ಯಲಹಂಕ ಸಂಭ್ರಮಕ್ಕೆ ಅದ್ಭುತ ಪ್ರತಿಕ್ರಿಯೆ!

By Suvarna NewsFirst Published Jan 19, 2020, 2:09 PM IST
Highlights

ಯಲಹಂಕ ಸಂಭ್ರಮಕ್ಕೆ ಅದ್ಭುತ ಪ್ರತಿಕ್ರಿಯೆ| ‘ಸುವರ್ಣ ನ್ಯೂಸ್‌’, ‘ಕನ್ನಡಪ್ರಭ’ ಆಯೋಜಿತ ಕಾರ‍್ಯಕ್ರಮದ 2ನೇ ದಿನವೂ ಜನರ ಸ್ಪಂದನೆ| ಫೆಸ್ಟಿವಲ್‌ನಲ್ಲಿ ಯಕ್ಷಗಾನ

 

ಬೆಂಗಳೂರು[ಜ.19]: ‘ಸುವರ್ಣ ನ್ಯೂಸ್‌’ ಮತ್ತು ‘ಕನ್ನಡಪ್ರಭ’ ದಿನ ಪತ್ರಿಕೆ ಯಲಹಂಕ ಉಪನಗರದಲ್ಲಿ ಆಯೋಜಿಸಿರುವ ಫ್ರೀಡಂ ಆಯಿಲ್‌ ಹಾಗೂ ಜಿಆರ್‌ಬಿ ತುಪ್ಪ ಪ್ರಾಯೋಜಕತ್ವದ ಫುಡ್‌, ಫನ್‌ ಮತ್ತು ಫ್ಯಾಶನ್‌ ಫೆಸ್ಟಿವಲ್‌ ‘ಯಲಹಂಕ ಸಂಭ್ರಮ’ದ ಎರಡನೇ ದಿನವಾದ ಶನಿವಾರವೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಶನಿವಾರ ರಜೆ ಮೂಡ್‌ನಲ್ಲಿದ್ದ ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಉತ್ಸವಕ್ಕೆ ಆಗಮಿಸಿ ಸಂಭ್ರಮಿಸಿದರು. ಅದರಲ್ಲೂ ಕಾಲೇಜು ವಿದ್ಯಾರ್ಥಿಗಳು, ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಇಲ್ಲಿನ ಆಹಾರ, ಫ್ಯಾಶನ್‌ ವಸ್ತುಗಳ ಮಾರಾಟ ಮಳಿಗೆಗಳು ಸಾರ್ವಜನಿಕರಿಂದ ಭರ್ತಿಯಾಗಿದ್ದವು.

ಫೆಸ್ಟಿವೆಲ್‌ನ ಆಹಾರ ಮಳಿಗೆಗಳಲ್ಲಿ ಮಾಂಸ ಹಾಗೂ ಸಸ್ಯಹಾರದ ವೈವಿದ್ಯಮಯ ಖಾದ್ಯಗಳಿಗೆ ಜನ ಮನಸೋತರು. ಉತ್ತರ ಕರ್ನಾಟಕ ಎಣ್ಣೆಗಾಯಿ ರೊಟ್ಟಿ, ಮರ್ಚಿ ಮಂಡಕ್ಕಿ, ಬಗೆಬಗೆಯ ದೋಸೆ, ಮೇಲುಕೋಟೆ ಪುಳಿಯೊಗರೆ, ಕಬಾಬ್‌, ನಾನಾ ಬಗೆಯ ಬಿರಿಯಾನಿ ಸೇರಿದಂತೆ ನಾನಾ ಬಗೆಯ ಖಾದ್ಯಗಳನ್ನು ಸವಿದರು. ಅಂತೆಯೆ ಯುವ ಸಮಯದಾಯದ ಅಚ್ಚುಮೆಚ್ಚಿನ ಪಿಜ್ಜಾ, ಬರ್ಗಾರ್‌, ಐಸ್‌ಕ್ರೀಂಗೆ ಭಾರೀ ಬೇಡಿಕೆ ಇತ್ತು.

ಫ್ಯಾಶನ್‌ ಶೋ:

ಯಲಹಂಕ ಸಂಭ್ರಮ ಕೇವಲ ಆಹಾರ ಖಾದ್ಯಗಳಿಗೆ ಸೀಮಿತವಾಗದೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ತೆರೆದುಕೊಂಡಿತ್ತು. ಯುವ ಸಮುದಾಯದ ಪ್ರತಿಭೆ ಪ್ರೋತ್ಸಾಹಿಸುವ ಉದ್ದೇಶದಿಂದ ಫ್ಯಾಶನ್‌ ಶೋ ಆಯೋಜಿಸಲಾಗಿತ್ತು. ಯಲಹಂಕದ ವಿವಿಧ ಪ್ರದೇಶಗಳ ಯುವತಿಯರು ಅತೀ ಉತ್ಸಾಹದಲ್ಲೇ ಈ ಷೋನಲ್ಲಿ ಪಾಲ್ಗೊಂಡಿದ್ದರು. ಆಧುನಿಕ ಮತ್ತು ಸಾಂಪ್ರದಾಯಿಕ ಶೈಲಿಯ ವೇಷಭೂಷಣ ತೊಟ್ಟು ನೋಡುಗರನ್ನು ರಂಜಿಸಿದರು.

ಅಂತೆಯೆ ಫೆಸ್ಟಿವಲ್‌ನಲ್ಲಿ ಯಕ್ಷಗಾನ ಪ್ರದರ್ಶನ, ಗಾಯನ ಕಾರ್ಯಕ್ರಮವೂ ಜರುಗಿತು. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ವೇದಿಕೆಗೆ ಬಂದು ತಮ್ಮಿಷ್ಟದ ಹಾಡುಗಳನ್ನು ಹಾಡಿ ಸಂಭ್ರಮಿಸಿದರು. ಅದರಲ್ಲೂ ಈ ಉತ್ತರ ಕರ್ನಾಟಕ ಭಾಗದ ಜವಾರಿ ಹಾಡಿಗಳು ಹೆಚ್ಚಿನ ಚಪ್ಪಾಳೆ ಗಿಟ್ಟಿಸಿತು. ಇದೇ ವೇಳೆ ವಿವಿಧ ಕ್ಷೇತ್ರಗಳ ಸ್ಥಳೀಯ ಸಾಧಕರನ್ನು ಸನ್ಮಾನಿಸಲಾಯಿತು. ಬೆಳಗ್ಗೆ 10ರಿಂದ ರಾತ್ರಿ 10ರ ವರೆಗೂ ಜನ ಈ ವಿಶಿಷ್ಟಉತ್ಸವದಲ್ಲಿ ಪಾಲ್ಗೊಂಡು ಸಂತೋಷದ ಹೊನಲಲ್ಲಿ ಮುಳುಗೆದ್ದರು.

ಯಲಹಂಕ ಸಂಭ್ರಮಕ್ಕೆ ಭಾನುವಾರ ಕಡೆಯ ದಿನವಾಗಿದ್ದು, ರಾತ್ರಿ 10 ಗಂಟೆಗೆ ತೆರೆ ಬೀಳಲಿದೆ. ಇನ್ನು ಸಾರ್ವತ್ರಿಕ ರಜೆ ಇರುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಈ ಅಪರೂಪದ ಸಂಭ್ರಮದಲ್ಲಿ ಪಾಲ್ಗೊಂಡು ಮಿಂದೇಳುವ ನಿರೀಕ್ಷೆಯಿದೆ.

click me!