ಕಾನೂನು ಭಾಹಿರವಾಗಿ ಉಳಿಸಿಕೊಂಡಿದ್ದಾರೆ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಕಬ್ಬಿನ ಒಟ್ಟಾರೆ ಆದಾಯ ಪರಿಗಣಿಸಿ ರೈತರಿಗೆ ದರ ನಿಗದಿ: ಸಚಿವ ಶಂಕರ ಪಾಟೀಲ್‌

ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ ನಿಗದಿ ಮಾಡಿರುವ ಕಬ್ಬಿನ ಎಫ್‌ಆರ್‌ಪಿ ದರ , ಸಕ್ಕರೆ ಇಳುವರಿ ಮನದಂಡ ಅನ್ಯಾಯ ಸರಿಪಡಿಸುವಂತೆ, ಸಕ್ಕರೆ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರುವಂತೆ, ಕೇಂದ್ರ ಕೃಷಿ ಮಂತ್ರಿಗಳನ್ನು ವಿವಿಧ ರಾಜ್ಯಗಳ ರೈತ ಮುಖಂಡರುಗಳು,ಹಾಗೂ ಸಂಸದರ, ನಿಯೊಗದೊಂದಿಗೆ ಇತ್ತೀಚಿಗೆ ದೆಹಲಿಯಲ್ಲಿ ಭೇಟಿ ಮಾಡಿ ಒತ್ತಾಯಿಸಲಾಗಿದೆ, ಕೃಷಿ ಮಂತ್ರಿ ನರೇಂದ್ರ ಸಿಂಗ್‌ ತೂಮರ್‌ ಗಂಭೀರ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಕಬ್ಬಿನ ತೂಕದಲ್ಲಿ ರೈತರಿಗೆ ಮೋಸವಾಗುತ್ತಿದೆ ಎಂಬ ರಾಜ್ಯ ಕಬ್ಬು ಬೆಳೆಗಾರ ಸಂಘದ ಒತ್ತಾಯದ ಹಿನ್ನೆಲೆಯಲ್ಲಿ 21 ಸಕ್ಕರೆ ಕಾರ್ಖಾನೆ ತೂಕದ ಯಂತ್ರದ ಮೇಲೆ ದಾಳಿ ಮಾಡಿದ ವರದಿ ಸರ್ಕಾರ ಬಹಿರಂಗಪಡಿಸಲಿ, ಕೇಂದ್ರ ಸಚಿವರೂಬ್ಬರು ಒಂದು ಟ್ರಕ್‌ ಲೋಡ್‌ಗೆ ಒಂದು ಟನ್‌ ತೂಕದಲ್ಲಿ ಮೋಸ ಬಂದಿದೆ ಎನ್ನುತ್ತಾರೆ. ಹಾಗಾದರೆ ರಾಜ್ಯದ ರೈತರಿಗೆ .2000 ಕೋಟಿ ವರ್ಷಕ್ಕೆ ಮೋಸವಾಗುತ್ತಿದೆ ಎಂಬುದನ್ನು ಸರ್ಕಾರ ಅರಿತುಕೊಳ್ಳಭೇಕು ಎಂದರು.

ಕಬ್ಬು ಕಟಾವು ಸಾಗಾಣಿಕೆ ವಿಳಂಬವಾಗುತ್ತಿದ್ದು ರೈತರಿಂದ ಹೆಚ್ಚು ಲಗಣಿ ವಸೂಲಿ ಮಾಡುತ್ತಿದ್ದಾರೆ ಇದಕ್ಕೆ ತಡೆ ಹಾಕಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು, ಕಬ್ಬಿನ ಯಂತ್ರದಿಂದ ಕಟಾವು ಮಾಡಲಾದ ಕಬ್ಬಿನ ತೂಕದಲ್ಲಿ ಶೇಕಡ 7ರಷ್ಟುಕಾರ್ಖಾನೆಗಳು ತೂಕದಲ್ಲಿ ಕಡಿತ ಕಾನೂನು ಬಾಹಿರವಾಗಿ ಮಾಡುತ್ತಿದ್ದಾರೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಆಯುಕ್ತರು ಇದಕ್ಕೆ ತಡೆ ಹಾಕಬೇಕು. ರಾಮದುರ್ಗ ಮುಧೋಳ ತಾಲೂಕಿನ ವ್ಯಾಪ್ತಿಗೆ ಬರುವ ವೀರಭದ್ರೇಶ್ವರ ಏತ ನೀರಾವರಿ ಭೂಸಂತ್ರಸ್ತರ ಪರಿಹಾರ ಮತ್ತು ಕಾಮಗಾರಿ ನಾಲ್ಕು ವರ್ಷದಿಂದ ಹೋರಾಟ ಮಾಡುತ್ತಿದ್ದರೂ ಇನ್ನೂ ವಿಳಂಬ ಮಾಡುತ್ತಿದ್ದಾರೆ. ತಕ್ಷಣವೇ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಸುರೇಶ ಪಾಟೀಲ,ಜಿಲ್ಲಾಧ್ಯಕ್ಷ ಗುರುಸಿದ್ದಪ್ಪ ಕೋಟಗಿ, ರೈತ ಮುಖಂಡರಾದ ರಮೇಶ ಹಿರೇಮಠ, ಬಸವರಾಜ ಮೊಕಾಶಿ ಮತ್ತಿತರರು ಉಪಸ್ಥಿತರಿದ್ದರು.

click me!