ಸದ್ಯ ಕರಾವಳಿಯಲ್ಲಿ ಮೀನಿನ ಸುಗ್ಗಿಯೇ ನಡೆಯುತ್ತಿದೆ. ಇತ್ತೀಚೆಗೆ ಉಡುಪಿಯ ಮಲ್ಪೆ ಸಮೀಪದ ತೊಟ್ಟಂ ಎಂಬಲ್ಲಿ ರಾಶಿ ರಾಶಿ ಬೂತಾಯಿ ಮೀನುಗಳು ದಡಕ್ಕೆ ಬಂದು ಬಿದ್ದಿದ್ದವು. ಈಗ ಮತ್ತೆ ಉಡುಪಿಯಲ್ಲಿ ಮಿಲ್ಕ್ ತಾಟೆ ಹೆಸರಿನ ಮೀನುಗಳು ಬೃಹತ್ ಪ್ರಮಾಣದಲ್ಲಿ ಸಿಕ್ಕಿದೆ.
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಸೆ.24): ಬಂಗುಡೆ ಮೀನು ತಿನ್ನದವರು ಯಾರಿದ್ದಾರೆ ಹೇಳಿ? ಕರಾವಳಿಯ ಜನರು ಮಾತ್ರವಲ್ಲ ರಾಜ್ಯದ ಎಲ್ಲಾ ಭಾಗದ ಜನರು ಅತಿ ಹೆಚ್ಚು ಇಷ್ಟಪಡುವ ಬಂಗುಡೆ ಮೀನಿನ ದರ ಕೆಲ ದಿನಗಳಿಂದ ತುಂಬಾ ಇಳಿಕೆಯಾಗಿದೆ. ಮತ್ಸ್ಯ ಪ್ರಿಯರಂತೂ ಚೀಲ ತುಂಬಾ ಮೀನು ಹೊತ್ತುಕೊಂಡು ಬಂದು, ಫ್ರಿಜ್ಜಿನಲ್ಲಿಟ್ಟು ದಿನವೂ ಹಬ್ಬದ ಊಟ ಮಾಡುತ್ತಿದ್ದಾರೆ. ಈ ಬಾರಿ ಮೀನುಗಾರಿಕಾ ಋತು ತಡವಾಗಿ ಆರಂಭವಾದರೂ, ಉತ್ತಮ ಮೀನು ಲಭ್ಯವಾಗುತ್ತಿದೆ. ಮೀನಿನ ಲಭ್ಯತೆ ಹೆಚ್ಚಾದ ಕಾರಣ ದರದಲ್ಲಿ ಸ್ವಲ್ಪ ಮಟ್ಟಿನ ಇಳಿಕೆಯಾಗಿದೆ. ಅದರಲ್ಲೂ ಬಂಗುಡೆ ಮೀನಿನ ದರ ತುಂಬಾನೇ ಚೀಪ್ ಆಗಿದ್ದು, ಎರಡು ದಿನಗಳ ಹಿಂದೆ ಕೇವಲ ನೂರು ರೂಪಾಯಿಗೆ 50 ಬಂಗುಡೆ ಮೀನುಗಳು ಮಾರಾಟವಾಗಿದ್ದವು. ಅಂದರೆ ಪ್ರತಿಮೀನಿಗೆ ಕೇವಲ ಎರಡು ರೂಪಾಯಿ ಕೊಟ್ಟು ಜನ ಖರೀದಿಸಿ ಖುಷಿಪಟ್ಟಿದ್ದರು. ಇದೇ ಬಂಗುಡೆಯನ್ನು, 100 ರುಪಾಯಿಗೆ ಕೇವಲ 3 ಮೀನು ಪಡೆದುಕೊಂಡು ತಿಂದ ದಿನಗಳನ್ನು ಜನರು ನೆನಪಿಸಿಕೊಳ್ಳುತ್ತಿದ್ದಾರೆ. ಇದೀಗ ಮೀನಿನ ದರ ಇಳಿಕೆಯಾಗುತ್ತಿದ್ದಂತೆ, ಉತ್ತಮ ಖರೀದಿ ಮಾಡಿ ಸಂಗ್ರಹಿಸಿಟ್ಟಿದ್ದಾರೆ. ಮೀನುಗಾರಿಕಾ ಋತು ಆರಂಭವಾಗುವ ಕೊನೆಯ ಕ್ಷಣದವರೆಗೂ ಸಮುದ್ರದಲ್ಲಿ ಚಂಡಮಾರುತದ ವಾತಾವರಣ ಇದ್ದ ಕಾರಣ, ತೀರ ಪ್ರದೇಶಗಳಲ್ಲಿ ಉತ್ತಮ ಮೀನು ಲಭ್ಯವಾಗುತ್ತಿದೆ. ಅದರಲ್ಲೂ ಪರ್ಸೀನ್ ಬೋಟುಗಳಲ್ಲಿ ತಂದ ಮೀನುಗಳು ಆಕರ್ಷಕ ದರಗಳಲ್ಲಿ ಮಾರಾಟವಾಗುತ್ತಿದೆ. ದೋಣಿ ತುಂಬಾ ಒಂದೇ ಜಾತಿಯ ಮೀನು ಸಿಕ್ಕರೆ ದರ ಕಡಿಮೆಯಾಗುವುದು ಸಹಜ, ಇದೀಗ ಹೇರಳವಾಗಿ ಬಂಗುಡೆ ಮೀನು ಲಭ್ಯವಾಗುತ್ತಿರುವುದರಿಂದ, ಜನ ಕಡಿಮೆ ದರಕ್ಕೆ ಖರೀದಿ ಮಾಡಿ ಸಂತೋಷಪಡುತ್ತಿದ್ದಾರೆ.
