
"
ತುಮಕೂರು(ನ.21): ಜಿಲ್ಲೆಯ ಹೊಸದುರ್ಗದ ಕಾಗಿನೆಲೆ ಶಾಖಾ ಮಠದ ಈಶ್ವರಾನಂದ ಸ್ವಾಮೀಜಿ ವಿರುದ್ಧ ಸಚಿವ ಮಾಧುಸ್ವಾಮಿ ಅವರ ಹೇಳಿಕೆ ಖಂಡಿಸಿ ಇಂದು(ಗುರುವಾರ) ಹುಳಿಯಾರು ಪಟ್ಟಣ ಬಂದ್ ಗೆ ಕುರುಬರ ಸಂಘಗಳ ಒಕ್ಕೂಟ ಕರೆ ನೀಡಿದೆ.
ಕಾಗಿನೆಲೆ ಶಾಖಾ ಮಠದ ಈಶ್ವರಾನಂದ ಸ್ವಾಮೀಜಿ ಅವರ ಬಗ್ಗೆ ಸಚಿವ ಮಾಧುಸ್ವಾಮಿ ಅವರು ಅವಹೇಳನ ಮಾಡಿದ್ದು ಕೂಡಲೇ ರಾಜೀನಾಮೆ ಕೊಟ್ಟು ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ. ಬಂದ್ ಗೆ ಕರೆ ನೀಡಿದ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಕನಕ ಶ್ರೀಗಳಿಗೆ ಮಾಧುಸ್ವಾಮಿ ಅವಹೇಳನ: ಬೈ ಎಲೆಕ್ಷನ್ ಹೊತ್ತಲ್ಲಿ ಭುಗಿಲೆದ್ದ ಆಕ್ರೋಶ
ಬೆಳಗ್ಗೆ 6 ರಿಂದ ಸಂಜೆ 6 ರ ವರೆಗೆ ಬಂದ್ ಮಾಡಲಾಗುತ್ತಿದೆ. ಸ್ವಯಂಪ್ರೇರಿತವಾಗಿ ಬಂದ್ ಗೆ ಬೆಂಬಲ ನೀಡುವಂತೆ ಕುರುಬರ ಸಂಘಗಳ ಒಕ್ಕೂಟ ಕರೆ ನೀಡಲಾಗಿದೆ. ಹುಳಿಯಾರು ಬಂದ್ ಗೆ 18 ಸಮುದಾಯಗಳು ಬೆಂಬಲ ವ್ಯಕ್ತಪಡಿಸಿವೆ.
ಸಚಿವ ಮಾಧುಸ್ವಾಮಿ ವಿರುದ್ಧ ಬೈಕ್ ರ‍್ಯಾಲಿ
ಕನಕ ಗುರುಪೀಠದ ಸ್ವಾಮೀಜಿ ಅವರಿಗೆ ಅವಹೇಳನ ಮಾಡಿದ್ದು ಸಚಿವರು ಕ್ಷಮೆ ಕೇಳಬೇಕೆಂದು ಆಗ್ರಹಿಸಿ ಹುಳಿಯಾರಿನಲ್ಲಿ ಪ್ರತಿಭಟನಾಕಾರರು ಬೈಕ್ ರ‍್ಯಾಲಿ ನಡೆಸಿದ್ದಾರೆ. ಪಟ್ಟಣದ ಪ್ರಮುಖ ರಸ್ತೆಯಲ್ಲಿ ಬೈಕ್ ರ್ಯಾಲಿ ನಡೆಸಿದ ಪ್ರತಿಭಟನಾಕಾರರು ಮಾಧುಸ್ವಾಮಿ ವಿರುದ್ಧ ಘೋಷಣೆ ಕೂಗಿದರು. ಕನಕ ವೃತ್ತದ ಬಳಿ ಬೈಕ್ ರಾಲಿ ಬರುತ್ತಿದ್ದಂತೆ ಸ್ಥಳದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಮನವೊಲಿಸಿ ಮಾರ್ಗ ಬದಲಿಸಿದ್ದಾರೆ.