ಹುಬ್ಬಳ್ಳಿ ಗಣೇಶೋತ್ಸವಕ್ಕೆ ಸಜ್ಜಾಗುತ್ತಿರುವ ಹೊತ್ತಲ್ಲೇ ಮೂರ್ತಿಕಾರರ ಬದುಕಲ್ಲಿ ಆತಂಕ! ಕಾರಣವೇನು?

Kannadaprabha News   | Kannada Prabha
Published : Sep 07, 2026, 07:30 AM IST
Hubballi Ganeshotsava

ಸಾರಾಂಶ

ಗಣೇಶೋತ್ಸವದ ಸಂಭ್ರಮಕ್ಕೆ ಹುಬ್ಬಳ್ಳಿ ಸಜ್ಜಾಗುತ್ತಿರುವ ಹೊತ್ತಿನಲ್ಲೇ ಸ್ಥಳೀಯ ಮೂರ್ತಿಕಾರರ ಬದುಕಿನಲ್ಲಿ ಇಂತಹ ಸಂದಿಗ್ಧತೆ ಆವರಿಸಿದೆ. ತಯಾರಿಸಿದ ಮೂರ್ತಿಗಳು ಮಾರಾಟವಾಗುತ್ತವೋ, ಬಂಡವಾಳ ವಾಪಸ್ ಬರುತ್ತದೆಯೋ ಇಲ್ಲವೋ ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾರೆ ಇದಕ್ಕೆ ಕಾರಣಗಳೇನು?

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ (ಸೆ.7): ಗಣೇಶೋತ್ಸವದ ಸಂಭ್ರಮಕ್ಕೆ ಹುಬ್ಬಳ್ಳಿ ಸಜ್ಜಾಗುತ್ತಿರುವ ಹೊತ್ತಿನಲ್ಲೇ ಸ್ಥಳೀಯ ಮೂರ್ತಿಕಾರರ ಬದುಕಿನಲ್ಲಿ ಇಂತಹ ಸಂದಿಗ್ಧತೆ ಆವರಿಸಿದೆ.

ಗಣೇಶನ ಮೂರ್ತಿ ರೂಪಿಸಿ ಭಕ್ತರ ಮನೆ-ಮಂದಿರಗಳಿಗೆ ಸಂಭ್ರಮ ತುಂಬಿಸುವ ಕೈಗಳಲ್ಲೀಗ ಲೆಕ್ಕಾಚಾರದ ಆತಂಕ. ವರ್ಷವಿಡೀ ಮಣ್ಣು ಹದಗೊಳಿಸಿ, ರೂಪ ಕೊಟ್ಟು, ಬಣ್ಣ ಬಳಿದು ಹಬ್ಬಕ್ಕಾಗಿ ಸಿದ್ಧಪಡಿಸಿದ ಮೂರ್ತಿಗಳು ಮಾರಾಟವಾಗುತ್ತವೆಯೋ ಇಲ್ಲವೋ ಎಂಬ ಚಿಂತೆ ಒಂದೆಡೆಯಾದರೆ, ಲಕ್ಷಾಂತರ ರುಪಾಯಿ ಸಾಲ ಮಾಡಿ ತೊಡಗಿಸಿದ ಬಂಡವಾಳ ಮರಳುತ್ತದೆಯೇ ಎಂಬ ಭಯ ಮತ್ತೊಂದೆಡೆ.

ಗಣೇಶೋತ್ಸವಕ್ಕೆ ಮೂರು ತಿಂಗಳ ಹಿಂದೆಯೇ ಹುಬ್ಬಳ್ಳಿಗೆ ಬಂದ ಮೂರ್ತಿಕಾರರು

: ಕೊಲ್ಕತ್ತಾ ಸೇರಿದಂತೆ ವಿವಿಧೆಡೆಯಿಂದ 10ಕ್ಕೂ ಅಧಿಕ ತಂಡಗಳು ಗಣೇಶೋತ್ಸವಕ್ಕೆ ಎರಡರಿಂದ ಮೂರು ತಿಂಗಳು ಮುಂಚಿತವಾಗಿಯೇ ಹುಬ್ಬಳ್ಳಿಗೆ ಆಗಮಿಸಿವೆ. ಮರಾಠಾ ಗಲ್ಲಿ, ನವನಗರ, ಹಳೇಹುಬ್ಬಳ್ಳಿ, ಧಾರವಾಡ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜಾಗ ಬಾಡಿಗೆ ಪಡೆದು ತಾತ್ಕಾಲಿಕ ಕಾರ್ಯಾಗಾರ ತೆರೆದಿರುವ ತಂಡಗಳು ಬೃಹತ್ ಹಾಗೂ ವೈವಿಧ್ಯಮಯ ವಿನ್ಯಾಸದ ಮೂರ್ತಿಗಳನ್ನು ತಯಾರಿಸಿ ಮಾರುಕಟ್ಟೆ ಪ್ರವೇಶಿಸಿವೆ.

