₹6 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ವಾಣಿಜ್ಯ ತೆರಿಗೆ ಇಲಾಖೆ ಡಿಸಿ ಭರತ್ ಕುಮಾರ್!

Published : Mar 30, 2026, 02:27 PM IST
commercial tax dc bharat kumar hegde

ಸಾರಾಂಶ

ಹುಬ್ಬಳ್ಳಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾದ ಭರತ್ ಕುಮಾರ್ ಹೆಗ್ಡೆ ಅವರು ಉದ್ಯಮಿಯೊಬ್ಬರಿಂದ ₹6 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಪ್ರಕರಣವನ್ನು ಮುಚ್ಚಿಹಾಕಲು ಈ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಧಾರವಾಡ/ಹುಬ್ಬಳ್ಳಿ (ಮಾ.30): ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಪೊಲೀಸರು ತಮ್ಮ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಹುಬ್ಬಳ್ಳಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಡೆಪ್ಯುಟಿ ಕಮಿಷನರ್ (DC) ಆರು ಲಕ್ಷ ರೂಪಾಯಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾದ ಭರತ್ ಕುಮಾರ್ ಹೆಗ್ಡೆ ಲೋಕಾಯುಕ್ತ ಬಲೆಗೆ ಬಿದ್ದಿರುವ ಭ್ರಷ್ಟ ಅಧಿಕಾರಿ. ಅಂಕೋಲಾ ಮೂಲದ ಉದ್ಯಮಿ ವಿಶ್ವಜಿತ್ ನಾಯಕ್ ಎಂಬುವವರಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಈ ದಾಳಿ ನಡೆಸಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?

ದೂರುದಾರರಾದ ವಿಶ್ವಜಿತ್ ನಾಯಕ್ ಅವರು 2019 ರಲ್ಲಿ ಎಂಟು ಟಿಪ್ಪರ್‌ಗಳನ್ನು ಖರೀದಿಸಿದ್ದರು. ಈ ವಾಹನಗಳ ಖರೀದಿಗೆ ಸಂಬಂಧಿಸಿದಂತೆ ಅವರಿಗೆ ಸುಮಾರು 60 ಲಕ್ಷ ರೂಪಾಯಿಗಳ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಲಭ್ಯವಿತ್ತು. ಈ ಪೈಕಿ ವಿಶ್ವಜಿತ್ ಅವರು 34 ಲಕ್ಷ ರೂಪಾಯಿಗಳ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಪಡೆದುಕೊಂಡಿದ್ದರು. ಆದರೆ, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಈ ಪ್ರಕ್ರಿಯೆಯು ಕಾನೂನುಬಾಹಿರವಾಗಿದೆ ಮತ್ತು ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ವಿಶ್ವಜಿತ್ ಅವರ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದರು.

ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿ:

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭರತ್ ಕುಮಾರ್ ಹೆಗ್ಡೆ ಅವರು ವಿಶ್ವಜಿತ್ ನಾಯಕ್ ಅವರಿಗೆ ಈಗಾಗಲೇ ನಾಲ್ಕು ಬಾರಿ ನೋಟಿಸ್ ನೀಡಿ ವಿಚಾರಣೆಗೆ ಕರೆಸಿದ್ದರು. ಇಂದು (ಸೋಮವಾರ) ಐದನೇ ಬಾರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ವಿಚಾರಣೆಯ ಸಂದರ್ಭದಲ್ಲಿ "ಪ್ರಕರಣವನ್ನು ಕ್ಲೋಸ್ ಮಾಡಬೇಕಾದರೆ ಹಣದೊಂದಿಗೆ ಬನ್ನಿ" ಎಂದು ಅಧಿಕಾರಿ ಭರತ್ ಕುಮಾರ್ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಲಂಚ ನೀಡಲು ಇಚ್ಛಿಸದ ವಿಶ್ವಜಿತ್ ನಾಯಕ್ ಅವರು ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಯೋಜನೆಯಂತೆ ಇಂದು ವಿಶ್ವಜಿತ್ ಅವರಿಂದ 6 ಲಕ್ಷ ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಭರತ್ ಕುಮಾರ್ ಹೆಗ್ಡೆ ಅವರನ್ನು ಬಂಧಿಸಿದ್ದಾರೆ.

ಲೋಕಾಯುಕ್ತ ತಂಡದ ಮಿಂಚಿನ ಕಾರ್ಯಾಚರಣೆ:

ಬೆಂಗಳೂರು ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ ದೇವರಾಜ್ ಅವರ ಮಾರ್ಗದರ್ಶನದಲ್ಲಿ, ಲೋಕಾಯುಕ್ತ ಡಿವೈಎಸ್‌ಪಿಗಳಾದ ಮಲ್ಲಿಕಾರ್ಜುನ ಚುಕ್ಕಿ, ಪ್ರದೀಪ್ ಕುಮಾರ್ ಹಾಗೂ ಇನ್ಸ್‌ಪೆಕ್ಟರ್ ರಾಜು ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಬಂಧಿತ ಅಧಿಕಾರಿಯಿಂದ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಸ್ತುತ ಲೋಕಾಯುಕ್ತ ಪೊಲೀಸರು ಕಚೇರಿಯ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ಮುಂದುವರಿಸಿದ್ದಾರೆ.

PREV
Read more Articles on
click me!

Recommended Stories

Mysuru: ಒಣಗಿದ ದಾಸವಾಳದ ಹೂವು ನುಂಗಿ ಉಸಿರು ಚೆಲ್ಲಿದ 6 ತಿಂಗಳ ಕಂದಮ್ಮ
ಯಕ್ಷಗಾನ ನೋಡುವಾಗ ವೀಕ್ಷಕರು ಶಿಳ್ಳೆ ಹಾಕಬಾರದಾ? ಕಲಾವಿದರಲ್ಲಿಯೇ ಭಿನ್ನ ಅಭಿಪ್ರಾಯಗಳು