ಕೊಪ್ಪಳದಲ್ಲಿ ತಲೆ ಎತ್ತಲಿದೆ ಸುಸಜ್ಜಿತ ಗ್ರಂಥಾಲಯ| ಕೆಎಎಸ್, ಐಎಎಸ್, ಐಪಿಎಸ್ ಸೇರಿ ಸ್ಪರ್ಧಾತ್ಮಕ ಪರೀಕ್ಷಾ ತಯಾರಿ| 24 ಗಂಟೆಯೂ ಕಾರ್ಯನಿರ್ವಹಿಸಲಿರುವ ಗ್ರಂಥಾಲಯ| ಕೊಪ್ಪಳ ಗವಿಮಠ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಗ್ರಂಥಾಲಯ ಪ್ರಾರಂಭಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ:ರವಿ ಡಿ. ಚನ್ನಣ್ಣವರ|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಜ.19): ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಗಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಸುಸಜ್ಜಿತ ಉಚಿತ ಗ್ರಂಥಾಲಯ ಶೀಘ್ರದಲ್ಲಿಯೇ ತಲೆ ಎತ್ತಲಿದೆ. ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಘೋಷಣೆ ಮಾಡಿರುವ ಈ ಗ್ರಂಥಾಲಯ ರಾಜ್ಯದಲ್ಲಿಯೇ ವಿನೂತನ ಮಾದರಿಯಲ್ಲಿ ತಲೆ ಎತ್ತಲಿದ್ದು, ವಿದ್ಯಾರ್ಥಿಗಳ ಬದುಕಿಗೆ ದಾರಿಯಾಗಲಿದೆ.
ಜಾತ್ರಾ ಮಹೋತ್ಸವದಲ್ಲಿ ಈಗಾಗಲೇ ಶ್ರೀಗಳು ಘೋಷಣೆ ಮಾಡಿದ್ದು, ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಪುಣ್ಯರಾಧನೆ ಅಥವಾ ಅದಕ್ಕೂ ಮೊದಲೇ ಇದು ತಲೆ ಎತ್ತಲಿದೆ. ಅದಕ್ಕಾಗಿ ಆರು ತಿಂಗಳಿಂದ ಸಿದ್ಧತೆ ನಡೆದಿದ್ದು, ನುರಿತ ತಜ್ಞರಿಂದ ಗ್ರಂಥಾಲಯದ ಯೋಜನೆ ರೂಪಿಸಲಾಗುತ್ತಿದೆ. ಶೇ. 90 ರಷ್ಟು ಯೋಜನೆ ಪೂರ್ಣಗೊಂಡಿದ್ದು, ಇನ್ನೇನು ಆರಂಭಕ್ಕಾಗಿ ಒಂದಿಷ್ಟು ನೀತಿ, ನಿಯಮಗಳು ರೂಪಿತವಾಗುತ್ತಿವೆ. ದಿನದ 24 ಗಂಟೆ ಗ್ರಂಥಾಲಯ ಕಾರ್ಯನಿರ್ವಹಿಸಲಿದೆ.
ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ಗವಿ ಮಠದ ಶ್ರೀಗಳು; ಕೇಳಿ ಕ್ರಾಂತಿಯ ಕಥೆ!
ಉದ್ಘಾಟನೆಯಂದೂ ಪ್ರಾರಂಭವಾಗುವ ಈ ಗ್ರಂಥಾಲಯ ಮತ್ತೆ ಮುಚ್ಚುವುದೇ ಇಲ್ಲ. ಮಧ್ಯೆ ರಾತ್ರಿಯೂ ಅಭ್ಯಾಸ ಮಾಡಬೇಕು ಎನಿಸಿದರೆ ಈ ಗ್ರಂಥಾಲಯಕ್ಕೆ ಬರಬಹುದಾಗಿದೆ. ಇದಕ್ಕಾಗಿ ಯಾವುದೇ ಶುಲ್ಕವ ಪಾವತಿಸುವ ಅಗತ್ಯವಿಲ್ಲ. ಆದರೆ, ನೋಂದಣಿ ಶುಲ್ಕ ಮಾಡಬೇಕೋ ಅಥವಾ ಬೇಡ ಎನ್ನುವ ಚಿಂತನೆ ನಡೆದಿದೆ.
ಗ್ರಂಥಾಲಯದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಮಾಡಲಾಗುತ್ತದೆ. ಪಡ್ಡೆ ಹುಡುಗರ ಅಡ್ಡೆಯಾಗದಂತೆ ಎಚ್ಚರ ವಹಿಸಲಾಗುತ್ತದೆ. ವಿಶೇಷವಾಗಿ ಅಭ್ಯಾಸಕ್ಕೆ ಹೆಚ್ಚು ಒತ್ತುಕೊಡುವ ಜತೆಗೆ ಇತರ ಚಟುವಟಿಕೆಗೆ ಕಟ್ಟುನಿಟ್ಟಾದ ನಿಯಮಾವಳಿ ಮಾಡಲಾಗುತ್ತದೆ. ಗ್ರಂಥಾಲಯ ಪ್ರವೇಶ ಮಾಡುವ ಮುನ್ನ ತಮ್ಮ ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿ, ನಿಗದಿತ ಕೌಂಟರ್‌ನಲ್ಲಿ ಇಡಬೇಕು. ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಇರುತ್ತದೆ. ಯಾವುದೇ ಕಾರಣಕ್ಕೂ ಗ್ರಂಥಾಲಯದೊಳಗೆ ಮೊಬೈಲ್ ಪ್ರವೇಶ ನಿಷಿದ್ಧವಿರುತ್ತದೆ.
ವಿನೂತನ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಕೊಪ್ಪಳದ ಗವಿಮಠ ಜಾತ್ರೆ
ವಿಶೇಷ ತರಗತಿಗಳು ಕೆಎಎಸ್, ಐಪಿಎಸ್, ಐಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಈ ಭಾಗದ ವಿದ್ಯಾರ್ಥಿಗಳು ತೇರ್ಗಡೆಯಾಗಬೇಕು ಎನ್ನುವುದು ಮುಖ್ಯ ಉದ್ದೇಶವಿದೆ. ಹೀಗಾಗಿ ಅದಕ್ಕೆ ಪೂರಕ ಪಠ್ಯ, ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಒದಗಿಸಲಾಗುತ್ತದೆ. ಇದೆಲ್ಲಕ್ಕಿಂತ ಮಿಗಿಲಾಗಿ ಗ್ರಂಥಾಲಯದಲ್ಲಿ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಅಭ್ಯಾಸ ಮಾಡುವ ಕುರಿತು ನುರಿತ ಉಪನ್ಯಾಸಕರಿಂದ ತರಗತಿಗಳನ್ನು ನೀಡಲಾಗುತ್ತದೆ. ಅಂದರೆ, ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಪಾಸಾಗಿ ಈಗಾಗಲೇ ಉದ್ಯೋಗದಲ್ಲಿರುವವರ ಮೂಲಕ ಅಭ್ಯಾಸದ ಅನುಭವ ನೀಡುವ ಚಿಂತನೆ ನಡೆದಿದೆ. ವಿಶೇಷ ಆದ್ಯತೆ ಗ್ರಂಥಾಲಯ ಉಚಿತ ಎನ್ನುವ ಕಾರಣಕ್ಕೆ ಕಂಡಕಂಡವರಿಗೆಲ್ಲಾ ಪ್ರವೇಶ ನೀಡುವುದಿಲ್ಲ. ಇದರಿಂದ ದುರುಪಯೋಗವಾಗುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಲು ಪಿಯುಸಿಯಿಂದ ಪದವಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಕೇವಲ ಅಭ್ಯಾಸ ಮಾಡಿದರೆ ಸಾಲದು, ಕಾಲಕಾಲಕ್ಕೆ ಗ್ರಂಥಾಲಯದಲ್ಲಿ ನಡೆಯುವ ಪರೀಕ್ಷೆಯಲ್ಲಿಯೂ ಕಡ್ಡಾಯವಾಗಿ ಭಾಗವಹಿಸುವಿಕೆಯನ್ನು ನಿಗದಿ ಮಾಡುವ ಚಿಂತನೆ ನಡೆದಿದೆ.