ದಶಕಗಳಿಂದ ಇದೇ ಕಾಯಕ ನಂಬಿಕೊಂಡಿರುವ ಕುಟುಂಬಗಳು

ಹೊಸ ವಿನ್ಯಾಸ, ದೊಡ್ಡ ಗಾತ್ರ ಹಾಗೂ ಆಕರ್ಷಕ ಅಲಂಕಾರಗಳೊಂದಿಗೆ ಹೊರಗಿನಿಂದ ಬಂದವರು ಗ್ರಾಹಕರ ಗಮನ ಸೆಳೆಯುತ್ತಿರುವುದು ದಶಕಗಳಿಂದ ಇದೇ ಕಾಯಕವನ್ನು ನಂಬಿಕೊಂಡಿರುವ ಸ್ಥಳೀಯರಿಗೆ ನೇರ ಸವಾಲಾಗಿದೆ. "ನಾವು ವರ್ಷವಿಡೀ ಈ ವೃತ್ತಿಯನ್ನೇ ನಂಬಿಕೊಂಡು ಬದುಕುತ್ತೇವೆ. ಹೊರಗಿನಿಂದ ಬರುವವರು ಮೂರು ತಿಂಗಳು ಕೆಲಸ ಮಾಡಿ ಹಣ ಸಂಪಾದಿಸಿಕೊಂಡು ಮರಳುತ್ತಾರೆ. ಅವರೊಂದಿಗೆ ಬೆಲೆ ಹಾಗೂ ವಿನ್ಯಾಸದಲ್ಲಿ ಪೈಪೋಟಿ ನಡೆಸುವುದು ಕಷ್ಟವಾಗುತ್ತಿದೆ ಎನ್ನುವುದು ಸ್ಥಳೀಯ ಮೂರ್ತಿಕಾರ ಅಳಲು.

ಪಿಒಪಿ ಮೂರ್ತಿ ನಿರ್ಬಂಧ, ಮಣ್ಣಿನ ಗಣಪನಿಗೆ ಪೈಪೋಟಿ

ಪೈಪೋಟಿಯಿಂದ ಮಂಕಾದ ಲಾಭ: ಪಿಒಪಿ ಮೂರ್ತಿಗಳ ಮಾರಾಟದ ಮೇಲಿನ ನಿರ್ಬಂಧದಿಂದ ಮಣ್ಣಿನ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ. ಇದರಿಂದ ತಮ್ಮ ಬದುಕಿಗೆ ಹೊಸ ದಾರಿ ತೆರೆದುಕೊಳ್ಳಲಿದೆ ಎಂದು ಸ್ಥಳೀಯರು ನಿರೀಕ್ಷಿಸಿದ್ದರು. ಆದರೆ, ಹೆಚ್ಚಿದ ಬೇಡಿಕೆಯ ಮಾರುಕಟ್ಟೆಯಲ್ಲೇ ಹೊರರಾಜ್ಯದ ತಂಡಗಳ ಪ್ರವೇಶವಾಗಿರುವುದು ಆ ನಿರೀಕ್ಷೆಗೆ ತಣ್ಣೀರು ಎರಚಿದೆ. ಮಣ್ಣಿನಿಂದ ಮೂರ್ತಿ ರೂಪಿಸುವುದಷ್ಟೇ ಕೆಲಸವಲ್ಲ. ಒಣಗಿಸುವುದು, ಮೇಲ್ಮೈ ಸಮತಟ್ಟಾಗಿಸುವುದು, ಹಲವು ಹಂತಗಳಲ್ಲಿ ಲೇಪನ, ತಿಕ್ಕುವಿಕೆ, ಬಣ್ಣ ಹಾಗೂ ಅಂತಿಮ ಫಿನಿಶಿಂಗ್‌ ವರೆಗೆ ಶ್ರಮಿಸಬೇಕು. ಬಿರುಕು ಬೀಳದಂತೆ ನಿರಂತರ ನಿಗಾ ವಹಿಸಬೇಕಾಗಿರುವುದರಿಂದ ಕಚ್ಚಾ ವಸ್ತು, ಬಣ್ಣ ಹಾಗೂ ಕಾರ್ಮಿಕ ವೆಚ್ಚವೂ ಹೆಚ್ಚುತ್ತಿದೆ.

