ಸಾಗರದಲ್ಲಿ ಬೃಹತ್ ರಾಷ್ಟ್ರಧ್ವಜ ಹಾರಾಟದ ಪ್ರಾಯೋಗಿಕ ಪರೀಕ್ಷೆ

By Kannadaprabha News  |  First Published Jul 29, 2020, 9:31 AM IST

30 ಅಡಿ ಅಗಲ, 45 ಅಡಿ ಉದ್ದದ ಬೃಹತ್‌ ರಾಷ್ಟ್ರಧ್ವಜ ಇದಾಗಿದ್ದು, ರಾತ್ರಿ ವೇಳೆ ವಿದ್ಯುತ್‌ ದೀಪದ ಬೆಳಕಿನಲ್ಲಿ ರಾಷ್ಟ್ರಧ್ವಜ ಕಂಗೊಳಿಸಲಿದೆ. ವಿದ್ಯುದ್ದೀಪದ ವ್ಯವಸ್ಥೆ, ಹಾರಾಟದ ಸಂದರ್ಭದಲ್ಲಿ ಆಗುಹೋಗುಗಳನ್ನು ಅವಲೋಕಿಸಲು ಪ್ರಯೋಗಾರ್ಥ ಹಾರಾಟ ನಡೆಸಲಾಗಿದೆ ಎಂದು ಸಾಗರ ಶಾಸಕ ಹರತಾಳು ಹಾಲಪ್ಪ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ


ಸಾಗರ(ಜು.29): ಪಟ್ಟಣದ ಬಿ.ಎಚ್‌.ರಸ್ತೆಯ ಗಣಪತಿ ಕೆರೆ ಪಕ್ಕದಲ್ಲಿ ಸೋಮವಾರ ಬೃಹತ್‌ ರಾಷ್ಟ್ರಧ್ವಜ ಹಾರಾಡುವ ಪ್ರಾಯೋಗಿಕ ಪರೀಕ್ಷೆ ನಡೆಯಿತು. ಇದೇ ವೇಳೆ ಶಾಸಕ ಹಾಲಪ್ಪ ಮಾತನಾಡಿ, 159 ಅಡಿ ಎತ್ತರದಲ್ಲಿ ಹಾರಾಡುವ ರಾಷ್ಟ್ರಧ್ವಜ ಸಾಗರದ ಲ್ಯಾಂಡ್‌ ಮಾರ್ಕ್ ಆಗಲಿದೆ. ಈ ಜಾಗವನ್ನು ಪ್ರವಾಸಿತಾಣವಾಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರಲ್ಲದೆ ಅ​ಧಿಕೃತವಾಗಿ ಆಗಸ್ಟ್‌ 15ರಿಂದ ಈ ಸ್ಥಳದಲ್ಲಿ ಶಾಶ್ವತವಾಗಿ ರಾಷ್ಟ್ರಧ್ವಜ ಹಾರಾಡಲಿದ್ದು, ಇದೊಂದು ಆಕರ್ಷಣೀಯ ಸ್ಥಳವಾಗಲಿದೆ ಎಂದು ಹೇಳಿದರು.

30 ಅಡಿ ಅಗಲ, 45 ಅಡಿ ಉದ್ದದ ಬೃಹತ್‌ ರಾಷ್ಟ್ರಧ್ವಜ ಇದಾಗಿದ್ದು, ರಾತ್ರಿ ವೇಳೆ ವಿದ್ಯುತ್‌ ದೀಪದ ಬೆಳಕಿನಲ್ಲಿ ರಾಷ್ಟ್ರಧ್ವಜ ಕಂಗೊಳಿಸಲಿದೆ. ವಿದ್ಯುದ್ದೀಪದ ವ್ಯವಸ್ಥೆ, ಹಾರಾಟದ ಸಂದರ್ಭದಲ್ಲಿ ಆಗುಹೋಗುಗಳನ್ನು ಅವಲೋಕಿಸಲು ಪ್ರಯೋಗಾರ್ಥ ಹಾರಾಟ ನಡೆಸಲಾಗಿದೆ. ಸೋಮವಾರ ಒಂದು ದಿನ ಮಾತ್ರ ಈ ಧ್ವಜ ಸಾಂಕೇತಿಕವಾಗಿ ಪ್ರಯೋಗಾರ್ಥವಾಗಿ ಹಾರಾಡಲಿದೆ. ಜನರು ಒಂದು ದಿನ ಮಾತ್ರವೇ ಎಂದು ಪ್ರಶ್ನಿಸುವಂತೆ ಆಗಬಾರದು. ಪ್ರತಿದಿನ ರಾಷ್ಟ್ರಧ್ವಜ ಹಾರಾಟ, ಧ್ವಜಕ್ಕೆ ಘಾಸಿಯಾಗದಂತೆ, ಈ ಸ್ಥಳದ ನಿರ್ವಹಣೆಗಾಗಿ ಒಬ್ಬರನ್ನು ನೇಮಕ ಮಾಡಲಾಗುತ್ತದೆ ಎಂದು ತಿಳಿಸಿದರು.

