
ಬೆಂಗಳೂರು: ದಿನನಿತ್ಯ ಬಳಸುವ ಸಾಮಗ್ರಿಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನತೆ ಈಗ ಸಿಕ್ಕಾಪಟ್ಟೆ ನಿರಾಳವಾಗುವಂಥ ಸುದ್ದಿಯೊಂದು ಹೊರ ಬಂದಿದೆ. ಅದರಲ್ಲಿಯೂ ಅಕ್ಕಿ ಎನ್ನುವುದು ಎಲ್ಲರ ಮನೆಯ ಜೀವಾಳವೇ ಆಗಿದೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ಅಕ್ಕಿ ಬೆಲೆಯೂ ಏರಿಕೆಯಾಗಿ, ಜನರು ಕಂಗಾಲಾಗಿ ಹೋಗಿದ್ದರು. ಇದೀಗ ಗ್ರಾಹಕರಿಗೆ ನಿರಾಳತೆ ಸಿಗುವ ಸುದ್ದಿ ಸಿಕ್ಕಿದೆ. ಮಾರುಕಟ್ಟೆಯಲ್ಲಿ ಹೊಸ ಸೋನಾ ಮಸೂರಿ ಅಕ್ಕಿಯ ದರದಲ್ಲಿ ಭಾರೀ ಇಳಿಕೆಯಾಗಿದೆ. ಈ ಹಿಂದೆ ಕೆಜಿಗೆ 80ರಿಂದ 90ರ ರೂಪಾಯಿವರೆಗೆ ಮಾರಾಟವಾಗುತ್ತಿದ್ದ ಅಕ್ಕಿ ಬೆಲೆ ಇದೀಗ 65ರಿಂದ 70ಕ್ಕೆ ಇಳಿಕೆಯಾಗಿದೆ. ಅಂದರೆ, ಪ್ರತಿ ಕೆಜಿಗೆ ಸುಮಾರು 10ರಿಂದ 20ರವರೆಗೆ ದರ ಕಡಿಮೆಯಾಗಿದೆ. ಆದರೆ ಇದಾಗಲೇ ಅಕ್ಕಿಯನ್ನು ತಂದು ಶೇಖರಿಸಿಟ್ಟಿರುವ ಮಳಿಗೆಯವರು, ಈ ಹೊಸ ಬೆಲೆಯನ್ನು ಗ್ರಾಹಕರಿಗೆ ಯಾವಾಗಿನಿಂದ ನೀಡಲಿದ್ದಾರೆ ಎನ್ನುವುದು ಮಾತ್ರ ಸದ್ಯ ಪ್ರಶ್ನಾರ್ಹವಾಗಿದೆ.
ಇತ್ತೀಚಿನ ದಿನಗಳಲ್ಲಿ ಭತ್ತದ ಪೂರೈಕೆಯಲ್ಲಿ ಉಂಟಾಗಿದ್ದ ಕೊರತೆಯಿಂದಾಗಿ ಅಕ್ಕಿ ಬೆಲೆ ಏರಿಕೆಯಾಗಿತ್ತು. ಆದರೆ, ಈಗ ಮಹಾರಾಷ್ಟ್ರ ಮತ್ತು ತೆಲಂಗಾಣದಿಂದ ಭತ್ತದ ಪೂರೈಕೆ ಹೆಚ್ಚಾಗಿದೆ. ಕಟಾವು ಕಾರ್ಯ ಪೂರ್ಣಗೊಂಡು ಹೆಚ್ಚಿನ ಪ್ರಮಾಣದಲ್ಲಿ ಭತ್ತ ಮಾರುಕಟ್ಟೆ ಹಾಗೂ ಅಕ್ಕಿ ಗಿರಣಿಗಳಿಗೆ ತಲುಪುತ್ತಿರುವುದರಿಂದ ದರ ಇಳಿಕೆಯಾಗಿದೆ ಎನ್ನಲಾಗಿದೆ.
ಅಕ್ಕಿ ಬೆಲೆ ಏರಿಕೆಯಾಗಿದ್ದ ಸಂದರ್ಭದಲ್ಲಿ ಕ್ವಿಂಟಲ್ಗೆ ಸುಮಾರು 8,500 ರೂಪಾಯಿ ಇದ್ದ ದರ, ಇದೀಗ 6,500ಕ್ಕೆ ಇಳಿಕೆಯಾಗಿದೆ. ಈ ಮೂಲಕ ಕ್ವಿಂಟಲ್ ಅಕ್ಕಿಗೆ ಬರೋಬ್ಬರಿ 2,000 ರೂಪಾಯಿ ಕಡಿಮೆಯಾಗಿದೆ. ತುಂಗಭದ್ರಾ ನದಿ ಪಾತ್ರದಲ್ಲಿ ಭತ್ತದ ಪ್ರಮಾಣ ಕಡಿಮೆಯಿದ್ದರೂ, ಕೃಷ್ಣಾ ನದಿ ಪಾತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯಲಾಗಿದೆ. ಇದೀಗ ಕಟಾವು ಮುಗಿದಿರುವುದರಿಂದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಪೂರೈಕೆಯಾಗುತ್ತಿದೆ. ಇದರಿಂದ ಅಕ್ಕಿ ದರ ಇಳಿಕೆಯಾಗಿದೆ ಎಂದು ತಿಳಿಸಲಾಗಿದೆ.
ಇದೇ ವೇಳೆ, ಸರ್ಕಾರ ಅಕ್ಕಿ ದಾಸ್ತಾನು ಮಿತಿಯನ್ನು ಕಡಿಮೆ ಮಾಡಿದರೆ ಅಕ್ಕಿ ಗಿರಣಿಗಳಿಗೂ ಸಮಸ್ಯೆಯಾಗಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಮತ್ತೆ ಅಕ್ಕಿ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕೂಡ ಹೇಳಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಭತ್ತದ ಪೂರೈಕೆಯಲ್ಲಿ ಉಂಟಾಗಿದ್ದ ಕೊರತೆಯಿಂದಾಗಿ ಅಕ್ಕಿ ಬೆಲೆ ಏರಿಕೆಯಾಗಿತ್ತು. ಆದರೆ, ಈಗ ಮಹಾರಾಷ್ಟ್ರ ಮತ್ತು ತೆಲಂಗಾಣದಿಂದ ಭತ್ತದ ಪೂರೈಕೆ ಹೆಚ್ಚಾಗಿದೆ. ಕಟಾವು ಕಾರ್ಯ ಪೂರ್ಣಗೊಂಡು ಹೆಚ್ಚಿನ ಪ್ರಮಾಣದಲ್ಲಿ ಭತ್ತ ಮಾರುಕಟ್ಟೆ ಹಾಗೂ ಅಕ್ಕಿ ಗಿರಣಿಗಳಿಗೆ ತಲುಪುತ್ತಿರುವುದರಿಂದ ದರ ಇಳಿಕೆಯಾಗಿದೆ ಎಂದು ಮಾಧ್ಯಮದ ಜೊತೆ ಮಾತನಾಡಿರುವ ಅಕ್ಕಿ ಗಿರಣಿ ಮಾಲೀಕರ ಸಂಘದ ರಾಜ್ಯ ಕಾರ್ಯಾಧ್ಯಕ್ಷೆ ಸಾವಿತ್ರಿ ಪುರುಷೋತ್ತಮ ತಿಳಿಸಿದ್ದಾರೆ.