ಮಿಲ್ಕ್ ತಾಟೆ ಸುಗ್ಗಿ: ಸದ್ಯ ಕರಾವಳಿಯಲ್ಲಿ ಮೀನಿನ ಸುಗ್ಗಿಯೇ ನಡೆಯುತ್ತಿದೆ. ಇತ್ತೀಚೆಗೆ ಉಡುಪಿಯ ಮಲ್ಪೆ ಸಮೀಪದ ತೊಟ್ಟಂ ಎಂಬಲ್ಲಿ ರಾಶಿ ರಾಶಿ ಬೂತಾಯಿ ಮೀನುಗಳು ದಡಕ್ಕೆ ಬಂದು ಬಿದ್ದಿದ್ದವು. ಈಗ ಮತ್ತೆ ಉಡುಪಿಯಲ್ಲಿ ಮಿಲ್ಕ್ ತಾಟೆ ಹೆಸರಿನ ಮೀನುಗಳು ಬೃಹತ್ ಪ್ರಮಾಣದಲ್ಲಿ ಸಿಕ್ಕಿದೆ. ಸಣ್ಣ ನಾಡದೋಣಿಯಲ್ಲಿ ಮೀನುಗಾರರ ಬಲೆಗೆ ಬೃಹತ್ ಪ್ರಮಾಣ ಮಿಲ್ಕ್ ತಾಟೆ ಸಿಕ್ಕಿದೆ.
ಎರಡರಿಂದ ಮೂರು ಕೆ.ಜಿ. ತೂಕುವ ಸುಮಾರು 100 ತಾಟೆಮೀನು ಸಿಕ್ಕಿದ್ದು, ಮಲ್ಪೆ ದಕ್ಕೆಯ ಹರಾಜು ಪ್ರಾಂಗಣದಲ್ಲಿ ಕೆ.ಜಿ.ಗೆ 280 ರೂ.ಗಳಂತೆ ಹರಾಜಿನಲ್ಲಿ ಮಾರಾಟವಾಗಿದೆ. ಹೆಚ್ಚಾಗಿ ಕೇರಳಕ್ಕೆ ರವಾನೆಯಾಗಿದೆ. ಈ ಮೀನಿನ ವೈಜ್ಞಾನಿಕ ಹೆಸರು ಬ್ಲ್ಯಾಕ್ ಟಿಪ್ ರೀವ್ ಶಾರ್ಕ್ ಅಂತ. ಇದು ಕೆಂಪು ಸಮುದ್ರ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ.
Udupi; ಮಲ್ಪೆ ತೊಟ್ಟಂನಲ್ಲಿ ದಡಕ್ಕೆ ಬಂದು ಬಿದ್ದ ಲಕ್ಷಾಂತರ ಬೂತಾಯಿ ಮೀನು!
ರಾಜ್ಯದ ಕರಾವಳಿಯಲ್ಲಿ ಬೃಹತ್ ಬಂಡೆಗಳ ಸಮೀಪ ಈ ಮಿಲ್ಕ್ ತಾಟೆ ಮೀನುಗಳು ಇರುತ್ತವೆ. ಈ ಮೀನಿನ ಕೆಳ ಭಾಗದಲ್ಲಿರುವ ರೆಕ್ಕೆ, ಬಾಲ, ಕಿವಿಗೆ ಭಾರೀ ಬೇಡಿಕೆ ಇದ್ದು, ಅದನ್ನು ಸ್ಥಳದಲ್ಲೇ ಕತ್ತರಿಸಿ ಪ್ರತ್ಯೇಕವಾಗಿ ಸಂಗ್ರಹಿಸಿಟ್ಟು ಸಾಗಿಸಲಾಗುತ್ತದೆ. ಬಿಸಿಲಿನಲ್ಲಿ ಒಣಗಿಸಿ ವಿದೇಶಕ್ಕೆ ರಫ್ತು ಕೂಡ ಮಾಡಲಾಗುತ್ತಿದ್ದು, ಔಷಧ ತಯಾರಿಕೆಗೆ ಇದನ್ನು ಬಳಸಲಾಗುತ್ತದೆ.