ಅತ್ಯಾಧುನಿಕ ಗ್ರಂಥಾಲಯ ಗ್ರಂಥಾಲಯ ಅತ್ಯಾಧುನಿಕವಾಗಿರುತ್ತದೆ. ಕಂಪ್ಯೂಟರ್, ಅಂತರ್ಜಾಲ ಸೇರಿದಂತೆ ಎಲ್ಲ ಸೌಲಭ್ಯಗಳು ಒಳಗೊಂಡಿರುತ್ತದೆ. ಕಂಪ್ಯೂಟರ್ ಬಳಕೆ ಮಾಡುವವರ ವಿವರ ಮತ್ತು ಸಮಯವನ್ನು ನಮೂದು ಮಾಡಲಾಗುತ್ತದೆ. ಈ ವೇಳೆಯಲ್ಲಿ ಅಂತರ್ಜಾಲ ಬಳಕೆಯ ಮಾಹಿತಿಯನ್ನು ಪರಿಶೀಲನೆಗೆ ಒಳಪಡಿಸಲಾಗುತ್ತದೆ. ನಿರ್ದಿಷ್ಟ ವೆಬ್‌ಸೈಟ್‌ಗಳು ಮಾತ್ರ ತೆರೆದುಕೊಳ್ಳುವಂತೆ ಷರತ್ತಿಗೊಳಪಟ್ಟಿರುತ್ತದೆ. ದುರುಪಯೋಗವಾದರೆ ಖಂಡಿತ ಕ್ರಮ ಇದ್ದೆ ಇರುತ್ತದೆ.
ತಂತ್ರಜ್ಞಾನದಲ್ಲಿ ದೊರೆಯುವ ಪುಸ್ತಕಗಳನ್ನು ಅಂತರ್ಜಾಲದಲ್ಲಿ ಮತ್ತು ಉಳಿದವುಗಳನ್ನು ಪ್ರತ್ಯೇಕವಾಗಿ ಇರಿಸಲಾಗಿರುತ್ತದೆ. ಎಲ್ಲದರ ಮಾಹಿತಿ ಸೂಚನಾ ಫಲಕದಲ್ಲಿ ಇದ್ದೆ ಇರುತ್ತದೆ. ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಕೆಲವು ವರ್ಷಗಳ ಹಿಂದೆ ಶ್ರೇಷ್ಠ ಗ್ರಂಥಾಲಯ ಪ್ರಾರಂಭಿಸುವ ಉದ್ದೇಶದಿಂದ ಪುಸ್ತಕ ಜೋಳಿಗೆ ಕಾರ್ಯಕ್ರಮ ಪ್ರಾರಂಭಿಸಿದ್ದರು. ಅನಿವಾರ್ಯ ಕಾರಣಗಳಿಂದ ಅದು ಅಷ್ಟಕ್ಕೆ ನಿಂತಿದೆ. ಪುಸ್ತಕ ಜೋಳಿಗೆಗೆ ಚಾಲನೆ ನೀಡಿ, ಮಾತನಾಡಿದ ವೇಳೆಯಲ್ಲಿ ಜಗತ್ತಿನ ಶ್ರೇಷ್ಠ ಗ್ರಂಥಾಲಯದ ಕನಸನ್ನು ಅವರು ಬಿಚ್ಚಿಟ್ಟಿದ್ದರು. ಈಗ ಅದಕ್ಕೊಂದು ಸ್ವರೂಪ ಬರಲಿದೆ.
ಈ ಬಗ್ಗೆ ಮಾತನಾಡಿದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ನಮ್ಮ ಭಾಗದ ವಿದ್ಯಾರ್ಥಿಗಳಿಗೂ ಅಭ್ಯಾಸ ಮಾಡುವುದಕ್ಕೆ ಅಗತ್ಯವಾಗಿರುವ ಉಚಿತ ಗ್ರಂಥಾಲಯನವನ್ನು ಶೀಘ್ರ ಪ್ರಾರಂಭಿಸಲಾಗುವುದು. ದಿನದ 24 ಗಂಟೆಗಳ ಕಾಲವೂ ಅದು ನಿರಂತರವಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ.
ಕೊಪ್ಪಳ ಗವಿಮಠ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಗ್ರಂಥಾಲಯ ಪ್ರಾರಂಭಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇದೊಂದು ಒಳ್ಳೆಯ ಕಾರ್ಯವಾಗಿದೆ. ನಾನು ಆಗಾಗ ಇಲ್ಲಿಗೆ ಬಂದು ಹೋಗುತ್ತೇನೆ ಎಂದು ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣವರ ತಿಳಿಸಿದ್ದಾರೆ.