ಸ್ಥಳೀಯರ ಮಾರುಕಟ್ಟೆ: ಹೊರರಾಜ್ಯದ ಕಲಾವಿದರನ್ನು ಸಂಪೂರ್ಣವಾಗಿ ತಡೆಯುವುದಕ್ಕಿಂತ ಸ್ಥಳೀಯರಿಗೆ ಆದ್ಯತೆ ನೀಡುವ ವ್ಯವಸ್ಥೆ ರೂಪಿಸಬೇಕು ಎಂಬುದು ಮೂರ್ತಿಕಾರರ ಒತ್ತಾಯ. ಕಡಿಮೆ ಬಡ್ಡಿ ದರದ ಸಾಲ, ತರಬೇತಿ, ಶಾಶ್ವತ ಕಾರ್ಯಾಗಾರ, ಮಾರಾಟ ಮಳಿಗೆ ಹಾಗೂ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದರೆ ತಲೆತಲಾಂತರಗಳಿಂದ ಉಳಿಸಿಕೊಂಡು ಬಂದಿರುವ ಮಣ್ಣಿನ ಗಣೇಶ ಮೂರ್ತಿ ತಯಾರಿಕೆಯ ಕಲೆ ಮೂರು ತಿಂಗಳ ಪೈಪೋಟಿಯ ನಡುವೆ ನಲುಗುವ ಆತಂಕವಿದೆ.

₹25 ಲಕ್ಷ ಹೂಡಿಕೆ: ಹಳೇ ಮೇದಾರ ಓಣಿಯ ಬಸವರಾಜ ಕುಂಬಾರ ಅವರು ಈ ಬಾರಿ 80ಕ್ಕೂ ಅಧಿಕ ಬೃಹತ್ ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ. ಇದಕ್ಕಾಗಿ ಸುಮಾರು ₹25 ಲಕ್ಷ ಹೂಡಿಕೆ ಮಾಡಿದ್ದು, ಈ ವರೆಗೆ 25ರಿಂದ 30 ಮೂರ್ತಿಗಳು ಮಾತ್ರ ಮಾರಾಟವಾಗಿವೆ. ₹10-12 ಲಕ್ಷದಷ್ಟು ಹಣ ವಾಪಸ್ ಬಂದಿದ್ದು, ಸಾಲ ಪಡೆದು ಹೂಡಿಕೆ ಮಾಡಿರುವ ಕಾರಣ ಉಳಿದ ಮೂರ್ತಿಗಳ ಮಾರಾಟದ ಬಗ್ಗೆ ಆತಂಕ ಎದುರಾಗಿದೆ.

ಪಿಒಪಿ ಮೂರ್ತಿಗಳ ಮಾರಾಟಕ್ಕೆ ನಿರ್ಬಂಧ ಇರುವುದರಿಂದ ಸ್ಥಳೀಯರಿಗೆ ಉತ್ತಮ ಆದಾಯದ ನಿರೀಕ್ಷೆಯಿತ್ತು. ಆ ನಿರೀಕ್ಷೆ ಸುಳ್ಳಾಗಿದೆ. ಹೊರರಾಜ್ಯದ ಕಲಾವಿದರ ಹೆಚ್ಚಿದ ಪೈಪೋಟಿಯಿಂದ ಸ್ಥಳೀಯರಿಗೆ ತೀವ್ರ ಹಾನಿಯಾಗುತ್ತಿದೆ ಎಂದು ಗಣೇಶ ಮೂರ್ತಿ ತಯಾರಕ ಚೇತನ ಕುಂಬಾರ ತಿಳಿಸಿದರು.

PREV
Read more Articles on
click me!

Recommended Stories

Dashami Tiger: ಶಿವಮೊಗ್ಗದಲ್ಲಿ ದಶಮಿಯಂದೇ 'ದಶಮಿ' ಹೆಸರಿನ ಹುಲಿ ಸಾವು!
ಹಣಕ್ಕಾಗಿ ಅಲ್ಲ... ಇನ್ನೊಂದು ಕಿಡ್ನಿ ದಾನ ಮಾಡಲು ಅನುಮತಿ ಕೋರಿ ಹೈಕೋರ್ಟ್‌ಗೆ ಬಂದ ವ್ಯಕ್ತಿ!