Tap to resize

Latest Videos

ಉತ್ತಮ ಆರೋಗ್ಯಕ್ಕೆ ಆಯುರ್ವೇದ ಸಹಕಾರಿ

ಕಾಗೋಡು ತಿಮ್ಮಪ್ಪ ಸಚಿವರಾಗಿದ್ದಾಗ ಇಲ್ಲಿ 2.5 ಎಕರೆ ಜಾಗವನ್ನು ಉಳಿಸಿದ್ದರಿಂದ ಇಲ್ಲಿ ರಾಷ್ಟ್ರಧ್ವಜ ಸೇರಿ ಅಭಿವೃದ್ಧಿ ಕೆಲಸ ಮಾಡಲು ಅವಕಾಶವಾಗಿದೆ. ಗಣಪತಿ ಕೆರೆ ಸರ್ವೆ ವರದಿ ಶೀಘ್ರದಲ್ಲಿಯೆ ಬರಲಿದ್ದು, ಕೊರೋನಾ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆ. ಆರಂಭದಲ್ಲಿ ಧ್ವಜಸ್ತಂಭ ನಿರ್ಮಾಣ ಸಂದರ್ಭದಲ್ಲಿ ಅಂದಿನ ಉಪವಿಭಾಗಾ​ಕಾರಿ ದರ್ಶನ್‌ ಹಾಗೂ ಪೊಲೀಸ್‌ ಉಪ ಅ​ಧೀಕ್ಷಕ ಯತೀಶ್‌ ಸಹಕಾರ ನೀಡಿದ್ದಾರೆ. ಅವರನ್ನು ಧ್ವಜಾರೋಹಣ ಸಂದರ್ಭದಲ್ಲಿ ಸನ್ಮಾನಿಸಲು ಉದ್ದೇಶಿಸಲಾಗಿದೆ. ಈಗಿನ ಉಪವಿಭಾಗಾ​ಕಾರಿಗಳು, ಪೌರಾಯುಕ್ತರು ಈ ಕೆಲಸಕ್ಕೆ ಹೆಚ್ಚು ಶ್ರಮ ಹಾಕಿದ್ದಾರೆ. ಊರನ್ನು ಕಟ್ಟುವಲ್ಲಿ ಬಿ.ಎಸ್‌.ಚಂದ್ರಶೇಖರ್‌, ಜಿ.ಆರ್‌.ಜಿ.ನಗರ್‌, ಎಸ್‌.ಎಸ್‌.ಕುಮಟಾ, ಕೆ.ಎಂ.ಲಿಂಗಪ್ಪ, ಭೋಜಪ್ಪ ಹೀಗೆ ಹಲವರು ಶ್ರಮಿಸಿದ್ದಾರೆ. ಅವರನ್ನು ಈ ಸಂದರ್ಭದಲ್ಲಿ ನೆನಪಿಸಿ ಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ಆರ್‌.ಜಯಂತ್‌ ಮಾತನಾಡಿ, ಧ್ವಜವನ್ನು ಪ್ರಯೋಗಾರ್ಥವಾಗಿ ಹಾರಿಸಿದ್ದು ಅಭೂತಪೂರ್ವ ಕ್ಷಣವಾಗಿದೆ. ಅತಿ ಎತ್ತರದ ಸ್ಥಳದಲ್ಲಿ, ಅತಿ ವಿಸ್ತಾರವಾದ ರಾಷ್ಟ್ರಧ್ವಜ ಹಾರಾಡುವುದನ್ನು ನೋಡುವುದು ಒಂದು ಅಪರೂಪದ ಕ್ಷಣವಾಗಿರುತ್ತದೆ. ಇದನ್ನು ಸಾಕಾರಗೊಳಿಸಲು ಪ್ರಯತ್ನಿಸಿರುವ ಶಾಸಕರಿಗೆ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಉಪವಿಭಾಗಾ​ಕಾರಿ ಡಾ.ನಾಗರಾಜ್‌ ಎಲ್‌. ಪೌರಾಯುಕ್ತ ಎಚ್‌.ಕೆ.ನಾಗಪ್ಪ, ಪೇಟೆ ಠಾಣೆ ವೃತ್ತ ನಿರೀಕ್ಷಕ ಅಶೋಕ್‌ಕುಮಾರ್‌, ನಗರಸಭೆ ಸದಸ್ಯರಾದ ಟಿ.ಡಿ.ಮೇಘರಾಜ್‌, ಕೆ.ಆರ್‌.ಗಣೇಶಪ್ರಸಾದ್‌, ವಿ.ಮಹೇಶ್‌, ಅರವಿಂದ ರಾಯ್ಕರ್‌, ಮಧುರಾ ಶಿವಾನಂದ್‌ ಇತರರು ಇದ್ದರು.

click me!